Site icon Vistara News

ತಾತಯ್ಯ ತತ್ವಾಮೃತಂ : ಆತ್ಮಶುದ್ಧಿಯಿಲ್ಲದ ಮೇಲೆ ಅಗ್ರಜನ್ಮವ ಪಡೆದು ಪ್ರಯೋಜನವೇನು?

tatayya thathvamrutam a column by dr m r jayaram about saint kaivara narayanappa

atma shuddi

tatayya thathvamrutam a column by dr m r jayaram about saint kaivara narayanappa

ಕೈವಾರ ತಾತಯ್ಯನವರ ಬೋಧನೆಗಳಲ್ಲಿ ನಿಶ್ಚಲವಾದ, ಸ್ಥಿರವಾದ ಮನಸ್ಸಿನ ನಿರ್ಮಾಣಕ್ಕಾಗಿ ಹಲವಾರು ತತ್ವ ಸಂದೇಶಗಳನ್ನು ಕಾಣಬಹುದಾಗಿದೆ. ಅಹಂಕಾರವು ಮನಸ್ಸಿನಲ್ಲಿ ಮೂಡುತ್ತದೆ. ಈ ಅಹಂಕಾರವು ಮಾತು ಮತ್ತು ನಡವಳಿಕೆಯ ಮೂಲಕ ವ್ಯಕ್ತವಾಗುತ್ತದೆ. ಅಹಂಕಾರದಿಂದ ಮೇಲು-ಕೀಳೆಂಬ ಭಾವನೆ ಮನಸ್ಸಿನಲ್ಲಿ ಬೇರೂರುತ್ತದೆ. ಇದರಿಂದ ವಾಸ್ತವ ವಸ್ತುಸ್ಥಿತಿಯನ್ನು ವಿಮರ್ಶಿಸಲಾಗದೆ ವಿವೇಕವು ಮಂಕಾಗುತ್ತದೆ. ಮನಸ್ಸು ಚಪಲಚಿತ್ತವಾಗುತ್ತದೆ.

ಈ ಪದ್ಯದಲ್ಲಿ ತಾತಯ್ಯನವರು ಉದಾಹರಣೆಗಳನ್ನು ನೀಡಿ ಮಾನವನ ಚಪಲಚಿತ್ತತೆಯನ್ನು ಈ ರೀತಿಯಾಗಿ ವಿವರಿಸುತ್ತಿದ್ದಾರೆ;
ಆತ್ಮಶುದ್ಧಿ ಲೇನಿ ಅಗ್ರಜನ್ಮಂಬೇಲ
ಮನಸು ನಿಲುಪಲೇನಿ ಮಂತ್ರಮೇಲ
ಅನ್ನದಾನಮು ಲೇನಿ ಅರ್ಥಾರ್ಜಿತಂಬೇಲ
ಕಾಸುಕಾಶಪಡಿನ ಕವಿತ್ವಮೇಲ||

ಆತ್ಮಶುದ್ಧಿ ಇಲ್ಲದೆ ಹೋದ ಮೇಲೆ ಅಗ್ರಜನ್ಮವನ್ನು ಪಡೆದು ಪ್ರಯೋಜನವೇನು? ಮನಸ್ಸನ್ನು ಧ್ಯೇಯದಲ್ಲಿ ನಿಲ್ಲಿಸಲು ಆಗದಿದ್ದ ಮೇಲೆ ಮಂತ್ರಜಪ ಏತಕ್ಕಾಗಿ? ಅನ್ನದಾನ ಮಾಡದಿದ್ದ ಮೇಲೆ ಹಣವನ್ನು ಏತಕ್ಕಾಗಿ ಸಂಪಾದಿಸಬೇಕು? ಕವಿಯಾಗಿದ್ದುಕೊಂಡು ತತ್ವಕ್ಕಾಗಿ ಬರೆಯದೆ ಹಣಕ್ಕಾಗಿ ಆಸೆಪಟ್ಟರೆ ಅಂತಹ ಕವಿತ್ವ ಏತಕ್ಕಾಗಿ? ಎನ್ನುತ್ತಿದ್ದಾರೆ ತಾತಯ್ಯನವರು.

