ತಿರುವನಂತಪುರ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲಾಧಾರಿಗಳಿಗೆ ಇಂದಿನಿಂದ (ಗುರುವಾರ) ದೇವರ ದರ್ಶನಕ್ಕೆ ಅವಕಾಶ (Sabarimala News) ಮಾಡಿಕೊಡಲಾಗಿದೆ. ಬುಧವಾರ ಸಂಜೆ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಇಂದು ಬೆಳಗ್ಗೆ 5 ಗಂಟೆಯಿಂದ ಇರುಮುಡಿ ಹೊತ್ತು ಬಂದ ಮಾಲಾಧಾರಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ನೂತನ ಪ್ರಧಾನ ಅರ್ಚಕ (ಮೇಲ್ಸಂತಿ) ಕೆ. ಜಯರಾಮನ್ ನಂಬೂದರಿ ಮತ್ತು ಮಾಲಿಕಪುರಮ್‌ನ ಹರಿಹರನ್ ನಂಬೂದರಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆದವು. ಕೆ. ಜಯರಾಮನ್ ನಂಬೂದರಿ ಅವರು ದೇಗುಲದ ಬಾಗಿಲನ್ನು ತೆರೆದು ಮಾಲಾಧಾರಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.
ಕೊರೊನಾ ಭೀತಿ ದೂರವಾಗಿರುವುದರಿಂದ ಈ ಬಾರಿ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಹೀಗಾಗಿ ಮೊದಲ ದಿನವೇ ನಿರೀಕ್ಷೆಗೂ ಮೀರಿ ಮಾಲಾಧಾರಿಗಳು ಆಗಮಿಸಿದ್ದು, ಕೆಲ ಹೊತ್ತು ನೂಕುನುಗ್ಗಲು ಉಂಟಾಗಿತ್ತು. ಸುಮಾರು 49 ಸಾವಿರ ಭಕ್ತರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಬಂದು ದರ್ಶನ ಪಡೆಯುತ್ತಿದ್ದಾರೆ.
ಈ ವರ್ಷ ಬೆಳಗ್ಗೆ 3 ಗಂಟೆಗೇ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. 3.30 ಕ್ಕೆ ಗಣಪತಿ ಹೋಮ ನಡೆಯಲಿದೆ. ಬೆಳಗ್ಗೆ 8.30 ರಿಂದ 11.00 ರವರೆಗೆ ನೈಯ್ಯಾಭಿಷೇಕ (ಅಯ್ಯಪ್ಪಸ್ವಾಮಿ ಮೂರ್ತಿಗೆ ತುಪ್ಪದ ಅಭಿಷೇಕ) ನಡೆಯಲಿದೆ. ಈ ಹಿಂದಿನಂತೆಯೇ ತುಪ್ಪದ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತಿದೆ. ರಾತ್ರಿ 11 ಗಂಟೆಗೆ ಗರ್ಭಗುಡಿಯನ್ನು ಮುಚ್ಚಲಾಗುತ್ತದೆ.
ಏನಿದು ಪಡಿಪೂಜೆ?
ಆಯ್ದ ಕೆಲವು ದಿವಸಗಳಲ್ಲಿ ಪುಷ್ಪಾಭಿಷೇಕದ ಬಳಿಕ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳಲ್ಲಿ ನಡೆಸುವ ಪೂಜೆಯನ್ನು ‘ಮೆಟ್ಟಲು ಪೂಜೆ’ (ಪಡಿಪೂಜೆ) ಎನ್ನುತ್ತಾರೆ. ಸಾಯಂಕಾಲ ಪ್ರಧಾನ ಅರ್ಚಕರ ನೇತೃತ್ವದಲ್ಲಿ ತಂತ್ರಿಗಳು ಈ ಪೂಜೆಯನ್ನು ನೆರವೇರಿಸುತ್ತಾರೆ. ರೇಷ್ಮೆ ಬಟ್ಟೆ ಮತ್ತು ಹೂಗಳಿಂದ ಮೆಟ್ಟಿಲುಗಳನ್ನು ಅಲಂಕರಿಸಿ, ಅವುಗಳಲ್ಲಿ ಪರಂಪರಾಗತ ರೀತಿಯಲ್ಲಿ ದೀಪಗಳನ್ನು ಉರಿಸಿ, ತಂತ್ರಿಗಳು ಆರತಿಯನ್ನು ಬೆಳಗುವುದರೊಂದಿಗೆ ಪೂಜೆ ಪೂರ್ಣಗೊಳ್ಳುತ್ತದೆ. ಒಂದು ಗಂಟೆಗಳಷ್ಟು ದೀರ್ಘವಾಗಿ ಈ ಪೂಜೆ ನಡೆಯುತ್ತದೆ.
ಈ ಸೇವೆಯ ಜತೆಗೆ ಭಕ್ತರು ಕಲ್ಯಾಣಾಭಿಷೇಕ, ಪುಷ್ಪಾಭಿಷೇಕ, ಅರ್ಚನೆ, ಗಣಪತಿ ಹೋಮ, ಭಗವತಿ ಸೇವೆ, ಉಷಾಪೂಜಾ, ಉಂಚಾ ಪೂಜಾ, ದೀಪಾರಾಧನೆ ಇನ್ನಿತರ ಸೇವೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಉದಯಾಸ್ತಮಾನ ಮತ್ತು ಪಡಿ ಪೂಜೆಗೆ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆಪಂ, ಆರ್ವನದಂತಹ ಪ್ರಸಾದವನ್ನು ಭಕ್ತರಿಗೆ ವಿತರಿಸಲು ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಪಡಿ ಪೂಜೆಗೂ ಅವಕಾಶ ನೀಡಲಾಗಿದೆ.
ಮಂಡಲ ಪೂಜೆಯು 41 ದಿನಗಳ ಕಾಲ ನಡೆಯಲಿದ್ದು, ಮಲಯಾಳ ಪಂಚಾಂಗದ ಪ್ರಕಾರ ವೃಶ್ಚಿಕ ಮಾಸದ ಮೊದಲ ದಿನ ಮಂಡಲ ವ್ರತಾಚರಣೆ ಆರಂಭವಾಗಿದೆ. ಧನುರ್ಮಾಸದ 11ನೇ ದಿನ ವ್ರತಾಚರಣೆ ಸಂಪನ್ನವಾಗಲಿದೆ. ಅಂದರೆ ಡಿಸೆಂಬರ್ 27ಕ್ಕೆ ಮಂಡಲ ಪೂಜೆಯ ವ್ರತಾಚರಣೆ ಅಂತ್ಯವಾಗಲಿದೆ. ಮಂಡಲ ಪೂಜೆಗಾಗಿ ಡಿಸೆಂಬರ್ 27 ರಂದು ದೇಗುಲವನ್ನು ಮುಚ್ಚಲಾಗುತ್ತದೆ. ಡಿಸೆಂಬರ್ 30 ರಂದು ಮತ್ತೆ ದೇಗುಲದ ಬಾಗಿಲನ್ನು ತೆರೆದು ಮಕರ ಜ್ಯೋತಿಯು ದರ್ಶನವಾಗುವವರೆಗೂ ಅಂದರೆ ಜನವರಿ 14 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಇದನ್ನೂ ಓದಿ | Shabarimale News | ತೆರೆದ ಶಬರಿಮಲೆ ದೇಗುಲದ ಬಾಗಿಲು; ಅಯ್ಯಪ್ಪ ಸ್ವಾಮಿ ಯಾತ್ರೆ ಶುರು