Site icon Vistara News

Solar Eclipse : ಮಹಾಲಯ ಅಮಾವಾಸ್ಯೆ ದಿನ ಸೂರ್ಯಗ್ರಹಣ; ಭಾರತಕ್ಕಿದೆಯೇ ಎಫೆಕ್ಟ್?‌

solar eclipse 2023

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಗ್ರಹಣಕ್ಕೆ ವಿಶೇಷವಾದ ಮಹತ್ವವಿದೆ. ಆ ಬಾರಿ ಇದೇ ಅಕ್ಟೋಬರ್ 14ರಂದು ಸೂರ್ಯ ಗ್ರಹಣ (Solar Eclipse) ಸಂಭವಿಸಲಿದೆ. ಅಲ್ಲದೆ, ಅಂದೇ ಮಹಾಲಯ ಅಮಾವಾಸ್ಯೆ ಸಹ ಇದೆ. ಭಾರತದ ಕಾಲಮಾನಕ್ಕೆ ತಕ್ಕಂತೆ ನೋಡುವುದಾದರೆ ಸೂರ್ಯಗ್ರಹಣವು ರಾತ್ರಿ 8:34ಕ್ಕೆ ಆರಂಭವಾಗಿ ಮಧ್ಯರಾತ್ರಿ 2:25ಕ್ಕೆ ಅಂತ್ಯವಾಗಲಿದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯರು ನಿರಾಳರಾಗಿರಬಹುದು.

ಹೀಗಾಗಿ ಅಂದು ಭಾರತದಲ್ಲಿ ಯಾವುದೇ ರೀತಿಯಾದಂತಹ ಸೂತಕದ ಆಚರಣೆ ಸಹ ಇರುವುದಿಲ್ಲ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಇದೇ ದಿನ ಅಂದರೆ ಅಕ್ಟೋಬರ್ 14ರ ಶನಿವಾರ ಪಿತೃ ಪಕ್ಷದ (Pitru Paksha) ಕೊನೇ ದಿನವಾಗಿದೆ. ಜತೆಗೆ ಮಹಾಲಯ ಅಮಾವಾಸ್ಯೆಯೂ (Mahalaya Amavasya) ಇದ್ದು, ಈ ಸಂದರ್ಭದಲ್ಲಿ ಗ್ರಹಣ ಸಂಭವಿಸುತ್ತಿರುವುದು ವಿಶೇಷವೆಂದೇ ಹೇಳಲಾಗುತ್ತದೆ. ಇದರ ಜತೆ ಜತೆಗೆ ಭಾರತದಲ್ಲಿ ಇದರ ಪರಿಣಾಮ ಇಲ್ಲದೇ ಇರುವುದು ನೆಮ್ಮದಿಗೆ ಕಾರಣವಾಗಿದೆ. ಇನ್ನು ಅಕ್ಟೋಬರ್ 15ರಿಂದ ನವರಾತ್ರಿ ಆರಂಭವಾಗುತ್ತಿದೆ.

ಗ್ರಹಣ ಗೋಚಾರ ಎಲ್ಲೆಲ್ಲಿದೆ?

ಸೂರ್ಯ ಗ್ರಹಣವು ಟೆಕ್ಸಾಸ್‌ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲಿ ಇತ್ಯಾದಿ ದೇಶಗಳಲ್ಲಿ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಲಿದೆ. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಲಿದೆ.

ಒಂದು ವೇಳೆ ಭಾರತದಲ್ಲಿ ಗ್ರಹಣ ಗೋಚಾರವಾಗಿದ್ದರೆ ಕೆಲವೊಂದಿಷ್ಟು ಆಚರಣೆಯನ್ನು ಮಾಡಲೇಬೇಕಾಗುತ್ತದೆ. ಅಂದರೆ, ಭಾರತ ಎಂದಲ್ಲ ಎಲ್ಲೆಲ್ಲಿ ಗೋಚಾರ ಆಗಲಿದೆಯೋ ಅಲ್ಲೆಲ್ಲ ಕಡೆ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ ಎಂದು ಹೇಳಲಾಗಿದೆ.