ಆತ್ಮಶುದ್ಧಿ ಎಂದರೆ ಮನಸ್ಸು ಮತ್ತು ಬುದ್ಧಿಗಳ ಶುದ್ಧಿ ಎಂದು ಅರ್ಥ. ಇದೇ ಅಂತರಂಗ ಶುದ್ಧಿ. ಆತ್ಮಶುದ್ಧಿ ಇಲ್ಲದ ಮೇಲೆ ಅಗ್ರಜನ್ಮವೆಂದು ಹೇಳಿಕೊಳ್ಳುವುದೇಕೆ? ಆತ್ಮಶುದ್ಧಿಯನ್ನು ಹೊಂದುವುದು ಬಹಳ ಕಷ್ಟ. ಮಂತ್ರಜಪವು ಮನಸ್ಸನ್ನು ಒಂದೆಡೇ ಏಕಾಗ್ರಚಿತ್ತವಾಗಿ ನಿಲ್ಲಿಸಬೇಕು. ಏಕೆಂದರೆ ಮಂತ್ರಜಪದಲ್ಲಿ ಜಪ-ಧ್ಯಾನ-ಆತ್ಮಚಿಂತನೆ ಎಂಬ ಮೂರು ಅಂಗಗಳಿವೆ. ಈ ಮೂರು ಪ್ರಕ್ರಿಯೆಗಳು ಮನಸ್ಸಿನಿಂದ ನಡೆಯುವ ದೈವೋಪಾಸನೆ. ಇದು ದೈವಕ್ಕೆ ಮುಟ್ಟಬೇಕಾದರೆ ಕೇವಲ ಬಾಯಲ್ಲಿ ಹೇಳಿದರೆ ಸಾಲದು, ಮನಸ್ಸು ಆರಾಧ್ಯ ದೈವದಲ್ಲಿ ದೃಢವಾಗಿ ನಿಲ್ಲಬೇಕು ಎನ್ನುತ್ತಿದ್ದಾರೆ ತಾತಯ್ಯನವರು.

ಅನ್ನದಾನ ಶ್ರೇಷ್ಠದಾನ. ಔದಾರ್ಯವಿಲ್ಲದ ಶ್ರೀಮಂತನು ಧನರೋಗಿ. ಅನ್ನದಾನ ಮಾಡದ ಶ್ರೀಮಂತನು ಹಣವನ್ನು ಸಂಪಾದಿಸಿ ಪ್ರಯೋಜನವೇನು ಎನ್ನುತ್ತಿದ್ದಾರೆ. ಹಣಕ್ಕಾಗಿ ಆಸೆಪಟ್ಟು ಬರೆಯುವ ಕವಿತ್ವವೇಕೆ ಎಂದಿದ್ದಾರೆ. ಹಣಕ್ಕೆ ಆಸೆಪಟ್ಟು ರಚಿಸಿದ ಸಾಹಿತ್ಯದಲ್ಲಿ ಆತ್ಮತತ್ವದ ಆನಂದಾನುಭವ ಮೂಡಿಸುವ ಕವಿತ್ವ ಇರಲಾರದೆಂದು ತಾತಯ್ಯನವರ ಅಭಿಪ್ರಾಯ.

ಕೂಲಿಕಿ ಪೂಜಿಂಚು ವೈಷ್ಣವ ವ್ರತಮೇಲ
ವಯಸ್ಸು ವುಡಿಗಿನ ವೇಶ್ಯವೈಖರೇಲ
ಯೆರುಕಲೋ ನಿಲುವನಿ ಯೋಗತ್ವಮದಿಯೇಲ
ತರುಣುಲ ಮೋಹಿಂಚು ತತ್ವಮೇಲ
ಚಪಲಚಿತ್ತುಲು ಯೀರೀತಿ ಶ್ರೇಷ್ಠುಲನುಚು
ಯಿಗ್ಗುಚುನ್ನಾರು ತಮತಾಮೇ ಸಿಗ್ಗುಲೇಕ||

ವಿಷ್ಣುಪೂಜೆಯೇ ವೈಷ್ಣವವ್ರತ. ಆದರೆ ಕೂಲಿ ತೆಗೆದುಕೊಂಡು ಪೂಜೆ ಮಾಡುವಂತಹ ವೈಷ್ಣವವ್ರತವೇಕೆ? ವಯಸ್ಸು ಮುದುಡಿ ಮುದುಕಿಯಾದ ಮೇಲೆ ವೇಶ್ಯೆಯ ಶೈಲಿಯ ಅಲಂಕಾರ ವೈಖರಿ ಏತಕ್ಕಾಗಿ? ಮನಸ್ಸು ನಿಶ್ಚಲವಾಗಿ ನಿಲ್ಲದಿದ್ದ ಮೇಲೆ ಚಿತ್ತವೃತ್ತಿನಿರೋಧದ ಯೋಗತ್ವ ಏಕೆಬೇಕು? ತರುಣಿಯರ ಆಕರ್ಷಣೆಗೆ ಸೋತು ಮೋಹಿಸುವವರಿಗೆ ಪರಮಾತ್ಮ ತತ್ವದ ಚಿಂತನೆ ಏಕೆ ಬೇಕು? ಇವರುಗಳು ಆತ್ಮವಿಮರ್ಶನದಿಂದ ತಮ್ಮನ್ನು ತಿದ್ದಿಕೊಳ್ಳದೆ ಬಡಾಯಿ ಕೊಚ್ಚಿಕೊಳ್ಳುತ್ತಿರುವರೆಂದು ತಾತಯ್ಯನವರು ಈ ಪದ್ಯದಲ್ಲಿ ತಿಳಿಸುತ್ತಿದ್ದಾರೆ.

ಕೈವಾರ ತಾತಯ್ಯ

ವಿಷ್ಣು ಪರಮಾತ್ಮನು ಒಲಿಯಬೇಕಾದರೆ ಭಕ್ತಿಪೂಜೆ ಬೇಕೇ ಹೊರತು ಕೂಲಿಯ ಪೂಜೆಯಲ್ಲ ಎನ್ನುತ್ತಿದ್ದಾರೆ. ಎಷ್ಟು ದುಡ್ಡು ಕೊಡುತ್ತಾರೋ ಅದರಂತೆ ಪೂಜೆಯಾದರೇ ತಲ್ಲೀನತೆ ಹೇಗೆ ಬರುತ್ತದೆ. ಪರಮಾತ್ಮನನ್ನು ಪ್ರಾರ್ಥಿಸಿ ಮಾಡುವ ಧ್ಯಾನ, ಪೂಜೆಗಳು ಕೂಲಿಯ ಕೆಲಸ ಆಗಬಾರದು. ವಯಸ್ಸು ಮುದುಡಿದರೂ ಪ್ರಾಯವುಳ್ಳ ಅಂದಗಾತಿಯಂತೆ ಅಲಂಕರಿಸಿಕೊಳ್ಳುವ ಸೌಂದರ್ಯ ಗರ್ವವುಳ್ಳವರೂ ಕೂಡ ಚಪಲಚಿತ್ತರು ಎನ್ನುತ್ತಿದ್ದಾರೆ.

ಅರಿವಿನಲ್ಲಿ ನಿಲ್ಲದ ಯೋಗತ್ವವೇಕೆ? ಯೋಗಾನುಸಂಧಾನದಿಂದ ಮನಸ್ಸು ನಿಶ್ಚಲವಾಗಿ ನಿಲ್ಲಬೇಕು. ಸ್ತ್ರೀ ಮೋಹವಿದ್ದವನಿಗೆ ತತ್ವಚಿಂತನೆ ಸಾಧ್ಯವಾಗುವುದಿಲ್ಲ. ಚಪಲಚಿತ್ತರಾದ ಇವರುಗಳು ನಾಚಿಕೆಯಿಲ್ಲದೆ ತಮ್ಮನ್ನು ತಾವೇ ಶ್ರೇಷ್ಠರೆಂದು ಹೇಳಿಕೊಳ್ಳುತ್ತಾ, ಹಿಗ್ಗುತ್ತಾ ಬೀಗುತ್ತಾರೆ ಎನ್ನುತ್ತಿದ್ದಾರೆ ತಾತಯ್ಯನವರು.

ಯಾರೇ ಆಗಿರಲಿ ಆತ್ಮವಿಮರ್ಶೆಯನ್ನು ಮಾಡಿಕೊಂಡು ತಮ್ಮ ತಪ್ಪನ್ನು ತಿದ್ದಿಕೊಳ್ಳದೆ, ಚಪಲಚಿತ್ತರಾಗಿ ಬಾಳುವುದು ವ್ಯರ್ಥ ಎಂಬ ಅಭಿಪ್ರಾಯವನ್ನು ತಾತಯ್ಯನವರು ತಿಳಿ ಹೇಳುತ್ತಿದ್ದಾರೆ. ಸಾಧಕನು ಅಭ್ಯಾಸ ಹಾಗೂ ವೈರಾಗ್ಯಗಳಿಂದ ಮನಸ್ಸಿನ ಹತೋಟಿಯನ್ನು ಸಾಧಿಸಬೇಕು. ಆತ್ಮೋನ್ನತಿಯನ್ನು ಸಾಧಿಸಿ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಜೀವನು ದೇವನಾಗುವ ಬಗೆ ಹೇಗೆ?

Exit mobile version