Site icon Vistara News

Sabarimala Temple: ಹೊಸ ವರ್ಷದಂದು ಶಬರಿಮಲೆಯಲ್ಲಿ ಭಕ್ತ ಜನ ಪ್ರವಾಹ

shabarimale

shabarimale

ತಿರುವನಂತಪುರಂ: ಮಂಡಲ ಪೂಜೆಯ ಬಳಿಕ ಮುಚ್ಚಲಾಗಿದ್ದ ಶಬರಿಮಲೆ ಅಯ್ಯಪ್ಪ ದೇಗುಲದ (Sabarimala Temple) ಬಾಗಿಲನ್ನು ಡಿ. 30ರಂದು ಮತ್ತೆ ತೆರೆಯಲಾಗಿದೆ. ಮಕರವಿಳಕ್ಕು (Makaravilakku-ಮಕರ ಜ್ಯೋತಿ) ಉತ್ಸವಕ್ಕಾಗಿ ದೇಗುಲದ ಬಾಗಿಲು ತೆರೆದಿದ್ದು, ಹೊಸ ವರ್ಷದ ಮೊದಲ ದಿನವಾದ ಇಂದು (ಜನವರಿ 1) ಭಕ್ತರ ಪ್ರವಾಹವೇ ಹರಿದು ಬಂದಿತ್ತು.

ಮುಂಜಾನೆ 3 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಯಿತು. ನಿರ್ಮಾಲ್ಯಂ ಮತ್ತು ಅಭಿಷೇಕ ಆಚರಣೆಗಳ ನಂತರ ಅಯ್ಯಪ್ಪ ಸ್ವಾಮಿಗೆ ತೆಂಗಿನಕಾಯಿಗಳ ತುಪ್ಪವನ್ನು ಸಮರ್ಪಿಸಲಾಯಿತು. ತಂತ್ರಿ ಕಂದರಾರು ಮಹೇಶ್ ಮೋಹನರಾರು ಅವರ ನಿರ್ದೇಶನದಂತೆ ಪ್ರಧಾನ ಅರ್ಚಕ ಪಿ.ಎನ್.ಮಹೇಶ್ ನಂಬೂದಿರಿ ನೇತೃತ್ವದಲ್ಲಿ ತುಪ್ಪದ ಅಭಿಷೇಕ (ನೆಯ್ಯಾಭಿಷೇಕಂ) ನಡೆಯಿತು.

ಬೆಂಗಳೂರು ಮೂಲದ ನಾಲ್ವರು ಭಕ್ತರಾದ ವಿಷ್ಣುಶರಣ್ ಭಟ್, ಉನ್ನಿಕೃಷ್ಣನ್ ಪೊಟ್ಟಿ, ರಮೇಶ್ ರಾವ್ ಮತ್ತು ದೊರೈ ತುಪ್ಪದ ಅಭಿಷೇಕಕ್ಕೆ ಕೊಡುಗೆ ನೀಡಿದರು. ಪಂಪಾ ಗಣಪತಿ ದೇವಸ್ಥಾನದಲ್ಲಿ ತುಪ್ಪ ತುಂಬಿದ 20,000 ತೆಂಗಿನಕಾಯಿಗಳನ್ನು ನೆಯ್ಯಾಭಿಷೇಕಕ್ಕಾಗಿ ಸಿದ್ಧಪಡಿಸಿ ಟ್ರ್ಯಾಕ್ಟರ್‌ ಮೂಲಕ ಅಯ್ಯಪ್ಪ ದೇವಾಲಯಕ್ಕೆ ಸಾಗಿಸಲಾಯಿತು. ಈ ಹಿಂದೆ 2021ರ ಜನವರಿ 1ರಂದು ತುಪ್ಪ ತುಂಬಿದ 18,018 ತೆಂಗಿನಕಾಯಿಯನ್ನು ಅಯ್ಯಪ್ಪನಿಗೆ ಅರ್ಪಿಸಲಾಗಿತ್ತು. ಅದಿಕ ಪ್ರಮಾಣದಲ್ಲಿ ಭಕ್ತರ ಆಗಮನ ಹಿನ್ನೆಲೆಯಲ್ಲಿ ಡಿಐಜಿ ಥಾಮ್‌ಸನ್‌ ಮತ್ತು ಸನ್ನಿಧಾನದ ವಿಶೇಷ ಪೊಲೀಸ್‌ ಅಧಿಕಾರಿ ಆರ್‌.ಆನಂದ್‌ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ. ಜನವರಿ 15ರಂದು ಮಕಳ ವಿಳಕ್ಕು ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನವರಿ 13 ಮತ್ತು 14ರಂದು ಪ್ರಸಾದ ಶುದ್ಧ ಕಾರ್ಯ ಹಾಗೂ ಬಿಂಬ ಶುದ್ಧ ಕ್ರಿಯಾ ಸೇರಿದಂತೆ ವಿವಿಧ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಬೋರ್ಡ್‌ (TDB) ತಿಳಿಸಿದೆ.

