Site icon Vistara News

Swami Koragajja : ಕಾಫಿನಾಡಲ್ಲಿ ಕೊರಗಜ್ಜನ ಪವಾಡ; ಕುಡಿತ, ಧೂಮಪಾನದಿಂದ ಮುಕ್ತಿ ನೀಡುವ ದೈವವಾಗಿ ಪ್ರಸಿದ್ಧಿ!

Swami koragajja

#image_title

ಚಿಕ್ಕಮಗಳೂರು: ಕರಾವಳಿಯ ಬಹುತೇಕ ಜನರ ನಂಬಿಕೆಯ ದೈವವಾಗಿರುವ ಕೊರಗಜ್ಜನ ಪವಾಡ (Swami Koragajja) ಈಗ ಕಾಫಿ ನಾಡಿಗೆ ಹರಡಿದೆ. ಯಾವುದೇ ಕಷ್ಟ ಬಂದರೂ ಪರಿಹರಿಸುವ ಶಕ್ತಿಯುಳ್ಳ ಅಜ್ಜನೆಂಬ ಖ್ಯಾತಿ ಹೊಂದಿರುವ ಅಜ್ಜ ಕಳೆದುಹೋದ ವಸ್ತುಗಳು ಮರಳಿ ಸಿಗುವಂತೆ ಮಾಡುತ್ತಾನೆ, ಕಳೆದು ಹೋದ ಜಾನುವಾರು ಮತ್ತೆ ಬರುವಂತೆ ಮಾಡುತ್ತಾನೆ ಎಂಬೆಲ್ಲ ನಂಬಿಕೆಗಳಿವೆ. ಕೇವಲ ಒಂದು ಎಲೆ ಅಡಿಕೆ, ಚಕ್ಕುಲಿ ಮತ್ತು ಕೆಲವರು ನೀಡುವ ಮದ್ಯದಿಂದಲೇ ಸಂತೃಪ್ತಿ ಹೊಂದುವ ದೈವ ಈ ಕೊರಗಜ್ಜ ಎಂಬುದು ಜನರ ನಂಬಿಕೆ.

ಇದೀಗ ಈ ಪವಾಡ ಕಾಫಿ ನಾಡಾದ ಚಿಕ್ಕಮಗಳೂರಿಗೂ ಹರಡಿದೆ. ಇಲ್ಲಿನ ಜನರು ಮದ್ಯಪಾನ ಮತ್ತು ಧೂಮಪಾನದಿಂದ ದೂರ ಮಾಡುವ ದೈವವಾಗಿ ಕೊರಗಜ್ಜನನ್ನು ನಂಬುವ ಪ್ರಮಾಣ ಹೆಚ್ಚಾಗುತ್ತಿದೆ. ಹೌದು, ಈ ಭಾಗದಲ್ಲಿ ಮದ್ಯ ಮತ್ತು ಕುಡಿತದ ಚಟ ಬಿಡಿಸುವ ದೈವವಾಗಿ ಜನಪ್ರಿಯತೆ ಪಡೆಯುತ್ತಿದ್ದಾನೆ ಕೊರಗಜ್ಜ.

ಅದರಲ್ಲೂ ಮುಖ್ಯವಾಗಿ, ಕೊಪ್ಪ ತಾಲೂಕಿನ ಮೂರುಗದ್ದೆ ಗ್ರಾಮದ ಕೊರಗಜ್ಜನ ಮಹಿಮೆಗೆ ಭಕ್ತರು ಫಿದಾ ಆಗಿದ್ದಾರೆ. ಕುಡಿತದ ಚಟ ಹೊಂದಿದವರು ತಾವು ಯಾವ ಬ್ರಾಂಡ್‌ನ ಮದ್ಯವನ್ನು ಇಷ್ಟಪಡುತ್ತಾರೋ ಅದನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸಿದರೆ ಸಾಕು ಕುಡಿತದ ಆಸೆ ಕಡಿಮೆಯಾಗುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ.

ಹೀಗಾಗಿ ಅದೆಷ್ಟೋ ಜನರು ಸಾಲು ಸಾಲಾಗಿ ಬಂದು ಮದ್ಯದ ಬಾಟಲಿಗಳನ್ನು ಅರ್ಪಿಸುತ್ತಿರುವುದನ್ನು ಕಾಣಬಹುದು. ಮಧ್ಯದ ಜೊತೆಗೆ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆಯನ್ನೂ ಅರ್ಪಿಸುತ್ತಾರೆ.

ಮಾದಕ ದ್ರವ್ಯದಂಥ ಗಂಭೀರ ಚಟದಿಂದಲೂ ಮುಕ್ತಿ ಕರುಣಿಸು ಎಂದು ಹರಕೆ ಹೊತ್ತುಕೊಳ್ಳುವ ಭಕ್ತರ ಸಂಖ್ಯೆ ದೊಡ್ಡದಿದೆ. ಹರಕೆ ಹೇಳಿಕೊಂಡ ಕೆಲವೇ ತಿಂಗಳಲ್ಲಿ ಭಕ್ತರು ಚಟದಿಂದ ಮುಕ್ತಿ ಪಡೆದ ಉದಾಹರಣೆಗಳಿವೆ ಎನ್ನುತ್ತಾರೆ ಭಕ್ತರು.

ಜಿಲ್ಲೆಯ ಈ ಕ್ಷೇತ್ರದ ಮಹಿಮೆ ಈಗ ಹೊರ ರಾಜ್ಯಗಳಿಗೂ ಹಬ್ಬಿದೆ. ದೂರದ ಕೇರಳ, ಆಂಧ್ರದಿಂದಲೂ ಜನರು ಬರುತ್ತಿದ್ದಾರೆ. ಕೊರಗಜ್ಜನ ಎಣ್ಣೆ ಬಿಡಿಸುವ ಪವಾಡ ಕಂಡು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ : Actress Prema | ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡ ನಟಿ ಪ್ರೇಮಾ

Exit mobile version