Site icon Vistara News

Solar Eclipse 2022 | ಸೂರ್ಯ ಗ್ರಹಣ ಏಕೆ ಸಂಭವಿಸುತ್ತಿದೆ? ಇದನ್ನು ನೋಡುವುದು ಹೇಗೆ?

Solar Eclipse 2022

ಅಕ್ಟೋಬರ್‌ 25ರ ಮಂಗಳವಾರದಂದು ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸಂಭವಿಸಲಿದೆ. ಇದು ಪಾರ್ಶ್ವ ಸೂರ್ಯಗ್ರಹಣವಾಗಿದೆ. ಈ ಗ್ರಹಣವು ಬಹುತೇಕವಾಗಿ ಭಾರತದ ಎಲ್ಲ ಪ್ರದೇಶಗಳಲ್ಲೂ ಗೋಚರಿಸಲಿದೆ. ಆದರೆ ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಣಿಪುರ, ಮಿಜೋರಂ, ನಾಗಾಲ್ಯಾಂಡ್ ಗೋಚರಿಸುವುದಿಲ್ಲ. ನಮ್ಮ ದೇಶದಲ್ಲಿ ಈ ಗ್ರಹಣದ ಸ್ಪರ್ಶ ಮಾತ್ರ ಕಾಣಿಸಲಿದೆ.

ಬೆಂಗಳೂರಿನಲ್ಲಿ ಸಂಜೆ 5. 12 ರಿಂದ 5.55 ವರೆಗೆ ಗೋಚರಿಸಲಿದೆ. ಸೂರ್ಯಾಸ್ತ ಸಂಜೆ 5.55 ಕ್ಕೆ ಸಂಭವಿಸಲಿದೆ (ಆಯಾ ಪ್ರದೇಶದ ಸೂರ್ಯಾಸ್ತದ ಸಮಯವನ್ನು ಪಂಚಾಂಗದ ಮೂಲಕ ತಿಳಿದುಕೊಳ್ಳಿ). ಪಶ್ಚಿಮದ ದಿಕ್ಕಿನಲ್ಲಿ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಆದರೆ ಸೂರ್ಯಗ್ರಹಣವನ್ನು ಬರೀ ಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿ. ಹಾಗೆಯೇ ಟೆಲಿಸ್ಕೋಪ್, ದುರ್ಬೀನ್, ಎಕ್ಸ್‌ರೇ ಹಾಳೆ ಹಾಗೂ ಕ್ಯಾಮೆರಾಗಳಿಂದಲೂ ಸೂರ್ಯ ಗ್ರಹಣ ನೋಡುವುದೂ ಕಣ್ಣಿಗೆ ಹಾನಿಕಾರಕ.

ವಿಶೇಷವಾದ ಗ್ರಹಣ-ವೀಕ್ಷಣಾ ಕನ್ನಡಕಗಳಿಂದ ಮಾತ್ರ ಈ ಗ್ರಹಣ ನೋಡಬಹುದು. ಸುರಕ್ಷಿತ ಕನ್ನಡಕಗಳು ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದ ಪುಸ್ತಕ ಮಳಿಗೆಯಲ್ಲಿ 30 ರೂ.ಗಳಿಗೆ ಲಭ್ಯವಿದೆ. ದೂರದರ್ಶಕವನ್ನು ಬಳಸುವವರು ಪರದೆ ಮೇಲೆ ಸೂರ್ಯನ ಬಿಂಬ ಮೂಡುವಂತೆ ವ್ಯವಸ್ಥೆಯನ್ನು ಮಾಡಿ ವೀಕ್ಷಿಸುವುದು ಹೆಚ್ಚು ಸುರಕ್ಷಿತ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಏನಿದು ಗ್ರಹಣ? ಹೇಗೆ ಸಂಭವಿಸುತ್ತದೆ?
ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ ಕಾಲವನ್ನು ಸೂರ್ಯ ಗ್ರಹಣ ಎನ್ನಲಾಗುತ್ತದೆ. ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯ ಹಾದು ಹೋದರೂ ಮೂರು ಆಕಾಶಕಾಯಗಳು ಒಂದೇ ಸರಳರೇಖೆಯಲ್ಲಿರುವುದಿಲ್ಲ.
ಹಾಗಾಗಿ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭವಿಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ ಸೂರ್ಯ ಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯನಿಗೆ ಅಡ್ಡ ಬಂದು, ಸೂರ್ಯನ ಒಂದು ಭಾಗವು ಮಾತ್ರ ಗೋಚರಿಸಿದರೆ ಪಾರ್ಶ್ವ ಸೂರ್ಯಗ್ರಹಣ ಆಗುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ ಖಗ್ರಾಸ ಸೂರ್ಯಗ್ರಹಣ ವಾಗಲಿದೆ. ಮಂಗಳವಾರ ಸಂಭವಿಸುವ ಸೂರ್ಯಗ್ರಹಣವು ಪಾರ್ಶ್ವ ಸೂರ್ಯ ಗ್ರಹಣವಾಗಿರುತ್ತದೆ.

