Site icon Vistara News

Samskara | ದೊಡ್ಡವರ ಪಾದ ಮುಟ್ಟಿ ನಮಸ್ಕರಿಸುವುದರಿಂದ ಲಾಭಗಳೇನು?

Samskara

ಸನಾತನ ಹಿಂದೂ ಸಂಸ್ಕೃತಿಯಲ್ಲಿ ಅನೇಕ ರೀತಿಯ ಆಚರಣೆಗಳಿವೆ. ಆ ಎಲ್ಲ ಆಚರಣೆಗಳಿಗೂ ಅದರದ್ದೇ ಆದ ಮಹತ್ವವಿದೆ. ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಅನೇಕ ಧಾರ್ಮಿಕ ಆಚರಣೆಗಳನ್ನು (Samskara) ನಾವು ಇಂದಿಗೂ ಪಾಲಿಸುತ್ತಾ ಬಂದಿದ್ದೇವೆ. ಅಂತಹ ಆಚರಣೆಗಳಲ್ಲಿ ಚರಣ ಸ್ಪರ್ಶ ಅಂದರೆ ಪಾದ ಮುಟ್ಟಿ ನಮಸ್ಕರಿಸುವುದು ಸಹ ಒಂದಾಗಿದೆ. ಚರಣ ಸ್ಪರ್ಶಿಸುವುದರ ಪ್ರಾಮುಖ್ಯತೆಯನ್ನು ಅಥರ್ವಣ ವೇದದಲ್ಲಿ ಉಲ್ಲೇಖಿಸಲಾಗಿದೆ.

ಗುರು–ಹಿರಿಯರ, ತಂದೆ –ತಾಯಿಯರ ಪಾದ ಮುಟ್ಟಿ ನಮಸ್ಕರಿಸುವದರಿಂದ ಧಾರ್ಮಿಕವಾಗಿ ಹಾಗೂ ವೈಜ್ಞಾನಿಕ ವಾಗಿ ಯಾವ ರೀತಿಯ ಲಾಭವಿದೆ ಎಂಬುದನ್ನು ತಿಳಿಯೋಣ. ನಮ್ಮ ಸಂಸ್ಕೃತಿಯಲ್ಲಿ ನಮಸ್ಕಾರ ಮಾಡುವುದು ವಿನಮ್ರತೆ ಮತ್ತು ಸಮರ್ಪಣಾ ಭಾವವನ್ನು ತೋರಿಸುತ್ತದೆ. ಅದು ಕೈ ಮುಗಿದು ನಮಸ್ಕರಿಸುವುದು, ತಲೆ ಬಗ್ಗಿಸಿ ಗೌರವ ವ್ಯಕ್ತಪಡಿಸುವುದು ಅಥವಾ ಕಾಲುಗಳನ್ನು ಮುಟ್ಟಿ ನಮಸ್ಕರಿಸುವುದು ಸಹ ಆಗಿರಬಹುದು. ಶಾಸ್ತ್ರದ ಪ್ರಕಾರ ದೇವರಿಗೆ, ಮಾತಾ–ಪಿತರಿಗೆ ಮತ್ತು ಹಿರಿಯರಿಗೆ ಪಾದ ಮುಟ್ಟಿ ನಮಸ್ಕರಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಪುರಾಣದಲ್ಲಿ ಸಹ ಈ ಬಗ್ಗೆ ಅನೇಕ ನಿದರ್ಶನಗಳಿವೆ.

ಸಕಾರಾತ್ಮಕ ಫಲ
ಹಿರಿಯರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದಾಗ, ಅವರು ದೇವರ ಹೆಸರು ಹೇಳಿ ಆಶೀರ್ವದಿಸುತ್ತಾರೆ, ಇಲ್ಲವೇ ಸದ್ವಚನಗಳಿಂದ ಒಳಿತನ್ನು ಆಶಿಸುತ್ತಾರೆ. ಇಂಥ ಸಂದರ್ಭದಲ್ಲಿ ಕಾಲು ಮುಟ್ಟಿ ನಮಸ್ಕರಿಸಿದವರಿಗೆ ಸಕಾರಾತ್ಮಕ ಶಕ್ತಿ ಪ್ರಾಪ್ತವಾಗುತ್ತದೆ. ಇದರಿಂದ ಯಶಸ್ಸು, ಕೀರ್ತಿ ಮತ್ತು ಆಯಸ್ಸು ಸಹ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಹಿರಿಯರ ಶುಭ ಕರ್ಮಗಳ ಪ್ರಭಾವ ಸಹ ನಮಸ್ಕರಿಸಿದವರಿಗೆ ಲಭ್ಯವಾಗುತ್ತದೆ.

ಅನೇಕ ಸಂಶೋಧನೆಗಳ ವರದಿಯ ಪ್ರಕಾರ ಚರಣ ಸ್ಪರ್ಶದಿಂದ ಶಾರೀರಿಕ, ಮಾನಸಿಕ ಮತ್ತು ವೈಚಾರಿಕ ವಿಕಾಸ ಉತ್ತಮ ರೀತಿಯಲ್ಲಿ ಆಗುತ್ತದೆ. ಇದೊಂದು ಸದೃಢ ಪರಂಪರೆಯಾಗಿದ್ದು, ಇದರಿಂದ ಕೇಲವ ದೊಡ್ಡವರ ಆಶೀರ್ವಾದ ಸಿಗುವುದಷ್ಟೇ ಅಲ್ಲದೇ ಹಿರಿಯರ ಉತ್ತಮ ಸ್ವಭಾವಗಳು ಧನಾತ್ಮಕವಾಗಿ ಪ್ರಭಾವವನ್ನು ಬೀರುತ್ತವೆ.

