Site icon Vistara News

Sharada Devi Jayanti | ವೈಯಕ್ತಿಕ ಮುಕ್ತಿ ಮತ್ತು ಜಗತ್ತಿನ ಹಿತವನ್ನು ಸಾರಿದ ಮಹಾಮಾತೆ ಶ್ರೀ ಶಾರದಾದೇವಿ

Sharada Devi Jayanti

ಸ್ವಾಮಿ ಶಾಂತಿವ್ರತಾನಂದ
ಮಹಾಮಾತೆ, ಜಗಜ್ಜನನಿ, ಆದ್ರಾಶಕ್ತಿ ಶ್ರೀ ಶಾರದಾದೇವಿ ಅವರ170ನೇ ಜಯಂತಿ (Sharada Devi Jayanti) ಇಂದು. ಭಾರತ ಹಾಗೂ ವಿಶ್ವದೆಲ್ಲೆಡೆ ಸಂಭ್ರಮ, ಸಡಗರಗಳೊಡನೆ ಭಕ್ತರು ಈ ಶುಭದಿನವನ್ನು ಆಚರಿಸುತ್ತಿದ್ದಾರೆ.

ಮಹಾಮಾತೆ ಶ್ರೀ ಶಾರದಾದೇವಿ ಎಂಬ ಹೆಸರು ಕಿವಿಗೆ ಬಿದ್ದಾಗ, “ಅವರು ಹೇಗೆ ಮಹಾನ್‌ ತಾಯಿ? ಎಷ್ಟು ಮಕ್ಕಳಿಗೆ ಅವರು ಜನ್ಮ ನೀಡಿದ್ದರು? ಎಷ್ಟು ಮಕ್ಕಳನ್ನು ಸಲುಹಿದ್ದರು?ʼʼ ಎಂಬೆಲ್ಲಾ ಪ್ರಶ್ನೆಗಳು ನಮ್ಮ ಮನಸ್ಸಿನಗೆ ಬರಬಹುದು.

ವಾಸ್ತವದಲ್ಲಿ ಅವರು ಭೌತಿಕವಾಗಿ ಯಾರಿಗೂ ಜನ್ಮ ನೀಡಲಿಲ್ಲ. ಆದರೆ ವಿಶ್ವದ ಪ್ರತಿಯೊಬ್ಬ ಜೀವಿಗೂ ಯಾವುದೇ ಜಾತಿ, ಮತ, ಪಂಥ, ದೇಶಗಳ ಭೇದ-ಭಾವವಿಲ್ಲದೆ, ಮೇಲು-ಕೀಳು, ಸಿರಿವಂತ-ಬಡವ, ಸಾಧು, ದುರ್ಜನ ಹೀಗೆ ಯಾವುದೇ ಭೇದವೆಣಿಸದೆ ತಮ್ಮ ಪ್ರೇಮವನ್ನು ಉಣ ಬಡಿಸಿದರು. ಅವರ ವಾತ್ಸಲ್ಯದಲ್ಲಿ ಮಿಂದ ಅಸಂಖ್ಯ ಭಕ್ತರು ಪುನೀತರಾದರು, ಅಮೃತತ್ತ್ವವನ್ನು ಅನುಭವಿಸಿದರು.

ಶ್ರೀ ಮಾತೆಯವರೇ ಹೇಳುವಂತೆ ಭಗವಾನ್‌ ಶ್ರೀ ರಾಮಕೃಷ್ಣ ಪರಮಾತ್ಮನು ಮಾತೃಶಕ್ತಿಯನ್ನು ಪ್ರಕಟಿಸಲು ಜಗತ್ತಿಗೆ ಶ್ರೀ ಮಾತೆ ಶಾರದಾದೇವಿಯನ್ನು ಬಿಟ್ಟು ಹೋಗಿದ್ದರು. ಶ್ರೀ ಮಾತೆಯವರ ಪ್ರೇಮದಲ್ಲಿ ಯಾವುದೇ ಮೋಹವಿರಲಿಲ್ಲ. ಅದು ಶುದ್ಧ ನಿಸ್ವಾರ್ಥ ಪ್ರೇಮ. ಅದ್ವೈತದ ತಳಹದಿಯಿಂದ ಅವರ ಪ್ರೇಮ ಹೊರಹೊಮ್ಮಿತ್ತು.