ಗ್ರಹಣದ ಸೂತಕ ಇದ್ದರೆ ಏನು ಮಾಡಬೇಕು? ಮಾಡಬಾರದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಕಾಲದಲ್ಲಿ ವಸ್ತುಗಳೆಲ್ಲವಕ್ಕೂ ಗ್ರಹಣದ ಪ್ರಭಾವ ಉಂಟಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗಿದೆ. ಭಾರತದಲ್ಲಿ ಈ ಸೂರ್ಯ ಗ್ರಹಣ ಗೋಚಾರ ಆಗದೇ ಇರುವುದರಿಂದ ಸೂತಕ ಕಾಲವನ್ನು ಇಲ್ಲಿ ಆಚರಿಸುವ ಅಗತ್ಯ ಇಲ್ಲ. ಆದರೆ, ಗ್ರಹಣವಂತೂ ಸಂಭವಿಸುವುದರಿಂದ ಆ ಸಮಯದಲ್ಲಿ ಕೆಲವು ಜಾಗ್ರತೆಗಳನ್ನು ವಹಿಸಿಕೊಳ್ಳಬೇಕು.

ಧರ್ಮ ಶಾಸ್ತ್ರದ ಅನುಸಾರ ಗ್ರಹಣದ ವೇಳೆ ಇವುಗಳನ್ನು ಮಾಡಬಾರದು!

ಗ್ರಹಣದ ಸಂದರ್ಭದಲ್ಲಿ ಮಲಗಬಾರದು. ಇದಲ್ಲದೆ, ಹೊಲಿಗೆ ಮಾಡುವುದು (ಅಂದರೆ ಸೂಜಿ ದಾರ ಬಳಸಿ ಹೊಲಿಯುವುದು), ಹೊರಗೆ ಸಂಚರಿಸುವುದು ನಿಷಿದ್ಧ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹೊಸ ಕಾರ್ಯಕ್ಕೆ ಚಾಲನೆ ಚಾಲನೆ ನೀಡುವುದಿಲ್ಲ

ಹಿಂದು ಧರ್ಮದ ಪ್ರಕಾರ ಗ್ರಹಣದ ವೇಳೆ ಹೊಸ ಕಾರ್ಯವನ್ನು ಇಲ್ಲವೇ ಶುಭ ಕಾರ್ಯವನ್ನು ಇಟ್ಟುಕೊಳ್ಳುವುದಿಲ್ಲ. ಆ ವೇಳೆ ನಕಾರಾತ್ಮಕ ಶಕ್ತಿ (Negative energy) ಹೆಚ್ಚಿಗೆ ಇರುವುದರಿಂದ ಇಂಥವುಗಳನ್ನು ಮಾಡಬಾರದು ಎಂದು ಶಾಸ್ತ್ರದ ಮುಖೇನ ಹೇಳಲಾಗಿದೆ. ಇನ್ನು ಗ್ರಹಣ ಹಿಡಿದಿರುವಾಗ ಉಗುರು ಕತ್ತರಿಸುವುದು, ತಲೆ ಬಾಚುವುದದನ್ನು ಸಹ ಮಾಡಬಾರದು.

ಆಹಾರ ಸೇವನೆಗೂ ಇದೆ ನಿಷೇಧ

ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ನಿಷೇಧಿಸಲಾಗಿದೆ. ಏಕೆಂದರೆ ಗ್ರಹಣದ ವೇಳೆ ನಕಾರಾತ್ಮಕ ವಿಕಿರಣಗಳು ಉಂಟಾಗುವುದರಿಂದ ಅವುಗಳ ಪ್ರಭಾವಕ್ಕೊಳಪಟ್ಟ ಆಹಾರ ಸೇವನೆ ಮಾಡುವುದರಿಂದ ನಕಾರಾತ್ಮಕ ಪ್ರಭಾವ ಅಂಥವರ ಮೇಲಾಗುತ್ತದೆ. ಒಂದೊಮ್ಮೆ ಸಿದ್ಧಮಾಡಿದ ಆಹಾರವಿದ್ದರೂ ಅದನ್ನು ಗ್ರಹಣದ ನಂತರ ಸೇವಿಸಬಾರದು ಎಂದು ಹೇಳಲಾಗಿದೆ.

