| ಚನ್ನಬಸವಣ್ಣ ಬಳತೆ, ಶ್ರೀಗಳ ಭಕ್ತರು
ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು (Siddeshwar Swamiji) ನಾಡು ಕಂಡ ಶತಮಾನದ ಶ್ರೇಷ್ಠ ಸಂತ. ಭಕ್ತರ ಪಾಲಿನ ನಡೆದಾಡುವ ದೇವರು. ಸರಳತೆಯ ಸಾಕಾರಮೂರ್ತಿ. ಅಧ್ಯಾತ್ಮದ ಮೇರುಪರ್ವತ. ಸದ್ಗುಣಗಳ ಪ್ರತಿರೂಪ. ಸದಾ ನಗುಮೊಗದಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದ ಸಂತ ಶಿರೋಮಣಿ. ಜ್ಞಾನವೆಂಬ ಜ್ಯೋತಿ ಬೆಳಗಿಸುವ ಮೂಲಕ ಜಾತಿ-ಧರ್ಮವೆಂಬ ಸಮಾಜದ ಅಂಕುಡೊಂಕಿನ ಅಂಧಕಾರವನ್ನು ನೀಗಿಸಿದ ಮಹಾನ್ ಸಂತ. ಮಠಾಧೀಶರು ಅಂದರೆ ಹೀಗೆಯೇ ಇರಬೇಕು ಅನ್ನೋ ಸಿದ್ಧಸೂತ್ರವನ್ನ ಬದಿಗಿಟ್ಟು ಶ್ವೇತವಸ್ತ್ರಧಾರಿಯಾಗಿ ರಾಷ್ಟ್ರ, ಧರ್ಮ ರಕ್ಷಣೆಗಾಗಿ ಶ್ರಮಿಸಿದ ಕಾಯಕಯೋಗಿ. ವಿಜಯಪುರ ಜಿಲ್ಲೆಯನ್ನೇ ಆಧ್ಯಾತ್ಮಿಕ ಕೇಂದ್ರವಾಗಿಸಿಕೊಂಡು ಸಮಾಜ ಹಾಗೂ ಭಕ್ತರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಮಹಾಮಹಿಮರು ಅಂದರೆ ಅದು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು. ಶ್ರೀಗಳ ಪ್ರತಿ ಪ್ರವಚನದಲ್ಲೂ ದೈವ ಸಾಕ್ಷಾತ್ಕಾರದ ಅನುಭೂತಿಯಾಗುತ್ತಿದ್ದರಿಂದಲೇ ಸಿದ್ದೇಶ್ವರ ಸ್ವಾಮಿಗಳನ್ನು ನಡೆದಾಡುವ ದೇವರು ಎನ್ನುತ್ತಿದ್ದರು.
ವಿಜಯಪುರ ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ನಿಷ್ಕಲ್ಮಶ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟು ಸದಾ ನಗುಮೊಗದಿಂದಲೇ ಸಿದ್ದೇಶ್ವರ ಶ್ರೀಗಳು ನೀಡುತ್ತಿದ್ದ ಪ್ರವಚನ ಮನಸಲ್ಲಿ ಅದೆಷ್ಟೇ ಚಿಂತೆ, ದುಮ್ಮಾನಗಳಿದ್ದರೂ ಕ್ಷಣಾರ್ಧದಲ್ಲಿ ಮರೆಯಾಗುತ್ತಿತ್ತು. ಸಿದ್ದೇಶ್ವರ ಶ್ರೀಗಳು ಎಂದಿಗೂ ಇತರರಂತೆ ಕೇವಲ ನೀತಿಪಾಠದಿಂದ ಭಕ್ತರನ್ನು ತಿದ್ದುವ ಕೆಲಸ ಮಾಡಲಿಲ್ಲ.. ಬದಲಿಗೆ ತಮ್ಮ ಜೀವನದುದ್ದಕ್ಕೂ ತಮ್ಮ ಬದುಕನ್ನು ತೆರೆದ ಪುಸ್ತಕದಂತಿರಿಸಿ ಇಡೀ ವಿಶ್ವಕ್ಕೆ ದಾರಿದೀಪವಾಗಿದ್ರು..
