ಶಬರಿಮಲೆ: ಪ್ರಸಿದ್ಧ ಶಬರಿಮಲೆ ಯಾತ್ರೆಗೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ಲಕ್ಷಾಂತರ ಮಾಲಾಧಾರಿಗಳು ಶ್ರೀ ಅಯ್ಯಪ್ಪಸ್ವಾಮಿಯ (Sabarimala News) ದರ್ಶನ ಪಡೆದಿದ್ದಾರೆ. ಮಳೆ, ಮೋಡಕವಿದ ವಾತಾವರಣವಿದ್ದರೂ ವಾರಾಂತ್ಯದಲ್ಲಿ ಆಗಮಿಸಿದ ಭಕ್ತರ ಸಂಖ್ಯೆ ಲೆಕ್ಕಾಚಾರಗಳನ್ನು ಮೀರಿತ್ತು ಎಂದು ದೇವಸ್ವಂ ಬೋರ್ಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಯಾವುದೇ ಗೊಂದಲವಾಗದಂತೆ ಮಾಲಾಧಾರಿಗಳಿಗೆ ಸಕಲವ ವ್ಯವಸ್ಥೆ ಮಾಡಿಕೊಟ್ಟಿದೆ. ಸನ್ನಿಧಾನದಲ್ಲಿ ಮತ್ತು ದಾರಿಯಲ್ಲಿ ಹಲವಾರು ಕಡೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದು, ಕುಡಿಯುವ ನೀರು, ಆಸ್ಪತ್ರೆಯ ಸೌಲಭ್ಯವನ್ನು ಒದಗಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಯಾತ್ರೆಗೆ ನಿರ್ಬಂಧಗಳಿದ್ದುದ್ದರಿಂದ ಈ ಬಾರಿ ಆಗಮಿಸುತ್ತಿರುವ ಮಾಲಾಧಾರಿಗಳ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಲೆಯನ್ನು ಹತ್ತುವ ಸಂದರ್ಭದಲ್ಲಿ ಅಲ್ಲಲ್ಲಿ ಕುಳಿತು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಸನ್ನಿಧಾನವನ್ನು ತಲಪಲು ಪರಂಪರಾಗತ ದಾರಿಯಾದ ಮರಕ್ಕೂಟ್ಟಂ, ಶರಮ್‌ಕುತ್ತಿ, ನಡಪ್ಪಂಥಲ್ ದಾರಿಯಲ್ಲಿಯೇ ಬನ್ನಿ. ಪವಿತ್ರ ಹದಿನೆಂಟು ಮೆಟ್ಟಿಲುಗಳನ್ನು ತಲಪುವ ದಾರಿಯಲ್ಲಿ ಸರಥಿಯ ಸಾಲಿನಲ್ಲಿಯೇ ಆಗಮಿಸಿ ಮತ್ತು ನೀಡಲಾಗುವ ಸೂಚನೆಗಳನ್ನು ಪಾಲಿಸಿ ಎಂದು ದೇವಸ್ವಂ ಬೋರ್ಡ್ ಮನವಿ ಮಾಡಿದೆ.
ಸನ್ನಿದಾನದಿಂದ ಹಿಂತಿರುಗುವಾಗ ನಡಪ್ಪಂಥಲ್ ಮೇಲ್ಸೇತುವೆದಾರಿಯನ್ನು ಬಳಸಬೇಕು. ಪಂಪಾದಿಂದ ಹೊರಡುವಾಗಲೇ ದರ್ಶನದ ಕುರಿತು ಮತ್ತು ಮಾಲಾಧಾರಿಗಳ ಸಂಖ್ಯೆಯ ಕುರಿತು ಮಾಹಿತಿ ಪಡೆದುಕೊಂಡು, ನಿಮ್ಮ ಪ್ರಯಾಣವನ್ನು ಆರಂಭಿಸಿ ಎಂದು ಬೋರ್ಡ್ ಯಾತ್ರಾರ್ಥಿಗಳಿಗೆ ಸೂಚನೆ ನೀಡಿದೆ.
ಮಲೆಹತ್ತಲು ಅಗತ್ಯವಾಗಿರುವವರಿಗೆ ಡೋಲಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ದೇವಸ್ವಂ ಕೌಂಟರಿನಲ್ಲಿ ಮಾತ್ರ ಇದರ ಟಿಕೆಟ್ ಲಭ್ಯವಿರುತ್ತದೆ. ಆಗತ್ಯ ಇರುವವರು ನಿಗದಿತ ದರವನ್ನು ಪಾವತಿಸಿ ಟಿಕೆಟ್ ಪಡೆದು ಡೋಲಿಯ ಸೌಕರ್ಯವನ್ನು ಪಡೆಯಬಹುದಾಗಿರುತ್ತದೆ. ಯಾತ್ರೆಯ ಪ್ರತಿ ಹಂತದಲ್ಲಿ ಭದ್ರತೆಯ ಚೆಕ್ ಪಾಯಿಂಟ್‌ಗಳಿದ್ದು, ಮಾಲಾಧಾರಿಗಳು ಸ್ವಯಂ ಆಗಿ ತಪಾಸಣೆಗೊಳಗಾಗಬೇಕೆಂದು ಕೋರಲಾಗಿದೆ.