ಗರ್ಭಿಣಿಯರಿದ್ದರೆ ಏನು ಮಾಡಬೇಕು?

ಗ್ರಹಣದ ವೇಳೆ ಗರ್ಭಿಣಿಯರಿಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವರು ಆ ವೇಳೆ ಹರಿತ ವಸ್ತುಗಳಾದ ಚಾಕು, ಚೂರಿ, ಕತ್ತಿ ಮುಂತಾದವುಗಳನ್ನು ಬಳಸಕೂಡದು. ಇದರಿಂದ ಗರ್ಭದಲ್ಲಿರುವ ಶಿಶುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಈ ವೇಳೆ ದೇವರ ಸ್ತೋತ್ರ ಪಠಣ, ಧ್ಯಾನ, ಭಜನೆ ಇತ್ಯಾದಿಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಮುಂದಿನ ʻರಿಂಗ್ ಆಫ್ ಫೈರ್ʼ ಯಾವಾಗ?

ಈ ಗ್ರಹಣ ಸಂಭವಿಸಿದ ನಂತರ ಮುಂದಿನ ಈ ಸೂರ್ಯ ಗ್ರಹಣ ಅಮೆರಿಕದಲ್ಲಿ ಜೂನ್ 21, 2039ಕ್ಕೆ ಸಂಭವಿಸಲಿದೆ. ‌ರಿಂಗ್ ಆಫ್ ಫೈರ್ ಎಂಬ ಈ ಗ್ರಹಣವನ್ನು ಅಮೆರಿಕದಲ್ಲಿ ನೋಡಲು ಇನ್ನೂ 15 ವರ್ಷ ಕಾಯಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತ ಜನರಿಗೆ ಯಾತರ ಭಯವೂ ಇಲ್ಲ

ಇದೇ ತಿಂಗಳು ಇದೆ ಚಂದ್ರಗ್ರಹಣ

ಇದೇ ಅಕ್ಟೋಬರ್‌ 28ರಂದು ಚಂದ್ರ ಗ್ರಹಣ ಇದೆ. ಅಂದರೆ, ಹಿಂದು ಧರ್ಮದ ಅನುಸಾರ ಅ. 28ಕ್ಕೆ ಚಂದ್ರ ಗ್ರಹಣ ಇದೆ ಎಂದು ಪಂಚಾಂಗಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಹಿಂದು ಆಚರಣೆ ಪ್ರಕಾರ ಮುಂಜಾನೆ 6 ಗಂಟೆಯಿಂದ ಮರು ದಿನ ಮುಂಜಾನೆ 6 ಗಂಟೆವರೆಗೆ ಒಂದು ದಿನ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಈ ಬಾರಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28ರಂದು ಮಧ್ಯ ರಾತ್ರಿ ಸಂಭವಿಸುತ್ತದೆ. ಚಂದ್ರನು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 1.06 ಮತ್ತು 2.23ರ ನಡುವೆ ಭೂಮಿಯ ನೆರಳಿನ ಮೂಲಕ ಹಾದುಹೋಗಲಿದ್ದು, ಚಂದ್ರಗ್ರಹಣ ಸಂಭವಿಸಲಿದೆ. ಇಲ್ಲಿ ರಾತ್ರಿ 1.06ಕ್ಕೆ ಬರುವುದರಿಂದ ಮುಂದಿನ ದಿನದ ಲೆಕ್ಕವನ್ನು ಪಡೆಯುವುದರಿಂದ ಅಕ್ಟೋಬರ್‌ 29ಕ್ಕೆ ಚಂದ್ರ ಗ್ರಹಣ ಎಂದೂ ಹೇಳಲಾಗುತ್ತದೆ.

Exit mobile version