ಶಬರಿಮಲೆ: ಮಣಿಕಂಠ, ಹರಿಹರಪುತ್ರ, ಧರ್ಮಶಾಸ್ತ, ಪಂದಳದ ಕಂದ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಅಯ್ಯಪ್ಪ ಸ್ವಾಮಿ ಅಭಿಷೇಕ ಪ್ರಿಯ. ಅದರಲ್ಲಿಯೂ “ನೆಯ್ಯಾಭಿಷೇಕʼʼ ಎಂದರೆ ತುಪ್ಪದ ಅಭಿಷೇಕವನ್ನು ಪೂಜಾ ಸಮಯದಲ್ಲಿ ಪ್ರಧಾನವಾಗಿ ಮಾಡಲಾಗುತ್ತದೆ ( Sabarimala News). ಶಬರಿಮಲೆಯಲ್ಲಿ ಪ್ರತಿನಿತ್ಯ ತುಪ್ಪದ ಅಭಿಷೇಕ ನಡೆಯುತ್ತದೆ. ಇದರ ಜತೆಯಲ್ಲಿ ಪುಷ್ಪಾಭಿಷೇಕ, ಅಷ್ಟಾಭಿಷೇಕ, ಕಲ್ಪಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನು ನಡೆಸಲಾಗುತ್ತದೆ.
ಸನ್ನಿಧಾನದಲ್ಲಿ ತುಪ್ಪದ ಅಭಿಷೇಕವನ್ನು ವಿಶೇಷವಾಗಿ ಮಾಡಲಾಗುತ್ತದೆ. ತುಪ್ಪ ತುಂಬಿಸಿದ ತೆಂಗಿನ ಕಾಯಿಗಳನ್ನು ಈ ಅಭಿಷೇಕಕ್ಕೆ ಉಪಯೋಗಿಸಲಾಗುತ್ತದೆ. ಪ್ರಾತಃಕಾಲ ನಾಲ್ಕು ಗಂಟೆಗೆ ಆರಂಭವಾಗುವ ತುಪ್ಪಾಭಿಷೇಕ ಮಧ್ಯಾಹ್ನ ಪೂಜೆಯವರೆಗೆ ನಡೆಸಲಾಗುತ್ತದೆ.
ಸನ್ನಿಧಾನಕ್ಕೆ ಆಗಮಿಸುವ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿಯನ್ನು ಮತ್ತು ಉಪದೇವತೆಗಳನ್ನು ದರ್ಶನ ಮಾಡಿದ ನಂತರ ಅಯ್ಯಪ್ಪ ಮಾಲಾಧಾರಿಗಳ ತಂಡಗಳು ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ‘ವಿರಿ’ಯನ್ನು (ಭಕ್ತರು ತಂದ ಪೂಜಾ ಸಾಮಗ್ರಿಗಳನ್ನೆಲ್ಲ ಒಂದೆಡೆ ವ್ಯವಸ್ಥಿತವಾಗಿ ಇಡುವುದು) ಏರ್ಪಡಿಸುತ್ತಾರೆ. ಭಕ್ತರು ತಾವು ತಂದಿರುವ ತುಪ್ಪ ತುಂಬಿದ ತೆಂಗಿನ ಕಾಯಿಗಳನ್ನು ಒಟ್ಟುಗೂಡಿಸಿ ವಿರಿಯಲ್ಲಿ ವ್ಯವಸ್ಥಿತವಾಗಿ ಇಡಬೇಕಾಗುತ್ತದೆ.
ಮಾಲಾಧಾರಿಗಳು ತಮ್ಮ ಇರುಮುಡಿಯೊಂದಿಗೆ ಈ ತೆಂಗಿನ ಕಾಯಿಯನ್ನು ತಂದಿರುತ್ತಾರೆ. ತೆಂಗಿನಕಾಯಿಯಲ್ಲಿ ಇರುವ ಮೂರು ಕಣ್ಣುಗಳಲ್ಲಿ ಒಂದು ಕಣ್ಣಿಗೆ ರಂಧ್ರ ಮಾಡಿ ಅದರಲ್ಲಿರುವ ಎಳನೀರನ್ನು ಹೊರತೆಗೆಯಲಾಗುತ್ತದೆ. ಹೀಗೆ ಬರಿದಾದ ಕಾಯಿಯೊಳಗೆ ತುಪ್ಪವನ್ನು ತುಂಬಿಸಿ ಅದನ್ನು ಇರುಮುಡಿಯಲ್ಲಿ ಇರಿಸುತ್ತಾರೆ. ಇರುಮುಡಿಯೆಂದರೆ ಯಾತ್ರೆಯ ಸಂದರ್ಭದಲ್ಲಿ ತಲೆಯ ಮೇಲೆ ಹೊತ್ತು ತರುವ ಪೂಜಾ ಸಾಮಗ್ರಿಗಳ ಗಂಟು ಅಥವಾ ಮುಡಿ.
