Site icon Vistara News

Samskara Habba | ಸದೃಢ, ಸುಸಂಸ್ಕೃತ ಮತ್ತು ಶ್ರೇಷ್ಠ ಭಾರತ ನಿರ್ಮಾಣಕ್ಕೆ ಸಂಸ್ಕಾರ ಹಬ್ಬ: ಹರಿಹರಪುರ ಶ್ರೀ

Samskara Habba

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಮಠದ ಸನಾತನ ಹಿಂದೂ ಸಮಾಜ ಪರಿಷತ್‌ ಏರ್ಪಡಿಸಿದ್ದ “ಸಮಾನ ಸಂಸ್ಕಾರ ಸಮಾವೇಶ- ಸಂಸ್ಕಾರ ಹಬ್ಬʼʼ (Samskara Habba) ಹರಿಹರಪುರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಇಂದು ಇಂತಹ ಸಂಸ್ಕಾರ ಹಬ್ಬ, ಸಮಾವೇಶ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ವಿಷಾಧಿಸಿದರಲ್ಲದೆ, ಸಂಸ್ಕಾರದಲ್ಲಿ ಭೇದಭಾವವಿಲ್ಲ. ಇದನ್ನು ಎಲ್ಲರೂ ನಿತ್ಯ ಆಚರಿಸಬೇಕು ಎಂದರು.

ಹಿಂದೆ ನಮ್ಮಲ್ಲಿ ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕೃತಿ ಎಂಬ ಎರಡು ಸಂಸ್ಕೃತಿಗಳಿದ್ದವು. ಇಂದೂ ಕೃಷಿ ಸಂಸ್ಕೃತಿ ಇದೆ. ಕೃಷಿಕರನ್ನು ಎಲ್ಲರೂ ಅನ್ನದಾತರು ಎಂದು ಗೌರವಿಸುತ್ತಾರೆ. ತಮ್ಮ ಕೃಷಿ ಹಿನ್ನೆಲೆಯನ್ನು ಹೇಳಿಕೊಳ್ಳಲು ನಮಗೆಲ್ಲಾ ಹೆಮ್ಮೆ ಎನಿಸುತ್ತದೆ. ಇನ್ನು ನಮ್ಮ ಕನ್ನಡ ಸಂಸ್ಕೃತಿಯನ್ನಂತು ಎಲ್ಲರೂ ಗೌರವಿಸುತ್ತಾರೆ. ನಮಗೆಲ್ಲಾ ಸಂಸ್ಕಾರ ನೀಡುವವರು ಋಷಿ ಸಂಸ್ಕೃತಿಯವರು. ಈ ವೇದಿಕೆಯ ಮುಂದೆ ಕೃಷಿ ಸಂಸ್ಕೃತಿಯವರಿದ್ದರೆ, ವೇದಿಕೆಯ ಮೇಲೆ ಋಷಿ ಸಂಸ್ಕೃತಿಯವರಿದ್ದಾರೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

Samskara Habba

ನಾವು ನಮಗೆ ಗೊತ್ತಿಲ್ಲದಂತೆಯೇ ನಮ್ಮ ಸಂಸ್ಕಾರವನ್ನು ನಮ್ಮ ವ್ಯಕ್ತಿತ್ವಗಳಲ್ಲಿ ಪ್ರದರ್ಶಿಸುತ್ತಿರುತ್ತೇವೆ. ಇತ್ತೀಚೆಗೆ ಬ್ರಿಟನ್‌ ಪ್ರಧಾನಿಯಾದ ಋಷಿ ಸುನಕ್‌ ಅವರ ಬಗ್ಗೆ ಓದುತ್ತಿದ್ದೆ. ಅವರು ತಾವು ಬ್ರಿಟಿಷ್‌ ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ದೀಪಾವಳಿ ಹಬ್ಬ ಆಚರಿಸುತ್ತಾರೆ. ಭಗದ್ಗೀತೆ ಮುಟ್ಟಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ. ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ವಿವರಿಸಿದರು.

