Site icon Vistara News

ತಾತಯ್ಯ ತತ್ವಾಮೃತಂ : ಎಲ್ಲಾ ದರ್ಶನಗಳ ಉದ್ದೇಶ ದೈವ ಸಾಕ್ಷಾತ್ಕಾರ!

tatayya thathvamrutam a column by dr m r jayaram about saint kaivara narayanappa

#image_title

ಅಧ್ಯಾತ್ಮ ಚಿಂತಕರಾಗಿ, ಸಮಾಜ ಸುಧಾರಕರಾಗಿ, ತತ್ವಸಿದ್ದಾಂತದ ಪ್ರತಿಪಾದಕರಾಗಿ ಜನಿಸಿದವರು ಕೈವಾರ ತಾತಯ್ಯ ಎಂದೇ ಪ್ರಸಿದ್ದರಾಗಿರುವ ಸದ್ಗುರು ಶ್ರೀ ಯೋಗಿ ನಾರೇಯಣ ಯತೀಂದ್ರರು. ಸಂಕಷ್ಟದಲ್ಲಿರುವ ಜನರಿಗೆ ಜ್ಞಾನದ ಮಾರ್ಗದ ಬೆಳಕನ್ನು ತೋರಿಸುವುದೇ ಅವರ ತತ್ವಗಳ ಉದ್ದೇಶವಾಗಿತ್ತು.

ಚಿರಪರಿಚಿತವಾದ ದೃಷ್ಟಾಂತಗಳೊಡನೆ ತತ್ವವನ್ನು ಬೋಧಿಸುವುದರಲ್ಲಿ ತಾತಯ್ಯನವರು ಸಿದ್ಧಹಸ್ತರು. ಭೇದವಾದವನ್ನು ಸಮಾಜದಲ್ಲಿ ಹರಡಿ ಮೇಲುಕೀಳುಗಳ ತಾರತಮ್ಯವನ್ನು ಉಂಟುಮಾಡಿ ದಿಕ್ಕುತಪ್ಪಿಸುವ ಕೆಲಸವಾಗಬಾರದು ಎಂದು ತಾತಯ್ಯನವರು ಈ ಪದ್ಯದಲ್ಲಿ ಸೂಕ್ಷ್ಮ ವಾಗಿ ಹೇಳುತ್ತಿದ್ದಾರೆ.

ಮತಮುಲನ್ನಿಯು ವೇರೆ ಮಾರ್ಗಂಬು ವೊಕ್ಕಟೇ
ವರ್ಣಭೇದಮು ವೇರೆ ವಸ್ತ್ರ ಮೊಕಟಿ
ಶೃಂಗಾರಮುಲು ವೇರೆ ಬಂಗಾರಮೊಕ್ಕಟೇ
ಪಸುಲ ವನ್ನೆಲು ವೇರೆ ಪಾಲು ವೊಕಟಿ
ಜೀವಬೊಂದುಲು ವೇರೆ ಜೀವುಂಡು ವೊಕ್ಕಡೇ
ಜಾತಿನೀತುಲು ವೇರೆ ಜನ್ಮಮೊಕಟಿ
ದರ್ಶನಂಬುಲು ವೇರೆ ದೈವಂಬು ವೊಕ್ಕಡೇ
ಪುಷ್ಪಜಾತುಲು ವೇರೆ ಪೂಜ ವಘಟಿ
ತೆಲಿಯಲೇಕನು ಮುನುಜುಲು ತೆಲಿವಿದಪ್ಪಿ
ಭ್ರಾಂತಿ ವಿಡುವಕ ಭವರೋಗಬದ್ಧುಲೈರಿ

ಮತಸಂಪ್ರದಾಯಗಳು ಬೇರೆ ಬೇರೆ ಆಗಿರಬಹುದು. ಉಪಾಸನೆ ಮಾಡುವ ಭಕ್ತರ ಮಾರ್ಗದರ್ಶನಕ್ಕಾಗಿ ಮತೀಯದರ್ಶನಗಳಿವೆ. ಎಷ್ಟೇ ಮತಗಳಿದ್ದರೂ, ಇವುಗಳಿಂದ ಮುಟ್ಟಬೇಕಾದ ಸಿದ್ಧಿಮಾರ್ಗ ಒಂದೇ, ಅದು ಭಗವಂತನ ಸಾನ್ನಿಧ್ಯವನ್ನು ಹೊಂದುವುದು.

ಎಲ್ಲಾ ಮತಗಳಲ್ಲಿಯೂ ಬೇರೆ ಬೇರೆ ಸಂಪ್ರದಾಯ, ಕಟ್ಟಳೆ ಮತ್ತು ಕರ್ಮಗಳಿವೆ. ಈ ಮತಗಳ ಸಂಪ್ರದಾಯ, ಪದ್ಧತಿಗಳು ಏನೂ ಆಗಿದ್ದರೂ, ಇವುಗಳು ಬೋಧಿಸುವ ವಿಧಾನಗಳು ಬೇರೆ ಬೇರೆಯಾಗಿದ್ದರೂ ಮಾರ್ಗ ಮಾತ್ರ ಒಂದೇ ಆಗಿದೆ. ಅದು ಮುಕ್ತಿಯೇ ಆಗಿರುತ್ತದೆ. ಬಟ್ಟೆ ತಯಾರಿಸುವ ಮಗ್ಗದ ದಾರಗಳ ವರ್ಣ ಭೇದ ಬೇರೆ ಬೇರೆ. ಒಂದು ಬಟ್ಟೆಯನ್ನು ನೇಯುವಾಗ ಹಲವಾರು ರೀತಿಯ ನಾನಾ ಬಣ್ಣಗಳಿಂದ ಕೂಡಿದ ಎಳೆಗಳಿರುತ್ತದೆ. ಕೊನೆಗೆ ಹೊರಬೀಳುವುದು ಒಂದೇ ವಸ್ತ್ರ.

