Site icon Vistara News

Shivakumara Swamiji : ಶ್ರೀಗಳ ಸ್ಮರಣೆಯ ದಿನ ನಾವು ಸ್ಮರಿಸಲೇಬೇಕಾದ ಅವರ ಜೀವನದ ಆರು ವಿಷಯಗಳು

Shivakumara Swamiji

ಇಂದು “ದಾಸೋಹ ದಿನʼʼ. ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರ (Shivakumara Swamiji ) ಸ್ಮರಣೆ ದಿನ. ಇಡೀ ಪ್ರಪಂಚಕ್ಕೆ ದಾಸೋಹ ತತ್ವವನ್ನು ಸಾರಿ ತ್ರಿವಿಧ ದಾಸೋಹದಲ್ಲಿ ಯಾರೂ ಏರಲಾರದ ಎತ್ತರಕ್ಕೆ ಸಾಗಿ ಪ್ರಕಾಶಿಸಿ, ಆ ಬೆಳಕನ್ನು ಇಡೀ ನಾಡಿಗೆ ಹಂಚಿದ ದಿವ್ಯ ಪರಮಪೂಜ್ಯರಿಗೆ ನಮಿಸುವ ದಿನ.
ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಆದರ್ಶಪ್ರಾಯರಾಗಿ ಬದುಕಿ ಲಿಂಗೈಕ್ಯರಾದ ದಿನ ಇಂದು. ನಾವೆಂದೂ ನೆನಪಿಟ್ಟುಕೊಳ್ಳಬೇಕಾದ ಶ್ರೀಗಳ ಕುರಿತ ಆರು ಮಾಹಿತಿಗಳು ಇಲ್ಲಿವೆ;

