Site icon Vistara News

Sirsi News | ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಮನವಿ

Banavasi Madhukeshwara temple Sirisi Dress Code

ಶಿರಸಿ: ಉತ್ತರ ಕನ್ನಡ ಜಿಲ್ಲೆ ಬನವಾಸಿಯ (Sirsi News) ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಸಭ್ಯ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದು ಸಂಘಟನೆಗಳು ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ವರ್ಗದವರಿಗೆ ಬುಧವಾರ (ಡಿ.೭) ಮನವಿ ಸಲ್ಲಿಸಿದರು.

ಶ್ರೀ ಮಧುಕೇಶ್ವರ ದೇವಸ್ಥಾನವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಮತ್ತು ಐತಿಹಾಸಿಕ ದೇವಾಲಯಗಳಲ್ಲೊಂದಾಗಿದೆ. ಭಕ್ತರು ಬೇಡಿದ್ದನ್ನು ನೀಡುತ್ತಾನೆಂಬ ನಂಬಿಕೆ ಇರುವ ಶ್ರೀ ಮಧುಕೇಶ್ವರ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು, ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯ ಕ್ಷೇತ್ರವಾಗಿದೆ. ಮಧುಕೇಶ್ವರನ ಅಸ್ತಿತ್ವದಿಂದ ಬನವಾಸಿ ನಗರ ಪಾವನವಾಗಿದೆ. ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಿ, ಉಪಾಸನೆ ಮಾಡಿದರೆ ಮಾತ್ರ ಅಲ್ಲಿರುವ ದೈವತ್ವದ ಅನುಭವವನ್ನು ಪಡೆಯಬಹುದು.

ದೇವಸ್ಥಾನದ ಸಾತ್ವಿಕತೆಗೆ ಭಂಗ
ಹಿಂದು ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ಈಶ್ವರಿ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ತ್ವದ ಅನೂಭೂತಿ ಬರುತ್ತದೆ. ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದರಿಂದ ಮತ್ತು ಕೂದಲೂ ಬಿಚ್ಚಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ರಜ-ತಮ ಗುಣಗಳ ಪ್ರಧಾನ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ ಭಂಗ ಉಂಟಾಗಿ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ.

ಪಾವಿತ್ರ್ಯ ಕಾಪಾಡಲು ಮನವಿ
ಅತ್ಯಂತ ಪವಿತ್ರ ಹಾಗೂ ಚೈತನ್ಯಮಯ ನಮ್ಮ ದೇವಸ್ಥಾನಗಳಲ್ಲಿ ಅವುಗಳ ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತರ ಆದ್ಯ ಕರ್ತವ್ಯವೇ ಆಗಿದೆ. ಹೀಗಾಗಿ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಭಕ್ತರು ಸಾತ್ವಿಕ ಉಡುಪುಗಳನ್ನು ಧರಿಸಿ ಬರಬೇಕೆಂಬ ನಿಯಮವನ್ನು ಹಾಕಿ ಅದರ ಪಾವಿತ್ರ್ಯವನ್ನು ಕಾಪಾಡಬೇಕಾಗಿ ಈ ಮೂಲಕ ಎಲ್ಲ ಶ್ರದ್ಧಾಳು ಮತ್ತು ಮಹಿಳೆಯರಿಗೆ ವಿನಂತಿಸಿಕೊಳ್ಳುತ್ತಿದ್ದೇವೆ. ಇಂತಹ ಧರ್ಮ ಜಾಗೃತಿಯ ಪ್ರಯತ್ನದಿಂದ ಶ್ರೀ ಮಧುಕೇಶ್ವರ ದೇವರ ಕೃಪೆಯು ನಿಶ್ಚಿತವಾಗಿಯೂ ನಮ್ಮೆಲ್ಲರ ಮೇಲಾಗುವುದು ಎಂದು ತಿಳಿಸಲಾಯಿತು.

ಈ ಸಂಧರ್ಭದಲ್ಲಿ ಹಿಂದು ಸಂಘಟನೆಯ ಪ್ರಮುಖರಾದ ಹಾಲೇಶ್ ಕೆರೋಡಿ, ಚಂದ್ರಶೇಖರ ಗೌಡರ್, ಅರವಿಂದ್ ಶೆಟ್ಟಿ, ಆರ್.ಜಿ. ಭಟ್, ಸಚಿನ್ ಮಾಳವದೆ, ಮಯೂರ್ ಭೊಂಗಳೆ, ಶ್ರೀಧರ ಶೆಟ್ಟಿ, ಹಿಂದು ಮಹಾಸಭಾದ ಪ್ರವೀಣ ರಾಮನಬೈಲ್, ಪ್ರಕಾಶ್ ಸೂಗಿ, ಅರವಿಂದ್ ಬಳಗಾರ್ ಹಾಗೂ ಮಹಿಳಾ ಮುಖಂಡರಾದ ಮಂಗಳಾ ದಾವಣಗೆರೆ, ಉಮಾ ಸಂಗೀತಗಾರ, ಶಾಂತಾ ಬನವಡಿ, ರೂಪಾ ಬಂದೇರ್ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರ ಶರತ್ ಕುಮಾರ ನಾಯ್ಕ್ ಉಪಸ್ಥಿತರಿದ್ದರು. ಶ್ರೀ ಮಧುಕೇಶ್ವರ ದೇವಸ್ಥಾನದ ಧರ್ಮದರ್ಶಿ ರಾಜಶೇಖರ ಒಡೆಯರ್ ‌ ಅವರು ಮನವಿ ಸ್ವೀಕರಿಸಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದನ್ನೂ ಓದಿ | Religious buildings | ಅನಧಿಕೃತ ಧಾರ್ಮಿಕ ಕಟ್ಟಡ ತೆರವು: ಮೂರು ವಾರದಲ್ಲಿ ವರದಿ ಕೇಳಿದ ಹೈಕೋರ್ಟ್‌

Exit mobile version