ಯಾವ ಸಮಯದಲ್ಲಿ ಏನು ಪೂಜೆ?
ಸನ್ನಿದಾನದಲ್ಲಿ ಮುಂಜಾನೆ 3 ಗಂಟೆಗೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ, ಶುದ್ದಿ ಮತ್ತು ಅಭಿಷೇಕ ನಡೆಯುತ್ತದೆ. 3.30ಕ್ಕೆ ಗಣಪತಿ ಹೋಮ ನಡೆಸಲಾಗುತ್ತದೆ. 3.30ರಿಂದ 7ರವರೆಗೆ ತುಪ್ಪದ ಅಭಿಷೇಕ ನಡೆಸಲಾಗುತ್ತದೆ. 7.30ರಿಂದ ಉಷಃಪೂಜೆ ನಡೆಯಲಿದ್ದು, 8.30ರಿಂದ 11ರವರೆಗೆ ತುಪ್ಪದ ಅಭಿಷೇಕ ನಡೆಸಲಾಗುತ್ತದೆ.
11.10ರಿಂದ ವಿಶೇಷ ತುಪ್ಪದ ಅಭಿಷೇಕ, 11ರಿಂದ 11.30ರವರೆಗೆ ಅಷ್ಟಾಭಿಷೇಕ (15 ಸಂಖ್ಯೆಗಳಲ್ಲಿ) ನಡೆಸಲಾಗುತ್ತದೆ. ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನದ ಪೂಜೆ ನೆರವೇರಿಸಿ 1 ಗಂಟೆಗೆ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಮಧ್ಯಾಹ್ನ 3ಗಂಟೆಗೆ ಮತ್ತೆ ದೇಗುಲದ ಬಾಗಿಲು ತೆರೆಯಲಾಗುತ್ತದೆ. 6.30ಕ್ಕೆ ದೀಪಾರಾಧನೆ, 7ರಿಂದ ರಾತ್ರಿ 9.30ರವರೆಗೆ ಹೂವಿನ ಅಭಿಷೇಕ, 9.30ರಿಂದ ರಾತ್ರಿ ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ ಹಾಡಿನೊಂದಿಗೆ ದೇಗುಲದ ಬಾಗಿಲು ಮುಚ್ಚಲಾಗುತ್ತದೆ ಎಂದು ದೇವಸ್ವಂ ಬೋರ್ಡ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪರಶುರಾಮರಿಂದ ನಿರ್ಮಾಣವಾದ ಗುಡಿ
ಪ್ರಸಿದ್ಧ ಶ್ರೀ ಸ್ವಾಮಿ ಅಯ್ಯಪ್ಪಸ್ವಾಮಿಯ ಗುಡಿಯನ್ನು ಮೊದಲಿಗೆ ಪರಶುರಾಮ ನಿರ್ಮಿಸಿದನೆಂದು ಪುರಾಣ ಕಥೆಗಳು ಹೇಳುತ್ತವೆ. ಪಂದಳ ರಾಜ ರ್ನಿಮಿಸಿದನೆಂಬ ಐತಿಹ್ಯವೂ ಇದೆ. 1907ರವರೆಗೆ ಶಬರಿಮಲೆ ಗರ್ಭಗುಡಿ ಕಾಡಿನ ನಡುವೆ ಶಿಥಿಲಾವಸ್ಥೆಯಲ್ಲಿತ್ತು. ಗರ್ಭಗುಡಿಯಲ್ಲಿ ಏಕಶಿಲಾ ವಿಗ್ರಹಕ್ಕೆ ಪೂಜೆ ನಡೆಯುತ್ತಿತ್ತು. 1909ರಲ್ಲಿ ದೇವಾಲಯದಲ್ಲಿ ಅಗ್ನಿದುರಂತ ಸಂಭವಿಸಿದ್ದರಿಂದ 1910ರಲ್ಲಿ ಪುನಃ ನಿರ್ವಿುಸಲಾಯಿತು. 