ಸನ್ನಿಧಾನದ ಹಿಂದಿರುವ ವಿಭೂತಿಯ ಕೊಳದಲ್ಲಿ ಸ್ನಾನ ಮಾಡಿದನಂತರ ಆಯಾ ತಂಡದ ಮುಖ್ಯಸ್ಥರಾದ ಗುರುಸ್ವಾಮಿಯವರು ತುಪ್ಪ ತುಂಬಿದ ತೆಂಗಿನ ಕಾಯಿಗಳನ್ನು ಒಡೆದು ಒಳಗಿರುವ ತುಪ್ಪವನ್ನು ಒಂದು ಪಾತ್ರೆಯಲ್ಲಿ ಶೇಖರಿಸಿ ಅದನ್ನು ಶ್ರೀಕೋವಿಎಲ್‌ಗೆ (ಗರ್ಭಗುಡಿಗೆ) ಒಪ್ಪಿಸುತ್ತಾರೆ.
ಗರ್ಭಗುಡಿಯಲ್ಲಿ ಅಭಿಷೇಕ ಮಾಡಿದ ತುಪ್ಪದ ಒಂದು ಭಾಗವನ್ನು ಅರ್ಚಕರು ಭಕ್ತರಿಗೆ ಗುರುಸ್ವಾಮಿಯ ಮೂಲಕ ಹಿಂತಿರುಗಿಸುತ್ತಾರೆ. ಈ ತುಪ್ಪವನ್ನು ಪವಿತ್ರವಾದ ಪ್ರಸಾದವಾಗಿ ಪರಿಗಣಿಸಿ ಮಾಲಾಧಾರಿಗಳು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ತುಪ್ಪ ತುಂಬಿಸಿದ ತೆಂಗಿನಕಾಯಿಗಳನ್ನು ಹಿಡಿದುಕೊಂಡು ಬರಲು ಸಾಧ್ಯವಾಗದ ಭಕ್ತರಿಗೆ ಅಥವಾ ಮಲಾಧಾರಿಗಳಿಗೆ ಪ್ರಸಾದ ರೂಪದ ತುಪ್ಪವನ್ನು ಪಡೆಯಲು ದೇವಸ್ವಂ ಬೋರ್ಡ್ ಕೌಂಟರ್‌ಗಳನ್ನು ತೆರೆದಿರುತ್ತದೆ. ತುಪ್ಪವು ಮನುಷ್ಯನ ಆತ್ಮದ ಪ್ರತಿರೂಪವಾಗಿದೆ ಎಂಬ ಭಾವದಿಂದ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ಮಾಡುವುದರ ಮೂಲಕ ಆತ್ಮವನ್ನು ಸಮರ್ಪಿಸಲಾಗುತ್ತದೆ. ತುಪ್ಪವು ಜೀವಾತ್ಮ; ಅಯ್ಯಪ್ಪ ಸ್ವಾಮಿ ಪರಮಾತ್ಮ ಎಂಬ ಭಾವ ಇಲ್ಲಿಯದು.
ತುಪ್ಪವೆಲ್ಲವನ್ನೂ ಬಸಿದ ತೆಂಗಿನಕಾಯಿ ಜಡ ಅಥವಾ ಮೃತದೇಹದ ಪ್ರತಿರೂಪವಾಗಿದೆ. ಆ ಕಾರಣದಿಂದಲೇ ಈ ತೆಂಗಿನ ಕಾಯಿಗಳನ್ನು ದೇವಾಲಯದ ಮುಂಭಾಗದಲ್ಲಿರುವ ದೊಡ್ಡ ಅಗ್ನಿಕುಂಡಕ್ಕೆ ಅರ್ಪಿಸಲಾಗುತ್ತದೆ.