ಮೃದು ಮಾತಿನಲ್ಲೇ ಮಾರ್ಗದರ್ಶನ
ಸಮಾಜದಲ್ಲಿನ ಅಂಕುಡೊಂಕನ್ನು ಮೃದು ಮಾತಿನಿಂದಲೇ ಎತ್ತಿ ಹಿಡಿಯುತ್ತಿದ್ದ ಸಿದ್ದೇಶ್ವರ ಶ್ರೀಗಳ ಪ್ರವಚನ ಎಂಥವರ ಮನಸನ್ನೂ ಕೂಡ ಬದಲಿಸುವಂತೆ ಇರುತ್ತಿತ್ತು. ಅನ್ನ ದಾಸೋಹದ ಜೊತೆಜೊತೆಗೆ ಜ್ಞಾನ ದಾಸೋಹದ ಮೂಲಕ ಸರ್ವರನ್ನೂ ಸನ್ಮಾರ್ಗಕ್ಕೆ ಕೊಂಡೊಯ್ಯುತ್ತಿದ್ದ ಪರಮಪೂಜ್ಯರನ್ನ ಭಕ್ತವೃಂದ ನಡೆದಾಡುವ ದೇವರು ಅಂತಲೇ ಕರೆಯುತ್ತಿತ್ತು. ಬಹುಶಃ ದೇವರೆಂದರೆ ಹೀಗೆಯೇ ಇರಬಹುದು ಅನ್ನೋ ವಿಚಾರ ಇಂದಿಗೂ ಶ್ರೀಗಳ ಭಕ್ತರ ಮನದಲ್ಲಿ ಅಚ್ಚೊತ್ತಿ ಬಿಟ್ಟಿದೆ.
ಶ್ರೀ ಸಿದ್ದೇಶ್ವರ ಸ್ವಾಮಿಗಳನ್ನು ಬಣ್ಣಿಸಲು ಪದಗಳು ಸಾಲದು. ಪರಮಪೂಜ್ಯರನ್ನು ಪೂಜಿಸಿ ಆರಾಧಿಸಲು ನನ್ನ ಈ ಇಡೀ ಜನ್ಮ ಸಾಲದು. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ನನ್ನ ನಡುವಿನದ್ದು ಹಲವು ದಶಕಗಳ ಅವಿನಾಭಾವ ಸಂಬಂಧ. ಅದನ್ನು ಅವಿನಾಭಾವ ಸಂಬಂಧ ಅಥವಾ ನಂಟು ಅನ್ನೋದಕ್ಕಿಂತ ನನ್ನ ಪೂರ್ವ ಜನ್ಮದ ಸುಕೃತ ಅಂದರೂ ಪರಿಪೂರ್ಣ ಅನಿಸಲಾರದು. ಪೂಜ್ಯರೊಂದಿಗೆ ನಾನು ಕಳೆದ ಪ್ರತಿಯೊಂದು ಕ್ಷಣವೂ ನನ್ನ ಬದುಕಿನ ಅತ್ಯಮೂಲ್ಯ ಸಮಯ. ಅವರೊಂದಿಗೆ ಕಳೆಯುತ್ತಿದ್ದ ಪ್ರತಿ ಕ್ಷಣವೂ ಶ್ರೀಗಳು ಕಲಿಸಿದ ಬದುಕಿನ ಪಾಠವೂ ಅವಿಸ್ಮರಣೀಯ ಮತ್ತು ಅವರ್ಣನೀಯ.