ಈ ಗ್ರಹಣವು ನಮ್ಮ ದೇಶದ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ 55. 74 ರಷ್ಟು , ಭಾರತದ ಉತ್ತರ ತುದಿಯಲ್ಲಿರುವ ಲಡಾಕ್ ನ ಲೇಹ್ ಪ್ರದೇಶದಲ್ಲಿ ಶೇ. 54. 7 ರಷ್ಟು ಗೋಚರಿಸಲಿದೆ. ಅಲ್ಲಿ ಸೂರ್ಯಗ್ರಹಣ ಸಂಜೆ 4.16 ರಿಂದ 5.34 ರ ವರೆಗೆ ಗೋಚರಿಸಲಿದೆ. ಬೆಂಗಳೂರಿನಲ್ಲಿ ಇದು ಶೇಕಡ 10.02ರಷ್ಟು ಮಾತ್ರ ಗೋಚರವಾಗಲಿದೆ. ಮೈಸೂರಿನಲ್ಲಿ ಶೇ. 9. 16 ರಷ್ಟು , ಬಳ್ಳಾರಿಯಲ್ಲಿ ಶೇಕಡ 14. 82ರಷ್ಟು , ಆಗುಂಬೆಯಲ್ಲಿ ಶೇಕಡ 12. 11 ರಷ್ಟು ಗೋಚರಿಸಲಿದೆ.

ಏನಿದು ಗ್ರಸ್ತಾಸ್ತವಾಗಿ ಗೋಚರ?
ಯಾವುದೇ ಗ್ರಹಣವು ಸಂಭವಿಸಿ, ಆ ದಿನವೇ ಮೋಕ್ಷ ಕಾಣದಿದ್ದರೆ ಅದನ್ನು “ಗ್ರಸ್ತಾಸ್ತವಾಗಿʼʼ ಗೋಚರ ಎಂದು ಕರೆಯಲಾಗುತ್ತದೆ. ಈ ಸೂರ್ಯ ಗ್ರಹಣದ ಸ್ಪರ್ಶ ಮಾತ್ರ ಭಾರತದಲ್ಲಿ ಗೋಚರಿಸಲಿದ್ದು, ಮೋಕ್ಷ ಕಾಣಿಸುವುದಿಲ್ಲ. ಆಗಲೇ ಸೂರ್ಯಾಸ್ತವಾಗಿರುತ್ತದೆ. ಹೀಗಾಗಿ ಕೇತುಗ್ರಸ್ತ ಸೂರ್ಯ ಗ್ರಹಹಣವನ್ನು “ಗ್ರಸ್ತಾಸ್ತʼʼ ಗ್ರಹಣ ಎಂದು ಕರೆಯಲಾಗಿದೆ.

ಇದನ್ನೂ ಓದಿ | Solar Eclipse 2022 | ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಕೇತು ನುಂಗುತ್ತಾನಾ? ಈ ಪುರಾಣ ಕಥೆ ಓದಿ

Exit mobile version