ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣ ಜನ್ಮಾಷ್ಟಮಿಯ ಶಾಪಿಂಗ್ ಮೇನಿಯಾ ಎಲ್ಲೆಡೆ ಆರಂಭವಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮುದ್ದು ಕೃಷ್ಣನ ಅಲಂಕಾರಿಕ ಸಾಮಗ್ರಿಗಳು, ಕೃಷ್ಣನ ಪುಟ್ಟ ಪುಟ್ಟ ಬೊಂಬೆಗಳು, ಮೂರ್ತಿಗಳು, ಆಕರ್ಷಕ ಮಿನಿಯೇಚರ್ ಜೋಕಾಲಿಗಳು, ಡಿಸೈನರ್ ಕೊಳಲು, ಬಣ್ಣಬಣ್ಣದ ಮಡಿಕೆಗಳು ಸೇರಿದಂತೆ ನಾನಾ ಸಾಮಗ್ರಿಗಳು ಆಗಮಿಸಿವೆ.
ಆಕರ್ಷಕ ಮಿನಿಯೇಚರ್ ಜೋಕಾಲಿ
ಹಬ್ಬದ ರಂಗನ್ನು ಹೆಚ್ಚಿಸಲು ಪುಟ್ಟ ಕೃಷ್ಣನನ್ನು ತೂಗುವ ಮಿನಿಯೇಚರ್ ಜೋಕಾಲಿಗಳು ಹೊಸ ವಿನ್ಯಾಸದಲ್ಲಿ ಬಂದಿವೆ. “ಇತ್ತೀಚೆಗೆ ಪುಟ್ಟ ಪುಟ್ಟ ಜೋಕಾಲಿಗಳಲ್ಲಿ ಉತ್ಸವ ಮೂರ್ತಿ ಮುದ್ದು ಕೃಷ್ಣನ ಇರಿಸಿ ಶೋಗಿಡುವುದು ಸಾಮಾನ್ಯವಾಗಿದೆ. ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಮಕ್ಕಳಿಗೂ ಇವು ಇಷ್ಟವಾಗುತ್ತವೆ. ಹಾಗಾಗಿ ಇವುಗಳ ಮಾರಾಟ ಜೋರಾಗಿಯೇ ನಡೆದಿದೆ” ಎನ್ನುತ್ತಾರೆ ಮಾರಾಟಗಾರರು.
ವೆರೈಟಿ ಕನ್ಹಯ್ಯನ ಬೊಂಬೆಗಳು / ಮೂರ್ತಿಗಳು
ಬಣ್ಣ ಬಣ್ಣದ ಪುಟ್ಟ ಮುದ್ದು ಕೃಷ್ಣನ ಪುಟ್ಟ ಮೂರ್ತಿಗಳಿಂದಿಡಿದು ಆಳೆತ್ತರದ ಕೃಷ್ಣನ ಮೂರ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿರಾರಾಜಿಸುತ್ತಿವೆ. ನಾನಾ ಮೆಟಿರೀಯಲ್‌ಗಳಲ್ಲಿ ಸಿದ್ಧಪಡಿಸಿರುವ ಅನ್‌ಬ್ರೇಕಬಲ್ ಕೃಷ್ಣನ ಮೂರ್ತಿಗಳು ಈ ಬಾರಿ ಎಲ್ಲರ ಗಮನಸೆಳೆದಿವೆ. ರಾಧೆ ಜತೆಗಿರುವ ಜೋಡಿ ಗೋಪಾಲ ಮೂರ್ತಿಗಳು ಮೊದಲಿಗಿಂತ ಹೆಚ್ಚು ವಿನ್ಯಾಸದಲ್ಲಿ ಎಂಟ್ರಿ ನೀಡಿವೆ.
ಮಕ್ಕಳಿಗೆ ಪ್ರಿಯವಾದ ಡಿಸೈನರ್ ಕೊಳಲು
ಎಂದಿನಂತೆ ಮಕ್ಕಳಿಗೆ ಪ್ರಿಯವಾಗಿರುವ ನವಿಲುಗರಿ ಕೊಳಲು, ಮುತ್ತಿನ ಕೊಳಲು ಹಾಗೂ ಕಾರ್ಟೂನ್ ವಿನ್ಯಾಸವಿರುವ ಕೊಳಲುಗಳು ಮಾರುಕಟ್ಟೆಗೆ ಆಗಮಿಸಿವೆ. ಮಕ್ಕಳಿಗೆ ಕೃಷ್ಣನ ಫ್ಯಾನ್ಸಿ ಡ್ರೆಸ್ ಹಾಕುವಾಗ ಆಕರ್ಷಕ ಕೊಳಲು ಹಿಡಿದಲ್ಲಿ ಚೆನ್ನಾಗಿ ಕಾಣುವುದು. ಇವು ಮಕ್ಕಳಿಗೆ ಭಾರವಾಗದಂತಹ ಲೈಟ್‌ವೇಟ್ ಮೇಟಿರಿಯಲ್‌ನಲ್ಲಿ ದೊರೆಯುತ್ತಿವೆ.
