ತಿರುವನಂತಪುರ: ಭಾರತದ ಅತ್ಯಂತ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದರ್ಶನ ಯಾತ್ರೆ (Sabarimala News) ಆರಂಭಗೊಂಡಿದೆ. ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಉತ್ಸವಕ್ಕಾಗಿ ಬುಧವಾರ ಸಂಜೆ ಶಬರಿಮಲೆ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ.
ನಿರ್ಗಮಿಸುತ್ತಿರುವ ಪ್ರಧಾನ ಅರ್ಚಕರಾದ ಎನ್. ಪರಮೇಶ್ವರನ್ ನಂಬೂದರಿ ಮತ್ತು ಮುಖ್ಯ ಅರ್ಚಕರಾದ (ತಂತ್ರಿಗಳು) ಕಂದಾರಾರು ರಾಜೀವರು ಬುಧವಾರ ಸಂಜೆ 5 ಗಂಟೆಗೆ ದೇಗುಲದ ಬಾಗಿಲನ್ನು ತೆರೆದು, ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಯಿತು. ನೂತನ ಪ್ರಧಾನ ಅರ್ಚಕ (ಮೇಲ್ಸಂತಿ) ಕೆ. ಜಯರಾಮನ್ ನಂಬೂದರಿ ಮತ್ತು ಮಾಲಿಕಪುರಮ್‌ನ ಹರಿಹರನ್ ನಂಬೂದರಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಕೊರೊನಾ ಭೀತಿ ದೂರವಾಗಿರುವುದರಿಂದ, ಯಾತ್ರೆ ಕೈಗೊಳ್ಳಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಹೀಗಾಗಿ ಈ ಬಾರಿ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿ ನಿತ್ಯ 1.2 ಲಕ್ಷ ಭಕ್ತರಿಗೆ ಅಯ್ಯಪ್ಪನ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತಿದೆ. ಭದ್ರತೆಗಾಗಿ 13 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಮಂಡಲ ಪೂಜೆಯು 41 ದಿನಗಳ ಕಾಲ ನಡೆಯಲಿದ್ದು, ಮಲಯಾಳ ಪಂಚಾಂಗದ ಪ್ರಕಾರ ವೃಶ್ಚಿಕ ಮಾಸದ ಮೊದಲ ದಿನ ಮಂಡಲ ವ್ರತಾಚರಣೆ ಆರಂಭವಾಗಿ, ಧನುರ್ಮಾಸದ 11ನೇ ದಿನ ವ್ರತಾಚರಣೆ ಸಂಪನ್ನವಾಗಲಿದೆ. ಅಂದರೆ ನ.16 ರಿಂದ ಆರಂಭಗೊಂಡು, ಡಿಸೆಂಬರ್ 27ಕ್ಕೆ ಮಂಡಲ ಪೂಜೆಯ ವ್ರತಾಚರಣೆ ಅಂತ್ಯವಾಗಲಿದೆ.
ಮಂಡಲ ಪೂಜೆಗಾಗಿ ಡಿಸೆಂಬರ್ 27 ರಂದು ದೇಗುಲವನ್ನು ಮುಚ್ಚಲಾಗುತ್ತದೆ. ಡಿಸೆಂಬರ್ 30 ರಂದು ಮತ್ತೆ ದೇಗುಲದ ಬಾಗಿಲನ್ನು ತೆರೆದು ಮಕರ ಜ್ಯೋತಿಯು ದರ್ಶನವಾಗುವವರೆಗೂ ಅಂದರೆ ಜನವರಿ 14 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಯಾತ್ರೆ ಕೈಗೊಳ್ಳುವ ಭಕ್ತರು ವರ್ಚ್ಯುಯಲ್ ಬುಕ್ಕಿಂಗ್ ವ್ಯವಸ್ಥೆ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಆಫ್‌ಲೈನ್ ಟಿಕೆಟ್ ಕೌಂಟರ್‌ಗಳನ್ನೂ ತೆರೆಯಲಾಗಿದೆ. ಮೊದಲ ದಿನ ಅಂದರೆ ನವೆಂಬರ್ 17ರಂದು ದೇಗುಲಕ್ಕೆ ಭೇಟಿ ನೀಡಲು 49 ಸಾವಿರ ಭಕ್ತರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲು ಸ್ಥಳೀಯ ಆಡಳಿತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ‘ಸುರಕ್ಷಿತ ವಲಯ ಯೋಜನೆ’ ಜಾರಿಗೆ ತರಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆ. ವಾಹನ ನಿಲುಗಡೆಗೆ ಜಾಗ, ಉಪಹಾರ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ದಿನದ 24 ಗಂಟೆಯೂ ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ನೆರವು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪದೇಶ ಮತ್ತು ತೆಲಂಗಾಣದ ಲಕ್ಷಾಂತರ ಭಕ್ತರು ಈ ಯಾತ್ರೆ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ | Modi In Bengaluru | ಕರ್ನಾಟಕ ಭಾರತ್ ಗೌರವ್ ಕಾಶಿ ಯಾತ್ರೆಗೆ ಹೋಗುವುದು ಹೇಗೆ?