1. ಶ್ರೀಗಳದ್ದು ಅಪರೂಪದ ದಿನಚರಿ. ನಸುಕಿನ ಜಾವ 2,15ಕ್ಕೆ ನಿದ್ರೆಯಿಂದ ಏಳುತ್ತಿದ್ದರು. 2.45 ರವರೆಗೆ ಶರಣರ ಸಂತರ ತತ್ವ ಪಠಣ. 3.00ರವರೆಗೆ ಶೌಚ ಸ್ನಾನಾದಿ ನಿತ್ಯವಿಧಿ.5.30 ಗಂಟೆಯವರೆಗೆ ಶಿವಪೂಜೆ, ಲಘು ಪ್ರಸಾದ ಸ್ವೀಕಾರ. 6 ಗಂಟೆಯವರೆಗೆ ಮುಂಜಾನೆ ಸಾಮೂಹಿಕ ಪ್ರಾರ್ಥನೆ. ಬೆಳಿಗ್ಗೆ 6.15 ರಿಂದ 7.10 ರವರೆಗೆ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಸಂಸ್ಕೃತ ಪಾಠ ಬೋಧನೆ. 7.10 ರಿಂದ 7.40 ರವರೆಗೆ ವಿವಿಧ ದಿನಪತ್ರಿಕೆಗಳ ಓದು. 7.40 ರಿಂದ 8. 40 ರವರೆಗೆ ಪತ್ರ ವ್ಯವಹಾರ. 8. 40 ರಿಂದ 9.00 ರವರೆಗೆ ಟಪಾಲು ಪರಿಶೀಲನೆ. 9.00 ರಿಂದ 9.10 ರವರೆಗೆ ಪ್ರಸಾದ ವ್ಯವಸ್ಥೆಯ ಪರಿಶೀಲನೆ. 9. 10 ರಿಂದ 9.30 ರವರೆಗೆ ಶ್ರೀ ಕ್ಷೇತ್ರದ ಕಾರ್ಯ ವೀಕ್ಷಣೆ.
9.30 ರಿಂದ 10.30 ರವರೆಗೆ ಸ್ವತಃ ಶ್ರೀಗಳೇ ಪತ್ರಗಳಿಗೆ ಉತ್ತರಿಸುವುದು ಮಾಡುತ್ತಿದ್ದರು. 10.30 ರಿಂದ 10.45 ರವರೆಗೆ ವಿದ್ಯಾರ್ಥಿಗಳ ಊಟದ ವ್ಯವಸ್ಥೆಯ ಪರಿಶೀಲನೆ. 10.45 ರಿಂದ 12.00ರವರೆಗೆ ಕಾರ್ಯಾಲಯದಲ್ಲಿ ಭಕ್ತಾದಿಗಳಿಗೆ ಸಂದರ್ಶನ. ಮಧ್ಯಾಹ್ನ 12.00 ರಿಂದ 1.00 ಮಂಚದ ಹತ್ತಿರ ಯಂತ್ರಧಾರಣೆ. 1.00 ರಿಂದ2.30ರವರೆಗೆ ಭಕ್ತಾದಿಗಳಿಗೆ ಸಂದರ್ಶನ ಹಾಗೂ ಕಾರ್ಯಾಲಯದಲ್ಲಿ ಕಾರ್ಯಮಗ್ನರಾಗುತ್ತಿದ್ದರು. 2.30 ರಿಂದ 3.30ರವರೆಗೆ ಪೂಜೆ ಮತ್ತು ಪ್ರಸಾದ ಸ್ವೀಕಾರ. 3.30 ರಿಂದ 5.30ರವರೆಗೆ ಕಾರ್ಯಾಲಯದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಪರಿಶೀಲನೆ. 5.30 ರಿಂದ 5.45ರ ವರೆಗೆ ಪ್ರಸಾದ ಸಿದ್ಧತೆಯ ಪರಿಶೀಲನೆ . ಸಂಜೆ 5.45 ರಿಂದ 6.30ರವೆಗೆ ಗದ್ದೆ, ತೋಟ, ಕಟ್ಟಡ ಕೆಲಸಗಳ ಮೇಲ್ವಿಚಾರಣೆ. 6.30 ರಿಂದ 7.00 ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ. ರಾತ್ರಿ 7 ರಿಂದ 7.15ರವರೆಗೆ ವಿದ್ಯಾರ್ಥಿಗಳಿಗೆ ಆಶೀರ್ವಚನ. 7.45 ರವರೆಗೆ ಭಕ್ತಾದಿಗಳ ಸಂದರ್ಶನ ಹಾಗೂ ಕಾರ್ಯಾಲಯಗಳ ಕಾರ್ಯ ಪರಿಶೀಲನೆ. 7.45 ರಿಂದ 8.00 ಪ್ರಸಾದ ನಿಲಯದ ವ್ಯವಸ್ಥೆಯ ವೀಕ್ಷಣೆ. ನಂತರ 8.30ರ ವರೆಗೆ ಕಾರ್ಯಾಲಯದ ವ್ಯವಹಾರ. 8.30 ರಿಂದ 8.45 ಶರಣರ ತತ್ವಪಠಣ, 8.45 ರಿಂದ 9.00ಕ್ಕೆ ಸ್ನಾನ. 9.00 ರಿಂದ 9.30 ಪೂಜೆ ಹಾಗೂ ಲಘು ಪ್ರಸಾದ ಸ್ವೀಕಾರ.
9.30 ರಿಂದ 10.30ರ ವರೆಗೆ ನಾಟಕದ ಅಭ್ಯಾಸ ಮೇಲ್ವಿಚಾರಣೆ. 10.30 ರಿಂದ 10.45 ರವರೆಗೆ ದಿನಚರಿ ಬರೆಯುವುದು.11ಗಂಟೆಗೆ ಮಲಗುತ್ತಿದ್ದರು. ಈ ಮಧ್ಯೆ ಬಿಡುವು ಮಾಡಿಕೊಂಡು ಭಕ್ತರ ಹಾಗೂ ಸಾರ್ವಜನಿಕರ ಕೋರಿಕೆಯ ಮೇಲೆ ಪೂಜೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಶ್ರೀಗಳ ಇಂತಹ ದಿನಚರಿಯೇ ಶ್ರೀಮಠದ ವಿದ್ಯಾರ್ಥಿಗಳಿಗೆ, ಭಕ್ತ ಸಮೂಹಕ್ಕೆ ಸ್ಫೂರ್ತಿದಾಯಕ ವಿಚಾರ. 111ರ ಇಳಿವಯಸ್ಸಿ ನಲ್ಲೂ ಅದೇ ರೀತಿ ಕ್ರಿಯಾಶೀಲವಾಗಿ ಕಾಯಕದಲ್ಲಿ ತೊಡಗಿದ್ದರು ಎಂಬುದು ಅಚ್ಚರಿಯಾದರೂ ಸತ್ಯ.

2. ಶ್ರೀಗಳಿಗೆ ವಿಭೂತಿಯ ಮೇಲೆ ಬಹಳ ಪ್ರೀತಿ. ಅರೆಪ್ರಜ್ಞಾವಸ್ಥೆಯಲ್ಲೂ ಮತ್ತು ಪ್ರಜ್ಞಾಹೀನ ಅವಸ್ಥೆಯಲ್ಲೂ ಅವರ ಕೈಗೆ ವಿಭೂತಿಯನ್ನು ಕೊಟ್ಟರೆ ಅದನ್ನು ಅವರು ತಿಕ್ಕಿ ತಿಕ್ಕಿ ಹಣೆಗೆ ಧರಿಸಿಕೊಳ್ಳುತ್ತಲೇ ಇರುತ್ತಿದ್ದರು. ಅವರ ವಿಭೂತಿ ನಿಷ್ಠೆಯನ್ನು ಕಂಡರೆ ಭಸ್ಮಾಂಬರ ಶಿವನು ಕೂಡ ಬೆರಗುಗೊಳ್ಳುತ್ತಿದ್ದನೇನೋ. ಡಾ. ಶ್ರೀ ಶಿವಕುಮಾರಸ್ವಾಮೀಜಿ ಯವರು ಅಕ್ಷರಶಃ ವಿಭೂತಿಕಾಯರು. ಅವರು ಇಷ್ಟಲಿಂಗ ಪೂಜೆಗೆ ಕುಳಿತಾಗಲೂ ಸಹ, ಅರ್ಧಗಂಟೆಗೂ ಹೆಚ್ಚು ಕಾಲ ವಿಭೂತಿಯನ್ನು ಧರಿಸಿಕೊಳ್ಳುತ್ತಲೇ ಇರುತ್ತಿದ್ದರು. ವಿಭೂತಿಯನ್ನು ಸ್ವತಃ ಧರಿಸಿಕೊಳ್ಳುವುದು ಮತ್ತು ಭಕ್ತರ ಹಣೆಗೆ ವಿಭೂತಿಯನ್ನು ಹಚ್ಚುವುದು ಎಂದರೆ ಅವರಿಗೆ ಆನಂದವೋ ಆನಂದ. ಶ್ರೀಗಳು ಅಪರೂಪದ ವಿಭೂತಿಪುರುಷರು. ಅವರ ಎದೆಯ ಮೇಲೆ ಲಿಂಗ, ಹಣೆಯಲ್ಲಿ ವಿಭೂತಿ, ಬಾಯಲ್ಲಿ ಮಂತ್ರ ಇದುವೇ ಅವರ ಹೆಗ್ಗುರುತಾಗಿತ್ತು.