ಅಂದ ಹೆಚ್ಚಿಸುವ ಕಾಲಿನ ಹೆಜ್ಜೆಯ ಸ್ಟಿಕ್ಕರ್ಸ್
ಮನೆಯ ಅಂಗಳದಲ್ಲಿ ಅಂಟಿಸಬಹುದಾದ ಹಾಗೂ ಉತ್ಸವ ಮೂರ್ತಿ ಕೃಷ್ಣನ ಹೆಜ್ಜೆಯ ಇನ್‌ಸ್ಟಂಟ್ ಸ್ಟಿಕ್ಕರ್‌ಗಳು ನಾನಾ ವಿನ್ಯಾಸದಲ್ಲಿ ಬಂದಿವೆ. ಕುಂದನ್‌ನ ವೈಟ್, ರೆಡ್, ಪಿಂಕ್ ಹೀಗೆ ನಾನಾ ಶೇಡ್‌ಗಳಿರುವ ಹೆಜ್ಜೆಯ ಸ್ಟಿಕ್ಕರ್‌ಗಳು, ಸಿಲ್ವರ್ ಶೇಡ್, ಪರ್ಲ್, ಗೋಲ್ಡನ್ ಶೇಡ್‌ನ ಮಣಿಗಳಿರುವ ಡಿಸೈನ್‌ನವು ಸಿಗುತ್ತಿವೆ. ಅಂದಹಾಗೆ, ಇವನ್ನು ಸೆಲೆಬ್ರೇಷನ್ ನಂತರ ಎತ್ತಿಟ್ಟು ಮುಂದಿನ ವರ್ಷ ಮರುಬಳಕೆ ಮಾಡಬಹುದು ಎನ್ನುತ್ತಾರೆ ಮಾರಾಟಗಾರರು.
ಅಲಂಕಾರಿಕ ಕಲರ್‌ಫುಲ್ ಮಡಿಕೆಗಳು
ಮನೆಯ ಕಾರ್ನರ್‌ನಲ್ಲಿ ಇಲ್ಲವೇ ಅಂಗಳದಲ್ಲಿ ಕಟ್ಟಬಹುದಾದ ಕಲರ್‌ಫುಲ್ ಅಲಂಕೃತಗೊಂಡ ಮಡಿಕೆಗಳು ಮಾರುಕಟ್ಟೆಯ ರಂಗೇರಿಸಿವೆ. ನೋಡಲು ಮನಮೋಹಕವಾಗಿರುವ ಈ ಮಡಿಕೆಗಳು ನಾನಾ ಸೈಝ್‌ನಲ್ಲಿ ದೊರೆಯುತ್ತಿವೆ.
ಕಲರ್‌ಫುಲ್ ಹೂವಿನ ತೋರಣಗಳು
ಹಬ್ಬದ ಉತ್ಸಾಹವನ್ನು ಹೆಚ್ಚಿಸುವ, ನ್ಯಾಚುರಲ್ ಹೂವುಗಳ ತೋರಣವನ್ನು ಮೀರಿಸುವ ಊಹೆಗೂ ಮೀರಿದ ಕಲರ್‌ಫುಲ್ ಕೃತಕ ಹೂವಿನ ತೋರಣಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಮಾಡುವವರಿಗೆ ಒಂದಿಷ್ಟು ಟಿಪ್ಸ್ :
- ಮರು ಬಳಕೆ ಮಾಡುವಂತಹ ಅಲಂಕಾರಿಕ ವಸ್ತುಗಳನ್ನು ಖರೀದಿಸಿ.
- ಹೊಸ ವಿನ್ಯಾಸದವನ್ನು ಆಯ್ಕೆಮಾಡಿ.
- ಟ್ರೆಡಿಷನಲ್ ಲುಕ್ ಇರುವಂತವಕ್ಕೆ ಪ್ರಾಮುಖ್ಯತೆ ನೀಡಿ.
ಇದನ್ನೂ ಓದಿ| Star Fashion | ಎಥ್ನಿಕ್ ಫ್ಯಾಷನ್‌ಗೆ ವಾಲಿದ ಅನನ್ಯಾ ಪಾಂಡೆ