ಸಮಾಜದಲ್ಲಿ ಸಂಘರ್ಷವಿಲ್ಲದೆ, ಸಮನ್ವಯತೆಯ ಆಧಾರದಲ್ಲಿ ಬಹುದೊಡ್ಡ ಪರಿವರ್ತನೆಯನ್ನು ಮಾಡಿದ ಸಮಾಜಸುಧಾರಕ ಶ್ರೀ ನಾರಾಯಣ ಗುರುಗಳು. ಇಂದು ಅವರ ಜಂಯತಿ (Sree Narayana Guru Jayanthi). ಬದುಕುವ ಕಲೆಯನ್ನೂ ಹೇಳಿಕೊಡುತ್ತಾ ಅವರು ಜನರನ್ನು ತಿದ್ದಿದ ರೀತಿ ಅನನ್ಯವಾದದು.
ತಮ್ಮ ಬಿಡುವಿಲ್ಲದ ಸಾಮಾಜಿಕ ಚಟುವಟಿಕೆಗಳ ನಡುವೆಯೂ ಶ್ರೀ ನಾರಾಯಣ ಗುರುಗಳು ಸಂಸ್ಕೃತ, ಮಲೆಯಾಳಂ, ತಮಿಳು ಭಾಷೆಗಳಲ್ಲಿ 144 ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕಂಡು ಬಂದ ಕೆಲವು ಹಿತವಚನಗಳು ಇಲ್ಲಿವೆ.
ಅನ್ಯರ ಸಂತೋಷವೇ ತನ್ನ ಸಂತೋಷ. ತನ್ನ ಸಂತೋಷದ ದಾರಿ ಇತರರಿಗೆ ಸಂತಸ ತರುವಂತಿರಬೇಕು.
ಜ್ಞಾನ ಮಾತ್ರ ಸರ್ವತ್ರ ಪ್ರಕಾಶಿಸುತ್ತದೆ. ಬೇರೆ ಯಾವುದೂ ಅಲ್ಲ. ಯಾವುದು ಪ್ರಕಾಶಿಸುವುದಿಲ್ಲವೋ ಅದು ಸತ್ತ ಹಾಗೆ. ಆದುದರಿಂದ ಜ್ಞಾನ ಸಂಪಾದನೆ ನಮ್ಮ ಕರ್ತವ್ಯವಾಗಿರಬೇಕು.
ತನ್ನಂತೆ ಪರರಿಗೂ ಹಿತವನ್ನು ಬಯಸುವುದು ನಿಜವಾದ ಸಮಾಜ ಸೇವೆ. ಜನಸೇವೆ ನಮ್ಮ ಋಣದ ಹೊರೆ ಹಗುರವಾಗಿಸುವ ಯತ್ನ. ನಾವು ಉಪಕಾರ ಮಾಡುತ್ತೇವೆ ಎನ್ನುವ ಭ್ರಮೆ ಸರಿ ಅಲ್ಲ.
ಬದುಕು ನಿಂತ ನೀರಾಗಬಾರದು. ನಿರಂತರ ಹರಿಯುತ್ತಿರಬೇಕು. ಆಗ ಮಾತ್ರ ಬದುಕಿನಲ್ಲಿ ಲವಲವಿಕೆ ಉಳಿದುಕೊಳ್ಳಲು ಸಾಧ್ಯ.
ಒಳ್ಳೆಯ ಗುಣ ಸಂಸ್ಕಾರದಿಂದ ಬೆಳಗುತ್ತದೆ. ಬರಿಯ ಹುಟ್ಟಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಒಳ್ಳೆಯ ಗುಣದಿಂದ ಉತ್ತಮರಾಗುತ್ತಾರೆ.
ಆತ್ಮವಿಶ್ವಾಸ ಉಳಿಸಿಕೊಂಡು ಮಿಕ್ಕೆಲ್ಲವನ್ನೂ ಕಳೆದುಕೊಂಡರೂ ಚಿಂತೆಯಿಲ್ಲ. ಏಕೆಂದರೆ ಆತ್ಮವಿಶ್ವಾಸದ ಬಲದಿಂದ ಎಲ್ಲವನ್ನೂ ಸಂಪಾದಿಸಬಹುದು.
ಹೆದರಿಕೆ ಮತ್ತು ಪಾಪಗಳ ಹುಟ್ಟಿಗೆ ಅಜ್ಞಾನವೇ ಕಾರಣ. ಜ್ಞಾನದಿಂದ ಭೀತಿ ನಾಶವಾಗಿ ಸಂತೋಷ ಹುಟ್ಟಿಕೊಳ್ಳುತ್ತದೆ.
