Site icon Vistara News

ತಾತಯ್ಯ ತತ್ವಾಮೃತಂ : ಯಮಬಾಧೆ ಎಂದರೇನು? ಯಮ ಶಿಕ್ಷೆ ಕೊಡುವುದು ಹೇಗೆ? ಈ ಬಗ್ಗೆ ತಾತಯ್ಯ ಹೇಳಿರುವುದೇನು?

Kaivara Narayanappa

ಕೈವಾರ ತಾತಯ್ಯ

yama puri kaivara tatayya

ಮಾನವ ಶರೀರ ನಶ್ವರ ಎಂಬುದು ನಗ್ನಸತ್ಯ. ಹಾಗೆಯೇ ಮಾನವ ಜನ್ಮ ಸಿಗುವುದು ದುರ್ಲಭ ಎಂಬುದೂ ಅಷ್ಟೇ ಸತ್ಯ. ಸಾಮಾನ್ಯವಾಗಿ ಮಾನವರು ಇಹದ ಚಿಂತೆಯನ್ನು ಹೆಚ್ಚಾಗಿ ಮಾಡುತ್ತಾರೆ. ಇಹದ ಯಾತ್ರೆಯನ್ನು ಒಂದಲ್ಲಾ ಒಂದು ದಿನ ಮುಗಿಸಿ ಹೊರಡಲೇ ಬೇಕು ಎಂದುಕೊಂಡು ಪರದ ಚಿಂತನೆಯನ್ನು ಮಾಡಬೇಕು. ಸ್ಥೂಲಶರೀರವನ್ನು ಬಿಟ್ಟು ಸೂಕ್ಷ್ಮ ಶರೀರವನ್ನು ಹೊಂದಲೇಬೇಕು. ಇದಕ್ಕಾಗಿ ಸಿದ್ಧತೆಯನ್ನು ಬದುಕಿರುವಾಗಲೇ ಮಾಡಿಕೊಳ್ಳಬೇಕೆಂಬ ಕಿವಿಮಾತನ್ನು ತಾತಯ್ಯನವರು ಹೇಳುತ್ತಾರೆ;
“ಚಚ್ಚುವಾರಿನಿ ಜೂಚಿ ವಚ್ಚುವಾರಿನಿ
ಜೂಚಿ ಮತ್ಸರಂಬೇಟಿಕೇ ಮನಸಾ
ಬಹುಪಾಪಮುಲು ಚೇಸಿ ಯಮಬಾಧ
ಪಡನ್ಯಾಲ ಬಾಟ ಚಕ್ಕಗ ಚೂಡು ಮನಸಾ”

ಮನಸ್ಸೇ, ಸಾಯುವವರನ್ನು ಹಾಗೂ ಹುಟ್ಟುವವರನ್ನು ನೋಡಿ ಮತ್ಸರವೇಕೆ? ಬಹುಪಾಪಗಳನ್ನು ಮಾಡಿ ಯಮಬಾಧೆಯನ್ನು ಪಡಲೇಕೆ? ಬದುಕಿನ ದಾರಿಯನ್ನು ಚೆನ್ನಾಗಿ ನೋಡು ಎಂದಿದ್ದಾರೆ ತಾತಯ್ಯನವರು. ಬಹುವಿಧವಾದ ಪಾಪಗಳನ್ನು ಮಾಡಿದರೆ ಯಮಬಾಧೆಯನ್ನು ಪಡಬೇಕು ಎನ್ನುತ್ತಿದ್ದಾರೆ. ಹಾಗಾದರೇ ತಾತಯ್ಯನವರು ಹೇಳಿದಂತೆ ಯಮಬಾಧೆಗಳು ಎಂದರೆ ಅರ್ಥವೇನು? ಪಾಪಗಳನ್ನು ಮಾಡಿದರೆ ಯಮನ ಯಾವ ರೀತಿಯ ಶಿಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ನೋಡೋಣ.

