Site icon Vistara News

Sabarimala Temple: ಇಂದಿನಿಂದ ತೆರೆಯಲಿದೆ ಶಬರಿಮಲೆ ದೇಗುಲದ ಬಾಗಿಲು!

shabarimale

shabarimale

ತಿರುವನಂತಪುರಂ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪತ್ತನಂತ್ತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನದ (Sabarimala Temple) ಬಾಗಿಲನ್ನು ಇಂದು (ನವೆಂಬರ್‌ 16) ಸಂಜೆ 5 ಗಂಟೆಗೆ ತೆರೆಯಲಾಗುವುದು. ಮಂಡಲ-ಮಕರ ವಿಳಕ್ಕು ಮಾಸದ (Mandala-Makaravilakku) ಹಿನ್ನಲೆಯಲ್ಲಿ ಇನ್ನು 2 ತಿಂಗಳು ದೇಗುಲ ಭಕ್ತರ ದರ್ಶನಕ್ಕಾಗಿ ತೆರೆದಿರಲಿದೆ. ದೇವಸ್ಥಾನದ ತಂತ್ರಿ ಕಂಟರರು ಮಹೇಶ್‌ ಮೋಹನರು ದೇಗುಲದ ಬಾಗಿಲನ್ನು ತೆರೆಯಲಿದ್ದು, ಬಳಿಕ ಮುಖ್ಯ ಅರ್ಚಕರಾಗಿ ಆಯ್ಕೆಯಾದ ಪಿ.ಎನ್‌.ಮಹೇಶ್‌ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ದೇವಸ್ಥಾನದ ದ್ವಾರದಲ್ಲಿ ಸ್ಥಾಪಿಸಲಾದ ನೂತನ ಶಿಲಾ ಕಂಬಗಳು ಈ ಬಾರಿ ಭಕ್ತರ ಗಮನ ಸೆಳೆಯಲಿವೆ. ಹೈಡ್ರಾಲಿಕ್‌ ಚಾವಣಿ ನಿರ್ಮಾಣದ ಭಾಗವಾಗಿ ಈ ಕಂಬಗಳನ್ನು ರಚಿಸಲಾಗಿದೆ. ಹೈದರಾಬಾದ್‌ ಮೂಲದ ನಿರ್ಮಾಣ ಸಂಸ್ಥೆ ವಿಶ್ವ ಸಮುದ್ರ ಕಂಪನಿ ಅಯ್ಯಪ್ಪ ದೇವರಿಗಾಗಿ ಈ ಚಾವಣಿಯನ್ನು ನಿರ್ಮಿಸುತ್ತಿದೆ. ಈ ಯೋಜನೆಗಾಗಿ ಕಂಪನಿ ಸುಮಾರು 70 ಲಕ್ಷ ರೂ. ವ್ಯಯಿಸಲಿದೆ. ಹದಿನೆಂಟು ಮೆಟ್ಟಿಲುಗಳ ಎರಡೂ ಬದಿಗಳಲ್ಲಿರುವ ಈ ಕಂಬಗಳು ಆಕರ್ಷಕವಾಗಿವೆ. ಸುಂದರವಾಗಿ ಕೆತ್ತಲ್ಪಟ್ಟ ಕಂಬದಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಬರೆಯಲಾಗಿದೆ.

ಮಳೆ ಇಲ್ಲದಾಗ ಮಡಚಬಹುದಾದ ಹೈಡ್ರಾಲಿಕ್‌ ಚಾವಣಿ ಇದಾಗಿದೆ. ಇನ್ನು ಮುಂದೆ ಪಡಿಪೂಜೆ (18 ಮೆಟ್ಟಿಲುಗಳಿಗೆ ಸಲ್ಲಿಸುವ ಪೂಜೆ) ನಡೆಸುವಾಗ ಮಳೆ ಬಂದರೆ ಯಾವುದೇ ಸಮಸ್ಯೆ ಎದುರಾಗದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಸದ್ಯ ಪೂಜೆ ಸಲ್ಲಿಸುವಾಗ ಮಳೆ ಬಂದರೆ ಟರ್ಪಾಲ್‌ ಹೊದಿಕೆಯನ್ನು ಬಳಸಲಾಗುತ್ತಿದೆ.

