Site icon Vistara News

Soma Pradosham 2022 | ಇಂದು ಸೋಮ ಪ್ರದೋಷ; ಇದರ ಮಹತ್ವವೇನು? ಪೂಜೆ ಹೇಗೆ?

Pradosh vrat 2023

ಶುಕ್ಲ ಅಥವಾ ಕೃಷ್ಣ ಪಕ್ಷದ ತ್ರಯೋದಶಿಯ ಗೋಧೂಳಿಯ ಸಮಯವನ್ನು ‘ಪ್ರದೋಷ’ಎನ್ನುತ್ತಾರೆ. ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಪ್ರದೋಷಕಾಲ ಬರುತ್ತದೆ. ಇಂದು (ಜು.೨೫) ದ್ವಾದಶಿಯಾದರೂ ಗೋಧೂಳಿಯ ಹೊತ್ತಿಗೆ ತ್ರಯೋದಶಿ ತಿಥಿ ಬಂದಿರುತ್ತದೆ. ಹೀಗಾಗಿ ಸೋಮ ಪ್ರದೋಷವಿದೆ (Soma Pradosham 2022).

ಈ ಪ್ರದೋಷ ಕಾಲ ಸೃಷ್ಟಿಯಾಗಿದ್ದು ಹೇಗೆ ಎಂಬುದಕ್ಕೆ ಪುರಾಣ ಕಥೆ ಹೀಗಿದೆ; ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ.

ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ ಆನಂದ ತಾಂಡವ ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಎಚ್ಚರ ತಪ್ಪುತ್ತಾನೆ. ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ.

ಇನ್ನೊಂದು ಕಥೆಯ ಪ್ರಕಾರ ಶಿವನು ಹಾಲಾಹಲವನ್ನು ಕುಡಿದು, ಅಮೃತವನ್ನು ಕಡೆಯಲು ಅವಕಾಶ ಮಾಡಿಕೊಡುತ್ತಾನೆ. ಇದರಿಂದಾಗಿ ದ್ವಾದಶಿಯಂದು ದೇವತೆಗಳು ಅಮೃತವನ್ನು ಪಡೆದು ಅದನ್ನು ದಾನವರಿಗೆ ಕೊಡದೆ, ಶಿವನನ್ನು ಪ್ರಾರ್ಥಿಸದೇ ತಾವು ಕುಡಿದು ಬಿಡುತ್ತಾರೆ. ವಿಜಯದ ಸಂಕೇತವಾಗಿ ನೃತ್ಯಮಾಡಲು ಆರಂಭಿಸುತ್ತಾರೆ. ನಂತರ ತ್ರಯೋದಶಿಯಂದು ದೇವತೆಗಳಿಗೆ ತಮ್ಮ ತಪ್ಪಿನ ಅರಿವಾಗುತ್ತದೆ, ತಮ್ಮ ಪಾಪವನ್ನು ಪರಿಹರಿಸಲು ಪರಶಿವನನ್ನು ಕೇಳಿಕೊಂಡಾಗ ಶಿವನು ಅವರ ತಪ್ಪನ್ನು ಮನ್ನಿಸಿ ಕ್ಷಮಿಸುವುದಲ್ಲದೇ, ತನ್ನ ವಾಹನ ನಂದಿಯ ಕೊಂಬುಗಳನ್ನು ಹಿಡಿದು ದೇವಾನುದೇವತೆಗಳ ಜೊತೆ ನೃತ್ಯಮಾಡುತ್ತಾನೆ. ಹೀಗೆ ಶಿವನು ನೃತ್ಯ ಮಾಡಿದ ಸಮಯವನ್ನು ಪ್ರದೋಷ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಯಾರು ಶಿವನನ್ನು ಪ್ರಾರ್ಥಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಮೋಕ್ಷ ಪಡೆಯುತ್ತಾರೆ ಎಂದು ಈ ಕಥೆ ಹೇಳುತ್ತದೆ.

ವಾರದ ಮೇಲೆ ಪ್ರದೋಷಕ್ಕೆ ಹೆಸರು

ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ. ಪ್ರದೋಷ ವ್ರತಗಳಿಗೆ ವಾರದ ಮೇರೆಗೆ ಹೆಸರುಗಳಿರುತ್ತವೆ. ಉದಾಹರಣೆಗೆ; ಸೋಮ ಪ್ರದೋಷ, ಭೌಮ ಪ್ರದೋಷ, ಸೌಮ್ಯ ವಾರ ಪ್ರದೋಷ, ಗುರುವಾರ ಪ್ರದೋಷ, ಭೃಗು ವಾರ ಪ್ರದೋಷ, ಶನಿ ಪ್ರದೋಷ ಹಾಗು ಭಾನುವಾರ ಪ್ರದೋಷ.

