Site icon Vistara News

Skanda Sashti 2022 | ಸುಬ್ಬರಾಯನ ಷಷ್ಠೀ; ಹಬ್ಬದ ಪ್ರಾಮುಖ್ಯತೆ ಏನು? ಆಚರಣೆ ಹೇಗೆ?

Skanda Sashti 2022 subramanya sashti

ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀಃ
ಮಾರ್ಗಶಿರ ಮಾಸದಲ್ಲಿ ಆಚರಿಸಲ್ಪಡುವ ಒಂದು ಮುಖ್ಯ ವ್ರತಪರ್ವ ‘ಸುಬ್ಬರಾಯನ ಷಷ್ಠೀ ‘. ಇದರ ಶಾಸ್ತ್ರೀಯವಾದ ನಾಮಧೇಯ ‘ಸ್ಕಂದ ಷಷ್ಠೀʼ (Skanda Sashti 2022) ಎನ್ನುವುದೇ ಆಗಿದ್ದರೂ ಸ್ಕಂದ, ಷಣ್ಮುಖ, ಕುಮಾರ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧನಾಗಿರುವ ದೇವನನ್ನು ಸುಬ್ರಹ್ಮಣೇಶ್ವರ ಎಂದೂ ಕರೆಯುವ ರೂಢಿ ಇದೆ. ಅವನ ವಿಶೇಷ ಪೂಜೆಗೆ ಸಂಬಂಧಪಟ್ಟ ಷಷ್ಠೀತಿಥಿಯ ವ್ರತಪರ್ವವನ್ನು ಸುಬ್ರಹ್ಮಣ್ಯರಾಜನ ಅಥವಾ (ಆ ಶಬ್ದದ ಕನ್ನಡತದ್ಭವ ರೂಪದಿಂದ) ಸುಬ್ಬರಾಯನಷಷ್ಠೀ ಎಂದು ಕರೆಯುವ ವಾಡಿಕೆ ಬಂದಿದೆ.

ಹಬ್ಬವನ್ನು ಎಂದು ಆಚರಿಸಬೇಕು?
ಮಾರ್ಗಶಿರಮಾಸದ ಶುಕ್ಲಪಕ್ಷದ ಷಷ್ಠೀ ತಿಥಿಯಂದು ಆಚರಿಸಬೇಕಾದ ಹಬ್ಬ ಇದು. ಷಷ್ಠೀ ತಿಥಿಗೆ ಅದರ ಹಿಂದಿನ ತಿಥಿಯಾದ ಪಂಚಮಿಯ ವೇಧೆ ಇದ್ದರೆ ಶ್ರೇಷ್ಠವೇ
ಕೃಷ್ಣಾಷ್ಟಮಿ ಸ್ಕಂದಷಷ್ಠೀ ಶಿವರಾತ್ರಿಶ್ಚತುರ್ದಶೀ |
ಏತಾಃ ಪೂರ್ವಯುತಾಃ ಕಾರ್ಯಾ: ತಿಥ್ಯಂತೇ ಪಾರಣಂ ಭವೇತ್ ||

ಎಂದು ಭೃಗುವಚನವನ್ನನುಸರಿಸಿ ಹಿಂದಿನ ತಿಥಿಯ ವೇಧೆಯೇ ಇದಕ್ಕೆ ಪ್ರಶಸ್ತ. ಆ ದಿವಸ ಭಾನುವಾರ ಮತ್ತು ವೈಧೃತಿಯ ಸಂಯೋಗ ಇದ್ದರೆ ಇನ್ನೂ ವಿಶೇಷ. (ವೈಧೃತಿ ಎಂಬುದು ಪಂಚಾಂಗವು ಗುರುತಿಸಿರುವ ಒಂದು ಯೋಗವಿಶೇಷ) ಆಗ ಈ ಪರ್ವವನ್ನು ” ಚಂಪಾಷಷ್ಠೀ’’ (Champa Shashti 2022) ಎಂದು ಕರೆಯುತ್ತಾರೆ. ಆದರೆ ಚಂಪಾಷಷ್ಠೀಗೆ ಪಂಚಮಿಯ ವೇಧೆ ಅಥವಾ ಸಪ್ತಮಿಯ ವೇಧೆ ಎರಡೂ, ಯೋಗವಶದಿ೦ದ ಆಗಬಹುದು.

