ಬೆಂಗಳೂರು: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರಾಚೀನ ಹಿಂದೂ ದೇಗುಲ ಶ್ರೀ ಶಾರದಾ ಪೀಠದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲ್ಲಿಗೆ ಭೇಟಿ ನೀಡಲು ಭಾರತ ಸರಕಾರವು ಕರ್ತಾರ್‌ಪುರ ಕಾರಿಡಾರ್‌ನಂತೆ ವಿಶೇಷ ವ್ಯವಸ್ಥೆ ಮಾಡಿಕೊಡಬೇಕು ಎಂದು ಸೇವ್ ಶಾರದಾ ಕಮಿಟಿ ಮನವಿ ಮಾಡಿದೆ.
ಸೇವ್ ಶಾರದಾ ಕಮಿಟಿಯ ಅಧ್ಯಕ್ಷರಾಗಿರುವ ಕಾಶ್ಮೀರದ ರವೀಂದ್ರ ಪಂಡಿತ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆಲವು ವಿವರಗಳನ್ನು ನೀಡಿದರು.
ಕಾಶ್ಮೀರದಲ್ಲಿರುವ ಶಾರದಾ ದೇವಿಯ ಮೂಲ ಪೀಠದ ಜಾಗದಲ್ಲಿ ನಳಂದ ವಿವಿಗಿಂತಲೂ ಪುರಾತನವಾದ ವಿಶ್ವವಿದ್ಯಾನಿಲಯ ಇತ್ತು, 1947ರಲ್ಲಿ ಈ ಭಾಗವೂ ಸೇರಿದಂತೆ 10 ಜಿಲ್ಲೆಗಳನ್ನು ಪಾಕಿಸ್ತಾನ ಅತಿಕ್ರಮಿಸಿಕೊಂಡಿತು. ಈಗ ಈ ಜಾಗದಲ್ಲಿ ಜೀರ್ಣಾವಸ್ಥೆಯಲ್ಲಿರುವ ದೇಗುಲವಿದೆ. ಅಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ಕಳೆದ 20 ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದ್ದು, ಕೆಲವು ವರ್ಷಗಳ ಹಿಂದಷ್ಟೇ ಹೂವು ಇಟ್ಟು ಆರಾಧಿಸಲು ಅವಕಾಶ ನೀಡಲಾಗಿದೆ, ಇದೀಗ ಪಾಕಿಸ್ತಾನ ಸರಕಾರ ಮತ್ತು ಅಲ್ಲಿನ ಸುಪ್ರೀಂ ಕೋರ್ಟ್ ದೇಗುಲ ಪುನರ್ ನಿರ್ಮಾಣಕ್ಕೆ ಅವಕಾಶ ನೀಡಿದೆ.
ದೇವಾಲಯ ಇರುವ ನೀಲಂ ಜಿಲ್ಲೆಯಲ್ಲಿ ಹಿಂದೂಗಳಿಲ್ಲ, ಆದರೂ ಮುಸ್ಲಿಮರು ಕೂಡಾ ದೇಗುಲ ಮರು ನಿರ್ಮಾಣಕ್ಕೆ ಬೆಂಬಲ ನೀಡಿದ್ದಾರೆ. ನಾಗರಿಕರ ಸೊಸೈಟಿ ಕಟ್ಟಿಕೊಂಡು ನಿರ್ಮಾಣ ಕಾರ್ಯ ನಡೆಯಲಿದೆ.
ಅಲ್ಲಿ ದೇವಾಲಯ ಇದೆಯಾದರೂ ಒಟ್ಟಾರೆ ಜಾಗ ಇರುವುದು ಕೇವಲ 4500 ಚದರ ಯಾರ್ಡ್ ಅಷ್ಟೆ, ಪಾಕಿಸ್ತಾನದ ಸೇನೆಯೇ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ವಿಶೇಷ ಎಂದು ರವೀಂದ್ರ ಪಂಡಿತ್ ಹೇಳಿದರು.
ಹೋಗಲು ಅವಕಾಶ ಕೊಡಿ
ಈ ನಡುವೆ, ಪಾಕಿಸ್ತಾನದಲ್ಲಿರುವ ಗುರು ನಾನಕ್ ಅವರ ಅಂತಿಮ ವಿಶ್ರಾಂತಿ ಸ್ಥಳವಾಗಿರುವ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಭಾರತ ಸರಕಾರ ಕರ್ತಾರ್ ಪುರ ಕಾರಿಡಾರ್‌ನ್ನು ತೆರೆದಿದೆ. ಇದೇ ಮಾದರಿಯಲ್ಲಿ ಶಾರದಾ ಪೀಠಕ್ಕೂ ಭಕ್ತರು ಹೋಗಲು ಮುಕ್ತ ಅವಕಾಶ ನೀಡಬೇಕು ಎಂದು ರವೀಂದ್ರ ಮನವಿ ಮಾಡಿದರು.
ಎಲ್ಲಿದೆ ಶಾರದಾ ಪೀಠ?
ಹಾಲಿ ಶ್ರೀ ಶಾರದಾ ಪೀಠವು ಪಾಕಿಸ್ತಾನ ಆಡಳಿತ ಇರುವ ಆಜಾದ್ ಕಾಶ್ಮೀರದ ರಾಜಧಾನಿ ಮುಝಫ್ಫರಾಬಾದ್ ನಿಂದ 150 ಕಿ.ಮೀ. ದೂರದಲ್ಲಿದೆ. ಶ್ರೀನಗರದಿಂದ 130 ಕಿ.ಮೀ ಮತ್ತು ನಿಯಂತ್ರಣ ರೇಖೆಯಿಂದ ಕೇವಲ 10 ಕಿಮೀ ದೂರದಲ್ಲಿದೆ.