Site icon Vistara News

Shravana Masa 2023: ಶ್ರಾವಣ ಮಾಸಕ್ಕೂ ಶಿವನಿಗೂ ಏನು ನಂಟು ಎಂಬುದು ನಿಮಗೆ ಗೊತ್ತೇ?

shiva and shravana

ಹಿಂದೂ ಕ್ಯಾಲೆಂಡರ್ ಪ್ರಕಾರ, ಎಲ್ಲ ತಿಂಗಳುಗಳಿಗಿಂತಲೂ ಶ್ರಾವಣ ತಿಂಗಳನ್ನು ಪವಿತ್ರ (Shravana Masa 2023) ಎಂದು ನಂಬಲಾಗುತ್ತದೆ. ಪಂಚಾಂಗದ ಪ್ರಕಾರ ಇದು ಐದನೇ ತಿಂಗಳಾಗಿದ್ದು, ಶ್ರವಣ ನಕ್ಷತ್ರ ಈ ತಿಂಗಳನ್ನು ಆಳುವುದರಿಂದ ಈ ಮಾಸಕ್ಕೆ ಈ ಹೆಸರು ಬಂದಿದೆ. ವಿಶೇಷವೆಂದರೆ, ಹಿಂದುಗಳ ಹಬ್ಬ ಹರಿದಿನಗಳಲ್ಲಿ (hindu festivals) ಪ್ರಮುಖವಾದವುಗಳು ಈ ತಿಂಗಳಲ್ಲೇ ಬರುತ್ತದೆ. ಅಷ್ಟೇ ಅಲ್ಲ, ಶುಭ ಕಾರ್ಯಗಳಿಗೂ ಈ ಮಾಸ ಪ್ರಶಸ್ತವಾದದ್ದು, ಹಾಗೆಯೇ ಶ್ರಾವಣದಲ್ಲಿ ಏನೇ ಕಾರ್ಯ ಮಾಡಿದರೂ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ ಎಂಬ ನಂಬಿಕೆ ಹಿಂದೂಗಳದ್ದು.

2023ರ ಈ ಬಾರಿಯ ಶ್ವಾವಣ ಮಾಸ (shravana month) ವಿಶೇಷವಾದದ್ದು. ಯಾಕೆಂದರೆ ಈ ಬಾರಿ ಇದು ಅಧಿಕ ಮಾಸದಲ್ಲಿ ಬಂದಿದ್ದು ಎರಡು ತಿಂಗಳ ಕಾಲವಿತ್ತು. ಬರೋಬ್ಬರಿ 19 ವರ್ಷಗಳ ನಂತರ ಇಂತಹ ಅಪರೂಪದ ಶ್ರಾವಣ ಮಾಸ ಈ ಬಾರಿ ಬಂದಿದ್ದು, ಜುಲೈ 4ರಿಂದ ಆರಂಭವಾದ ಶ್ರಾವಣ ಮಾಸ ಇದೀಗ ಇದೇ ಆಗಸ್ಟ್‌ 31ಕ್ಕೆ ಕೊನೆಗೊಳ್ಳಲಿದೆ. ಕೊನೆಗೊಳ್ಳುವ ಸಂದರ್ಭ ದೇಶದೆಲ್ಲಡೆ ಹಿಂದೂಗಳು ಭಕ್ತಿಯಿಂದ ಶಿವನಿಗೆ ನಮಸ್ಕರಿಸಿ (shiva worship) ಪೂಜೆಗಳನ್ನು ಮಾಡುವುದಷ್ಟೇ ಅಲ್ಲ, ತ್ರಿವೇಣಿ ಸಂಗಮ ಕ್ಷೇತ್ರಗಳಲ್ಲಿ ಪುಣ್ಯಸ್ನಾನವನ್ನೂ ಪೂರೈಸುತ್ತಾರೆ.

