Site icon Vistara News

Chaturmasya 2022 | ಕಲಿಯುಗದ ಯುಗ ಗುರುಗಳು ಶಂಕರಾಚಾರ್ಯರು; ಸ್ವರ್ಣವಲ್ಲೀ ಶ್ರೀ

ಶಿರಸಿ: ಶ್ರೀ ಶಂಕರಾಚಾರ್ಯರು ಕಲಿಯುಗದ ಯುಗ ಗುರುಗಳಾಗಿದ್ದು, ಅವರನ್ನು ಸ್ಮರಿಸಿ, ಅವರು ಬೋಧಿಸಿದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು (Chaturmasya 2022) ಭಕ್ತಾದಿಗಳಿಗೆ ಬೋಧನೆ ಮಾಡಿದರು.

ಪರಮೇಷ್ಠಿ ಗುರುಗಳ ಆರಾಧನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಚಾತುರ್ಮಾಸ್ಯ ವ್ರತನಿರತರಾದ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿಗಳು ಭಕ್ತಾದಿಗಳಿಗೆ ಪ್ರವಚನದ ಮೂಲಕ ಆಶೀರ್ವದಿಸಿದರು. ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಅವರು ತಮ್ಮ ೩೨ನೇ ಚಾತುರ್ಮಾಸ್ಯದ ನಿಮಿತ್ತ ವಿವಿಧೆಡೆಯಿಂದ ಆಗಮಿಸಿದ ಭಂಡಾರಿ ಸಮಾಜದವರಿಂದ ವಿವಿಧ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.

ಒಂದೊಂದು ಯುಗಕ್ಕೆ ಒಬ್ಬೊಬ್ಬರು ಯುಗ‌ ಗುರುಗಳಿರುತ್ತಾರೆ. ಕೃತಯುಗಕ್ಕೆ ದಕ್ಷಿಣಾಮೂರ್ತಿಗಳು ಯುಗ ಗುರುಗಳಾಗಿದ್ದರು. ತ್ರೇತಾಯುಗದಲ್ಲಿ ದತ್ತಾತ್ರೇಯ ಹಾಗೂ ದ್ವಾಪರಯುಗದಲ್ಲಿ ಶ್ರೀ ವೇದವ್ಯಾಸರು ಯುಗ ಗುರುಗಳಾಗಿ ಜನರಿಗೆ ನಿರಂತರವಾಗಿ ಮಾರ್ಗದರ್ಶನ ಮಾಡಿದ್ದಾರೆ. ಹಾಗೆಯೇ ಈ ಕಲಿಯುಗದಲ್ಲಿ ಶ್ರೀ ಶಂಕರಾಚಾರ್ಯರು ಯುಗ ಗುರುಗಳು. ಈ ಶ್ರೇಷ್ಠ ಗುರುವಿನ ಬೋಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕು ಎಂದರು.

ಜೀವನಕ್ಕೆ ದಾರಿ ತೋರುವವನೇ ಗುರು

ಮನುಷ್ಯನ ಜೀವನಕ್ಕೊಂದು ಸೂಕ್ತವಾದ ಗುರಿಯನ್ನು ತೋರುವವನೇ ಗುರು. ಮನುಷ್ಯ ಯಾವ ಮಾರ್ಗದಲ್ಲಿ ನಡೆಯಬೇಕು? ಯಾವುದು ಧರ್ಮ? ಯಾವುದು ಅಧರ್ಮ? ಎಂಬುದನ್ನು ಸ್ಪಷ್ಟವಾಗಿ ಶಂಕರಾಚಾರ್ಯರು ತಮ್ಮ ಅನೇಕ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಮನುಷ್ಯನ ಬದುಕನ್ನು ರೂಪಿಸಲು ಅಗತ್ಯವಿರುವ ಚಿಂತನೆಗಳನ್ನು ಕಲಿಸಿಕೊಟ್ಟ ಶಂಕರಾಚಾರ್ಯರು ಈ ಯುಗದ ಗುರುಗಳು. ಭಗವದ್ಗೀತೆಯನ್ನು ಭಗವಂತ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದಾಗಿದೆ. ಆದರೆ, ಅದನ್ನು ಶ್ಲೋಕರೂಪದಲ್ಲಿ ಬರೆದವರು ಶ್ರೀ ವೇದವ್ಯಾಸರು. ಆ ಶ್ಲೋಕಗಳಿಗೆ ಮೊದಲು ಭಾಷ್ಯ ಬರೆದವರು ಶ್ರೀ ಶಂಕರಾಚಾರ್ಯರು. ಉಪಲಬ್ಧ ಇರುವ ಭಾಷ್ಯಗಳಲ್ಲಿ ಶಂಕರಾಚಾರ್ಯರದ್ದೇ ಮೊದಲಿನದ್ದು ಎಂದು ಹೇಳಿದರು.

ಗುರು ಪರಂಪರೆಯಿಂದ ಹರಿದು ಬಂದ ಭಗವದ್ಗೀತೆಯನ್ನು ದಿನಚರಿಯನ್ನಾಗಿಸಿಕೊಳ್ಳಬೇಕು. ಅಲ್ಲದೆ, ಪ್ರತಿನಿತ್ಯ ಭಗವದ್ಗೀತೆಯನ್ನು ಅಭ್ಯಾಸ ಮಾಡುವುದರಿಂದ ಜೀವನ ಉತ್ತಮಗೊಳ್ಳುತ್ತದೆ. ಜೀವನದ ಕೊನೆಯಲ್ಲಿ ಉತ್ತಮ ಗತಿಯನ್ನು ಪಡೆಯಬಹುದು ಎಂದು ಆಶೀರ್ವಚನ ನೀಡಿದರು. ಈ ವೇಳೆ ದತ್ತಾತ್ರಯ ಭಂಡಾರಿ, ಪರಶುರಾಮ ಭಂಡಾರಿ ಇತರರು ಇದ್ದರು.

ಇದನ್ನೂ ಓದಿ: Chaturmasya 2022 | ಭಗವಂತನ ಕೃಪೆಯಿಂದ ಮುಕ್ತಿ ಹೊಂದಬೇಕು; ಸ್ವರ್ಣವಲ್ಲೀ ಶ್ರೀ

Exit mobile version