ಯಕ್ಷನು ಧರ್ಮರಾಯನಿಗೆ ಭೂಮಿಗೆ ಸರಿಸಮನಾದ ವಸ್ತು ಯಾವುದು? ಎಂದು ಪ್ರಶ್ನಿಸಿದ್ದ. ಅದಕ್ಕೆ ಧರ್ಮರಾಯನು “ತಾಯಿʼʼ ಎಂದು ಉತ್ತರಿಸಿದ್ದನಂತೆ. ಭೂಮಿಯ ಮೇಲೆ ಎಲ್ಲರಿಗೂ ಎಲ್ಲವುದಕ್ಕೂ ಸಮನಾದ ಆಶ್ರಯವಿದೆ. ಎಲ್ಲರೂ ಭೂಮಿ ತಾಯಿಯನ್ನು ತುಳಿಯುತ್ತಾರೆ. ಅಗೆಯುತ್ತಾರೆ, ಒಂದು ರೀತಿಯಲ್ಲಿ ಹಿಂಸೆಯನ್ನು ನೀಡುತ್ತಾರೆ. ಆದರೂ ಭೂಮಿ ತಾಯಿ ಎಲ್ಲರನ್ನೂ ಕಾಪಾಡುತ್ತಾಳೆ, ಪೋಷಿಸುತ್ತಾಳೆ. ಎಲ್ಲರಿಗೂ ಆಧಾರವಾಗಿದ್ದಾಳೆ. ಅದರಂತೆ ತಾಯಿಯೂ ಕೂಡ.

ಮಾತೃ ಪ್ರೇಮ ತೋರಿದ ಮಹಾದೇವಿ

ಶ್ರೀ ಮಾತೆಯವರು ತಮ್ಮ ಮಾತೃ ಪ್ರೇಮವನ್ನು ಹೇಗೆ ಜಗತ್ತಿಗೆ ಉಣಬಡಿಸಿದರು ಎಂದು ತಿಳಿಯೋಣ; ಶ್ರೀ ಮಾತೆಯವರ ಜನ್ಮ ಸ್ಥಾನ ಜಯರಾಮಬಾಟಿ. ಅದು ಪಶ್ಚಿಮ ಬಂಗಾಳದ ಒಂದು ಹಳ್ಳಿ. ಅವರ ಗುಡಿಸಿಲಿನಲ್ಲಿ  ಮೈನಾ ಪಕ್ಷಿಯನ್ನು ಸಾಕಿದ್ದರು. ಅದು ಆಹಾರ ಬೇಕಾದಾಗ “ಅಮ್ಮಾ…. ಅಮ್ಮಾ…ʼʼ ಎಂದು ಕರೆಯುತ್ತಿತ್ತು. ಆಗ ಶ್ರೀಮಾತೆಯವರೇ ಓಡಿ ಬಂದು ಆಹಾರ ನೀಡುತ್ತಿದ್ದರು.

