ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ಅವರ ಅಕಾಲಿಕ ನಿಧನದ ಬಗ್ಗೆ ಎಲ್ಲ ಕಡೆ ಸಾಕಷ್ಟು ಚರ್ಚೆಯಾಗುತ್ತಿದೆ. 44 ವರ್ಷದ ಸ್ಪಂದನಾ ಆರೋಗ್ಯವಾಗಿಯೇ ಇದ್ದರು, ಫಿಟ್ನೆಸ್ ಕಾಪಾಡಿಕೊಂಡಿದ್ದರು. ಆದರೂ ಹೃದಯಾಘಾತದಿಂದ (Heart Attack) ಮೃತಪಟ್ಟಿರುವುದು ಅಚ್ಚರಿ ಮೂಡಿಸುತ್ತಿದೆ. ಈ ನಡುವೆ, ಸ್ಪಂದನಾ ಅವರಿಗೆ ಕಂಟಕವೊಂದು ಕಾಡುತ್ತಿತ್ತಾ ಎನ್ನುವ ಪ್ರಶ್ನೆಯೂ ಕೇಳಿಬಂದಿದೆ.
ಒಳ್ಳೆಯತನ, ದೇವರ ಮೇಲೆ ಭಕ್ತಿ, ಗುರುಹಿರಿಯರ ಮೇಲೆ ಗೌರವ ಹೊಂದಿದ್ದ ಸ್ಪಂದನಾ ಮತ್ತು ವಿಜಯ ರಾಘವೇಂದ್ರ ಅವರು ಜ್ಯೋತಿಷ್ಯ, ಭವಿಷ್ಯವನ್ನೂ ನಂಬುತ್ತಿದ್ದರು. ಈ ನಡುವೆ ಸ್ಪಂದನಾ ಅವರಿಗೆ ಒಂದು ಕಂಟಕವಿದೆ ಎಂಬ ಅಂಶ ಕುಟುಂಬದಲ್ಲಿ ಚರ್ಚೆಯಾಗಿತ್ತು ಎಂದು ಹೇಳಲಾಗಿದೆ. ಇದು ಸ್ಪಂದನಾ ಅಥವಾ ವಿಜಯ ರಾಘವೇಂದ್ರ ಅವರ ಕಿವಿಗೆ ತಲುಪಿತ್ತೇ ಇಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ.
ಸೋಮವಾರ ಸ್ಪಂದನಾ ಅವರ ಅನಾರೋಗ್ಯದ ಸುದ್ದಿ ಹರಿದಾಡುವ ಹೊತ್ತಿನಲ್ಲಿ ಆಧ್ಯಾತ್ಮಿಕ ಗುರುಗಳೊಬ್ಬರು ವಿಜಯ ರಾಘವೇಂದ್ರ ಅವರ ಕುಟುಂಬಿಕರನ್ನು ಸಂಪರ್ಕಿಸಿ ತಾವು ನಾಲ್ಕು ತಿಂಗಳಲ್ಲಿ ಒಂದು ಕಂಟಕದ ಸಾಧ್ಯತೆ ಇದೆ ಎಂದು ಹೇಳಿದ್ದನ್ನು ನೆನಪಿಸಿದ್ದಾರೆ.
ʻʻವಿಜಯ್ ಅವರ ಪತ್ನಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಕೇಳಿದೆ. ನಿಜವಾ? ಈಗ ಹೇಗಿದ್ದಾರೆ. ಇಂಥಹುದೊಂದು ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ನಾನು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ನಲ್ಲ. ನೀವು ಯಾಕೆ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಲಿಲ್ಲ? ನಾನು ಕೆಲವೊಂದು ಪರಿಹಾರ ಕ್ರಮಗಳನ್ನು ಸೂಚಿಸಿದ್ದೆ. ನೀವು ಅದನ್ನು ಮಾಡಿಲ್ವಾ? ಈ ವಿಷಯವನ್ನು ವಿಜಯ ರಾಘವೇಂದ್ರ ಅವರ ಗಮನಕ್ಕೂ ತರಬೇಕು ಎಂದು ನಾನು ಹೇಳಿದ್ದೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳಿದ್ದೆʼʼ ಎಂದು ನೆನಪು ಮಾಡಿಕೊಂಡಿದ್ದಾರೆ.
ಸ್ಪಂದನಾ ಅವರಿಗೆ ಜಾತಕ ಪ್ರಕಾರ ಕಂಟಕವೊಂದು ಎದುರಾಗಿದ್ದು, ಅದರ ವಿಚಾರದಲ್ಲಿ ಗಂಭೀರವಾಗಿ ಪರಿಗಣಿಸದೆ ಹೋದರೇ? ಈ ಕಂಟಕದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಾರ್ಯಗಳನ್ನೋ ಅಥವಾ ವೈದ್ಯಕೀಯ ಮುನ್ನೆಚ್ಚರಿಕೆಯನ್ನೋ ವಹಿಸಿದ್ದರೆ ಸ್ಪಂದನಾ ಬದುಕುಳಿಯುತ್ತಿದ್ದರೇ ಎಂಬ ಪ್ರಶ್ನೆ ಈಗ ಚರ್ಚೆಯಲ್ಲಿದೆ.
ಆದರೆ, ಯಾರ ಆಯುಸ್ಸನ್ನೂ ಯಾರೂ ನಿರ್ಧರಿಸಲು ಆಗುವುದಿಲ್ಲ, ಸ್ಪಂದನಾ ಅವರ ಬದುಕಿನ ನಿರ್ಗಮನದ ಕಾಲ ಸನ್ನಿಹಿತವಾಗಿತ್ತು. ಸಾವು ತಣ್ಣಗೆ ತನ್ನ ಕೆಲಸವನ್ನು ಮಾಡಿ ಮುಗಿಸಿದೆ ಎನ್ನುವ ಮಾತೂ ಇದೆ.
ಎಂಟು ದಿನಗಳ ಹಿಂದೆ ತಮ್ಮ ಸೋದರ ಸಂಬಂಧಿಗಳ ಜತೆ ಸ್ಪಂದನಾ ಅವರು ಬ್ಯಾಂಕಾಕ್‌ಗೆ ಹೋಗಿದ್ದು, ಭಾನುವಾರ ರಾತ್ರಿ ಅವರಿಗೆ ಹೃದಯಾಘಾತವಾಗಿದೆ. ಕುಸಿದು ಬಿದ್ದ ಅವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಭಾನುವಾರ ಸಂಜೆಯ ಹೊತ್ತು ನಡೆದ ಘಟನೆ ತಿಳಿದು ನಟ ವಿಜಯ ರಾಘವೇಂದ್ರ ಅವರು ಅಲ್ಲಿಗೆ ಧಾವಿಸಿದ್ದಾರೆ. ಇದೀಗ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಕ್ರಿಯೆಗಳು ನಡೆಯುತ್ತಿವೆ.