ಶಿವನಿಗೂ ಈ ಶ್ರಾವಣ ಮಾಸಕ್ಕೂ ವಿಶೇಷ ನಂಟು. ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಎಲ್ಲ ದೇವರುಗಳ ಪೈಕಿ ಶಿವನನ್ನು ಮೆಚ್ಚಿಸುವುದು ಸುಲಭವಂತೆ. ಅದರಲ್ಲೂ ಶ್ರಾವಣ ಮಾಸದಲ್ಲಿ, ಶಿವನು ಭಕ್ತರ ಭಕ್ತಿಗೆ ಒಲಿದು ಬೇಡಿದ್ದನ್ನು ನೀಡುತ್ತಾನೆ ಎಂಬ ಅಚಲ ನಂಬಿಕೆ ಶಿವನ ಆರಾಧಕರದ್ದು. ಆದರೆ, ಸಮರ್ಪಣಾ ಭಾವ ಹಾಗೂ ಭಕ್ತಿಯಿರಬೇಕು, ಅಷ್ಟೇ. ಈ ಶ್ರಾವಣ ಮಾಸದಲ್ಲಿ ಬರುವ ಹಲವು ಹಬ್ಬಗಳು ಶಿವ ಪಾರ್ವತಿಯರ ಆರಾಧನೆಗೇ ಮೀಸಲಾಗಿದೆ. ಈ ಸಂದರ್ಭ ಉತ್ತಮ ಆಯುಸ್ಸು, ಆರೋಗ್ಯ, ಸಂಪತ್ತು, ವಿವಾಹ ಹಾಗೂ ಕೌಟುಂಬಿಕ ಸುಖಕ್ಕಾಗಿ ಭಕ್ತರು ಶಿವನ ಮೊರೆ ಹೋಗುತ್ತಾರೆ. ಇಷ್ಟೇ ಅಲ್ಲ, ಶ್ರವಣ ಎಂದರೆ ಆಲಿಸುವುದು ಎಂಬ ಅರ್ಥವೂ ಇರುವುದರಿಂದ ಈ ಮಾಸದಲ್ಲಿ ಪುರಾಣ, ಪ್ರವಚನಗಳನ್ನು ಆಲಿಸುವ ಮೂಲಕ ಪರಮಾತ್ಮನ ಸಾನಿಧ್ಯ ಪಡೆಯಬಹುದು ಎಂಬ ನಂಬಿಕೆಯೂ ಇದೆ. ಈ ತಿಂಗಳಲ್ಲಿ ಬರುವ ಪ್ರತಿ ಸೋಮವಾರವನ್ನೂ ಶ್ರಾವಣ ಸೋಮವಾರ ಎಂದು ಆಚರಿಸಿ ಭಕ್ತರು ಶಿವನನ್ನು ಪೂಜಿಸುತ್ತಾರೆ.

ಇದನ್ನೂ ಓದಿ: Shravana Masa 2023: ಶ್ರಾವಣ ಬಂತು ನಾಡಿಗೆ; ಮನಸು ಹಬ್ಬಗಳ ಕಡೆಗೆ

ಹೀಗೆ ಶ್ರಾವಣ ಮಾಸ ಶಿವನಿಗೆ ವಿಶೇಷವಾಗಿರಲು ಕಾರಣವೂ ಇದೆ. ಇಲ್ಲೊಂದು ಕಥೆಯಿದೆ. ಸಮುದ್ರ ಮಂಥನದ ಸಂದರ್ಭ ಅಮೃತಕ್ಕಾಗಿ ದೇವತೆಗಳೂ ದಾನವರೂ ಕಾದಾಡಿದ ಕಥೆ ನಿಮಗೆ ಗೊತ್ತಿರಬಹುದು. ಈ ಕಥೆ ನಡೆದುದು ಶ್ರಾಔಣ ಮಾಸದಲ್ಲಂತೆ. ಅಲ್ಲಿ ಹೀಗೆ ನಡೆದ ಹೋರಾಟದಲ್ಲಿ ಸಮುದ್ರದಿಂದ ೧೪ ರತ್ನಗಳು ಮೇಲೆದ್ದು ಬಂದವಂತೆ. ಅವುಗಳ ಪೈಕಿ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ದೇವತೆಗಳೂ ದಾನವರೂ ಪರಸ್ಪರ ಹಂಚಿಕೊಂಡರು. ಆದರೆ ಉಳಿದ ರತ್ನವೆಂದರೆ ಅದು ಹಾಲಹಾಲ. ಈ ರತ್ನವನ್ನು ಏನು ಮಾಡುವುದೆಂದು ತಿಳಿಯದಾದಾಗ ಸಹಾಯಕ್ಕೆ ಬಂದವನು ಶಿವ. ಶಿವನು ಹಾಲಾಹಲವನ್ನು ಗಟಗಟನೆ ಕುಡಿದು ಅನಾಹುತವನ್ನು ತಪ್ಪಿಸುತ್ತಾನೆ. ಇಂಥ ಸಂದರ್ಭ ಈ ಹಾಲಾಹಲವನ್ನು ಕುಡಿದ ಶಿವ ನೀಲಕಂಠನಾಗುತ್ತಾನೆ. ಆತನ ವಿಷಜ್ವಾಲೆಯನ್ನು ಕಡಿಮೆ ಮಾಡಲು ಶಿವನು ತಲೆಯಲ್ಲಿ ಚಂದ್ರನನ್ನು ಧರಿಸುತ್ತಾನೆ. ಎಲ್ಲ ದೇವತೆಗಳೂ ಗಂಗಾಜಲವನ್ನು ಶಿವನ ತಲೆಯ ಮೇಲೆ ಸುರಿಯುತ್ತಾರಂತೆ. ಶ್ರಾವಣ ಮಾಸದಲ್ಲಿ ನಡೆದ ಕಥೆಯೆಂದು ಹೇಳಲಾಗುವ ಈ ಕಥೆಯ ನೆನಪಿನಲ್ಲಿಯೇ, ಇಂದಿಗೂ ಭಕ್ತರು ಶಿವನ ಮೇಲೆ ವಿಶೇಷವಾಗಿ ಸೋಮವಾರದಂದು ಗಂಗಾಜಲವನ್ನು ಸುರಿದು ಅಭಿಷೇಕವನ್ನೂ ಮಾಡುವ ಪದ್ಧತಿ ಜಾರಿಯಲ್ಲಿದೆ.

ಇದನ್ನೂ ಓದಿ: Shravana Masa 2023: ಪವಿತ್ರ ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಿವು!

Exit mobile version