ವೈಜ್ಞಾನಿಕ ಕಾರಣಗಳು
ಹಿರಿಯರ ಪಾದ ಸ್ಪರ್ಶಿಸುವಾಗ ಕೈಗಳು ಅವರ ಪಾದಗಳ ಮೇಲಿರುತ್ತವೆ. ಅವರ ಹಸ್ತ ಪಾದ ಮುಟ್ಟಿದವರ ಶಿರಸ್ಸಿನ ಮೇಲಿರುತ್ತದೆ. ಈ ಸಂದರ್ಭದಲ್ಲಿ ಒಂದು ರೀತಿಯ ವಿದ್ಯುತ್ಕಾಂತೀಯ ಚಕ್ರ ಏರ್ಪಡುತ್ತದೆ. ಅವರ ಸಕಾರಾತ್ಮಕತೆ ಪಾದ ಮುಟ್ಟಿದವರ ಮೇಲೆ ಪ್ರವಹಿಸುತ್ತದೆ. ಎಲ್ಲ ವಸ್ತುಗಳಲ್ಲೂ ಗುರುತ್ವಾಕರ್ಷಣ ಶಕ್ತಿ ಇದ್ದೇ ಇರುತ್ತದೆ. ಇದರಲ್ಲಿ ಶಿರಸ್ಸನ್ನು ಉತ್ತರ ಧೃವವೆಂದು, ಪಾದಗಳನ್ನು ದಕ್ಷಿಣ ಧೃವವೆಂದು ಪರಿಗಣಿಸಲಾಗಿದೆ. ಈ ಗುರುತ್ವಾಕರ್ಷಣ ಶಕ್ತಿಯು ಸದಾ ಉತ್ತರ ಧೃವದಿಂದ ದಕ್ಷಿಣ ಧೃವಕ್ಕೆ ಪ್ರವಹಿಸುವುದರ ಮೂಲಕ ಚಕ್ರವನ್ನು ಪೂರ್ಣಗೊಳಿಸುತ್ತದೆ.

ಶರೀರದ ದಕ್ಷಿಣ ಧೃವ ಅಂದರೆ ಪಾದಗಳಲ್ಲಿ ಈ ಶಕ್ತಿಯು ಅಧಿಕವಾಗಿರುತ್ತದೆ. ಈ ಶಕ್ತಿಯನ್ನು ಪಾದಗಳಿಂದ ಕೈಗಳ ಮೂಲಕ ಗ್ರಹಿಸುವ ಪ್ರಕ್ರಿಯೆಗೆ ಚರಣ ಸ್ಪರ್ಶವೆಂದು ಹೇಳಲಾಗುತ್ತದೆ.

ಮನೋಬಲ ವೃದ್ಧಿ
ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವುದರಿಂದ ಮನೋಬಲ ವೃದ್ಧಿಸುತ್ತದೆ. ಯಾವುದೇ ಉತ್ತಮ ಕೆಲಸದ ನಿಮಿತ್ತ ಹೊರಗಡೆ ಹೋಗುವಾಗ ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದರಿಂದ ಆ ಕೆಲಸ ಸಾಧಿಸವಲ್ಲಿ ಮನೋಬಲ ಹೆಚ್ಚುವುದರ ಜೊತೆಗೆ ಮಾನಸಿಕ ನೆಮ್ಮದಿ ಸಹ ಲಭಿಸುತ್ತದೆ. ಹಿರಿಯರಿಂದ ಪಡೆದ ಆಶೀರ್ವಾದವು ಸುರಕ್ಷಾ ಕವಚದ ರೀತಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಚಿಂತನೆಗಳು ಸಕಾರಾತ್ಮಕವಾಗುತ್ತದೆ.

ಪಾದಸ್ಪರ್ಶದಿಂದ ಶಾರೀರಕ ಲಾಭವು ಸಹ ಉಂಟಾಗುತ್ತದೆ. ಬಗ್ಗಿ ಪಾದಗಳನ್ನು ಸ್ಪರ್ಶಿಸುವುದರಿಂದ ಮೊಣಕಾಲಿಗೆ ಬಲ ಬರುತ್ತದೆ. ಬಗ್ಗಿ ನಮಸ್ಕರಿಸುವ ಸಂದರ್ಭದಲ್ಲಿ ಶಿರಸ್ಸಿನಭಾಗದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಲಾಭವನ್ನು ಉಂಟುಮಾಡುತ್ತದೆ.

ಇದನ್ನೂ ಓದಿ| Adhik Maasa 2023 | ಹೊಸ ವರ್ಷ 2023ರಲ್ಲಿ ಬರಲಿದೆ ಅಧಿಕ ಮಾಸ; ಏನಿದರ ವಿಶೇಷ?

Exit mobile version