ಪರದಿನದಲ್ಲಿ ರಾತ್ರಿ ಮೊದಲನೆಯ ಯಾಮದ ಮಧ್ಯದಲ್ಲಿ ಪಾರಣೆಮಾಡುವುದು ಅಸಂಭವವಾದರೆ ಆಗ ಪಂಚಮಿಯ ವೇಧೆ ಇರಬೇಕು. ಇಲ್ಲದಿದ್ದರೆ ಸಪ್ತಮಿಯ ವೇಧೆ ಇರುವುದೇ ಪ್ರಶಸ್ತ ಎಂದು ದಿವೋದಾಸರ ಮತ. ತಿಥಿಯು ಮುಗಿದುಹೋದನಂತರ ವ್ರತದ ಅಂಗವಾದ ಪಾರಣೆಯನ್ನು ಮಾಡಬೇಕು. ಮಹಾರಾಷ್ಟ್ರದಲ್ಲಿ ಚಂಪಾಷಷ್ಠೀ ಎಂಬ ಹೆಸರು ಪ್ರಸಿದ್ಧವಾಗಿದೆ. ದೇಶದ ಉಳಿದ ಕಡೆಗಳಲ್ಲಿ ಸ್ಕಂದಷಷ್ಟಿ (ಅಥವಾ ಸುಬ್ಬರಾಯನ ಷಷ್ಠೀ) ಎಂಬುದು ಹೆಚ್ಚು ಪ್ರಸಾರದಲ್ಲಿರುವ ಹೆಸರು.

ಈ ಸುಬ್ಬರಾಯನ ಷಷ್ಟಿಯ ಹಿಂದಿನ ತಿಥಿಯಾದ ಪಂಚಮಿಯ ದಿನವೂ ನಾಗಪೂಜಾದಿನವಾಗಿದೆ. ಹಾಗೆಯೇ ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿಯನ್ನು ನಾಗರಪಂಚಮಿಯೆಂದೂ ಗರುಡಪಂಚಮಿಯೆಂದೂ ಕರೆದು ಅಂದು ನಾಗದೇವತೆಯನ್ನು ಪೂಜಿಸಲಾಗುತ್ತದೆ. ಅದರ ಮಾರನೆಯ ದಿವಸದ ಷಷ್ಟಿಯು ಸಿರಿಯಾಳನ ಷಷ್ಠೀಯೆಂದು ಪ್ರಸಿದ್ಧವಾಗಿದೆ. ಪುಷ್ಯ ಮತ್ತು ಮಾಘಮಾಸಗಳ ಶುಕ್ಲಪಕ್ಷದ ಪಂಚಮೀಷಷ್ಟಿಗಳೂ ನಾಗದೇವತೆಗಳ ಮತ್ತು ಕುಮಾರಸ್ವಾಮಿಯ ಪೂಜೆಗೆ ಪ್ರಶಸ್ತವಾದುವುಗಳೇ.

