ಕೊಚ್ಚಿ: ಶಬರಿಮಲೆ ಯಾತ್ರೆ ಕೈಗೊಳ್ಳುವ ಮಾಲಾಧಾರಿಗಳು ಇನ್ನು ಮುಂದೆ ತಮ್ಮ ನೆಚ್ಚಿನ ಸಿನಿಮಾ ನಟರ, ರಾಜಕಾರಣಿಗಳ ದೊಡ್ಡ ಫೋಟೊಗಳನ್ನು ತೆಗೆದುಕೊಂಡು ದೇವರ ದರ್ಶನಕ್ಕೆ (Sabarimala News) ಹೋಗುವಂತಿಲ್ಲ. ಅಲ್ಲದೆ, ಸೊಪಾನಂ ಮುಂದೆ ಸಂಗೀತ ವಾದ್ಯಗಳನ್ನು ನುಡಿಸುವಂತಿಲ್ಲ.
ಕೇರಳ ಹೈಕೋರ್ಟ್ ಇದಕ್ಕೆ ನಿಷೇಧ ವಿಧಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಯ್ಯಪ್ಪ ಸ್ವಾಮಿ ದೇಗುಲದ ಆಡಳಿತವನ್ನು ನೋಡಿಕೊಳ್ಳುವ ತಿರುವಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಸೂಚನೆ ನೀಡಿದೆ.
ಸನ್ನಿಧಾನದಲ್ಲಿ ಸಂಪ್ರದಾಯದಂತೆ ನಡೆಯುವ ಆಚರಣೆಗಳಿಗೆ ಮಾತ್ರ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಹೊಸ ಆಚರಣೆಗಳನ್ನು ಪರಿಚಯಿಸಬಾರದು ಎಂದು ಸೂಚಿಸಿರುವ ನ್ಯಾಯಾಲಯವು, ತಮ್ಮ ನೆಚ್ಚಿನ ಸಿನಿಮಾ ನಟ-ನಟಿಯರ ಅಥವಾ ರಾಜಕಾರಣಿಗಳ, ಕ್ರೀಡಾಪಟುಗಳ, ಸೆಲೆಬ್ರಿಟಿಗಳ ಫೋಟೊ ಹಿಡಿದು ಬಂದು ವಿಶೇಷ ಪೂಜೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.
ಭಕ್ತರೊಬ್ಬರು ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಸಲ್ಲಿಸಿದ ದೂರಿನ ಆಧಾರದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್‌ನ ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ. ಜಿ. ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠವು, ಸನ್ನಿಧಾನದಲ್ಲಿ ಸಂಪ್ರದಾಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಟಿಡಿಬಿಯ ಜವಾಬ್ದಾರಿ ಎಂದು ಹೇಳಿದ್ದು, ಯಾವುದೇ ಮಾಲಾಧಾರಿಗಳಿಗೆ ಸೊಪಾನಂ ಮುಂಭಾಗದಲ್ಲಿ ಡ್ರಮ್ ಇತ್ಯಾದಿ ಸಂಗೀತ ಉಪಕರಣಗಳನ್ನು ನುಡಿಸುವಂತಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿದೆ.
ಕಳೆದ ವರ್ಷ ಕರ್ನಾಟಕದ ಅನೇಕ ಮಾಲಾಧಾರಿಗಳು ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ದೊಡ್ಡ ಫೋಟೊ ಹಿಡಿದು ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | Sankranti 2023 | ಎಲ್ಲೆಡೆ ಆರಂಭ ಸಂಕ್ರಾಂತಿಯ ಭರ್ಜರಿ ಶಾಪಿಂಗ್