Site icon Vistara News

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

Shankara Jayanti 2024

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Exit mobile version