1935ರ ನಂತರ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಮಕರ ಸಂಕ್ರಮಣದ ಹೊತ್ತಿಗೆ ಮಾತ್ರವಲ್ಲದೆ ಮಂಡಲ ಪೂಜೆಯಲ್ಲೂ ಭಕ್ತರು ಪಾಲ್ಗೊಳ್ಳುತ್ತಿದ್ದರು. ಚಾಲಕ್ಕಾಯಮಾರ್ಗ, ವಡಿಪೆರಿಯಾರ್ ಮಾರ್ಗ ನಿರ್ಮಾಣ ಬಳಿಕ ಶಬರಿಮಲೆಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. 1945 ರಿಂದ ಮಲಯಾಳಿಗರ ವಿಶೇಷ ಹಬ್ಬಗಳ ಸಮಯದಲ್ಲೂ ದೇವಾಲಯನ್ನು ತೆರೆಯಲಾಗುತ್ತಿತ್ತು. 1950ರಲ್ಲಿ ಮತ್ತೆ ಅಗ್ನಿದುರಂತ ನಡೆಯಿತು. ದೇವಸ್ಥಾನ ಸುಟ್ಟು ಭಸ್ಮವಾಯಿತು. 1951ರಲ್ಲಿ ಚೆಂಗನ್ನೂರಿನಿಂದ ಒಂದೂವರೆ ಅಡಿ ಎತ್ತರದ ಪಂಚಲೋಹದ ವಿಗ್ರಹವನ್ನು ತರಿಸಿ ಪುನಃ ಪ್ರತಿಷ್ಠಾಪಿಸಿ ದೇವಳವನ್ನು ನಿರ್ವಿುಸಲಾಯಿತು. ಅಭಯಹಸ್ತ, ಪಟ್ಟಬಂಧ ಧರಿಸಿ ಧ್ಯಾನಾಸಕ್ತನಾಗಿ ಚಿನ್ಮುದ್ರಾ ಭಂಗಿಯಲ್ಲಿರುವ ಅಯ್ಯಪ್ಪಸ್ವಾಮಿಯ ವಿಗ್ರಹ ಈಗ ಭಕ್ತರ ಮನ ಸೆಳೆಯುತ್ತಿದೆ.
ಉದಯಾಸ್ತಮಾನ ಪೂಜೆಯೂ ಇದೆ
ವೇಳಾಪಟ್ಟಿಯ ಪ್ರಕಾರ ದೇವರಿಗೆ ನಿಗದಿತ ಪೂಜೆ ನಡೆದರೂ ಇದರ ಜತೆಯಲ್ಲ ಉದಯಾಸ್ತಮಾನ ಪೂಜೆಯನ್ನೂ ನಡೆಸಲಾಗುತ್ತದೆ. ಉದಯಾಸ್ತಮಾನ ಪೂಜೆ ಎಂದರೆ ಸೂರ್ಯೋದಯ ಮೊದಲುಗೊಂಡು ಸೂರ್ಯಾಸ್ತಮಾನ ದವರೆಗೆ ನಡೆಯುವ ವಿಶೇಷ ಪೂಜೆ. ಪ್ರಭಾತದಿಂದ ಪ್ರದೋಷದವರೆಗೆ ಈ ಪೂಜೆ ನಡೆಯುತ್ತದೆ (ಇದು ಶುದ್ಧಿ ಪೂಜೆಯಿಂದ ಆರಂಭಗೊಂಡು ಅಸ್ತಮಾನ ಪೂಜೆವರೆಗೆ ನಡೆಯುತ್ತದೆ).
ನಿತ್ಯ ಪೂಜೆಯ ಹೊರತಾಗಿ ಭಕ್ತರ ಅಭಿಲಾಷೆಗನುಸರಾವಾಗಿ ಅರ್ಚನೆ, ಅಭಿಷೇಕ ಮೊದಲಾದ ಪ್ರತ್ಯೇಕ ಪೂಜೆಗಳೂ ಭಗವಂತನ ಅನುಗ್ರಹ ಸಂಪಾದನೆಗಾಗಿ ನಡೆಯುತ್ತವೆ. ಒಟ್ಟು ಹದಿನೆಂಟು ಪೂಜೆಗಳಲ್ಲಿ ಹದಿನೈದು ಪೂಜೆಗಳನ್ನು ಮಧ್ಯಾಹ್ನದೊಳಗೆ ನಡೆಸಲಾಗುತ್ತದೆ. ನಲ್ವತ್ತೈದು ಕಲಶಾಭಿಷೇಕಗಳನ್ನೂ ಪ್ರತಿ ನಿತ್ಯ ನಡೆಸಲು ಅವಕಾಶವಿದೆ.
ಇದನ್ನೂ ಓದಿ| Shabarimale News | ಶಬರಿಮಲೆಗೆ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರ ಆಗಮನ