ಶುಕ್ರವಾರದಿಂದ ಮಂಡಲ ಮಾಸದ ಪೂಜೆ

ಮಂಡಲ ಮಾಸದ ಪೂಜೆ ನವೆಂಬರ್ 17ರಂದು ಪ್ರಾರಂಭವಾಗಲಿದೆ. ಪಾರ್ಕಿಂಗ್ ಪ್ರದೇಶಗಳಿಂದ ಸನ್ನಿಧಾನದವರೆಗೆ ಜನಸಂದಣಿ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸಲು ದೇವಸ್ವಂ ಮಂಡಳಿ ಆಧುನಿಕ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಶಬರಿಮಲೆ ತೀರ್ಥಯಾತ್ರೆಯ ಸಮಯದಲ್ಲಿ ಭಕ್ತರಿಗೆ ಸಹಾಯ ಮಾಡಲು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಕಳೆದ ವಾರ ʼಅಯ್ಯನ್ʼ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದರು. ಪೆರಿಯಾರ್ ವನ್ಯಜೀವಿ ಅಭಯಾರಣ್ಯ ಪಶ್ಚಿಮ ವಿಭಾಗವು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಇದು ತೀರ್ಥಯಾತ್ರೆಯ ಎಲ್ಲ ಅಂಶಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಪಂಪಾ ಮತ್ತು ಸನ್ನಿಧಾನಂ ಅಲ್ಲದೆ ಸ್ವಾಮಿ ಅಯ್ಯಪ್ಪ ರಸ್ತೆ, ಪಂಪಾ-ನೀಲಿಮಾಲಾ-ಸನ್ನಿಧಾನಂ, ಎರುಮೇಲಿ-ಅಳುತಕಡವ್-ಪಂಪಾ ಹಾಗೂ ಸತ್ರಮ್-ಉಪ್ಪುಪರ-ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳ ಮಾಹಿತಿಯನ್ನೂ ಈ ಆ್ಯಪ್‌ ಒದಗಿಸಲಿದೆ.

ಈ ಮಂಡಲ ಮಾಸದಲ್ಲಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಲಿವೆ. ಮಂಡಲ ಪೂಜಾ ಮಹೋತ್ಸವದ ಹಿನ್ನಲೆಯಲ್ಲಿ ಇಡುಕ್ಕಿ ಜಿಲ್ಲೆಯಲ್ಲೂ ಕಂಟ್ರೋಲ್‌ ರೂಮ್‌ ತೆರೆಯಲಾಗಿದ್ದು, ಯಾತ್ರಾರ್ಥಿಗಳಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ.

ಇದನ್ನೂ ಓದಿ: Sabarimala Temple : ಶಬರಿಮಲೆಯಲ್ಲಿ ನಾಣ್ಯಗಳನ್ನು ಲೆಕ್ಕ ಹಾಕುವ ಮೆಷಿನ್‌! ಏನಿದರ ವಿಶೇಷ?

ದೇವಸ್ಥಾನದಲ್ಲಿ ಜನಸಂದಣಿಯನ್ನು ನಿರ್ವಹಿಸಲು ಕ್ರಿಯಾತ್ಮಕ ಕ್ಯೂ ನಿಯಂತ್ರಣ ವ್ಯವಸ್ಥೆಯನ್ನು ಪರಿಚಯಿಸುವುದು, ಯಾತ್ರಾರ್ಥಿಗಳ ದಟ್ಟಣೆಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ನಿಲಕ್ಕಲ್, ಪಂಪಾ ಮತ್ತು ಸನ್ನಿಧಾನಂನಲ್ಲಿ ಟಿವಿ ಅಳವಡಿಸಿ ವಿಡಿಯೊ ಪ್ರದರ್ಶಿಸುವುದು ಇತ್ಯಾದಿ ಕ್ರಮ ಕೈಗೊಳ್ಳಲಾಗಿದೆ. ಇ ಕಾಣಿಕೆ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಕಾಡಿನ ಮೂಲಕ ಸಾಗುವ ಸಾಂಪ್ರದಾಯಿಕ ಚಾರಣ ಮಾರ್ಗಗಳ ಅಡೆ ತಡೆ ತೆರವುಗೊಳಿಸಲಾಗಿದೆ. ಅಜುತಕ್ಕಡವ್-ಚೆರಿಯನವಟ್ಟಂ ಮತ್ತು ಸತ್ರಮ್-ಸನ್ನಿಧಾನಂ ಮಾರ್ಗಗಳಲ್ಲಿ ಪರಿಸರ ಅಂಗಡಿಗಳನ್ನು ತೆರೆಯಲಾಗಿದೆ. ಈ ಮಾರ್ಗದಲ್ಲಿ 75 ಅರಣ್ಯ ರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version