ಪರಂಪರೆ ನಮ್ಮ ಗತಕಾಲದ ಸಂಚಯ, ಈ ಪರಂಪರೆ ಒಂದು ಜಾತಿಗೆ ಮೀಸಲಾಗಿರದೆ, ಮನುಷ್ಯ ಜಾತಿಯ ಪರಂಪರೆಯ ಕುರಿತು ಮಾತ್ರ ನಾವು ಯೋಚಿಸಬೇಕು.
ಔದಾರ್ಯ-ಪ್ರೇಮ- ಅನುಕಂಪ ಈ ಮೂರು ಅಮೂಲ್ಯ ಜೀವನ ಮೌಲ್ಯಗಳು ನಮಗೆ ಸರಿಯಾದ ದಾರಿ ತೋರುವ ಚುಕ್ಕೆಗಳು.
ಪ್ರೇಮದ ಸೆಲೆ ಬತ್ತಿದ ಹೃದಯ ಬರಡು; ಅದಿಲ್ಲದವನು ಉಸಿರಾಡುವ ಯಂತ್ರ ಮಾತ್ರ. ಅವನು ಬದುಕಿದ್ದಾನೆ ಅನ್ನುವ ಹಾಗಿಲ್ಲ.
ಮನುಷ್ಯರೆಲ್ಲ ಒಂದೇ ಜಾತಿ, ಅವರದ್ದೆಲ್ಲಾ ಒಂದೇ ಧರ್ಮ ಮತ್ತು ಅವರಿಗೆಲ್ಲ ಒಬ್ಬನೇ ದೇವರು.
ಧರ್ಮ, ಭಾಷೆ. ಉಡುಪುಗಳಲ್ಲಿ ಅಂತರವಿದ್ದರೂ ಎಲ್ಲರೂ ಮಾನವ ಜಾತಿಗೆ ಸೇರಿದವರು. ಆದುದರಿಂದ ಈ ಅಂತರಗಳೆಲ್ಲಾ ಸಹಬಾಳ್ವೆಗೆ, ಸಹಭೋಜನಕ್ಕೆ ಅಂತರ್ ಜಾತಿ ವಿವಾಹಕ್ಕೆ ಅಡ್ಡಿಯಾಗುವುದಿಲ್ಲ.
ಹಲವು ಪರ್ವತಗಳಿಂದ ಹುಟ್ಟಿ ಹರಿವ ವಿಭಿನ್ನ ನದಿಗಳು ಕೊನೆಗೆ ಸಮುದ್ರದಲ್ಲಿ ಸಂಗಮವಾಗುವಂತೆ ಎಲ್ಲ ಮತಗಳ ಉದ್ದೇಶವೂ ಪರಮಾತ್ಮನಲ್ಲಿ ಸೇರುವುದು.
ಗೋವುಗಳ ಗುಣಧರ್ಮ ಒಂದೇ ಆಗಿರುವುದರಿಂದ ಅವುಗಳೆಲ್ಲಾ ಒಂದೇ ಜಾತಿಗೆ ಸೇರಿದವುಗಳು. ಅದೇ ರೀತಿ ಮನುಷ್ಯರಲ್ಲಿ ಮಾನವತೆ ಇರುವುದರಿಂದ ಮಾನವರೆಲ್ಲ ಒಂದೇ ಜಾತಿ.
ಧರ್ಮದ ತಿರುಳನ್ನು ತಿಳಿದುಕೊಳ್ಳದೆ ಬರಿಯ ಬಾಹ್ಯಾಚರಣೆಗೆ ಮಾತ್ರ ಮಹತ್ವ ಕೊಡುವುದು, ತಿರುಳನ್ನು ಬಿಸಾಟು ಗೆರಟೆಯನ್ನು ಆರಿಸಿಕೊಂಡಂತೆ.
ಹೃದಯ ಮತ್ತು ಮನ ಪರಿವರ್ತನೆ ಇಲ್ಲದೆ ಎಂತಹ ಬದಲಾವಣೆಯೂ ಕೇವಲ ಮೇಲ್ಮೈಯ ತಾತ್ಕಾಲಿಕ ಬದಲಾವಣೆಯಷ್ಟೇ ಆಗಬಲ್ಲದು.
ಇದನ್ನೂ ಓದಿ| Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು