Site icon Vistara News

Siddheshwar Swamiji | ಶ್ರೀ ಸಿದ್ದೇಶ್ವರ ಸ್ವಾಮೀಜಿ ವರ್ಚುವಲ್‌ ದರ್ಶನ

Siddheshwar Swamiji

ವಿಜಯಪುರ: ಇಲ್ಲಿಯ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಆರೋಗ್ಯದಲ್ಲಿ ಶನಿವಾರ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡು ಬಂದಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಸಾವಿರಾರು ಭಕ್ತರು ಆಶ್ರಮಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.

ಶನಿವಾರ ಕೂಡ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸುಮಾರು ಅರ್ಧಗಂಟೆಗಳ ಕಾಲ ಭಕ್ತರಿಗೆ ದರ್ಶನ ನೀಡಿದರು. ಕಳೆದ ಎರಡು ದಿನಗಳಂತೆಯೇ ಸಾವಿರಾರರು ಭಕ್ತರು ಇಂದೂ ಕೂಡ ಬೆಳಗ್ಗೆ 6 ಗಂಟೆಯಿಂದಲೇ ಆಗಮಿಸಿ, ದರ್ಶನಕ್ಕಾಗಿ ಕಾದು ಕುಳಿತಿದ್ದರು. ಮಧ್ಯಾಹ್ನ ೧ ಗಂಟೆಯ ವೇಳೆಗೆ ಶ್ರೀಗಳು ದರ್ಶನ ನೀಡಿದರು.

ಇಂದಿನಿಂದ ಆನ್‌ಲೈನ್‌ನಲ್ಲಿ ದರ್ಶನ
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಆದರೆ ಅವರಿಗೆ ಇನ್ನಷ್ಟು ವಿಶ್ರಾಂತಿ ನೀಡಬೇಕೆಂಬ ಉದ್ದೇಶದಿಂದ ಜ್ಞಾನಯೋಗಾಶ್ರಮವು ಶ್ರೀಗಳ ನೇರ ದರ್ಶನವನ್ನು ಭಾನುವಾರದಿಂದ ರದ್ದು ಪಡಿಸಿದ್ದು, ಕೇವಲ ವರ್ಚುವಲ್‌ (ಆನ್‌ಲೈನ್‌) ದರ್ಶನ ನೀಡಿಸಲಾಗುತ್ತದೆ ಎಂದು ಪ್ರಕಟಿಸಿದೆ.
ಇನ್ನು ಮುಂದೆ ನಿಗದಿತ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಫೇಸ್‌ಬುಕ್‌, ಯೂಟೂಬ್‌ ಲೈವ್‌ನಲ್ಲಿ ಶ್ರೀಗಳ ದರ್ಶನ ಪ್ರಸಾರ ಮಾಡುತ್ತೇವೆ. ಯಾರೂ ಅವರನ್ನು ನೇರವಾಗಿ ನೋಡಬೇಕೆಂದು ಆಶ್ರಮದ ಬಳಿ ಬರಬೇಡಿ ಎಂದು ಜ್ಞಾನಯೋಗಾಶ್ರಮವು ಭಕ್ತರಲ್ಲಿ ಮನವಿ ಮಾಡಿದೆ.
“ನಿಮ್ಮ ಭಕ್ತಿ, ಪ್ರೀತಿ ಅರ್ಥವಾಗುತ್ತದೆ. ಆದರೆ ಇದು ದೇವರಿಗೆ ಇನ್ನಷ್ಟು ತ್ರಾಸವನ್ನುಂಟು ಮಾಡುತ್ತಿದೆ. ಭಕ್ತರು ಸೇರಿದ್ದಾರೆ ಎಂದಾದರೆ, ಅವರು ವಿಶ್ರಾಂತಿ ಪಡೆಯದೇ ದರ್ಶನ ನೀಡಲು ಹೋಗೋಣ ಎಂದು ಹಟ ಹಿಡಿಯುತ್ತಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ವಿಶ್ರಾಂತಿ ದೊರೆಯುವಂತೆ ಮಾಡೋಣ. ತಂತ್ರಜ್ಞಾನದ ಈ ಯುಗದಲ್ಲಿ ನಾವು ಅದನ್ನು ಬಳಸಿಕೊಳ್ಳೋಣ. ನಾಳೆಯಿಂದ ಅವರ ವರ್ಚುವಲ್‌ ದರ್ಶನ ಪಡೆಯೋಣʼʼ ಎಂದು ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಆಶ್ರಮದ ಮೊದಲ ಮಹಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿರುವುದರಿಂದ ಆಶ್ರಮದ ಸಿಬ್ಬಂದಿ ಅಲ್ಲಿಂದಲೇ ದರ್ಶನ ನೀಡಲು ವ್ಯವಸ್ಥೆ ಮಾಡಿದ್ದರಾದರೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇದಕ್ಕೊಪ್ಪದೆ, ಕೆಳಗೆ ಕರೆದುಕೊಂಡು ಹೋಗಿ ಎಂದು ಸೂಚಿಸಿದ್ದರು. ಅವರ ಸೂಚನೆಯಂಗೆ ಅವರನ್ನು ಕೆಳಗೆ ಕರೆದುಕೊಂಡು ಬಂದು ಭಕ್ತರ ಮುಂದೆ ಕೂರಿಸಲಾಗಿತ್ತು. ಎರಡು ದಿನಗಳ ಹಿಂದಿಗಿಂತ ಹೆಚ್ಚು ಚೇತರಿಸಿಕೊಂಡಂತೆ ಕಂಡುಬಂದ ಶ್ರೀಗಳು, ದರ್ಶನ ನೀಡುವಾಗಲೇ ಕಿರಿಯ ಸ್ವಾಮೀಜಿಗಳಿಗೆ ಸೂಚನೆಗಳನ್ನು ನೀಡುತ್ತಾ, ಭಕ್ತರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತಾ ಕುಳಿತಿದ್ದರು.