3. ಒಂದು ತುತ್ತು ಅನ್ನ ಚೆಲ್ಲಿದರೆ ಅದನ್ನು ಬೆಳೆದ ಸಾವಿರಾರು ರೈತನ ಬೆವರಿಗೆ ಅವಮಾನ ಮಾಡಿದಂತೆ ಎಂಬುದು ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ಸದಾ ಹೇಳುತ್ತಿದ್ದರು. ಸಂಜೆ ಪ್ರಾರ್ಥನೆಯಲ್ಲಿ ಪ್ರತಿನಿತ್ಯ ದಾಸೋಹದ ಬಗ್ಗೆ ಮಕ್ಕಳಿಗೆ ಹೇಳುತ್ತಿದ್ದರು. ಅವರು ಕೂಡ ಆಹಾರ ಸೇವನೆಯಲ್ಲಿ ಮಿತಹಾರಿಗಳಾಗಿದ್ದರು. ಅವರು ಸ್ವೀಕರಿಸುವ ಆಹಾರ ಎಷ್ಟು ವರ್ಷಗಳಾದರೂ ಒಂದು ಗ್ರಾಂ ಕೂಡ ವ್ಯತ್ಯಾಸವಾಗುತ್ತಿರಲಿಲ್ಲ. ದೇಹದ ಚಲನೆಗೆ ಆಹಾರ ಮುಖ್ಯ ಹೊರತು ಆಹಾರಕ್ಕಾಗಿಯೇ ದೇಹದ ಚಲನೆ ಇರಬಾರದು. ತನ್ನ ದೇಹದ ಅಗತ್ಯಕ್ಕಿಂತ ಒಂದಗಳು ಜಾಸ್ತಿ ತಿಂದರೂ ಮತ್ತೊಬ್ಬನ ಆಹಾರವನ್ನು ಕದ್ದುಕೊಂಡ ಹಾಗೆ ಎನ್ನುವುದು ಶ್ರೀಗಳ ನಂಬಿಕೆಯಾಗಿತ್ತು.

4. ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಬಸವ ತತ್ವ ಪರಿಪಾಲಕರು. ಬಡತನ ನಿರ್ಮೂಲನೆ, ಸೌಹಾರ್ದಯುತ ಸಮಾಜ, ಅಸ್ಪೃಶ್ಯತೆ ನಿವಾರಣೆ ಮೊದಲಾದ ಉದ್ದೇಶದಿಂದ 1979ರಲ್ಲಿಯೇ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮ ಆರಂಭಿಸಿದ್ದರು. ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿಯನ್ನು ಆರಂಭಿಸಿ, ಆ ಮೂಲಕ ಜಗಜ್ಯೋತಿ ನಾಟಕ ಪ್ರದರ್ಶನಕ್ಕೂ ಚಾಲನೆ ನೀಡಿದರು.

5. ರೈತರು ದಾನ ನೀಡದರೆ ಮಾತ್ರ ಮಠದಲ್ಲಿ ದಾಸೋಹ ನಡೆಯುತ್ತದೆ ಎಂಬುದು ಶ್ರೀಗಳಿಗೆ ಕುಳಿತಲ್ಲಿ, ನಿಂತಲ್ಲಿ ನೆನಪಿಸಿಕೊಳ್ಳುತ್ತಿದ್ದರು. ಮಠಕ್ಕೆಂದು ಯಾರು ಎಷ್ಟೇ ಹಣ ಕೊಟ್ಟರೂ ಅದು ಅವರಿಗೆ ಮುಖ್ಯವಾಗುತ್ತಿರಲಿಲ್ಲ. ಯಾರಾದರೂ ರೈತರು ತಂದು ತಾನು ಬೆಳೆದ ಅಕ್ಕಿ-ರಾಗಿ ಇನ್ನಿತರೆ ಯಾವುದೇ ಆಹಾರ ಸಾಮಗ್ರಿಗಳನ್ನು ಮಠದ ಪ್ರಸಾದಾಲಯಕ್ಕೆ ತುಂಬಿದರೆ, ಆ ರೈತ ಯಾರು, ಯಾವ ಊರಿನವರು? ಎಂದು ಕೇಳಿ ಆತನನ್ನು ಕರೆದು ವಿಚಾರಿಸುತಿದ್ದರು. ಆತನನ್ನು ನೆನಪಿಟ್ಟುಕೊಳ್ಳುತ್ತಿದ್ದರು. ಜತೆಗೆ ಆ ಭಾಗಕ್ಕೆ ಪೂಜೆಗೆ ತೆರಳಿದರೆ ಅವರನ್ನು ಕರೆದು ಮಾತನಾಡಿಸುತ್ತಿದ್ದರು. ಪ್ರತಿ ವರ್ಷ ಇಂತಿಷ್ಟೇ ರೈತರು ತಮ್ಮ ಮಠಕ್ಕೆ ಧವಸ ಧಾನ್ಯಗಳನ್ನು ತಲುಪಿಸುತ್ತಾರೆ ಎಂಬುದು ಶ್ರೀಗಳಿಗೆ ಚೆನ್ನಾಗಿ ನೆನಪಿರುತ್ತಿತ್ತು. ಅವರುಗಳ ಹೆಸರು ಶ್ರೀಗಳ ನಾಲಿಗೆ ತುದಿಯಲ್ಲಿರುತ್ತಿತ್ತು.

