ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರಾ (Sagara Marikamba Jatra) ಪ್ರಯುಕ್ತ ಸಮಿತಿಯ ವತಿಯಿಂದ ಆಯೋಜಿಸಿರುವ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಶುಕ್ರವಾರ (ಫೆ.೧೦) ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯದ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದು, ನುರಿತ ತೀರ್ಪುಗಾರರ ನೇತೃತ್ವದಲ್ಲಿ ಘಟಾನುಘಟಿಗಳ ಕುಸ್ತಿ ಪಂದ್ಯಗಳು ನಡೆಯಲಿವೆ. ಮೊದಲ ದಿನವೇ ನೂರಾರು ಕುಸ್ತಿಪಟುಗಳು ಭಾಗವಹಿಸಿದ್ದರು. ಮೊದಲ ದಿನದ ಪಂದ್ಯಗಳು ರೋಚಕ ಹಣಾಹಣಿಯಿಂದ ನಡೆದವು.
ಫೆ. ೧೦ರಿಂದ ಕುಸ್ತಿ ಪಂದ್ಯಾವಳಿ ಆರಂಭವಾಗಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಕುಸ್ತಿಪಟುಗಳ ಪಂದ್ಯಗಳು ಶನಿವಾರ (ಫೆ.೧೧) ಹಾಗೂ ಭಾನುವಾರ (ಫೆ.೧೨) ನಡೆಯಲಿವೆ. ಎರಡು ದಿನವೂ ಮಧ್ಯಾಹ್ನ ೩ರಿಂದ ರಾತ್ರಿ ೯ರವರೆಗೂ ಕುಸ್ತಿ ಪಂದ್ಯಗಳು ನಡೆಯಲಿವೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ಕುಸ್ತಿಪಟುಗಳಿಗೆ ಜಾತ್ರಾ ಸಮಿತಿಯ ವತಿಯಿಂದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು. ಮಹಾರಾಷ್ಟ್ರದ ರಾಮ್, ಓಮಾಂಕ್ಷ್, ಹರಿಯಾಣದ ಬಂಟಿ, ತೇಜು ಸೇರಿದಂತೆ ವಿವಿಧ ಕುಸ್ತಿಪಟುಗಳು ಆಗಮಿಸಿದ್ದರು.
ಮೊದಲ ದಿನದಂದು ಶಿಕಾರಿಪುರದ ರಾಘು, ಚಂದ್ರು, ದಾವಣಗೆರೆ ರಾಕಿ, ಲಕ್ಷ್ಮಣ್ ಬೊಮ್ಮನಕಟ್ಟೆ, ಮಧು ಭದ್ರಾವತಿ, ಶಿವಮೊಗ್ಗ ವಿನಯ ಭಗತ್ ಸೇರಿದಂತೆ ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಭಾಗವಹಿಸಿದ್ದರು.
ಇದನ್ನೂ ಓದಿ: Viral post: ಜಿಲೇಬಿ ಮಸಾಲಾ! ಹೀಗೊಂದು ವಿಚಿತ್ರವಾದ ಬೀದಿಬದಿಯ ಚಾಟ್
ವಿಜೇತರಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿದಂತೆ ವಿಶೇಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತಿದೆ. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಕುಸ್ತಿ ಸಂಚಾಲಕರಾಗಿ ಎಸ್.ಅಶೋಕ್, ಸಹ ಸಂಚಾಲಕರಾಗಿ ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಮೊದಲ ದಿನವೇ ಸಾವಿರಾರು ಜನರು ಆಗಮಿಸಿದ್ದರು. ರಾಜ್ಯದ ವಿವಿಧ ಕಡೆಯಿಂದ ಕುಸ್ತಿ ಪ್ರೇಮಿಗಳು ಆಗಮಿಸಿದ್ದರು. ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಕುಸ್ತಿಪಟುಗಳಿಗೆ ಬೆಳ್ಳಿ ಬಹುಮಾನ ಹಾಗೂ ವಿಶೇಷ ನಗದು ಬಹುಮಾನ ನೀಡಲಾಗುತ್ತಿದೆ. ೨೦೦ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿ ಗದೆ ಪಂದ್ಯಗಳು ನಡೆಯಲಿವೆ. ಒಂದು ಸಾವಿರ ರೂ., ೨೫-೫೦ ಸಾವಿರ ರೂ.ವರೆಗಿನ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: Terrorist arrested in Bangalore : ಮನೆ ಖಾಲಿ ಮಾಡಿ ಉ.ಪ್ರದೇಶಕ್ಕೆ ಹಾರಲು ರೆಡಿಯಾಗಿದ್ದ ಉಗ್ರನಿಗೆ ಶಾಕ್!
ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಆಯೋಜಿಸಿದ ಕುಸ್ತಿ ಪಂದ್ಯಾವಳಿಗೆ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಆಗಮಿಸಿದ್ದಾರೆ. ಮೂರು ದಿನಗಳ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಲು ಜಾತ್ರಾ ಸಮಿತಿಯು ಅಗತ್ಯ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನೀಯ ಎಂದು ಎಂಎಡಿಬಿ ಅಧ್ಯಕ್ಷ ಕೆ.ಎನ್.ಗುರುಮೂರ್ತಿ ಹೇಳಿದರು.
ಇದನ್ನೂ ಓದಿ: IND VS AUS: ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ತಾಣ ಬದಲು; ವರದಿ
ಎಂಎಡಿಬಿ ಅಧ್ಯಕ್ಷರಿಂದ ಪಂದ್ಯಾವಳಿಗೆ ಚಾಲನೆ
ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರಾ ಪ್ರಯುಕ್ತ ಸಮಿತಿಯ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎನ್.ಗುರುಮೂರ್ತಿ ಚಾಲನೆ ನೀಡಿದರು. ಶಿಕಾರಿಪುರದ ಚಂದ್ರು ಹಾಗೂ ದಾವಣಗೆರೆ ನಡುವಿನ ಪಂದ್ಯದಲ್ಲಿ ಚಂದ್ರು ವಿಜಯಶಾಲಿಯಾಗಿ ೩,೦೦೦ ರೂ. ನಗದು ಬಹುಮಾನ ವಿಜೇತರಾದರು. ಶಿವಮೊಗ್ಗದ ವಿನಯ್ ಭಗತ್ ಹಾಗೂ ಭದ್ರಾವತಿಯ ಮಧು ನಡುವೆ ಹಣಾಹಣಿ ನಡೆಯಿತು. ಮಹಾರಾಷ್ಟ್ರದ ಓಮಾಕ್ಷ್, ಹರಿಯಾಣದ ಬಂಟಿ, ಮಹಾರಾಷ್ಟ್ರದ ರಾಮ್ ಕುಸ್ತಿಪಟುಗಳು ಭಾಗವಹಿಸಿದ್ದರು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್, ಕುಸ್ತಿ ಸಂಚಾಲಕ ಎಸ್.ಅಶೋಕ್, ಸಹ ಸಂಚಾಲಕ ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ, ಸುದರ್ಶನ್ ಭಂಡಾರಿ, ದೇವೇಂದ್ರಪ್ಪ, ಅಶೋಕ್, ಸಿದ್ದಪ್ಪ, ತೀರ್ಪುಗಾರರು ಹಾಗೂ ಕುಸ್ತಿಪಟುಗಳು ಹಾಜರಿದ್ದರು.
ಇದನ್ನೂ ಓದಿ: Rashmika Mandanna: ನೆಲ ಒರೆಸುವ ಬಟ್ಟೆ ಹಾಗಿದೆ ಎಂದ ನೆಟ್ಟಿಗರು: ರಶ್ಮಿಕಾ ಧರಿಸಿದ ಟಾಪ್ ಬೆಲೆ ಎಷ್ಟು?