ಜಯರಾಮಬಾಟಿಯಲ್ಲಿ ಅಂದಿನ ಸಮಯದಲ್ಲಿ ಹಾಲು ಸುಲಭವಾಗಿ ಸಿಗುತ್ತಿರಲಿಲ್ಲ. ಆದರೂ ಬೆಕ್ಕಿಗೆಂದು ಹಾಲು ಅನ್ನವನ್ನು ಶ್ರೀ ಮಾತೆಯವರು ವ್ಯವಸ್ಥೆ ಮಾಡಿ, ನೀಡುತ್ತಿದ್ದರು. ಬೆಕ್ಕು ಅದರ ಸ್ವಭಾವವನ್ನು ಬಿಡದೆ ಕದ್ದು ಹಾಲನ್ನು ಕುಡಿಯಲು ಪ್ರಯತ್ನಿಸುತ್ತಿತ್ತು. ಅನೇಕ ಬಾರಿ ಭಕ್ತರಿಗೆ ಟೀಗೆಂದು ಮೀಸಲಿಟ್ಟಿದ್ದ ಹಾಲನ್ನು ಬೆಕ್ಕು ಕದ್ದು ಕುಡಿದು ಮುಗಿಸಿಬಿಡುತ್ತಿತ್ತು. ಇದರಿಂದ ಶ್ರೀ ಮಾತೆಯವರು ಹಾಲಿಗಾಗಿ ಕಷ್ಟಪಡಬೇಕಾಗುತ್ತಿತ್ತು. ಆದರೂ ಅವರು ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಭಕ್ತರು ಇದನ್ನು ಕಂಡು ಕೋಪ ಮಾಡಿಕೊಂಡು ಬೆಕ್ಕನ್ನು ಹೊಡೆಯಲು ಹೋದಾಗ ಶ್ರೀಮಾತೆಯವರು ಬೆಕ್ಕಿಗೆ ಆಶ್ರಯವನ್ನು ನೀಡಿ, ಶಿಕ್ಷೆಯನ್ನು ತಪ್ಪಿಸುತ್ತಿದ್ದರು!

ಜಗಜ್ಜನನಿಯೇ ಬೆಕ್ಕಿಗೆ ಆಶ್ರಯ ನೀಡಿ, ಏಟನ್ನು ತಪ್ಪಿಸುತ್ತಿದ್ದಾಳೆ. ಎಂತಹ ಅದೃಷ್ಟ ಆ ಬೆಕ್ಕಿನದು. ಎಷ್ಟಾದರೂ ಅವಳು ಅಭಯಮಾತೆ ಅಲ್ಲವೇ?!

ಅದೊಂದು ರಾತ್ರಿ ಜೋರು ಮಳೆ, ಜತೆಗೆ ಅಮಾವಾಸ್ಯೆಯ ಕತ್ತಲು ಬೇರೆ. ರಾತ್ರಿ ಶ್ರೀಮಾತೆಯವರ ಗುಡಿಸಿಲಿನ ಬಾಗಿಲನ್ನು ಯಾರೋ ತಟ್ಟಿದರು. ಯಾರೆಂದು ಬಾಗಿಲು ತೆರೆದು ನೋಡಿದರೆ ನಾಲ್ಕು ಮಂದಿ ಭಕ್ತರು. ಕೊಲ್ಕತ್ತಾದಿಂದ ಶ್ರೀ ಮಾತೆಯವರನ್ನು ನೋಡಲು ಬಂದಿದ್ದಾರೆ. ಅವರಿಗೆ ಆ ರಾತ್ರಿ ತಮ್ಮ ಗುಡಿಸಿಲಿನಲ್ಲಿಯೇ ಉಳಿಯಲು ಮತ್ತು ಊಟದ ವ್ಯವಸ್ಥೆಯನ್ನು ಶ್ರೀಮಾತೆಯವರೇ ಮಾಡಿದರು.

ಬೆಳಗ್ಗೆ ಶ್ರೀ ಮಾತೆಯವರು ಭಕ್ತರನ್ನು ನೀವು ಆ ಜೋರು ಮಳೆಯಲ್ಲಿ,ಕತ್ತಲಿನಲ್ಲಿ ಏಕೆ ಬಂದಿರಿ ಎಂದು ಕೇಳಿದರು. ಆಗ ಅವರು, “ಹೌದು ಮಾತೆ ನಾವು ಕತ್ತಲಲ್ಲೇ ಬಂದೆವು, ನಾವು ಬೇರೆಡೆ ಉಳಿದು, ಬೆಳಗ್ಗೆ ನಿಮ್ಮಲ್ಲಿಗೆ ಬರಬಹುದಿತ್ತು. ಆದರೆ ರಾತ್ರಿ ಬಂದರೆ ನಿಮ್ಮನ್ನು ನಾವು ನೋಡಬಹುದು. ಒಂದು ಜಾವ ಹೆಚ್ಚು ಸಮಯ ನಿಮ್ಮ  ಜೊತೆ ಕಳೆಯಬಹುದು. ಅದಕ್ಕಾಗಿಯೇ ರಾತ್ರಿ ಬಂದೆವುʼʼ ಎಂದು ಉತ್ತರಿಸಿದರು.

ಈ ಉತ್ತರವನ್ನು ಕೇಳಿ ಬೇರೆಯವರಾದರೆ, ಅಹಂಕಾರಕ್ಕೆ ಒಳಗಾಗುತ್ತಿದ್ದರೇನೋ. ನಾನು ಅಷ್ಟು ಪ್ರಸಿದ್ಧಿಯಾ ಗಿದ್ದೇನೆಯೇ? ನನ್ನನ್ನು ನೋಡಲು ಭಕ್ತರು ಹೀಗೆಲ್ಲಾ ಮಾಡುತ್ತಾರೆಂದರೆ ನಾನು ದೊಡ್ಡ ಮನುಷ್ಯಳಾಗಿದ್ದೇನೆ ಇತ್ಯಾದಿ ಯೋಚನೆ ಮಾಡುತ್ತಿದ್ದರೇನೋ. ಆದರೆ ಶ್ರೀ ಮಾತೆಯವರು ಆ ಭಕ್ತರಿಗೆ “ನೋಡಪ್ಪ ನನ್ನ ಕಾಲಿಗೆ ಒಂದು ಸಣ್ಣ ಮುಳ್ಳು ಚುಚ್ಚಿದೆ. ನನ್ನ ಎದೆಗೆ ಈಟಿಯಿಂದ ಇರಿದಂತಾಗುತ್ತಿದೆ. ರಾತ್ರಿ ನಿಮಗೆ ದಾರಿಯಲ್ಲಿ ಸಿಕ್ಕ ಆಮೋದರ ಹಳ್ಳ ತುಂಬಿ ಹರಿಯುತ್ತಿತ್ತು. ಹಾವುಗಳ ಕಾಟ ಬೇರೆ. ಇಂತಹ ಸಂದರ್ಭದಲ್ಲಿ ನೀವು ನಿಮ್ಮನ್ನು ಕಾಪಾಡಿಕೊಳ್ಳಬೇಕಾಗಿತ್ತುʼʼ ಎಂದು ಬುದ್ಧಿಮಾತು ಹೇಳಿದರು. ಎಂತಹ ನಿಷ್ಕಲ್ಮಶ ಹೃದಯ, ನಿಸ್ವಾರ್ಥ ಪ್ರೇಮ, ಶ್ರೀಮಾತೆಯವರದ್ದು!

ಶ್ರೀ ಮಾತೆಯವರು ಯುವಕನೊಬ್ಬನಿಗೆ ಮಂತ್ರ ದೀಕ್ಷೆಯನ್ನು ಅನುಗ್ರಹಿಸಿದ್ದರೂ ದುರಾದೃಷ್ಟವಶಾತ್‌ ಅವನು ಅನೈತಿಕ ಮಾರ್ಗವನ್ನು ಹಿಡಿದಿದ್ದನ್ನು. ಇದು ಭಕ್ತರಿಗೆ ತಿಳಿದು, ಅವನನ್ನು ಇವರಿದ್ದಲ್ಲಿಗೆ ಬಾರದಂತೆ ತಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಶ್ರೀಮಾತೆಯವರು ಇದನ್ನು ತಿಳಿದಿದ್ದರೂ, ಆತನ ಮೇಲಿನ ಅವರ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಬದಲಾಗಿ ಬಂದಾಗ, ಸಿಕ್ಕಾಗ ಈ ಹಿಂದಿನಂತೆಯೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರ ಈ ಅಚಲ ಪ್ರೀತಿಯಿಂದ ಆ ಯುವಕನ ಮನಸ್ಸು ಪರಿವರ್ತನೆಯಾಗಿ ಒಳ್ಳೆಯ ದಾರಿಯನ್ನು ಹಿಡಿದನು. ಅದು ಪ್ರೀತಿಯ ಶಕ್ತಿ.

ಜಾತಿಯತೆಯ ತೊಡೆದರು

1911ರಲ್ಲಿ ಶ್ರೀ ಮಾತೆಯವರು ಬೆಂಗಳೂರಿಗೆ ಬಂದಿದ್ದರು. ಬಸವನಗುಡಿಯ ರಾಮಕೃಷ್ಣ ಮಠದಲ್ಲೇ ಅವರು ತಂಗಿದ್ದರು. ಅವರು ಉಳಿದುಕೊಂಡ ಕಟ್ಟಡದ ಗೇಟಿನ ಮುಂಭಾಗದಲ್ಲಿ ಒಬ್ಬ ಹುಡುಗನು ಬಹಳ ಕಾಲ ನಿಂತಿದ್ದ. ಇದು ಶ್ರೀಮಾತೆಯವರ ಗಮನಕ್ಕೆ ಬಂದು, ಅವನ ಕುರಿತು ವಿಚಾರಿಸಿದರು.

ಸ್ಥಳೀಯರು ಅವನು ನೀಚ ಕುಲಕ್ಕೆ ಸೇರಿದವನು. ಆದ್ದರಿಂದ ಒಳಗೆ ಬರುತ್ತಿಲ್ಲ ಎಂದರು. ಶ್ರೀಮಾತೆಯವರು ಭಕ್ತರನ್ನು ಯಾವುದೇ ಜಾತಿ, ಕುಲಗಳ ಭೇದವಿಲ್ಲದೆ ನೋಡುತ್ತಿದ್ದರು. “ಅವನು ಒಳಗೆ ಬರಬಹುದುʼʼ ಎಂದರು. ಆದರೆ ಕೆಲವು ಭಕ್ತರು ಅವನನ್ನು ಒಳಗೆ ಬಿಟ್ಟುಕೊಳ್ಳಲು ಒಪ್ಪಲಿಲ್ಲ. ಇದು ಶ್ರೀಮಾತೆಯವರ ಗಮನಕ್ಕೆ ಬಂದಿತು. ಅವರು ಕಾರಣ ಕೇಳಿದರು. ಅವನು ಶುಭ್ರವಾದ ಬಟ್ಟೆಯನ್ನು ಧರಿಸಿಲ್ಲ. ಅಲ್ಲದೆ, ಅವನು ಎಂದು ಸ್ನಾನ ಮಾಡಿದ್ದಾನೋ ತಿಳಿಯದು ಎಂದರು. ಶ್ರೀಮಾತೆಯವರು ಆಗಲಿ ನಾಳೆ ಅವನು ಸ್ನಾನಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬರಲಿ, ಆಗಬಹುದೇ ಎಂದಾಗ ಭಕ್ತರು ಸಮ್ಮತಿಸಿದರು. ಶ್ರೀ ಮಾತೆಯವರು ಈ ಮೂಲಕ ಜಾತಿ ಪದ್ಧತಿಯನ್ನು ತೊಡೆದು ಹಾಕಲು ಮುಂದಾಗಿದ್ದರು. ಈ ವಿಷಯವನ್ನು ಆ ಹುಡುಗನಿಗೆ ತಿಳಿಸಲಾಯಿತು. ಅವನು ಸಂತೋಷದಿಂದ ಕುಣಿದಾಡಿದ. ಸ್ಥಳದಲ್ಲೇ ಪ್ರಣಾಮ ಮಾಡಿ ಮನೆಗೆ ಹೊರಟ.