ಈಶ್ವರ ಹಾಲಾಹಲ ಕುಡಿದಿದ್ದು ಶನಿವಾರವಾದ್ದರಿಂದ ಶನಿ ಪ್ರದೋಷ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.

ಜ್ಯೋತಿಷ ಶಾಸ್ತ್ರದ ಪ್ರಕಾರ ವಾರದ ಏಳು ದಿನಗಳಿಗೆ ಒಬ್ಬೊಬ್ಬ ಅಧಿದೇವತೆ. ಸೋಮನೆಂದರೆ ಚಂದ್ರ. ಚಂದ್ರ ಮನೋಕಾರಕ. ಮನಸ್ಸಿನ ಏರಿಳಿತಗಳನ್ನು ನಿರ್ಧರಿಸುವಾತ. ಹೀಗಾಗಿ ಈ ಪ್ರದೋಷವನ್ನು ಚಂದ್ರ ಪ್ರದೋಷ ಎಂದೂ ಕರೆಯುತ್ತಾರೆ.

ಪ್ರದೋಷ ಪೂಜೆ ಹೇಗೆ?

ಪ್ರದೋಷ ಸಮಯದಲ್ಲಿ ಲಯಕಾರಕ ಶಿವನನ್ನು ಆರಾಧಿಸುತ್ತಾರೆ. ಭಗವಂತನ ಆರಾಧನೆಯಿಂದ ನಮ್ಮೊಳಗಿನ ದುಷ್ಟ ಚಿಂತನೆಗಳು ದೂರವಾಗುತ್ತವೆ ಎಂದೇ ಹೇಳಲಾಗಿದೆ. ಮನೋನಿಯಾಮಕ ಚಂದ್ರನ ಅಧಿದೇವತೆಯೇ ಶಿವ. ಶಿವನೆಂದರೆ ಶಾಂತ ಸ್ವರೂಪ. ಸೋಮ ಪ್ರದೋಷದಂದು ಶಿವನ ಪೂಜೆಯಿಂದ ಚಂದ್ರ ದೋಷ ಪರಿಹಾರವಾಗುತ್ತದೆ. ಚಿತ್ತಚಾಂಚಲ್ಯ ದೂರವಾಗುತ್ತದೆ. ಮತಿಭ್ರಂಶ, ಮನೋವ್ಯಾಧಿಗಳು ಶಮನವಾಗುತ್ತವೆ.

ಈ ಪ್ರದೋಷ ಕಾಲದಲ್ಲಿ ದೇವಸ್ಥಾನಕ್ಕೆ ತೆರಳಿ ಗರ್ಭಗುಡಿಯ ಅಥವಾ ವೃಕ್ಷ ಪ್ರದಕ್ಷಿಣೆ ಮಾಡಲಾಗುತ್ತದೆ. ಇದಕ್ಕೆ ಸೋಮ ಸೂತ್ರ ಪ್ರದಕ್ಷಿಣೆ ಎಂದು ಕರೆಯುತ್ತಾರೆ. ಶಿವನ ಅರ್ಚನೆ, ಶಿವ ಅಷ್ಟೋತ್ತರದ ಸಮೇತ ಪೂಜೆ, ಹಾಲಿನ ಅಭಿಷೇಕ, ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ ಜಪಿಸುವುದು, ಶಿವನ ದೇವಾಲಯದಲ್ಲಿ ದೀಪ ಹಚ್ಚುವುದು ಮಾಡಬೇಕು. ಪ್ರದೋಷ ಸಮಯದಲ್ಲಿ ಶ್ರೀ ಶಿವತಾಂಡವಸ್ತೋತ್ರಂನ ಪಾರಾಯಣವು ತುಂಬಾ ಒಳ್ಳೆಯದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ| ಕಾಶಿಗೆ ಹೋಗಲು ಸರ್ಕಾರದಿಂದ 5,000 ರೂ. ಧನಸಹಾಯ: ಹಣ ಪಡೆಯುವ ಕುರಿತು ಮಾಹಿತಿ ಇಲ್ಲಿದೆ

Exit mobile version