ಯಮಬಾಧೆ ಎಂದರೇನು?

ಮಾನವರಾಗಿ ಹುಟ್ಟಿದ ಮೇಲೆ ತನ್ನ ಆತ್ಮಶೋಧನೆಯನ್ನು ಮಾಡಿಕೊಳ್ಳಬೇಕು. ಇದಕ್ಕೆ ಒಬ್ಬ ಯೋಗೀಂದ್ರನಾದ ಗುರುವನ್ನು ಆಶ್ರಯಿಸಬೇಕು. ಗುರುವನ್ನು ಆಶ್ರಯಿಸದಿರುವುದೇ ಮಾನವನ ಕಷ್ಟಗಳಿಗೆ ಕಾರಣವಾಗಿದೆ. ಇದನ್ನೇ ತಾತಯ್ಯನವರು ಹೀಗೆ ಹೇಳಿದ್ದಾರೆ;
ಇಹಮುನ ಜನುಲು ವರಯೋಗಿವರ್ಯುಲ
ಚೇರಿ ಯೋಗಂಬು ಸಾಧಿಂಚನೇರಕ ಸರ್ವೇಶು

ಮರಚಿ, ಸಂಸಾರಮುನ ಚಿಕ್ಕಿ ತ್ಸಚ್ಚಿಪುಟ್ಟುಚುನು ಎಂದಿದ್ದಾರೆ.

ಲೋಕದ ಜನರು ಶ್ರೇಷ್ಠರಾದ ವರಯೋಗಿವರ್ಯ ಅಂದರೆ ಸಹಜಯೋಗಿಯನ್ನು ಆಶ್ರಯಿಸದೇ, ಯೋಗ ಸಾಧನೆಯನ್ನು ಮಾಡಲಾರದೇ, ಸರ್ವೇಶ್ವರನಾದ ಪರಮಾತ್ಮನನ್ನು ಮರೆತು ಸಂಸಾರದಲ್ಲಿ ಸಿಕ್ಕಿಕೊಂಡು ಪ್ರಪಂಚದಲ್ಲಿ ಸತ್ತು, ಹುಟ್ಟುವ ಚಕ್ರದಲ್ಲಿ ಸುತ್ತುತ್ತಿದ್ದಾರೆ. ಮಾನವಜನ್ಮದ ಗುರಿಯನ್ನು ಮರೆತು ಹಣದ ಸಂಪಾದನೆಯಲ್ಲಿಯೇ ತೊಡಗಿ, ಸಂಸಾರದ ಪೋಷಣೆಯಲ್ಲಿಯೇ ಆಯುಷ್ಯವು ಮುಗಿಯುತ್ತಿದೆ ಎನ್ನುತ್ತಾರೆ ತಾತಯ್ಯನವರು.

ಶ್ರೀ ಯೋಗಿನಾರೇಯಣ ತಾತಯ್ಯನವರು ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರಮು ಎಂಬ ಗ್ರಂಥದಲ್ಲಿ ಮಾನವರ ಜನನ-ಜೀವನ ಮತ್ತು ಮರಣದ ನಂತರದ ಸ್ಥಿತಿಗಳನ್ನು ವಿವರವಾಗಿ ಬೋಧಿಸಿದ್ದಾರೆ. ಮಾನವರ ಜೀವನವು ಆಸೆ-ಪಾಶೆಗಳಿಂದಲೇ ತುಂಬಿರುತ್ತದೆ. ಹೀಗೆ ದಿನಗಳು ಉರಳಿದಂತೆ ವಯಸ್ಸು ಮುದುಡಿ ಮುದಿತನ ಬಂದೊದಗುತ್ತದೆ. ಆಗ ಏನಾಗುತ್ತದೆ? ತಾತಯ್ಯನವರು ಈ ರೀತಿಯಾಗಿ ವಿವರಿಸುತ್ತಾರೆ;
ಗೂರುದಗ್ಗುಲು ಪುಟ್ಟಿ, ಕೃಂಗಿ ವೇದನಲ
ಮಲಮೂತ್ರಮುಲ ಪೊರಲಿ ಮರಣಮೈನಪುಡು
ಯಮಕಿಂಕರುಲು ವಚ್ಚಿ ಯಮಪಾಶಮುಲನು
ತಗಿಲಿಂಚಿ ಯೀಡ್ಚುಚು ತರಿಮಿಕೊಟ್ಟುಚುನು
ಕೊನಿಪೋಯಿ ಅಂತಕುನಿ ಪುರಿ ಚೇರ್ಚಿನಪುಡು||