ಮಕರವಿಳಕ್ಕು ದಿನದಂದು (ಜನವರಿ 15) ಭಕ್ತರು ಸನ್ನಿಧಾನದಲ್ಲಿ (ದೇವಾಲಯದ ಸಂಕೀರ್ಣ) ‘ತಿರುವಾಭರಣಂ’ (ಪವಿತ್ರ ಆಭರಣಗಳು) ಮತ್ತು ಅಯ್ಯಪ್ಪ ವಿಗ್ರಹವನ್ನು ಆಭರಣಗಳಿಂದ ಅಲಂಕರಿಸುವ ‘ದೀಪಾರಾಧನೆ’ ಸ್ವಾಗತಕ್ಕೆ ಸಾಕ್ಷಿಯಾಗಲಿದ್ದಾರೆ. ಮಕರವಿಳಕ್ಕು ದರ್ಶನದ ನಂತರ, ಯಾತ್ರಾರ್ಥಿಗಳಿಗಾಗಿ ದೇವಾಲಯವು ಜನವರಿ 20ರ ವರೆಗೆ ತೆರೆದಿರುತ್ತದೆ.

ಗೊಂದಲ ಕಾಡಿತ್ತು

ಕೆಲವು ದಿನಗಳ ಹಿಂದೆ ಶಬರಿಮಲೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಗಿತ್ತು. ಡಿಸೆಂಬರ್ 8ರಂದು ಬೆಳಗ್ಗೆ ಪ್ರಾರಂಭವಾದ ಟ್ರಾಫಿಕ್ ಜಾಮ್ ಹಾಗೂ ನೂಕುನುಗ್ಗಲು ನಾಲ್ಕು ದಿನಗಳ ಕಾಲ ಪಂಪಾ, ನಿಲಕ್ಕಲ್ ಮತ್ತು ಸನ್ನಿಧಾನಂನಲ್ಲಿ ಮುಂದುವರಿದಿತ್ತು. ಡಿಸೆಂಬರ್ 7ರ ನಂತರ ಹೆಚ್ಚಿನ ಭಕ್ತರ ಹರಿವು ಪ್ರಾರಂಭವಾಗಿತ್ತು.

ಇದನ್ನೂ ಓದಿ: Sabarimala: ಶಬರಿಮಲೆಯಲ್ಲಿ ಭಕ್ತರಿಗೆ ಮುಳುವಾಗುತ್ತಿರುವ ಶಿಲಾಕಂಬ!

ಚೆನ್ನೈನಲ್ಲಿ ಪ್ರವಾಹ ಉಂಟಾದಾಗ ಕೇರಳಕ್ಕೆ ತೆರಳುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಆಗ ಬಾಕಿಯಾದವರು ಒಮ್ಮೆಲೆ ಆಗಮಿಸಿದ್ದರು. ಜತೆಗೆ ನೆರೆಯ ರಾಜ್ಯ ತೆಲಂಗಾಣದಲ್ಲಿ ಚುನಾವಣೆ ಮುಗಿಸಿದ ನಂತರ ಅಲ್ಲಿಂದ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿತ್ತು. ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಹಾಗೂ ಭದ್ರತಾ ವ್ಯವಸ್ಥೆಯಲ್ಲಿಯೂ ತುಸು ಲೋಪವಾಗಿದ್ದು, ಜನರನ್ನು ನಿಯಂತ್ರಿಸುವುದಕ್ಕೆ ಹರ ಸಾಹಸ ಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಈ ಬಾರಿ ಯಾವುದೇ ಗೊಂದಲ ನಡೆಯದಂತೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version