ಸರಳತೆಯ ಮೇರುಪರ್ವತ
ಸರಳತೆಯ ಮೇರುಪರ್ವತ ಅಂದರೆ ಶ್ರೀ ಸಿದ್ದೇಶ್ವರ ಮಹಾಪೂಜ್ಯರು. ಸಿದ್ದೇಶ್ವರ ಮಹಾಸ್ವಾಮಿಗಳು ಎಂದಿಗೂ ವೇಷಭೂಷಣದ ಬಗ್ಗೆ ಯೋಚಿಸಿದವರಲ್ಲ. ಬಹುಶಃ ಸರಳತೆಗೆ ಮತ್ತೊಂದು ಹೆಸರು ಶ್ರೀ ಸಿದ್ದೇಶ್ವರ ಶ್ರೀಗಳು. ಅದೊಂದು ದಿನ ಅಪ್ಪನವರು ಎಂದಿನಂತೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಅಂಗಿ ಸ್ವಲ್ಪ ಹೆಚ್ಚೇ ಹರಿದಿತ್ತು. ಆಗ ತಮ್ಮ ಹರಿದಿದ್ದ ಅಂಗಿಯನ್ನು ಕಂಡ ಗುರುಗಳು ಇದಕ್ಕೆ ಮತ್ತೆ ಹೊಲಿಗೆ ಹಾಕಬಹುದಾ ಅಂತ ಕೇಳಿದ್ರು. ಅಪ್ಪನವರು ಬಯಸಿದ್ದರೆ ಹೊಸ ಅಂಗಿ ಖರೀದಿಸೋದು ದೊಡ್ಡ ವಿಷಯವೇನಿರಲಿಲ್ಲ. ಆದರೆ ಅಂಗಿ ಹೆಚ್ಚಿಗೆ ಹರಿದಿದ್ದರೂ ಎರಡೂ ಬದಿಯಿಂದ ಹೊಲಿಗೆ ಹಾಕಲು ಸಾಧ್ಯವಿದೆಯಾ ಅನ್ನೋ ಶ್ರೀಗಳ ಪ್ರಶ್ನೆ ನಿಜಕ್ಕೂ ನನಗೆ ತೀವ್ರ ಅಚ್ಚರಿ ತರಿಸಿತು. ಏಕೆಂದರೆ ಅಪ್ಪನವರ ಆ ಸರಳತೆ ನನ್ನನ್ನು ಸೇರಿದಂತೆ ಅಲ್ಲಿ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದ್ದು ನಿಜ.
ತರ್ಕಬದ್ಧ ಮಾತು
ಸಿದ್ದೇಶ್ವರ ಮಹಾಸ್ವಾಮಿಗಳು ಎಂದಿಗೂ ತರ್ಕವಿಲ್ಲದೆ, ಆಧಾರವಿಲ್ಲದೆ ಯಾವುದನ್ನೂ ಒಪ್ಪುತ್ತಿರಲಿಲ್ಲ. ಅದಕ್ಕೆ ಅದೊಂದು ದಿನ ನಡೆದ ಘಟನೆಯೇ ಸಾಕ್ಷಿ. ಅವತ್ತು ಕನ್ನೇರಿ ಮಠದಲ್ಲಿ ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ ವಿನೋಭಾ ಭಾವೆ ಚಿಂತನ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಶ್ರೀಗಳ ಸಮಯಪ್ರಜ್ಞೆಯ ದಿವ್ಯಾನುಭವ ನಮ್ಮ ಪಾಲಿಗಾಗಿತ್ತು. ಅದೇನೆಂದರೆ ವೇದಿಕೆ ಮೇಲೆ ವಿನೋಭಾ ಭಾವೆ ಅವರನ್ನು ಉದ್ದೇಶಿಸಿ ಮಾತನಾಡುವಾಗ ವಿನೋಭಾ ಭಾವೆ ಅವರು 97 ವರ್ಷ ಜೀವಿಸಿದರು ಎಂದು ಉಚ್ಚರಿಸಿದಾಗ ಆ ತಪ್ಪನ್ನು ಅಷ್ಟೇ ನಯವಾಗಿ ತಿದ್ದಿದ್ದವರು ಸಿದ್ದೇಶ್ವರ ಸ್ವಾಮಿಗಳು. ವಿನೋಭಾ ಭಾವೆ ಅವರು 1895ರ ಸೆಪ್ಟೆಂಬರ್ 11ರಂದು ಜನಿಸಿದ್ದವರು. 1982ರಲ್ಲಿ ನಿಧನರಾದರು. ಅಲ್ಲಿಗೆ ಅವರ ಜೀವಿತಾವಧಿ ಸರಿಯಾಗಿ 87 ವರ್ಷ. ಅದನ್ನು ವೇದಿಕೆ ಮೇಲಿದ್ದ ಅಪ್ಪನವರು ಅತ್ಯಂತ ಕರಾರುವಕ್ಕಾಗಿ ತಿಳಿಸಿದರು. ಆಧಾರ ರಹಿತವಾಗಿ ಮಾತನಾಡಬಾರದು ಎಂಬ ಶ್ರೀಗಳ ಕಿವಿಮಾತು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ.
ಮಾಡುವ ಕೆಲಸದಿಂದ ಆತ್ಮತೃಪ್ತಿ ಸಿಗಬೇಕು
ಇನ್ನು, ಸರಳ ಜೀವನ, ಶ್ರೇಷ್ಠ ಚಿಂತನ ಅನ್ನೋ ನಾಣ್ಣುಡಿಯಂತೆ ಬದುಕಿದವರು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು. ಪ್ರಕೃತಿ ಪ್ರೇಮ ಹಾಗೂ ಕೃಷಿಯನ್ನು ನನ್ನ ಜೀವನದ ಒಂದು ಪ್ರಮುಖ ಭಾಗವಾಗಿ ಅಳವಡಿಸಿಕೊಳ್ಳಲು ಕಾರಣವೇ ಅಪ್ಪನವರು. ಒಮ್ಮೆ ನಾನು ಪೂಜ್ಯರಿಗೆ ಸಮಾಜದ ಜನರ ವಿಚಾರ ಬಿಂಬಿಸುವ ಸಲುವಾಗಿ ತಿಂಗಳಿಗೊಮ್ಮೆ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದೆ. ಆಗ ಸಿದ್ದೇಶ್ವರ ಶ್ರೀಗಳು ನನಗೆ ಮೌಲ್ಯಯುತ ಸಲಹೆಯನ್ನು ಕೊಟ್ಟರು. ಅದೇನೆಂದರೆ, ನಿಮ್ಮ ಮನಸ್ಸಿಗೆ ಆನಂದ ಸಿಗುತ್ತೆ ಅನ್ನೋದಾದ್ರೆ ಕಾರ್ಯಕ್ರಮ ಮಾಡಿ. ಆದರೆ ಸಮಾಜ ಪರಿವರ್ತನೆ ಆಗುತ್ತದೆ ಎಂದು ಭಾವಿಸಿಕೊಳ್ಳಬೇಡಿ ಅಂದರು. ಅಲ್ಲಿ ಶ್ರೀಗಳು ಅರ್ಥ ಮಾಡಿಸಿದ್ದು ಏನಂದ್ರೆ ಯಾವುದೇ ಕಾರ್ಯವನ್ನು ಮೊದಲು ಆತ್ಮತೃಪ್ತಿಗಾಗಿ ಮಾಡಬೇಕು. ಉಳಿದಿದ್ದೆಲ್ಲ ಪರಮಾತ್ಮನ ಇಚ್ಛೆ ಅನ್ನೋದಾಗಿತ್ತು.
ಹೀಗೆ ನನ್ನ ಬದುಕಿನ ಎಲ್ಲಾ ಆಗುಹೋಗುಗಳಲ್ಲಿ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಭಾವಳಿ ಇದ್ದೇ ಇದೆ. ಸಿದ್ದೇಶ್ವರ ಶ್ರೀಗಳ ಜೊತೆಗಿನ ಒಡನಾಟ, ಅವರ ಸಾನ್ನಿಧ್ಯ, ಮಾರ್ಗದರ್ಶನ ನನ್ನ ಸಾಂಸಾರಿಕ ಬದಕಲ್ಲೂ ಆಧ್ಯಾತ್ಮ ಸಾಧನೆಯ ಜೊತೆಜೊತೆಗೆ ನಾನು ದೇಶದ ಒಬ್ಬ ಉತ್ತಮ ಪ್ರಜೆಯಾಗೋದಕ್ಕೆ ಅತ್ಯಂತ ಸಹಕಾರಿಯಾಗಿದೆ. ಪರಮಪೂಜ್ಯರು ಇಂದು ನಮ್ಮಿಂದ ಶಾರೀರಿಕವಾಗಿ ದೂರವಾಗಿ ಒಂದು ವರ್ಷ ಕಳೆದಿದೆ. ಆದರೆ ಸಿದ್ದೇಶ್ವರ ಮಹಾಸ್ವಾಮಿಗಳ ಆದರ್ಶಮಯ ಬದುಕು, ನಡೆದಾಡುವ ದೇವರ ಮೌಲ್ಯಯುತ ಹಿತನುಡಿಗಳು ಎಂದೆಂದಿಗೂ ನಮ್ಮೊಂದಿಗೆ ಪೂಜ್ಯರ ಇರುವಿಕೆಯ ಅನುಭವದ ಆನಂದ ಹೊಂದುವಂತೆ ಮಾಡುತ್ತಲೇ ಇದೆ.
ಈ ಸುದ್ದಿಯನ್ನೂ ಓದಿ: Siddheshwar Swamiji : ನಾಡು ಕಂಡ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ನಾಡಿನಾದ್ಯಂತ ನುಡಿನಮನ