ಮುದಿತನದಲ್ಲಿ ಸಹಜವಾಗಿ ಕಾಣುವಂತಹ ಗೊರಗೊರ ಗೂರಲು, ಉಸಿರುಕಟ್ಟುವ ಕೆಮ್ಮು ಹುಟ್ಟುತ್ತದೆ. ಮರಣಬಾಧೆಗಳಿಂದ ಮಲಮೂತ್ರಗಳು ಹೊರಬಿದ್ದು ಜಂಘಾಬಲ ಉಡುಗಿಹೋಗಿ ಮರಣವುಂಟಾಗುತ್ತದೆ. ಇಹಲೋಕದ ಬಾಳುವೆ ಹೀಗೆ ಮುಗಿಯುತ್ತದೆ. ಆ ಕೂಡಲೆ ಯಮಕಿಂಕರರು ಬಂದು ಸೂಕ್ಷ್ಮ ಶರೀರಕ್ಕೆ ಯಮಪಾಶಗಳನ್ನು ಬಿಗಿದು, ಬಂಧಿಸಿಕೊಂಡು, ಎಳೆದಾಡುತ್ತಾ, ಅಟ್ಟಿಸಿಕೊಂಡು ಬಂದು ಹೊಡೆಯುತ್ತಾ, ಕರೆದೊಯ್ದು ಯಮಪುರಿಯ ಪಟ್ಟಣವನ್ನು ಸೇರಿಸುತ್ತಾರೆ ಎಂದು ತಾತಯ್ಯನವರು ತಿಳಿಸಿದ್ದಾರೆ.

ಯಮಪುರಿಯಲ್ಲಿ ವಿಚಾರಣೆ

ಯಮಪುರಿಯ ಪಟ್ಟಣವನ್ನು ಸೇರಿದ ಜೀವಾತ್ಮನ ವಿಚಾರಣೆ ಯಮಧರ್ಮರಾಯನ ನ್ಯಾಯಾಲಯದ ಮುಂದೆ ಆರಂಭವಾಗುತ್ತದೆ. ಮಾನವ ತನ್ನ ಜೀವಿತಾವಧಿಯಲ್ಲಿ ಮಾಡಿದ ಶುಭ-ಅಶುಭ ಕರ್ಮಗಳ ಪೂರ್ವೋತ್ತರದ ಸಂಗತಿಗಳನ್ನು ಇಲ್ಲಿ ವಿಚಾರಿಸಲಾಗುತ್ತದೆ. ಮೊದಲನೆಯದಾಗಿ ತಾತಯ್ಯನವರು ಹೀಗೆ ಹೇಳುತ್ತಾರೆ;
ವೈಕುಂಠ ನಾರೇಯಣಾಚ್ಯುತ ನಾಮಸ್ಮರಣ
ಚೇಸಿನ ಪುಣ್ಯಪುರುಷುಡಗುನೇನಿ
ವಿಷ್ಣುದೂತಲು ವಚ್ಚಿ ವಿಡಿಪಿಂತುರಪುಡೆ ||

ಈ ವಿಚಾರಣೆಯಲ್ಲಿ ಭಗವಂತನ ನಾಮಸ್ಮರಣೆಗೆ ಹೆಚ್ಚಿನ ಮಹತ್ವ ಹಾಗೂ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ವೈಕುಂಠವಾಸ, ನಾರೇಯಣ, ಅಚ್ಯುತ ಎಂದು ಹರಿಸ್ಮರಣೆ ಮಾಡಿದ ಪುಣ್ಯಾತ್ಮನೆಂದು ಕಂಡುಬಂದರೆ ವಿಷ್ಣುದೂತರು ಆ ಕ್ಷಣದಲ್ಲಿ ಬಂದು ಯಮಪಾಶದಿಂದ ಬಿಡಿಸಿ, ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ ಎಂದಿದ್ದಾರೆ.
ಮೊದಲನೆಯ ಪ್ರಾಶಸ್ತ್ಯ ನಿಷ್ಕಾಮವಾಗಿ ಭಗವಂತನ ನಾಮಸ್ಮರಣೆ ಮಾಡಿದ ಮಾನವರಿಗೆ. ನಾಮಸ್ಮರಣೆ ಮಾಡಿಲ್ಲದಿದ್ದರೂ ಇನ್ನೇನಾದರೂ ಪುಣ್ಯಕಾರ್ಯಗಳನ್ನು ಮಾಡಿದ್ದಾರೆಯೇ? ಎಂದು ವಿಚಾರಿಸಲಾಗುತ್ತದೆ. ಆಗ ಯಮಧರ್ಮರಾಯನು ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾನೆ.

  1. ಪಶು-ಪಕ್ಷಿಗಳಿಗಾಗಿ ಜಲತಟಾಕಗಳನ್ನು ನಿರ್ಮಿಸಿ, ವೃಕ್ಷಗಳನ್ನು ಬೆಳೆಸಿರುವರೇ?
    ನಮ್ಮ ಪೂರ್ವಜರು ಗಿಡ ನೆಡುವುದು ಹಾಗೂ ಪೋಷಿಸುವುದು ಹಾಗೂ ನೀರಿನ ಕೆರೆ-ಕುಂಟೆಗಳನ್ನು ನಿರ್ಮಿಸುವುದನ್ನು ಧರ್ಮಕಾರ್ಯವೆಂದು ಭಾವಿಸಿದ್ದರು. ಗಿಡ ನೆಟ್ಟು ಬೆಳೆಸುವುದು ಒಂದು ತಪಸ್ಸಿನಂತೆ. ತಾನೂ ಬದುಕಿ ಇನ್ನೊಬ್ಬರೂ ಬದುಕಬೇಕು ಎಂಬುದು ವೃಕ್ಷಗಳು ನಮಗೆ ನೀಡಿರುವ ಸಂದೇಶ. ವೃಕ್ಷಗಳನ್ನು ಬೆಳೆಸುವುದರಿಂದ ಪ್ರಕೃತಿಯಲ್ಲಿ ಸಮತೋಲನವುಂಟಾಗುತ್ತದೆ. ಜಂಬುನೇರಳೆ, ಹತ್ತಿ, ಹಲಸು ಮುಂತಾದ ವೃಕ್ಷಗಳಲ್ಲಿನ ಫಲಗಳನ್ನು ಸವಿದು, ಜಲಪಾನ ಮಾಡಿದ ಪಶು-ಪಕ್ಷಿಗಳು ಆನಂದದಿಂದ ಕುಣಿದಾಡುತ್ತಾ ಹರ್ಷವನ್ನು ವ್ಯಕ್ತಪಡಿಸಿ ಸಂತೋಷಗೊಂಡರೆ, ಅವುಗಳ ಆಶೀರ್ವಾದ ಫಲದಿಂದ ಪುಣ್ಯ ಲಭಿಸುತ್ತದೆ. ಹೀಗಾಗಿ ಯಮಧರ್ಮರಾಯನು ಈ ಪ್ರಶ್ನೆಯನ್ನು ಕೇಳುತ್ತಾನೆ. ಸದ್ಗುರು ತಾತಯ್ಯನವರ ಪ್ರೇರಣೆಯಂತೆ ಸಮಾಜದ ಸರ್ವರ ಒಳಿತಿಗಾಗಿ, ಮೂಕ ಪ್ರಾಣಿ-ಪಕ್ಷಿಗಳ ಹಿತಕ್ಕಾಗಿ ಕಲ್ಪವೃಕ್ಷ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
  2. ಶ್ರೀತುಳಸಿ ಪತ್ರಗಳನ್ನು ಬೆಳೆಸಿ ಶ್ರೀಹರಿಯ ಪೂಜೆಗೆ ಸಮರ್ಪಿಸಿರುವರೇ?
    ಭಗವಂತನನ್ನು ಆರಾಧಿಸಲು ನವವಿಧ ಭಕ್ತಿಗಳಿವೆ. ಈ ನವವಿಧ ಭಕ್ತಿಗಳಲ್ಲಿ ಅರ್ಚನೆಯೂ ಒಂದು. ಭಗವಂತನ ಅರ್ಚನೆಯನ್ನು ಮಾಡಲು ಶ್ರೀತುಳಸಿಯ ದಳಕ್ಕೆ ಬಹಳ ಪ್ರಾಮುಖ್ಯತೆಯಿದೆ. ಇಂತಹ ತುಳಸಿ ಪತ್ರಗಳನ್ನು ಬೆಳೆಸಿ ಪರಮಾತ್ಮನಿಗೆ ಅರ್ಪಿಸುವುದು ಪುಣ್ಯದ ಕಾರ್ಯವಾಗಿದೆ.
  3. ಹಸಿದವರಿಗೆ ಅನ್ನದಾನವನ್ನು ಮಾಡಿರುವರೇ?
    ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದುದು. ಹಸಿದವರಿಗೆ ಅನ್ನ ನೀಡಿದರೆ, ಅವರು ಸಂತೋಷಗೊಂಡು ಹರಸುತ್ತಾರೆ. ಇದು ಪುಣ್ಯದ ಕಾರ್ಯ.
  4. ಕೈಬಿಚ್ಚಿ ದಾನಧರ್ಮವನ್ನು ಮಾಡಿರುವರೇ?
    ಹಣ, ಸಂಪತ್ತು ಇರುವಾಗ ಕೈಲಾದ ಮಟ್ಟಿಗೆ ದಾನಧರ್ಮವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಷ್ಕಾಮವಾಗಿ ಮಾಡಬೇಕು.

