Site icon Vistara News

Siddheshwar Swamiji | ಭಕ್ತರಿಗೆ ದರ್ಶನ ನೀಡಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ; ಆರೋಗ್ಯದ ಕುರಿತ ವದಂತಿಗಳಿಗೆ ತೆರೆ

Siddheshwar Swamiji

ವಿಜಯಪುರ: ಇಲ್ಲಿಯ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಬುಧವಾರ ಮಧ್ಯಾಹ್ನ ಭಕ್ತರಿಗೆ ದರ್ಶನ ನೀಡಿದ್ದಾರೆ. ಜ್ಞಾನ ಯೋಗಾಶ್ರಮದ ಆವರಣದಲ್ಲಿ ಸುಮಾರು 20 ನಿಮಿಷಗಳ ಕಾಲ ಅವರು ನೆರೆದಿದ್ದ ಸಾವಿರಾರು ಭಕ್ತರ ಮುಂದೆ ಕುಳಿತು ದರ್ಶನ ನೀಡಿದರು. ಆ ಮೂಲಕ ಅವರ ಆರೋಗ್ಯದ ಕುರಿತ ವದಂತಿಗಳಿಗೆ ತೆರೆ ಎಳೆದರು.

ಈ ನಡುವೆ, “ಪೂಜ್ಯ ಶ್ರೀ ಸದ್ದೇಶ್ವರ ಸ್ವಾಮಿಗಳವರು ಆರೋಗ್ಯವಾಗಿದ್ದಾರೆ. ಈಗ ಹರಿದಾಡುತ್ತಿರುವ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು ಎಂದು ಈ ಮೂಲಕ ತಿಳಿಸಲಾಗಿದೆʼʼ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿರುವ ಶ್ರೀ ಬಸವಲಿಂಗ ಸ್ವಾಮಿಗಳು ಪ್ರಕಟಣೆ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಶ್ರೀಗಳ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳು ಭಕ್ತರಿಗೆ ದರ್ಶನ ನೀಡಿರುವುದು ಮತ್ತು ಆಶ್ರಮದ ಪ್ರಕಟಣೆ ಮಹತ್ವ ಪಡೆದಿದೆ.

ಶ್ರೀಗಳು ಕೆಲವು ದಿನಗಳಿಂದ ಚಳಿಗಾಲವಿರುವ ಕಾರಣದಿಂದಾಗಿ ಜ್ವರ, ಕೆಮ್ಮುವಿನಿಂದ ಅವರು ಬಳಲುತ್ತಿದ್ದರು. ಹೀಗಾಗಿ ವದಂತಿ ಹರಡಲು ಕಾರಣವಾಗಿತ್ತು. ಅನಾರೋಗ್ಯದಿಂದ ಶ್ರೀಗಳು ಸಾಕಷ್ಟು ಬಳಲಿದಂತೆ ಕಂಡರು. ತಮ್ಮ ದರ್ಶನಕ್ಕಾಗಿ ಆಗಮಿಸಿದ್ದ ನೂರಾರು ಭಕ್ತರಿಗೆ ಕೈಮುಗಿದು, ಕೃತಜ್ಞತೆ ಸಲ್ಲಿಸಿದರಾದರೂ, ಆಶೀರ್ವಚನ ನೀಡಲಿಲ್ಲ. ಭಕ್ತಿಗೀತೆಗಳನ್ನು ಹಾಡಿದಾಗ ತನ್ಮಯತೆಯಿಂದ ಕೇಳಿಸಿಕೊಂಡರು. ತಮ್ಮ ಸಹಾಯಕ್ಕಿದ್ದವರೊಂದಿಗೆ ಮಾತುಕತೆ ನಡೆಸಿದರು.

ಭಜನೆ ಆಲಿಸುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ

83 ವರ್ಷದ ಶ್ರೀ ಸಿದ್ದೇಶ್ವರ ಶ್ರೀಗಳು ನಿತ್ಯ ಎಂದಿನಂತೆ ಸ್ನಾನ ಪೂಜೆ ಮಾಡುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದಲೂ ಸಹ ಆಯ್ದ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಲೇ ಬಂದಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದ ಅವರು ಜ್ಞಾನದಾಸೋಹ ನೀಡಿಲ್ಲ. ಇದು ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ವಿಚಾರಿಸಿದ ಸಚಿವ ನಾಗೇಶ್‌
ಶ್ರೀಗಳ ಆರೋಗ್ಯ ವಿಚಾರಿಸಲು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ್ದರು. ಜ್ಞಾನ ಯೋಗಾಶ್ರಮದ ಆವರಣದಲ್ಲಿ ಭಕ್ತರಿಗೆ ದರ್ಶನ ನೀಡಿದ ಬಳಿಕ ಶ್ರೀಗಳು ವಿಶ್ರಾಂತಿಗೆ ತೆರಳಿದ್ದ ಸಂದರ್ಭದಲ್ಲಿ ಆಶ್ರಮಕ್ಕೆ ಆಗಮಿಸಿದ ಸಚಿವರು ಮತ್ತು ಇತರೆ ಮುಖಂಡರು ಆಶ್ರಮದ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲಿ ವಿಶ್ರಾಂತಿಯಲ್ಲಿರುವ ಸ್ವಾಮೀಜಿಯವರನ್ನು ಭೇಟಿಯಾದರು.
ಸ್ವಾಮೀಜಿಗಳ ದರ್ಶನದ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್‌, ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಕುರಿತ ಊಹಾಪೋಹ ಸಲ್ಲದು. ಸ್ವಾಮೀಜಿಯವರು ಆರೋಗ್ಯವಾಗಿದ್ದಾರೆ ಎಂದರು.
ಶಾಲೆಗಳಲ್ಲ ನೈತಿಕ ಶಿಕ್ಷಣ ನೀಡುವ ಕುರಿತು ಸ್ವಾಮೀಜಿಗಳ ಗಮನಕ್ಕೆ ತಂದಿದ್ದೇನೆ. ಈ ವಿಚಾರವಾಗಿ ಮುಂಬರುವ ದಿನಗಳಲ್ಲಿ ಒಂದು ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಇದಕ್ಕೆ ಸ್ವಾಮೀಜಿಯವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿದರು.
ಇವರಲ್ಲದೆ, ಬುಧವಾರ ಸಿಂದಗಿ ಶಾಸಕ ರಮೇಶ ಭೂಸನೂರ, ಮುಗಳಖೋಡ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು.

ಕಳೆದ ಜನವರಿಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮಕ್ಕೆ ಪ್ರವಚನ ನೀಡಲೆಂದು ತೆರಳಿದ್ದ ಶ್ರೀಗಳು ಭಕ್ತರೊಬ್ಬರ ಫಾರ್ಮ್ ಹೌಸ್​ನಲ್ಲಿನ ಬಾತ್ ರೂಂನಲ್ಲಿ ಜಾರಿ ಬಿದ್ದಿದ್ದರು. ಕೂಡಲೇ ಅವರನ್ನು ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದ ಶ್ರೀಗಳು ಮತ್ತೆ ಪ್ರವಚನ ಕಾರ್ಯವನ್ನು ಮುಂದುವರೆಸಿದ್ದರು. ಆದರೆ ಇತ್ತೀಚೆಗೆ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದರು.

ಇದನ್ನೂ ಓದಿ | Prerane | ಚಲನೆ ಶಾಶ್ವತವಾದುದಲ್ಲ, ನಿಶ್ಚಲತೆಯು ಚಿರಂತನವಾದುದು

Exit mobile version