6. 1966ರಲ್ಲಿ ರಾಜ್ಯದಲ್ಲಿ ತಲೆದೋರಿದ ಭೀಕರ ಕ್ಷಾಮ ಶ್ರೀಮಠದ ಸತ್ವವನ್ನೇ ಪಣಕ್ಕಿಟ್ಟಿತು. ಸಾವಿರಾರು ವಿದ್ಯಾರ್ಥಿಗಳನ್ನು ಪೋಷಿಸುವ ಶ್ರೀಗಳು ಹಲವಾರು ಸಂಖ್ಯೆಯಲ್ಲಿ ಹಸಿದು ಮಠದ ಪ್ರಸಾದಕ್ಕೆ ಮಕ್ಕಳು ಮರಿ ಸಹಿತ ಬರುವ ಜನತೆಯನ್ನು ಸಲಹುವ ಗುರುತರವಾದ ಸಮಸ್ಯೆ ತಲೆದೋರಿತು. ಹಸಿದವರನ್ನು ಕಂಡು ಹೃದಯ ಕಲಕಿ ಶ್ರೀಗಳವರ ಕರುಳು ಕರಗಿತು. ಎದೆಯೊಡ್ಡಿ ಎದ್ದು ನಿಂತರು. ಬಂದವರಿಗೆಲ್ಲಾ ಪ್ರಸಾದ ನೀಡಿದರು. ಅಡಿಗೆಯ ಸಿಬ್ಬಂದಿಯೊಂದಿಗೆ ತಾವೂ ಸನ್ನದ್ಧರಾದರು. ಮುದ್ದೆ ತಿರುವಿದರು, ಅನ್ನ ಬಸಿದರು, ಸಾರು ಕೂಡಿಸಿದರು, ಎಲೆ ಕೊಡಿಸಿದರು, ತಾವೇ ಬಗ್ಗಿ ನೀಡಿದರು. ಅಂದು ಮುಖ್ಯಮಂತ್ರಿಗಳಾಗಿದ್ದ ಎಸ್ . ನಿಜಲಿಂಗಪ್ಪನವರು, ಆಹಾರ ಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರು ಬಂದು ನೋಡಿದರು; ಬೆಕ್ಕಸ ಬೆರಗಾದರು; ಶ್ರೀಗಳವರನ್ನು ಅಭಿನಂದಿಸಿದ್ದರು.

ಇದನ್ನೂ ಓದಿ | ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಫೆಬ್ರವರಿ 21ರಂದು ರಾಜ್ಯಾದ್ಯಂತ ಸರ್ಕಾರದಿಂದ ದಾಸೋಹ ದಿನ: ಸಿಎಂ ಬೊಮ್ಮಾಯಿ

Exit mobile version