ನಾವೆಲ್ಲರೂ ಸಂಸ್ಕಾರ ಬಿಟ್ಟು ಬದುಕಬಾರದು. ದೇವರ ದೃಷ್ಟಿ ನಮ್ಮ ಮೇಲೆ ಬೀಳಬೇಕಾದರೆ ನಾವೆಲ್ಲರೂ ಸಮಾನರು ಎಂಬ ಮನೋಭಾವವಿರಬೇಕು. ಸಮಾನತೆ ಮೂಡಿಸುವ ಮೂಲಕ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿರುವ ಶ್ರೀಮಠದ ಕೆಲಸ ಆದರ್ಶವಾದದು. ಎಲ್ಲರಿಗೂ ಶ್ರೀಗುರುಗಳ ಆಶೀರ್ವಾದ, ಮಾರ್ಗದರ್ಶನ ದೊರೆಯಲಿ ಎಂದು ಹಾರೈಸಿದರು.

ಅನುಗ್ರಹ ಆಶೀರ್ವನ ನೀಡಿದ ಹರಿಹರಪುರ ಶ್ರೀಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಸಮಾಜದಲ್ಲಿ ವೈವಿಧ್ಯತೆ ಇರಲಿ, ತಾರತಮ್ಯತೆ ತೊಲಗಲಿ, ಸಮಾನತೆ ಮತ್ತು ಏಕತೆ ಬೆಳೆಯಲಿ. ಇದಕ್ಕಾಗಿ ನಾವೆಲ್ಲರೂ ಹೃದಯದಿಂದ ಕೆಲಸ ಮಾಡೋಣ. ಆ ಮೂಲಕ, ಸದೃಢವಾದ, ಸುಸಂಸ್ಕೃತವಾದ ಮತ್ತು ಶ್ರೇಷ್ಠವಾದ ಭಾರತವನ್ನು ನಿರ್ಮಾಣ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಬೇಲಿ ಮಠ ಸಂಸ್ಥಾನದ ಶ್ರೀ ಶಿವಾನುಭವ ತ್ರಿಮೂರ್ತಿ ಸ್ವಾಮಿಜಿ, ಜಂಗಮ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ದೇಶ, ಸಮಾಜ, ಹಿಂದೂ ಜಾಗೃತಿಯ ಕುರಿತು ಆಶೀರ್ವಚನ ನೀಡಿದರು.

Samskara Habba

ಈ ಕಾರ್ಯಕ್ರಮದಲ್ಲಿ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಧಿಕ ಅಂಕ ಗಳಿಸಿದ 60 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ಪ್ರೋತ್ಸಾಹ ಧನ ನೀಡಲಾಯಿತು. “ಭಗವದ್ಗೀತಾ-ಯತಾರ್ಥ ಭಾವದೀಪಿಕಾʼʼ ಧ್ವನಿಸುರಳಿಯ ಲೋಕಾರ್ಪಣೆ ಮಾಡಲಾಯಿತು. ಆಯ್ದ ವಚನಗಳು ಮತ್ತು ಭಗವದ್ಗೀತೆಯ ಭಕ್ತಿಯೋಗದ ಶ್ಲೋಕಗಳ ಸಾಮೂಹಿಕ ಪಾರಾಯಣ, “ಪಂಚಪ್ರಾಣ ವಿಧಿಗಳುʼʼ ಪ್ರತಿಜ್ಞಾ ಬೋಧನೆ ಮತ್ತಿತರ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸೀತಾರಾಂ ಕೆದಿಲಾಯ, ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಮಾಜಿ ಶಾಸಕ ಜೀವರಾಜ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು. ಖ್ಯಾತ ಗಾಯಕಿ ಸಾದ್ವಿನಿ ಕೊಪ್ಪ ಪ್ರಾರ್ಥನೆ ಮಾಡಿದರು. ಶ್ರೀಮಠದ ಆಡಳಿತಾಧಿಕಾರಿ ಡಾ. ಬಿ.ಎಸ್‌. ರವಿಶಂಕರ್‌ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ| Samskara Habba | ಹರಿಹರಪುರ ಶ್ರೀ ಮಠದಲ್ಲಿ ಸಂಸ್ಕಾರ ಹಬ್ಬ; ಏನಿದು ಕಾರ್ಯಕ್ರಮ?

Exit mobile version