Site icon Vistara News

Solar Eclipse 2022 | ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಕೇತು ನುಂಗುತ್ತಾನಾ? ಈ ಪುರಾಣ ಕಥೆ ಓದಿ

Solar Eclipse 2022

ವಿದ್ವಾನ್ ನವೀನ ಶಾಸ್ತ್ರಿ ರಾ. ಪುರಾಣಿಕ
ಜ್ಯೋತಿಷ ಶಾಸ್ತ್ರದ ಪ್ರಕಾರ ರಾಶಿಚಕ್ರ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗುತ್ತದೆ. ಅಕ್ಟೋಬರ್‌ 25 ರಂದು ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸಂಭವಿಸಲಿದೆ. ರಾಹು-ಕೇತುಗಳು ಯಾರು? ಇವರೇಕೆ ಸೂರ್ಯ-ಚಂದ್ರ ಗ್ರಹಣಕ್ಕೆ ಕಾರಣರಾಗುತ್ತಾರೆ ಎಂಬ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ.

ರಾಹು-ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ
ವಿರುದ್ಧ ದಿಕ್ಕಿನಲ್ಲಿರುವ ಎರಡು ಕಪ್ಪು ಬಿಂದುಗಳು. ಭೂಮಿಗೆ ಉತ್ತರ ಧ್ರುವ ದಕ್ಷಿಣದ್ರುವಗಳಿರುವಂತೆ. ಆದ್ದರಿಂದಲೇ ರಾಶಿಚಕ್ರದಲ್ಲಿ ರಾಹು, ಕೇತುಗಳ ಮಧ್ಯೆ ಸರಿಯಾಗಿ ಆರು ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಳನೇ ಮನೆಯಲ್ಲಿ ಕೇತುವಿರುತ್ತಾನೆ.

ಉದಾಹರಣೆಗೆ ರಾಹು ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ವೃಷಭಕ್ಕೆ ಚಲಿಸಿದ ಕ್ಷಣದಲ್ಲಿಯೇ ಕೇತು ವೃಶ್ಚಿಕಕ್ಕೆ ಚಲಿಸಿರುತ್ತಾನೆ. ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ ಹಿಂತುದಿ ಆರರಲ್ಲಿರಲೇಬೇಕು. ಮುಂಬದಿ ಒಂದಕ್ಕೆ ಸಾಗಿದ ಕ್ಷಣದಲ್ಲಿಯೇ ಹಿಂತುದಿ ಏಳಕ್ಕೆ ವಾಲುತ್ತದೆ. ಹಾಗೆಯೇ ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗುತ್ತದೆ.

ರಾಹು-ಕೇತು ಯಾರು ?

ಮೂಲತಃ: ರಾಹುಕೇತು ಮೂಲದಲ್ಲಿ ಸ್ವರ್ಭಾನು ಎಂಬ ದೈತ್ಯ. ದಕ್ಷನ ಮಗಳಾದ ಸಿಂಹಿಕೆಯ ಮಗ. ಸಮುದ್ರಮಥನ ವೇಳೆ ಬಂದ ಅಮೃತವನ್ನು ಮೋಹಿನಿ ರೂಪದಲ್ಲಿ ಶ್ರೀಹರಿಯು ಹಂಚುವಾಗ ದೇವತೆಗಳು ಒಂದು ಸಾಲು ಮತ್ತು ದೈತ್ಯರು ಒಂದು ಸಾಲಿನಲ್ಲಿ ಕುಳ್ಳಿರಿಸಿ ಕಣ್ಣು ಮುಚ್ಚಿಕೊಂಡು ಕೂಡುವಂತೆ ಹೇಳುತ್ತಾನೆ.

ರಾಕ್ಷಸರಿಗೆ ಅಮೃತ ಪಡೆಯಲು ಯೋಗ್ಯತೆ ಇಲ್ಲದ್ದರಿಂದ ವಿಷ್ಣು ಮೋಹಿನಿ ರೂಪ ತಾಳಿ ದೇವತೆಗಳಿಗೆ ಮಾತ್ರ ಅಮೃತ ನೀಡುತ್ತಿರುತ್ತಾನೆ. ದೇವತೆಗಳಿಗೆ ಅಮೃತ ನೀಡಿದರೆ ದೈತ್ಯರಿಗೆ ಬರೀ ಗೆಜ್ಜೆ ಸಪ್ಪಳ ಕೇಳಿಸುತ್ತದೆ. ವಿಷ್ಣುವಿನ ಮೋಹಿನಿ ರೂಪ ಮತ್ತು ಆತ ರಾಕ್ಷಸರಿಗೆ ಮಾಡುತ್ತಿರುವ ವಂಚನೆ ಸ್ವರ್ಭಾನುವಿಗೆ ಗೊತ್ತಾಗಿ ಅವನು ದೇವತೆಗಳ ಸಾಲಿಗೆ ಹೋಗಿ ನಿಂತು ಮೋಹಿನಿ ಕೈಯಿಂದ ಅಮೃತ ಕುಡಿಯುತ್ತಾನೆ.