ಈ ರೀತಿಯಾದ ಪ್ರಶ್ನೆಗಳಲ್ಲಿ ಒಂದಾದರೂ ಪುಣ್ಯಕಾರ್ಯಗಳನ್ನು ಮಾಡಿದ್ದರೆ ಸ್ವರ್ಗಾದಿಭೋಗಗಳು ದೊರೆಯುತ್ತದೆ. ಇಲ್ಲದಿದ್ದರೆ ಯಮನ ಶಿಕ್ಷೆ ಕಟ್ಟಿಟ್ಟ ಬುತ್ತಿ.

yama puri kaivara tatayya

ಯಮನ ಶಿಕ್ಷೆ ಏನು?

ಯಮಪುರಿಯ ಪಟ್ಟಣದ ನ್ಯಾಯಲಯದಲ್ಲಿ ಜೀವಾತ್ಮನ ವಿಚಾರಣೆ ಮುಗಿದ ಮೇಲೆ ಯಮಧರ್ಮರಾಯನ ತೀರ್ಪು ಹೊರಬರುತ್ತದೆ. ಮೇಲಿನ ಯಾವುದೇ ಪುಣ್ಯಕಾರ್ಯಗಳನ್ನು ಮಾಡದಿದ್ದರೆ ಯಮನು ನೀಡುವ ತೀರ್ಪು-ಆಜ್ಞೆಯನ್ನು ತಾತಯ್ಯನವರು ಈ ರೀತಿಯಾಗಿ ತಿಳಿಸಿದ್ದಾರೆ;
ವೀಡು ಪಾಪಾತ್ಮುಂಡು, ವೀಡು ದುರ್ಜನುಡು
ವೀನಿಕಿ ತಗುನಾಜ್ಞ ಯಿದೆ ದೂತಲಾರ
ಅತಿ ಕ್ಷುತ್ತು ಪುಟ್ಟಿಂಚಿ ಅನ್ನಮಡಿಗೆನೇನಿ
ವೀನಿ ಕಾಯಮು ಕಂಡ-ಲಿಂತಿಂತ ತರಿಗಿ
ಭಕ್ಷಿಂಚುಮನಿ ನೋಟಿಕಿಚ್ಚಿ ದಿನದಿನಮು||

ಇವನು ಪಾಪಾತ್ಮನು, ಮಾನವ ಜನ್ಮವನ್ನು ಪಡೆದು ಧರ್ಮಕಾರ್ಯಗಳನ್ನು ಮಾಡಿಲ್ಲ. ಆದ್ದರಿಂದ ಇವನಿಗೆ ಶಿಕ್ಷೆಯನ್ನು ವಿಧಿಸುತ್ತಿದ್ದೇನೆ. ದೂತರೇ, ಇವನಿಗೆ ಅತಿಯಾಗಿ ಹಸಿವಿನ ಬಾಧೆಯನ್ನು ಹುಟ್ಟಿಸಿರಿ. ಹಸಿವಾಗುತ್ತಿದೆ ಅನ್ನ-ಆಹಾರ ಬೇಕು ಎಂದು ಕೇಳಿದರೆ, ಇವನ ಶರೀರದ ಮಾಂಸವನ್ನೇ ತುಂಡು, ತುಂಡುಗಳಾಗಿ ಕಡಿದು ಕತ್ತರಿಸಿ ಬಾಯಿಗೆ ಕೊಟ್ಟು ತಿನ್ನುವಂತೆ ಹೇಳಿರಿ, ನೀಚರಾದ ಇಂತಹ ಮಾನವರಿಗೆ ಪ್ರತಿದಿನ ಇದೇ ರೀತಿ ಮಾಡಿರಿ ಎಂದು ಯಮನು ಆಜ್ಞೆಯನ್ನು ಮಾಡುತ್ತಾನೆ ಎಂದಿದ್ದಾರೆ ತಾತಯ್ಯನವರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ವರದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಹೀಗೆ ದೀರ್ಘಕಾಲ ಯಮಲೋಕದಲ್ಲಿ ಶಿಕ್ಷೆ, ಹಿಂಸೆ ಅನುಭವಿಸಿದ ಮೇಲೆ ಯಾವುದೋ ಒಂದು ಜೀವರಾಶಿಯಲ್ಲಿ ಮತ್ತೆ ಜನ್ಮವೆತ್ತುವಂತಾಗುತ್ತದೆ. ಹುಟ್ಟು, ಸಾವಿನ ಭವಚಕ್ರವನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕೊನೆಯದಾಗಿ ತಾತಯ್ಯನವರು ಹೇಳುತ್ತಾರೆ, ಅಯ್ಯಾ, ಯಮಬಾಧೆ, ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕಾದರೆ ಇರುವುದೊಂದೇ ಮಾರ್ಗ, ಅದು ಗುರುವನ್ನು ಆಶ್ರಯಿಸಿ, ಗುರುಸೇವೆ ಮಾಡುವ ಮಾರ್ಗ. ಗುರುವನ್ನು ಸೇವಿಸಿ, ಪೂಜಿಸೋಣ ಯಮಬಾಧೆಯಿಂದ ಮುಕ್ತರಾಗೋಣ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ಯೋಗಿ ಎಂದರೆ ಯಾರು? ಉತ್ತಮ ಯೋಗಿಯ ಲಕ್ಷಣಗಳೇನು?

Exit mobile version