Site icon Vistara News

Swami koragajja : ಕೊರಗಜ್ಜನ ಕೋಲಕ್ಕೆ ಅಡ್ಡಿ ಆಗದಿರಲಿ ಎಂದು ರೋಡ್‌ ಶೋವನ್ನೇ ರದ್ದು ಮಾಡಿದ ಅಮಿತ್‌ ಶಾ!

Amit shah koragajja

#image_title

ಮಂಗಳೂರು: ಕರಾವಳಿ ಭಾಗದಲ್ಲಿ ಜನರು ಅತ್ಯಂತ ಭಕ್ತಿ ಭಾವದಿಂದ ನಡೆದುಕೊಳ್ಳುವ ಕೊರಗಜ್ಜ ದೈವದ (Swami koragajja) ಕಾರಣಿಕದ ಮುಂದೆ ಸ್ವತಃ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ತಲೆ ಬಾಗಿದ್ದಾರೆ. ಕೊರಗಜ್ಜನ ಕೋಲಕ್ಕೆ ಯಾವ ಕಾರಣಕ್ಕೂ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ತಮ್ಮ ನಿಯೋಜಿತ ರೋಡ್‌ ಶೋವನ್ನೇ ರದ್ದುಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವರು ಫೆಬ್ರವರಿ ೧೧ರಂದು ಕರಾವಳಿಯಲ್ಲಿ ಕೆಲವೊಂದು ಸರ್ಕಾರಿ ಕಾರ್ಯಕ್ರಮ, ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿ ಆಗಮಿಸುತ್ತಿದ್ದಾರೆ. ಈ ವೇಳೆ ಅವರು ಮಂಗಳೂರಿನಲ್ಲಿ ಒಂದು ರೋಡ್‌ ಶೋ ನಡೆಸಲು ಪ್ಲ್ಯಾನ್‌ ಆಗಿತ್ತು. ವಿಮಾನ ನಿಲ್ದಾಣದಿಂದ ಬರುವ ಮಾರ್ಗದಲ್ಲಿ ಕಾವೂರಿನಿಂದ ಪದವಿನಂಗಡಿ-ಮೇರಿಹಿಲ್‌ ಅವರಿಗೆ ಸುಮಾರು ಎರಡೂವರೆ ಕಿ.ಮೀ. ಉದ್ದಕ್ಕೆ ರೋಡ್‌ ಶೋನಲ್ಲಿ ಅವರು ಭಾಗವಹಿಸುವುದೆಂದು ತೀರ್ಮಾನವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸುಮಾರು ೩೦೦೦೦ ಜನರನ್ನು ಸೇರಿಸಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದರು.

ಅಮಿತ್‌ ಶಾ ಅವರು ವಿಮಾನ ನಿಲ್ದಾಣದಿಂದ ಕಾವೂರುವರೆಗೆ ಬಂದು ಅಲ್ಲಿಂದ ಪದವಿನಂಗಡಿ ಅಥವಾ ಮೇರಿಹಿಲ್‌ವರೆಗೆ ರೋಡ್‌ ಶೋ ನಡೆಸಿ ಬಳಿಕ ಅಲ್ಲಿ ಒಂದು ಸಭಾಂಗಣದಲ್ಲಿ ಉನ್ನತ ನಾಯಕರ ಜತೆ ಚರ್ಚೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಯಾವ ಸಭಾಂಗಣ ಎನ್ನುವುದನ್ನು ತಾಂತ್ರಿಕ ಕಾರಣಗಳಿಗಾಗಿ ಬಯಲು ಮಾಡಿರಲಿಲ್ಲ.

ಪದವಿನಂಗಡಿಯಲ್ಲಿರುವ ಕೊರಗಜ್ಜನ ಗುಡಿ

ಈ ನಡುವೆ, ರೋಡ್‌ ಶೋ ದಾರಿಯಲ್ಲಿ ಬೋಂದೆಲ್‌ನಿಂದ ಪದವಿನಂಗಡಿ ನಡುವೆ ಬರುವ ಕೊರಗಜ್ಜನ ಒಂದು ಗುಡಿಯೊಂದಿದ್ದು ಫೆಬ್ರವರಿ ೧೧ರಂದು ಕೋಲ ನಡೆಯಲಿದೆ ಎನ್ನುವ ವಿಷಯ ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಈ ಗುಡಿ ಪ್ರಧಾನ ರಸ್ತೆಯ ಪಕ್ಕದಲ್ಲೇ ಇದ್ದು ಕೋಲ ನಡೆಯುವ ಸಂದರ್ಭದಲ್ಲಿ ಇಲ್ಲಿ ಸಾಕಷ್ಟು ಜನರು ಭಾಗವಹಿಸುತ್ತಾರೆ.

ರೋಡ್‌ ಶೋ ಮಾಡಬೇಕು ಎಂದಿದ್ದರೆ ಈ ಭಾಗದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಮತ್ತು ಭದ್ರತೆಗೂ ತೊಂದರೆ ಆಗುತ್ತದೆ. ತುಂಬಾ ಜನರ ಸೇರಲು ಅವಕಾಶವಿರುವುದಿಲ್ಲ. ಹೀಗಾಗಿ ಇದನ್ನು ಗಮನಿಸಿದ ಸಂಘಟಕರು ಅಮಿತ್‌ ಶಾ ಅವರಿಗೆ ವಿಷಯ ತಿಳಿಸಿದರು ಎನ್ನಲಾಗಿದೆ. ಯಾವ ಕಾರಣಕ್ಕೂ ಕೊರಗಜ್ಜನ ಕೋಲಕ್ಕೆ ತೊಂದರೆಯಾಗಬಾರದು, ಬೇಕಿದ್ದರೆ ರೋಡ್‌ ಶೋ ರದ್ದು ಮಾಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದೀಗ ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಈ ರೋಡ್‌ ಶೋವನ್ನೇ ರದ್ದು ಮಾಡಲಾಗಿದೆ. ಪದವಿನಂಗಡಿ-ಮೇರಿಹಿಲ್‌ನಲ್ಲಿ ಆಯೋಜಿಸಲಾಗಿರುವ ಸಭೆಯನ್ನು ವಿಮಾನ ನಿಲ್ದಾಣದ ಬಳಿಯೇ ಇನ್ನೊಂದು ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

Exit mobile version