ಕೇತು

ಇದನ್ನು ಸೂರ್ಯ ಮತ್ತು ಚಂದ್ರರು ಗಮನಿಸುತ್ತಾರೆ. ಕೂಡಲೇ ಅವರು ವಿಷ್ಣುವಿನ ಗಮನಕ್ಕೆ ತರುತ್ತಾರೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರ್ಭಾನುವಿನ ತಲೆ ಕಡಿಯುತ್ತಾನೆ. ಆದರೆ, ಅಷ್ಟರಲ್ಲೇ ಅವನು ಅಮೃತ ಪಾನ ಮಾಡಿರುತ್ತಾನೆ. ರುಂಡ ಮತ್ತು ಮುಂಡ ಬೇರ್ಪಡುತ್ತದೆ ಅಷ್ಟೇ. ರುಂಡವನ್ನ ರಾಹು ಎಂದೂ ಮುಂಡವನ್ನು ಕೇತು ಎಂದೂ ಕರೆಯಲಾಗುತ್ತದೆ. ಸ್ವರ್ಭಾನು ದೈತ್ಯನಾದರೂ ತನ್ನ ಬಾಯಿಗೆ ಅಮೃತ ಬೀಳಲೆಂದು ಶಿವನಲ್ಲಿ ತಪಗೈದಿರುತ್ತಾನೆ. ಅದೇ ರೀತಿ ಇಲ್ಲಿ ಅವನ ಬಾಯಿಗೆ ಅಮೃತ ಬಿದ್ದಿರುತ್ತದೆ, ಆದರೆ ಕಂಠದಿಂದ ಕೆಳಗೆ ಬೀಳುವ ಮೊದಲೇ ಶಿರಚ್ಛೇದ ಆಗಿರುತ್ತದೆ.‌

ಅವನ ಬಾಯಿಯಲ್ಲಿ ಅಮೃತ ಬೀಳುವ ವರವೂ ಪೂರ್ಣವಾಯಿತು‌. ಅಮೃತ ಬಿದ್ದಿದ್ದರಿಂದ ಮುಖದ ಭಾಗ ರಾಹುವಾಗಿಯೂ, ಕಂಠದ ಕೆಳಗಿನ ಭಾಗವು ಕೇತುವಾಗಿಯೂ ನವಗ್ರಹಗಳಲ್ಲಿ ಸೇರಿ ಪೂಜೆಗೊಳ್ಳುತ್ತಾರೆ. ಸೂರ್ಯ ಚಂದ್ರರು ವಿಷ್ಣುವಿಗೆ ಹೇಳಿ ತಮ್ಮನ್ನು ಶಿಕ್ಷಿಸಿದ್ದರಿಂದ ಅವರು ಸೂರ್ಯ ಚಂದ್ರರನ್ನು ಆಗಾಗ್ಗೆ ಕಾಡುತ್ತಾರೆ. ಅದೇ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎಂದು ಪುರಾಣ ಕಥೆಗಳು ಹೇಳುತ್ತವೆ.

ವೈಜ್ಞಾನಿಕವಾಗಿ ನೋಡಿದಾಗ ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಮರೆಯಾದರೆ ಅದು ಸೂರ್ಯಗ್ರಹಣವೆನಿಸುತ್ತದೆ. ವಾಸ್ತವವಾಗಿ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ. ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು… ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು…ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡವಿರುವ ಭಾಗ ಒಂದು ಬಿಂದು, ಮುಂಡವಿರುವ ಭಾಗ ಇನ್ನೊಂದು ಬಿಂದುವಾಗಿದೆ.

ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿಸಿ (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ. ರಾಹು ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ “ಸೂರ್ಯಗ್ರಹಣ”ವಾಗುತ್ತದೆ. ಅದು ಅಮಾವಾಸ್ಯೆ ದಿನದಂದು ನಡೆಯುತ್ತದೆ.

ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ “ಚಂದ್ರಗ್ರಹಣ”ವಾಗುತ್ತದೆ . ಇದನ್ನೆ ಗ್ರಹಣಗಳ ಸಂದರ್ಭದಲ್ಲಿ ಸೂರ್ಯ ಅಥವಾ ಚಂದ್ರರನ್ನು ರಾಹು ಕೇತುಗಳು ನುಂಗುತ್ತಾರೆ ಎಂದು ಹೇಳಲಾಗುತ್ತದೆ.

ಲೇಖಕರು ಖ್ಯಾತ ಜ್ಯೋತಿಷಿಗಳು ಹಾಗೂ ಸಂಸ್ಕೃತ ಉಪನ್ಯಾಸಕರು 

ಇದನ್ನೂ ಓದಿ | Solar Eclipse 2022 | ದೀಪಾವಳಿ ಹಬ್ಬದಲ್ಲಿಯೇ ಸೂರ್ಯ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?

Exit mobile version