83 ವರ್ಷದ ಶ್ರೀ ಸಿದ್ದೇಶ್ವರ ಶ್ರೀಗಳು ನಿತ್ಯ ಎಂದಿನಂತೆ ಸ್ನಾನ ಪೂಜೆ ಮಾಡುತ್ತಿದ್ದು, ಶುಕ್ರವಾರ ಸಂಜೆ ವ್ಹೀಲ್ ಚೇರ್‌ ನಲ್ಲಿ ಕುಳಿತೇ ಆಶ್ರಮದಲ್ಲಿ ಅಡ್ಡಾಡಿದ್ದರು. ಹಿರಿಯ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಬಳಿ 15 ನಿಮಿಷ ಧ್ಯಾನಾಸಕ್ತರಾಗಿ ಕುಳಿತಿದ್ದರು. ಎರಡು ಬಾರಿ ಭಕ್ತರಿಗೆ ದರ್ಶನ ಕೂಡ ನಿಡಿದ್ದರು.

ಆರೋಗ್ಯ ವಿಚಾರಿಸುತ್ತಿರುವ ಗಣ್ಯರು
ಜ್ಞಾನಯೋಗಾಶ್ರಮಕ್ಕೆ ಶನಿವಾರ ಭೇಟಿ ನೀಡಿದ ಸಚಿವ ಸಿ.ಸಿ.ಪಾಟೀಲ್, ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಹೆಚ್ ಕೆ ಪಾಟೀಲ್, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಇಂಡಿ ಶಾಸಕ ಯಶವಂತರಾಯ ಗೌಡ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಆರೋಗ್ಯ ವಿಚಾರಿಸಿ, ಅವರ ಆಶೀರ್ವಾದ ಪಡೆದರು.

ಶ್ರೀಗಳ ದರ್ಶನಕ್ಕೆ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ‌ ಸ್ವಾಮೀಜಿ ಕೂಡ ಆಗಮಿಸಿದ್ದರು. ಅವರು ಈ ಸಂದರ್ಭದಲ್ಲಿ ಆಶ್ರಮದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಜ್ಞಾನದ ಶಕ್ತಿ ಅವರನ್ನು ಕಾಪಾಡುತ್ತಿದೆ. ಜಗತ್ತಿಗೆ ಜ್ಞಾನದ ಸಂದೇಶ ನೀಡುತ್ತಿದ್ದ ನಮ್ಮೆಲ್ಲರ ಪೂಜ್ಯ ಶ್ರೀಗಳು ಇನ್ನಷ್ಟು ದಿನ ನಮ್ಮೊಂದಿಗೆ ಇರಬೇಕು. ಇದಕ್ಕಾಗಿ ನಾವೆಲ್ಲರೂ ನಮ್ಮ ನಮ್ಮ ಮನೆಯಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡುವಾಗ ಅವರಿಗೆ ಆಯಸ್ಸು ನೀಡು ಎಂದು ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.

ಇಂದು ಮುಖ್ಯಮಂತ್ರಿ ಭೇಟಿ
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ರಾತ್ರಿ ಜ್ಞಾನಯೋಶ್ರಮಕ್ಕೆ ಭೇಟಿ ನೀಡಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾರೊಂದಿಗೆ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿಗಳು ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮಾರ್ಗದಲ್ಲಿ ವಿಜಯಪುರಕ್ಕೆ ಬಂದು ಶ್ರೀಗಳನ್ನು ಭೇಟಿ ಮಾಡಲಿದ್ದಾರೆ. ರಾತ್ರಿ 8 ಗಂಟೆಯ ವೇಳೆಗೆ ಅವರು ಇಲ್ಲಿಗೆ ಆಗಮಿಸುವ ಸಾಧ್ಯತೆಗಳಿವೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿ ದರ್ಶನಕ್ಕೆ ಆಗಮಿಸಿದ್ದ ಭಕ್ತರು

ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಜನವರಿಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮಕ್ಕೆ ಪ್ರವಚನ ನೀಡಲೆಂದು ತೆರಳಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಕ್ತರೊಬ್ಬರ ಫಾರ್ಮ್ ಹೌಸ್​ನಲ್ಲಿನ ಬಾತ್ ರೂಂನಲ್ಲಿ ಜಾರಿ ಬಿದ್ದಿದ್ದರು. ಕೂಡಲೇ ಅವರನ್ನು ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದ ಶ್ರೀಗಳು ಮತ್ತೆ ಪ್ರವಚನ ಕಾರ್ಯವನ್ನು ಮುಂದುವರೆಸಿದ್ದರು. ಆದರೆ ಇತ್ತೀಚೆಗೆ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದರು. ಇದು ಇಲ್ಲಸಲ್ಲದ ವದಂತಿ ಹರಡಲು ಕಾರಣವಾಗಿ, ಭಕ್ತರಲ್ಲಿ ಆತಂಕ ಮೂಡಿಸಿತ್ತು.

ಇದನ್ನೂ ಓದಿ | Prerane | ಸುಖವೆಂಬುದೂ ದುಃಖವೇ

Exit mobile version