Site icon Vistara News

TTD Mobile App: ಜಿಯೋ ಸಹಕಾರದಿಂದ ಹೊಸ ಆ್ಯಪ್​ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇಗುಲ; ಭಕ್ತರಿಗೇನು ಅನುಕೂಲ?

TTD Devasthanms Mobile App

ತಿರುಮಲ ತಿರುಪತಿ ದೇವಸ್ಥಾನವು, ಜಿಯೋ ಪ್ಲಾಟ್​ಫಾರ್ಮ್​ ಸಹಕಾರದಿಂದ ‘ಶ್ರೀ ಟಿಟಿ ದೇವಸ್ಥಾನಂ (Sri TT Devasthanams)’ ಎಂಬ ಮೊಬೈಲ್​ ಆ್ಯಪ್​​ನ್ನು (TTD Mobile App) ಬಿಡುಗಡೆ ಮಾಡಿದೆ. ತಿರುಪತಿ ದೇಗುಲ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದೆ. ಅವರಿಗೆ ತಿಮ್ಮಪ್ಪನ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ಅನುಕೂಲಕರವಾಗಿಸಿಕೊಡಲು ಈ ಆ್ಯಪ್​ ಹೊರತಂದಿದ್ದಾಗಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಅಂದಹಾಗೇ, ಜಿಯೋ ಪ್ಲಾಟ್​ಫಾರ್ಮ್​ ಈ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಆ್ಯಪ್​ ಅಭಿವೃದ್ಧಿ ಪಡಿಸಿ ದೇವಸ್ಥಾನಕ್ಕೆ ದೇಣಿಗೆಯನ್ನಾಗಿ ನೀಡಿದೆ. ತಿರುಮಲ ತಿರುಪತಿ ದೇವಸ್ಥಾನದ ಐಟಿ ವಿಭಾಗವೂ ಆ್ಯಪ್​ ಅಭಿವೃದ್ಧಿಯಲ್ಲಿ ಕೈ ಜೋಡಿಸಿತ್ತು. ಈ ಆ್ಯಪ್​​ನ್ನು ಕ್ಲೌಡ್ ಕಂಪ್ಯೂಟಿಂಗ್​ ತಂತ್ರಜ್ಞಾನ ಬಳಸಿಕೊಂಡು ರಚಿಸಲಾಗಿದೆ.
Sri TT Devasthanams ಆ್ಯಪ್​ನಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಬುಕ್​ ಮಾಡುವ ಆಯ್ಕೆಯಿಂದ ಹಿಡಿದು, ಯಾತ್ರಾರ್ಥಿಗಳು ವಸತಿಗೂ ಬುಕ್ಕಿಂಗ್​ ಮಾಡಿಕೊಳ್ಳಬಹುದು. ದೇವರಿಗೆ ಅರ್ಜಿತ ಸೇವೆಗೆ ಕಾಯ್ದಿರಿಸುವ ಆಯ್ಕೆಯನ್ನೂ ಆ್ಯಪ್​ನಲ್ಲಿ ನೀಡಲಾಗಿದೆ. ಹೀಗಾಗಿ ಯಾರಾದರೂ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ಕೊಡುವವರು ಇದ್ದರೆ ಅಂಥವರು ಈ ಆ್ಯಪ್ ಡೌನ್​ಲೋಡ್ ಮಾಡಿಕೊಂಡರೆ ಉಪಯೋಗ ಆಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: NIMBUS app: ಬಿಎಂಟಿಸಿ ಬಸ್ಸುಗಳ ಓಡಾಟದ ಮಾಹಿತಿ ನೀಡುವ ಆ್ಯಪ್‌ ಈ ವಾರ ಲಭ್ಯ

ಆ್ಯಪ್​ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ, ‘ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ ಒಂದು ಡಿಜಿಟಲ್​ ಗೇಟ್​ ವೇಯನ್ನು ನಾವು ಹೊರತಂದಿದ್ದೇವೆ. ಇದರಲ್ಲಿ ದೇವರ ದರ್ಶನಕ್ಕೆ ಟಿಕೆಟ್​ ಬುಕ್ಕಿಂಗ್ ಮಾಡುವ ಜತೆ, ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ಉತ್ಸವ, ಕಾರ್ಯಕ್ರಮದ ಬಗ್ಗೆಯೂ ಮಾಹಿತಿಯನ್ನು ಅಪ್​ಡೇಟ್ ಮಾಡುತ್ತಿರುತ್ತೇವೆ. ಹೀಗಾಗಿ ಭಕ್ತರಿಗೆ ಇನ್ನಷ್ಟು ಪ್ರಯೋಜನ ಆಗಲಿದೆ. ಈ ಆ್ಯಪ್​ ಹೊರತರಲು ನಮ್ಮ ದೇಗುಲದ ಐಟಿ ವಿಭಾಗ ಮತ್ತು ಜಿಯೋ ಪ್ಲಾಟ್​ಫಾರ್ಮ್​​ ಸತತ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದವು’ ಎಂದು ಹೇಳಿದ್ದಾರೆ.

Exit mobile version