ನವ ದೆಹಲಿ: ಪುರಿ ಜಗನ್ನಾಥ ಮಂದಿರದ ಪರಿಸರಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ತಡೆ ನೀಡಲು ನಿರಾಕರಿಸಿದೆ. ಇದರ ಜತೆಗೆ ಇಂಥ ಅನಗತ್ಯ ದಾವೆಗಳನ್ನು ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಒಂದು ಲಕ್ಷ ರೂ. ಮೊತ್ತವನ್ನು ಒಡಿಶಾ ಸರಕಾರಕ್ಕೆ ದಂಡ ರೂಪದಲ್ಲಿ ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ.
ರಾಜ್ಯ ಸರಕಾರವು ಪುರಿ ದೇವಾಲಯ ಪರಿಸರದಲ್ಲಿ ನಡೆಸುತ್ತಿರುವ ಕಾಮಗಾರಿಗಳು ಮೃಣಾಲಿನಿ ಪಾಧಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಅನುಸಾರವಾಗಿಯೇ ನಡೆಯುತ್ತಿವೆ. ಹೀಗಾಗಿ ಅರ್ಜಿಗಳಿಗೆ ಮಾನ್ಯತೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
ರಾಜ್ಯ ಸರಕಾರವು ಪುರಿ ನಗರವನ್ನು ವಿಶ್ವ ಪಾರಂಪರಿಕ ನಗರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ಪಾರಂಪರಿಕ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಶ್ರೀ ಮಂದಿರ ಪರಿಕ್ರಮ ಪ್ರಾಜೆಕ್ಟ್ (ಎಸ್‌ಎಂಪಿಪಿ) ಎಂದು ಹೇಳಲಾಗುವ ಈ ಯೋಜನೆಯಡಿ ನಡೆಯುತ್ತಿರುವ ಉತ್ಖನನ ಮತ್ತು ನಿರ್ಮಾಣ ಕಾರ್ಯವನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಶತಮಾನಗಳಷ್ಟು ಹಳೆಯ ಈ ದೇವಾಲಯವನ್ನು ಪ್ರಾಚೀನ ಸ್ಮಾರಕ ಮತ್ತು ಪ್ರಾಚ್ಯವಸ್ತು ನಿವೇಶನಗಳು ಮತ್ತು ಪಳೆಯುಳಿಕೆಗಳ ಕಾಯಿದೆ, 1958 ಅಡಿ ರಕ್ಷಿಸಲಾಗುತ್ತಿದೆ. ಇದರ ಪ್ರಕಾರ ದೇವಳದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಹಿರಿಯ ನ್ಯಾಯವಾದಿಗಳಾದ ಮಹಾಲಕ್ಷ್ಮಿ ಪಾವನಿ ಮತ್ತು ವಿನಯ್ ನವಾರೆ ಅವರು ಹೇಳಿದ್ದು, ಕೆಲವೊಂದು ಚಟುವಟಕೆಗಳು ದೇವಾಲಯದ ಪ್ರವೇಶಕ್ಕೇ ಅಡ್ಡಿಯುಂಟು ಮಾಡುತ್ತಿವೆ ಎಂದಿದ್ದಾರೆ.
ಆದರೆ, ಸುಪ್ರೀಂಕೋರ್ಟ್ ಈ ಅಭಿಪ್ರಾಯವನ್ನು ಒಪ್ಪಿಲ್ಲ. ಶೌಚಾಲಯ, ಒಳಚರಂಡಿಗಳು, ವಿದ್ಯುತ್ ಸಂಪರ್ಕ ಸಂಬಂಧಿತ ಚಟುವಟಿಕೆಗಳು ನಿರ್ಬಂಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು. ಜತೆಗೆ ಇಂಥ ಹೆಚ್ಚು ತುರ್ತು ಇಲ್ಲದ ಪ್ರಕರಣಗಳನ್ನು ʻಆಕಾಶವೇ ಭೂಮಿ ಮೇಲೆ ಬೀಳುತ್ತದೆಯೇನೋʼ ಎಂಬಂತೆ ಅವಸರದಲ್ಲಿ ವಿಚಾರಣೆಗೆ ಒತ್ತಾಯಿಸುತ್ತಿರುವುದು ನ್ಯಾಯಾಲಯದ ಮೇಲೆ ಅನಗತ್ಯ ಒತ್ತಡ ಸೃಷ್ಟಿ ಮಾಡುವ ಕ್ರಮವೆಂದು ಪರಿಗಣಿಸಿ ದಂಡ ಹಾಕಿದೆ.
ದೇವಾಲಯದ ಆವರಣದಲ್ಲಿ ನಿಜಕ್ಕೂ ನಡೆಯುತ್ತಿರುವುದೇನು ಎಂಬ ಬಗ್ಗೆ ಒಡಿಶಾ ಸರಕಾರದ ಪರ ಅಡ್ವೊಕೇಟ್ ಜನರಲ್ ಅಶೋಕ್ ಕುಮಾರ್ ಪಾರಿಜಾ ಅವರು ಕೋರ್ಟ್‌ಗೆ ಮಾಹಿತಿ ನೀಡಿದರು. ಮುಂದಿನ ಜುಲೈಯಲ್ಲಿ ನಡೆಯುವ ರಥ ಯಾತ್ರೆಗೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಗಳಿವೆ. ಹೀಗಾಗಿ, ಇಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಟಾಯ್ಲೆಟ್‌ಗಳು, ವಿದ್ಯುತ್ ಸಂಪರ್ಕ ಸಂಬಂಧಿತ ಚಟುವಟಿಕೆಗಳು, ಕ್ಲಾಕ್ ರೂಮ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಂಥ ಕಾಮಗಾರಿಗಳನ್ನು ನಡೆಸಲು ಹಿಂದಿನ ತೀರ್ಪಿನಲ್ಲಿ ಮತ್ತು ಪ್ರಾಚ್ಯವಸ್ತು ಇಲಾಖೆಯ ನಿಯಮಾವಳಿಗಳ ಅಡಿಯಲ್ಲಿ ಅವಕಾಶವಿದೆ ಎಂದು ಹೇಳಿದರು.
ಇದನ್ನೂ ಓದಿ| Explainer: ಕಾಶಿ ಮಾದರಿ ಸಮೀಕ್ಷೆಯತ್ತ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ?