Site icon Vistara News

ಭಕ್ತರ ಜಗಳದಲ್ಲಿ ಬಡವಾದ ಗುರುಗಳು; ನವವೃಂದಾವನದಲ್ಲಿ ಯಾರ ಆರಾಧನೆಗೂ ಅವಕಾಶ ಇಲ್ಲ

Anegondi Navavrindavana

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ (Anegondi gadde) ನವವೃಂದಾವನದಲ್ಲಿ (Navavrindavana) ಯಾವ ಗುರುಗಳ ಆರಾಧನೆಗೂ ಅವಕಾಶ ಇಲ್ಲ ಎಂದು ಅಲ್ಲಿನ ತಹಸೀಲ್ದಾರ್‌ ಸ್ಪಷ್ಟಪಡಿಸಿದ್ದಾರೆ. ಭಕ್ತರ ಎರಡು ಗುಂಪುಗಳು ಒಂದೇ ಅವಧಿಯಲ್ಲಿ ತಮ್ಮ ತಮ್ಮ ಗುರುಗಳ ಆರಾಧನೆಗೆ ಅವಕಾಶ ಕೇಳಿದ್ದವು. ಅವರ ನಡುವೆ ಒಮ್ಮತ ಮೂಡಿಸಲು ತಹಸೀಲ್ದಾರ್‌ ಸಭೆ (tahasildar Meeting) ಕರೆದರೂ ಅದರಲ್ಲಿ ಫಲ ಸಿಕ್ಕಿಲ್ಲ. ಹೀಗಾಗಿ ಆರಾಧನೆಗೇ (Aradhane) ನಿರ್ಬಂಧ ಹೇರಲಾಗಿದೆ. ಹೀಗಾಗಿ ಜುಲೈ 6ರಿಂದ 8ರವರೆಗೆ ಆಯೋಜನೆಯಾಗಿದ್ದ ಗುರುಗಳ ಆರಾಧನೆಗೆ ನಿಷೇಧ ವಿಧಿಸಲಾಗಿದೆ.

ಇದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಉತ್ತರಾದಿ ಮಠದ ನಡುವಿನ ವಿವಾದವಾಗಿದೆ. ನವವೃಂದಾವನವನ್ನು ರಾಘವೇಂದ್ರ ಮಠದವರು ಜಯತೀರ್ಥರ ವೃಂದಾವನ ಎಂದು ವಾದ ಮಾಡಿದರೆ, ಉತ್ತರಾದಿ ಮಠದವರು ರಘುವರ್ಯ ತೀರ್ಥರ ವೃಂದಾವನ ಎಂದು ವಾದ ಮಾಡುತ್ತಿದ್ದಾರೆ.

ವೃಂದಾವನ ಗಡ್ಡೆಯಲ್ಲಿ ಜುಲೈ ಆರರಿಂದ ಮೂರು ದಿನಗಳ ಕಾಲ ತಮಗೆ ಶ್ರೀ ಜಯತೀರ್ಥರ ಆರಾಧನೆಗೆ ಅವಕಾಶ ನೀಡಬೇಕು ಎಂದು ಕೋರಿ ನಂಜನಗೂಡು ಶ್ರೀ ರಾಘವೇಂದ್ರ ಮಠದವರು ತಹಸೀಲ್ದಾರ್‌ಗೆ ಮನವಿ ಮಾಡಿದ್ದರು. ಈ ವೇಳೆ ಭದ್ರತಾ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದರು. ಇದೇ ದಿನಗಳಂದು ಉತ್ತರಾದಿ ಮಠದವರು ರಘುವರ್ಯ ತೀರ್ಥರ ಮಹಿಮೋತ್ಸವ ಆಚರಿಸಲು ಅವಕಾಶ ಕೋರಿ ಅದೇ ತಹಸೀಲ್ದಾರ್‌ ಮುಂದೆ ಮನವಿ ಸಲ್ಲಿಸಿದ್ದರು.

ಎರಡೂ ತಂಡಗಳು ಒಂದೇ ದಿನಗಳಲ್ಲಿ ಪೂಜಾದಿ ಕಾರ್ಯಗಳನ್ನು ನಡೆಸಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಅವರು ಜೂನ್‌ 27ರಂದು ಎರಡೂ ಗುಂಪುಗಳ ಸಭೆಯನ್ನು ಕರೆದಿದ್ದರು. ಈ ವೇಳೆ ತಹಸೀಲ್ದಾರ್‌ ಅವರು ಒಂದೋ ಎರಡೂ ಗುಂಪುಗಳು ಸೇರಿ ಆಚರಣೆಗಳನ್ನು ಮಾಡಬೇಕು ಇಲ್ಲವೇ ಬೇರೆ ಬೇರೆ ದಿನಗಳಲ್ಲಿ ಮಾಡಬೇಕು ಎಂದು ತಾಕೀತು ಮಾಡಿದರು. ದಿನಾಂಕ ಬದಲಿಸಲು ಎರಡೂ ಗುಂಪುಗಳ ಒಪ್ಪಲಿಲ್ಲ.

ಈ ನಡುವೆ, ಸಭೆಯಲ್ಲಿ ಉಪಸ್ಥಿತರಿದ್ದ ಗಂಗಾವತಿ ಗ್ರಾಮೀಣ ಸರ್ಕಲ್‌ ಇನ್ಸ್‌ಪೆಕ್ಟರ್‌ ಈ ಗುಂಪುಗಳಲ್ಲಿ ಯಾರಿಗೇ ಅವಕಾಶ ನೀಡಿದರೂ ಉಭಯ ಮಠದವರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಹೀಗಾಗಿ ಯಾರಿಗೂ ಅವಕಾಶ ಕೊಡುವುದು ಬೇಡ ಎಂದು ಅಭಿಪ್ರಾಯಪಟ್ಟರು.

ತಹಸೀಲ್ದಾರ್‌ ಅವರು ಒಟ್ಟಾರೆ ಪರಿಸ್ಥಿತಿ ಮತ್ತು ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರ ಮಾಹಿತಿಯನ್ನು ಪರಿಗಣಿಸಿ ಎರಡೂ ಗುಂಪುಗಳಿಗೆ ಆರಾಧನೆ, ಮಹಿಮೋತ್ಸವ ನಡೆಸಲು ಅವಕಾಶ ನಿರಾಕರಿಸಿದರು.

ಈಗಾಗಲೇ ವೃಂದಾವನ ಕುರಿತು ಉಭಯ ಮಠಗಳ ನಡುವೆ ಭಾರಿ ವಾದವಿವಾದವಿದೆ. ಜಯತೀರ್ಥರ ವೃಂದಾವನ ಆನೆಗೊಂದಿಯಲ್ಲಿದೆ ಎಂದು ರಾಯರ ಮಠದವರು ಹೇಳುತ್ತಿದ್ದರೆ, ಜಯತೀರ್ಥರ ವೃಂದಾವನ ಮಳಖೇಡದಲ್ಲಿದೆ ಎಂದು ಉತ್ತರಾದಿ ಮಠದವರು ಹೇಳುತ್ತಾರೆ.

Exit mobile version