ಪ್ರತಿಯೊಂದು ಮಾಸದ ಶುಕ್ಲಪಕ್ಷದ ಷಷ್ಠೀತಿಥಿಗಳನ್ನು ಕುಮಾರಸ್ವಾಮಿಯ ಆರಾಧನೆಗೆ ಶ್ರೇಷ್ಠವೆಂದು ಹೇಳುತ್ತಾರೆ. ಆದರೆ ಇವುಗಳಲ್ಲಿ ಅತ್ಯಂತ ಮುಖ್ಯವಾದುದು ಮಾರ್ಗಶಿರ ಮಾಸದ ಸುಬ್ಬರಾಯನಷಷ್ಠೀಯೇ. ಆದರೆ ಹಿಂದಿನ ದಿನದ ನಾಗಪೂಜೆಯೂ ಪ್ರಸಿದ್ಧವಾದುದು. ಮಾರ್ಗಶಿರ, ಪುಷ್ಯ, ಮಾಘಮಾಸಗಳ ಶುಕ್ಲ ಷಷ್ಠೀಗಳಂದು ಕುಮಾರಸ್ವಾಮಿಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಕುಮಾರದೇವತೆಯ ವಿಶೇಷಪೂಜೆಯೂ ರಥೋತ್ಸವವೂ ಆಚರಿಸಲ್ಪಡುತ್ತವೆ.

ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀಯೋಗವನ್ನು ಪಡೆದ ದಿವಸ ಶ್ರೀಪ೦ಚಮೀ. ಅವನು ತಾರಕಾಸುರನ ಸಂಹಾರ ಮಾಡಿ ಕೃತಕೃತ್ಯನಾದ ದಿನ ಷಷ್ಠೀ. ಆದುದರಿಂದ ಅವೆರಡೂ ಸ್ಕಂದನಿಗೆ ಪ್ರಿಯವಾದ ಮಹಾತಿಥಿಗಳು ಎಂದು ಶ್ರೀಮನ್ಮಹಾಭಾರತವು ತಿಳಿಸುತ್ತದೆ. 
ಶ್ರೀಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಚ್ರೀ ಪಂಚಮೀ ಸ್ಮೃತಾ |
ಷಷ್ಟಾಂ ಕೃತಾರ್ಥೋs ಭೂದ್ಯಸ್ಮಾತ್ತಸ್ಮಾತ್ ಷಷ್ಠೀ ಮಹಾತಿಥಿಃ
||
(ವನಪರ್ವ ಅಧ್ಯಾಯ 229)

ಈ ಪರ್ವವನ್ನು ಯಾರು ಆಚರಿಸಬೇಕು?
ಸ್ಕಂದ, ಷಣ್ಮುಖ, ಕುಮಾರ, ಕಾರ್ತಿಕೇಯ, ಸುಬ್ರಹ್ಮಣ್ಯ ಮುಂತಾದ ನಾಮಧೇಯಗಳಿಂದ ಕರೆಯಲ್ಪಡುವ ಶ್ರೀಮಹಾದೇವತೆಯ ಪ್ರಸನ್ನತೆಯನ್ನು ವಿಶೇಷವಾಗಿ ಪಡೆಯುವ ಅಭಿಲಾಷೆಯುಳ್ಳವರೆಲ್ಲರೂ ಈ ಪರ್ವವನ್ನು ಆಚರಿಸಬಹುದು. ಸ್ಕಂದನು ನಾಲ್ಕು ಪುರುಷಾರ್ಥಗಳನ್ನೂ ಅನುಗ್ರಹಿಸಬಲ್ಲ ಪರಾದೇವತೆ. ಆದರೂ ಬ್ರಹ್ಮಜ್ಞಾನ, ಆಯುಸ್ಸು, ಆರೋಗ್ಯ,- ಅಪಸ್ಮಾರ, ಕುಷ್ಠಾದಿ ಮಹಾರೋಗಗಳ ಪರಿಹಾರ, ಭೂತಪೀಡಾಪರಿಹಾರ, ಸಂತಾನಸೌಭಾಗ್ಯ, ಪುಷ್ಟಿ, ತುಷ್ಟಿ, ಕೀರ್ತಿ, ಶತ್ರುಜಯ ಮತ್ತು ಸ್ಕಂದ ಸಾಲೋಕ್ಯಗಳನ್ನುವಿಶೇಷವಾಗಿ  ಕರುಣಿಸುವವನು ಈ ಕುಮಾರ ಕಾರ್ತಿಕೇಯಸ್ವಾಮಿ,
ಸ  ಪುಷ್ಟಿತುಷ್ಟೀ ಸಂಪ್ರಾಪ್ಯ ಸ್ಕಂದಸಾಲೋಕ್ಯಮಾಪ್ನುಯಾತ್
ಸರ್ವಪಾಪವಿನಿರ್ಮುಕ್ತೋ ಯಾತಿ ಬ್ರಹ್ಮ ಸನಾತನಮ್
ಆಯುಷ್ಮಾನ್‌ ಪುತ್ರಪೌತ್ರೈಶ್ಚ ಸ್ಕಂದ ಸಾಲೋಕ್ಯಮಾಪ್ನುಯಾತ್

(ವಾಲ್ಮೀಕಿ ರಾಮಾಯಣ || ಬಾಲ, 37-34)

ಅಪಸ್ಮಾರಕುಷ್ಠಕ್ಷಯಾರ್ಶ: ಪ್ರಮೇಹಜ್ವರೋನ್ಮಾದಗುಲ್ಮಾದಿರೋಗಾ ಮಹಾನ್ತಃ |
ಪಿಶಾಚಾಶ್ಚ ಸರ್ವೇ ಭವತ್ವತ್ರಭೂತಿಂ ವಿಲೋಕ್ಯ  ಕ್ಷಣಾತ್ತಾರಕಾರೇ ದ್ರವಂತೇ ||

(ಶ್ರೀ ಶಂಕರಾಚಾರ್ಯರ ಸುಬ್ರಹ್ಮಣ್ಯ ಭುಜಂಗ 15)

ಕುಮಾರಸ್ವಾಮಿ ಸುಬ್ರಹ್ಮಣ್ಯನು ಯಾರ ಮನೆದೇವರು ಅಥವಾ ಇಷ್ಟದೇವರು ಆಗಿದ್ದಾನೆಯೋ ಅವರು ಈ ಸಂದಭಷ್ಟಿ ಪರ್ವವನ್ನು ವಿಶೇಷವಾಗಿ ಆಚರಿಸುತ್ತಾರೆ. ಭಕ್ತಿಯೋಗಕ್ಕೆ ಸಂಬಂಧಪಟ್ಟ ದೇವತಾದರ್ಶನಗಳು ಆರು. ಅವುಗಳಲ್ಲಿ ಸ್ಕಾಂದ ಭಕ್ತಿದರ್ಶನವೂ ಒಂದು. ಅದನ್ನು ಅನುಸರಿಸುವ ಭಕ್ತರಿಗೆ ಇದು ಅತ್ಯಂತ ಶ್ರೇಷ್ಠವಾದ ಒಂದು ಪರ್ವದಿನವೆಂಬುದರಲ್ಲಿ ಸಂದೇಹವೇ ಇಲ್ಲ.

ಶೈವಂ ಚ ವೈಷ್ಣವಂ  ಶಾಕ್ತಂ ಸೌರಂ ಗಾಣಾಪತಂ ತಥಾ | 
ಸ್ಕಾಂದಂ ಚ ಭಕ್ತಿಮಾರ್ಗಸ್ಯ ದರ್ಶನಾನಿ ಷಡೇವ ಹಿ ॥ 

Skanda Sashti 2022 Champa Shashti 2022: Date, Time, Puja Rituals, Legends, And Significance

ಪರ್ವವನ್ನು ಹೇಗೆ ಆಚರಿಸಬೇಕು?
ಇವು ಈ ಹಿಂದೆ ಗಮನಿಸಿರುವಂತೆ ಸುಬ್ರಹ್ಮಣ್ಯನನ್ನು ಸುಬ್ಬರಾಯನ ಷಷ್ಠೀ ಮತ್ತು ಅದರ ಹಿಂದಿನ ದಿನ-ಎರಡೂ ದಿನಗಳಲ್ಲಿಯೂ ಪೂಜಿಸುವುದುಂಟು. ಅವನನ್ನು ನಾಗ (ಸರ್ಪ) ರೂಪದಲ್ಲಿ ಪೂಜಿಸುವುದೂ ಉಂಟು. ಹಾಗೆಯೇ ಬ್ರಹ್ಮಚಾರೀ ಬಾಲಸುಬ್ರಹ್ಮಣ್ಯ ಮತ್ತು ದೇವೀ ಸಮೇತನಾಗಿ ಅನೇಕ ಶಕ್ತಿವಜ್ರಾಂಕುಶಾದ್ಯಾಯುಧಗಳಿಂದ ಕೂಡಿರುವ ಷಣ್ಮುಖಾದಿಯುಕ್ತ ದಿವ್ಯ ಗೃಹಸ್ಥ -ಇತ್ಯಾದಿ ದೇವತಾಮೂರ್ತಿಗಳ ರೂಪದಲ್ಲಿ ಆರಾಧಿಸುವುದೂ ಉಂಟು.

ಇವರಲ್ಲಿ ಜ್ಞಾನಶಕ್ತಿ, ಸ್ಕಂದ, ಆಗ್ನಿಜಾತ ಸೌರಭೇಯ, ಗಾಂಗೇಯ, ಶರವಣೋದ್ಭವ, ಕಾರ್ತಿಕೇಯ, ಕುಮಾರ, ಷಣ್ಮುಖ, ತಾರಕಾರಿ, ಸೇನಾನೀ, ಗುಹ, ಬ್ರಹ್ಮಚಾರಿ, ದೇಶಿಕ, ಕ್ರೌಂಚಭೇದನ, ಶಿಖಿವಾಹನ, ಮತ್ತು ವೇಲಾಯುಧ ಎಂಬ ಹದಿನೇಳು ಸುಬ್ರಹ್ಮಣ್ಯಮೂರ್ತಿಭೇದಗಳನ್ನು ಶೈವಾಗಮಶೇಖರ ಗ್ರಂಥವು ಚಿತ್ರಿಸುತ್ತದೆ. (ಶ್ರೀ ಶಂಕರ ಭಗವತ್ಪಾದರು ಶೈವ, ವೈಷ್ಣವ, ಶಾಕ್ತ, ಸೌರ, ಗಾಣಾಪತ್ಯ ಮತ್ತು ಸ್ಕಾಂದ-ಎಂಬ ಈ ಆರು ದರ್ಶನಗಳನ್ನು ವೈದಿಕ ಭಕ್ತಿದರ್ಶನಗಳೆಂದು ಪುನರುದ್ಧಾರ ಮಾಡಿದರೆಂದು ಹೇಳುತ್ತಾರೆ.)

ನಾಗದೇವತಾರೂಪಿಯಾದ ಸುಬ್ರಹ್ಮಣ್ಯನನ್ನು ಪಂಚಮಿಯ ದಿನ ಅಥವಾ ಷಷ್ಠೀಯ ದಿನ ಅಥವಾ ಎರಡೂ ದಿನಗಳಲ್ಲಿಯೂ ಆರಾಧಿಸುವುದುಂಟು, ಹಾವಿನ ಹುತ್ತದಲ್ಲಿ ಅಥವಾ ಅಶ್ವತ್ಥ ಕಟ್ಟೆಯಲ್ಲಿರುವ ಸರ್ಪಾಕಾರ ವಿಗ್ರಹದಲ್ಲಿ ಸ್ವಾಮಿ ಸುಬ್ರಹ್ಮಣ್ಯನನ್ನು ಆವಾಹನೆ ಮಾಡಿ ಅವನಿಗೆ ಹಾಲಿನಿಂದ ಅಭಿಷೇಕ ಮಾಡಿ ಪಾಯಸಾದಿಗಳನ್ನು ನಿವೇದನ ಮಾಡಿ ಅಂದು ಏಕಭುಕ್ತ ಅಥವಾ ಉಪವಾಸವ್ರತವನ್ನು ಆಚರಿಸುತ್ತಾರೆ.

