ಬೆಂಗಳೂರು: ನಾವೆಲ್ಲರೂ ಆಸ್ತಿಕರು, ಮನುಷ್ಯನೆಂದರೆ ಆತ ಆಸ್ತಿಕನಾಗಿರಲೇಬೇಕು. ಇಡೀ ಚರಾಚರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದ ಜೀವಿಯೆಂದರೆ ಮನುಷ್ಯ. ಯಾಕೆ ಮನುಷ್ಯ ಶ್ರೇಷ್ಠ ಎಂದರೆ ಆತ ಕೃತಜ್ಞನಾಗಿರುತ್ತಾನೆ. ಆತ ಕೃತಜ್ಞನಾಗಿರಬೇಕೆಂದರೆ ಸಂಸ್ಕಾರ (Samana Samskara) ಹೊಂದಿರುತ್ತಾನೆ. ಹೀಗಾಗಿ ಮನುಷ್ಯನಿಗೆ ಸಂಸ್ಕಾರ ಅಗತ್ಯವಾಗಿದೆ ಎಂದು ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ನಗರದ ಮಹಾಲಕ್ಷ್ಮಿ ಲೇಔಟ್‌ನ ಹಿಂದು ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸನಾತನ ಹಿಂದು ಸಮಾಜ ಪರಿಷತ್ ವತಿಯಿಂದ ಗುರುವಾರ ಆಯೋಜಿಸಿದ್ದ ‘ಸಮಾನ ಸಂಸ್ಕಾರ ಕಾರ್ಯಾಗಾರʼ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಅವರ ಚಾತುರ್ಮಾಸ್ಯ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ. ಯಾಕೆಂದರೆ ಚಾತುರ್ಮಾಸ್ಯದ ಸಂದರ್ಭದಲ್ಲಿ ಜಪ-ತಪ, ಅನುಷ್ಠಾನ ನಡೆಯುತ್ತದೆ. ಅವರ ಗುರಿ ಮೋಕ್ಷವಾಗಿರುತ್ತದೆ. ಆದರೆ, ಆ ಮಾರ್ಗದ ಯಶಸ್ಸಿಗಾಗಿ ಅವರು ಕೆಲಸ ಮಾಡುವ ಜತೆಗೆ ಸುತ್ತಮುತ್ತಲಿನ ಸಮಾಜಕ್ಕೂ ಏನಾದರೂ ಪ್ರಯೋಜನವಾಗಲಿ ಎಂದು ಸ್ವಾಮೀಜಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದವರು ಹೇಳಿದರು.
ಭಾರತೀಯರು ಸಾವಿರಾರು ದೇವರನ್ನು ನಂಬುತ್ತಾರೆ. ನಿತ್ಯವೂ ಶಾಲೆಗೆ ಹೋಗುವಾಗ ದೇವರಿಗೆ ನಮಿಸಿ ಹೋಗುವವರು ಆಸ್ತಿಕರು. ಆದರೆ, ತಂದೆ-ತಾಯಿಗೆ ನಮಸ್ಕಾರ ಮಾಡಿ ಹೋಗುವುದು ಸಂಸ್ಕಾರವಾಗಿದೆ. ಈ ರೀತಿಯ ಸಂಸ್ಕಾರ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದವರು ತಿಳಿಸಿದರು.
ಮಕ್ಕಳು ಶ್ರದ್ಧಾ ಭಕ್ತಿಯಿಂದ ಇಷ್ಟಪಟ್ಟು ಭಗವದ್ಗೀತೆ, ದೇವರ ನಾಮ, ಸ್ತೋತ್ರಗಳು, ಶ್ಲೋಕಗಳ ಪುಸ್ತಕಗಳನ್ನು ಓದುವುದರಿಂದ ಒಳ್ಳೆಯದಾಗುತ್ತದೆ. ನಾವು ಯಾವುದೇ ಕೆಲಸ ಮಾಡುವ ಮೊದಲು ನಮಗೆ ಅತ್ಯಂತ ಆತ್ಮೀಯರು, ಹಿಂತಚಿಂತಕರಾದ ತಂದೆ-ತಾಯಿ, ಗುರುಗಳು, ಆಪ್ತರಾದ ಗೆಳೆಯ ಅಥವಾ ಗೆಳತಿ ಈ ಮೂವರಲ್ಲಿ ಯಾರಿಗಾದರೂ ಒಬ್ಬರಿಗೆ ಹೇಳಿ ಮಾಡುವುದು ಕೂಡ ಸಂಸ್ಕಾರವಾಗಿದೆ ಎಂದು ಹೇಳಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : The POWER of GRATITUDE, ಕೃತಜ್ಞತೆ ಎಂಬ ಮಹಾಶಕ್ತಿ; ನಿಮಗೆ ಬೂಮರಾಂಗ್ ಆಟ ಗೊತ್ತಾ?
ಮನೆಯಲ್ಲಿ ದೇವರು, ತಂದೆ-ತಾಯಿಗೆ ಹಾಗೂ ಶಾಲೆಯಲ್ಲಿ ಗುರುಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಸಂಕಲ್ಪ ಮಾಡಿದರೆ ಇವತ್ತಿನ ಈ ಸಮಾನ ಸಂಸ್ಕಾರ ಶಿಬಿರ ನಿಶ್ಚಿತವಾಗಿ ಯಶಸ್ಸಾಗುತ್ತದೆ ಎಂದು ತಿಳಿಸಿದರು.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ವಿಭು ಅಕಾಡೆಮಿಯ ಡಾ. ಆರತಿ ವಿ.ಬಿ. ಅವರು ದಿಕ್ಸೂಚಿ ಭಾಷಣ ಮಾಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.