ಮಾರನೇ ದಿನ ಭಕ್ತರು ಹೇಳಿದ ಹಾಗೆ ಆ ಹುಡುಗ ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ ಬಂದಿದ್ದ. ನೇರವಾಗಿ ಅವರಿದ್ದಲ್ಲಿಗೆ ಬಂದು ಶ್ರೀಮಾತೆಯವರಿಗೆ ಪ್ರಣಾಮ ಮಾಡಿದ. ಶ್ರೀ ಮಾತೆಯವರು ಅವನನ್ನು ಪ್ರೀತಿಯಿಂದ ಮಾತನಾಡಿಸಿ, ವೈಯುಕ್ತಿಕ ಸೇವೆಯನ್ನು ಸ್ವೀಕರಿಸಿದರು.

ಅದೇ ಸಮಯದಲ್ಲಿ ಶ್ರೀಮಂತ ವರ್ಗಕ್ಕೆ ಸೇರಿದ ಭಕ್ತರೊಬ್ಬರು ಬಂದು ಶ್ರೀಮಾತೆಯವರನ್ನು ಮಾರನೇ ದಿನದ ಮಧ್ಯಾಹ್ನದ ಊಟಕ್ಕೆ ಆಮಂತ್ರಿಸಿದರು. ಶ್ರೀಮಾತೆಯವರು ಹುಡುಗನ ಕಡೆ ಕೈ ತೋರಿಸಿ, ಅವನ ಜೊತೆ ನಾನು ಬರುವೆ ಎಂದರು. ಎಲ್ಲರಿಗೂ ಆಶ್ಚರ್ಯ. ಮಾರನೇ ದಿವನ ಶ್ರೀಮಾತೆಯವರು ಆ ಹುಡುಗನ ಹಾಗೂ ಕೆಲವು ಭಕ್ತರೊಡನೆ ಅವರ ಮನೆಗೆ ಊಟಕ್ಕೆ ತೆರಳಿದರು. ಅವರಿಗೆ ಊಟವನ್ನು ಬಡಿಸಲಾಯಿತು. ಒಂದು ತುತ್ತನ್ನು ಸ್ವೀಕರಿಸಿ, ಪ್ರಸಾದವನ್ನು ಭಕ್ತರಿಗೆಲ್ಲರಿಗೂ ಹಂಚಬೇಕೆಂದು ಆ ಹುಡುಗನಿಗೇ ನೀಡಿದರು. ಎಲ್ಲ ಭಕ್ತರೂ ಪ್ರಸಾದವನ್ನು ಬಾಲಕನ ಕೈಯಿಂದ ಸ್ವೀಕರಿಸಬೇಕಾಯಿತು.

ಹೀಗೆ ಅನೇಕ ಸಮಾಜ ಸುಧಾರಣೆಯನ್ನೂ ಶ್ರೀಮಾತೆಯವರು ಸದ್ದಿಲ್ಲದೆ ಮಾಡಿದ್ದರು. ನೀಚ ಕುಲದ ಹುಡುಗನಿಗೆ ಪ್ರೀತಿ ತೋರಿ, ಅವನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ್ದರು. ಎಷ್ಟಾದರೂ ಅವರು ಮಾಹಾಮಾತೆ ಅಲ್ಲವೇ?

ಲೇಖಕರು ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌.

ಇದನ್ನೂ ಓದಿ | Prerane | ಮೇಲ್ಬೇರು, ಕೆಳಕೊಂಬೆ-ಈ ವೃಕ್ಷವಾದರೂ ಯಾವುದು?

Exit mobile version