ಈ ಕ್ಷೀರಾಭಿಷೇಕವನ್ನು ಕನ್ನಡದಲ್ಲಿ ‘ತನಿ ಎರೆಯುವುದು’ ಎಂದು ಕರೆಯುತ್ತಾರೆ. ಷಷ್ಠೀ  ಪರ್ವದಂದು ಮನೆಯಲ್ಲಿ ಸರ್ಪರೂಪದ ವಿಗ್ರಹದಲ್ಲಿ ಅಭಿಷೇಕಾದಿಗಳಿಂದ ಕುಮಾರಸ್ವಾಮಿಯನ್ನು ಆರಾಧಿಸುತ್ತಾರೆ. ನಾಗದೇವತೆಗೆ ತನೀ ಎರೆದ ದಿವಸದಲ್ಲಿ ಬೇಯಿಸಿದ ಪದಾರ್ಥಗಳನ್ನೂ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನೂ, ಉಪ್ಪು ಹಾಕಿದ ಪದಾರ್ಥಗಳನ್ನೂ ನೈವೇದ್ಯವಾಗಿ ಸಮರ್ಪಿಸುವುದಿಲ್ಲ.

ಅವುಗಳನ್ನು ಪ್ರಸಾದವಾಗಿ ಸ್ವೀಕರಿಸುವುದೂ ಇಲ್ಲ. ಅಗ್ನಿಯ ಶಾಖದ ಸ್ಪರ್ಶವನ್ನೇ ನಾಗಪ್ಪನು ಸಹಿಸುವುದಿಲ್ಲ. ಅವನಿಗೆ ತಂಪಾದ ಮತ್ತು ಸಿಹಿಯಾದ ನೈವೇದ್ಯದಿಂದಲೇ ಸಂತೋಷವಾಗುತ್ತದೆ. ಪಂಚಮೀ ಮತ್ತು ಷಷ್ಟಿ ಎರಡು ದಿವಸಗಳಲ್ಲಿಯೂ ಬ್ರಹ್ಮಚರ್ಯವೇ ಮುಂತಾದ ವ್ರತ ನಿಯಮದಲ್ಲಿದ್ದು ಕುಮಾರಸ್ವಾಮಿಯನ್ನು ಪೂಜಿಸಬೇಕು. ದೇವರ ಪೂಜೆಯು ತು೦ಬಾ ಮಡಿವಂತಿಕೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಬಗೆಯ ಅಶುಚಿಯ ಸ್ಪರ್ಶವನ್ನೂ ಸ್ವಾಮಿಯು ಸೈರಿಸುವುದಿಲ್ಲ. ಷಷ್ಠೀಯಂದು ಬೆಳ್ಳಿಯ ವಿಗ್ರಹದಲ್ಲಿ ಕುಮಾರಸ್ವಾಮಿಯನ್ನು ಆವಾಹನೆ ಮಾಡಿ

ಸೇನಾವಿದಾರಕ ಸ್ಕಂದ  ಮಹಾಸೇನ ಮಹಾಬಲ|
ರುದ್ರೋಮಾಗ್ನಿಜ ಷಡ್ವಕ್ತ್ರ ಗಂಗಾಗರ್ಭ ನಮೋಸ್ತು ತೇ ||

ಎಂದು ಪ್ರಾರ್ಥಿಸಿ ಪೂಜಿಸಿ ಆ ವಿಗ್ರಹವನ್ನು ಸತ್ಪಾತ್ರನಿಗೆ ದಾನ ಮಾಡಬೇಕು ಎಂದು ದಿವೋದಾಸೀಯ ಗ್ರಂಥವು ಹೇಳುತ್ತದೆ. 

ಗಣೇಶನ ಪೂಜಾಕಲ್ಪದಲ್ಲಿ ‘ಇಪ್ಪತ್ತೊಂದು’ ಎಂಬ ಸಂಖ್ಯೆಗೆ ವಿಶೇಷ ಇರುವಂತೆ ಷಣ್ಮುಖಸ್ವಾಮಿಯ ಪೂಜಾಕಲ್ಪದಲ್ಲಿ ‘ಆರು’ ಎಂಬ ಸಂಖ್ಯೆಗೆ ವಿಶೇಷಪ್ರಾಧಾನ್ಯವಿದೆ. ಅವನನ್ನು ಪೂಜಿಸುವ ತಿಥಿಯು ಷಷ್ಠೀ, ಅವನ ಮುಖಗಳು ಆರು, ಶಕ್ತಿಗಳು ಆರು. ಅವುಗಳಲ್ಲಿ ಮುಖ್ಯವಾದ ಶಕ್ತಿಗೆ ”ಷಷ್ಠೀ’ ಎಂದೇ ಹೆಸರು. ಅವನಿಗೆ ಪ್ರಿಯವಾದ ನಾದಕ್ಕೆ ಷಷ್ಠೀನಾದ ಎಂದು ಹೆಸರು. ರಾಗಕ್ಕೆ ಷಣ್ಮುಖಪ್ರಿಯ ಎಂದು ಹೆಸರು.

ಅವನ ಪೂಜೆಗೆ ಬಳಸಬೇಕಾದ ಪತ್ರ, ಪುಷ್ಪ ಮತ್ತು ಅತೈಲಪಕ್ವವಾದ ‘ಆವಿಯಲ್ಲಿ” ಬೇಯಿಸಿದ ಸಿಹಿಗಡುಬಿನ ನೈವೇದ್ಯ ಪದಾರ್ಥಗಳ ಸಂಖ್ಯೆಯು ಆರು, ದೇವರ ಪೂಜೆಯ ನಂತರ ಆರು ಮ೦ದಿ (ಅಥವಾ ಅವರು ಸಿಕ್ಕದಿದ್ದರೆ, ಒಬ್ಬ) ಬ್ರಹ್ಮಚಾರಿಗಳನ್ನು ಬಾಲಸುಬ್ರಹ್ಮಣ್ಯಸ್ವಾಮಿ ಭಾವದಿಂದ ಪೂಜಿಸಿ ಭೋಜನ, ವಸ್ತ್ರ ದಕ್ಷಿಣಾದಿಗಳಿಂದ ಸಂತೋಷಪಡಿಸಬೇಕು. ಅಂದು ಹಾಗೆ ಪೂಜಿಸಲ್ಪಟ್ಟ ಬ್ರಹ್ಮಚಾರಿಗಳು ಏಕಭುಕ್ತಮಾಡಬೇಕು. ಈ ಬ್ರಹ್ಮಚಾರಿ ಪೂಜಾ ನಂತರ ಪೂಜಾವ್ರತಿಗಳು ಅಂದು ಉಪವಾಸವಿದ್ದು ಷಷ್ಠೀ ತಿಥಿಯು ಮುಗಿದ ನಂತರ ಪಾರಣೆ ಮಾಡಬೇಕು. ಅಥವಾ ಅಂದೇ ಏಕಭುಕ್ತವಾಗಿ ಪ್ರಸಾದವನ್ನು ಸ್ವೀಕರಿಸಬೇಕು. ಕುಮಾರನ ಪೂಜಾಕಲ್ಪಗಳಲ್ಲಿ ಪ್ರಭೇದಗಳಿದ್ದರೂ ಮೇಲ್ಕಂಡ ವಿವರಣೆಯು ಸಾಮಾನ್ಯವಾಗಿ ಎಲ್ಲ ಕಲ್ಪಗಳಲ್ಲಿಯೂ ಕಂಡುಬರುತ್ತದೆ.

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | ನಾಗರ ಪಂಚಮಿ | ಇಂದು ನಾಗದೇವರ ಪೂಜೆ ಮಾಡುವುದೇಕೆ?

Exit mobile version