ಅಷ್ಟಾಭಿಷೇಕವೂ ನಡೆಯುತ್ತದೆ
ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಸಲ್ಲಿಸುವ ಸೇವೆಗಳಲ್ಲಿ ಪ್ರಧಾನವಾದುದು ಅಷ್ಟಾಭಿಷೇಕ. ಭಸ್ಮ, ಹಾಲು, ಜೇನು, ಪಂಚಾಮೃತ, ಸೀಯಾಳ ನೀರು, ಶ್ರೀಗಂಧ ಅಥವಾ ಚಂದನ, ಪನ್ನೀರು ಅಥವಾ ರೋಸ್‌ವಾಟರ್ ಮತ್ತು ನೀರು ಈ ಎಂಟು ಸಾಮಗ್ರಿಗಳನ್ನು ಬಳಸಿ ಅಭಿಷೇಕ ಮಾಡಲಾಗುತ್ತದೆ. ಶಬರಿಮಲೆಯಲ್ಲಿ ಅಷ್ಟಾಭಿಷೇಕಕ್ಕೆ ಬಳಸುವ ಸಾಮಗ್ರಿಗಳು ಬೇರೆಡೆಗಿಂತ ಭಿನ್ನವಾಗಿವೆ.
ಕಲ್ಪಾಭಿಷೇಕಕ್ಕೂ ಮಹತ್ವವಿದೆ
ಶಬರಿಮಲೆಯ ಸನ್ನಿಧಾನದಲ್ಲಿ ನಡೆಯುವ ಪ್ರಧಾನವಾದ ಅಭಿಷೇಕಗಳಲ್ಲಿ ಕಲ್ಪಾಭಿಷೇಕವೂ ಒಂದು. ಈ ಅಭಿಷೇಕ ಪೂಜೆಯನ್ನು ಪ್ರಧಾನ ಅರ್ಚಕರ ನೇತೃತ್ವದಲ್ಲಿ ತಂತ್ರಿಗಳು ನಡೆಸುತ್ತಾರೆ. ಮಧ್ಯಾಹ್ನ ಪೂಜೆಯ ಭಾಗವಾಗಿ ತಂತ್ರಿಗಳು ವಿಗ್ರಹದ ಮೇಲೆ ಲೇಪಿಸಲಿರುವ ಚಂದನವನ್ನು ಸ್ವರ್ಣ ಪಾತ್ರದಲ್ಲಿಟ್ಟುಕೊಂಡು ಶ್ರೀಕೋವಿಲಿಗೆ ಪ್ರದಕ್ಷಿಣೆ ಬರುತ್ತಾರೆ. ಬಳಿಕ ಅಯ್ಯಪ್ಪ ವಿಗ್ರಹದ ಮೇಲೆ ಶ್ರೀಗಂಧವನ್ನು ಲೇಪಿಸುವುದರೊಂದಿಗೆ ಕಲ್ಪಾಭಿಷೇಕ ಪೂಜೆ ಪೂರ್ಣವಾಗುತ್ತದೆ.
ನಿತ್ಯವೂ ನಡೆಯುತ್ತದೆ ಪುಷ್ಪಾಭಿಷೇಕ
ಅಯ್ಯಪ್ಪ ಸ್ವಾಮಿಯ ವಿಗ್ರಹದ ಮೇಲೆ ಮಾಡುವ ಪುಷ್ಪಗಳ ಅರ್ಚನೆಯೇ ಪುಷ್ಪಾಭಿಷೇಕ. ಶಬರಿಮಲೆಯಲ್ಲಿ ಮುಖ್ಯವಾಗಿ ತಾವರೆ, ಸೇವಂತಿಗೆ, ಕಣಗಿಲೆ, ತುಳಸಿ, ಮಲ್ಲಿಗೆ, ಬಿಲ್ವಪತ್ರೆ ಇತ್ಯಾದಿ ಹೂವುಗಳನ್ನು ಪುಷ್ಪಾಭಿಷೇಕಕ್ಕೆ ಬಳಸಿಕೊಳ್ಳುತ್ತಾರೆ. ಹೂವು, ಪತ್ರೆಗಳನ್ನು ಪುಷ್ಪಾಭಿಷೇಕಕ್ಕೆ ನೀಡಲು ಉದ್ದೇಶಿಸುವ ಭಕ್ತರು ಮುಂಚಿತವಾಗಿ ಕಾದಿರಿಸಬೇಕಾಗಿದೆ. ಪುಷ್ಪಾಭಿಷೇಕವೊಂದಕ್ಕೆ ಹತ್ತು ಸಾವಿರ ರೂ.ಸೇವಾ ಶುಲ್ಕವಿದೆ.
ಇದನ್ನೂ ಓದಿ| Sabarimala News | ಶಬರಿಮಲೆಯಲ್ಲಿ ಯಾವ ಸಮಯದಲ್ಲಿ ಏನು ಪೂಜೆ ನಡೆಯುತ್ತಿದೆ?