ಶೃಂಗಾರದ ಆಭರಣಗಳು ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಅವುಗಳ ಗಾತ್ರ, ಆಕಾರದಲ್ಲಿ ಬದಲಾವಣೆಗಳಿರುತ್ತದೆ. ಸರ, ಬಳೆ, ಉಂಗುರ ಹೀಗೆ ನಾನಾ ಹೆಸರುಗಳಿಂದ ಆಭರಣಗಳನ್ನು ಕರೆಯುತ್ತೇವೆ ಆದರೆ ಅದರಲ್ಲಿ ಉಪಯೋಗಿಸಿರುವ ಮೂಲ ವಸ್ತು ಬಂಗಾರವಾಗಿರುತ್ತದೆ.

ಶ್ರೀ ಕೈವಾರ ತಾತಯ್ಯ

ಹಸುಗಳ ಬಣ್ಣಗಳು ಬೇರೆ ಬೇರೆ ಆಗಿದ್ದರೂ, ಹಸುಗಳಿಂದ ಬರುವ ಬೆಳ್ಳಗಿನ ಹಾಲಿನ ಬಣ್ಣ ಒಂದೇ ಎನ್ನುತ್ತಿದ್ದಾರೆ ತಾತಯ್ಯನವರು. ದೇಹದಲ್ಲಿ ಜೀವಾತ್ಮನಿರುವವರೆಗೂ ಶರೀರಕ್ಕೆ ಬೆಲೆ. ದೇಹದೊಡನೆ ಜೀವವು ಒಟ್ಟಿಗೆ ಭೂಮಿಗೆ ಬರುತ್ತದೆ. ಆದರೆ ಹೋಗುವಾಗ ದೇಹವನ್ನು ಮಣ್ಣಿಗೆ ಎಸೆದು ತಾನು ಒಂಟಿಯಾಗಿ ಹೋಗುತ್ತದೆ. ಈ ಕಾರಣದಿಂದ ಪರಮಾತ್ಮನಿಗೆ ದೇಹಗಳ ಬಗ್ಗೆ ಭೇದಭಾವವಿಲ್ಲ. ಜೀವಾತ್ಮನಿಗೂ ಅಷ್ಟೇ, ಸುಂದರವಾದ ದೇಹ, ವಿಕೃತದೇಹ ಎಂಬ ವ್ಯಾಮೋಹವಿರುವುದಿಲ್ಲ. ಎಲ್ಲಾ ದೇಹಗಳಲ್ಲೂ ವಾಸಿಸುವ ಜೀವಾತ್ಮನಿಗೆ ನಾಮ-ರೂಪ-ಗುಣಗಳಿಲ್ಲ. ಎಲ್ಲಾ ದೇಹಗಳಲ್ಲಿರುವ ಜೀವಾತ್ಮನು ಒಂದೇ.

ಮಾನವರ ಜಾತಿ ನೀತಿಗಳು ಬೇರೆ ಬೇರೆಯಾಗಿದ್ದರೂ ಜನ್ಮಮಾತ್ರ ಒಂದೇ ಮಾನವಜನ್ಮ. ದರ್ಶನಗಳು ಬೇರೆ ಬೇರೆ. ಆದರೆ ಅವುಗಳಿಂದ ಅರಿಯಬೇಕಾದ ದೇವರು ಮಾತ್ರ ಒಬ್ಬನೇ. ಎಲ್ಲಾ ದರ್ಶನಗಳ ಉದ್ದೇಶ ದೈವ ಸಾಕ್ಷಾತ್ಕಾರ ಎನ್ನುತ್ತಾರೆ ತಾತಯ್ಯನವರು. ಬೇರೆ ಬೇರೆ ವರ್ಣದ, ಜಾತಿಯ ಹೂಗಳು ಇರಬಹುದು, ಪುಷ್ಪಗಳು ನಾನಾ ವಿಧದಲ್ಲಿರಬಹುದು. ಆದರೆ ಆ ಪುಷ್ಪಗಳಿಂದ ಮಾಡುತ್ತಿರುವ ಉಪಾಸನ ಕ್ರಿಯೆಯಾದ ಪೂಜೆ ಮಾತ್ರ ಒಂದೇ ಆಗಿರುತ್ತದೆ ಎನ್ನುತ್ತಿದ್ದಾರೆ.

ಹೀಗಿರುವಾಗ ಮಾನವರು ಅರಿತುಕೊಳ್ಳದೆ, ನಾವು ಬೇರೆ ಬೇರೆ ಎಂಬ ಪ್ರತ್ಯೇಕತೆ ಭಾವದಿಂದ ಮತಿಗೆಟ್ಟು ವರ್ತಿಸುತ್ತಾರೆ. ಭ್ರಾಂತಿಯನ್ನು ಬಿಡದೆ ಭವರೋಗಗಳಿಗೆ ಬದ್ಧರಾದರು ಎನ್ನುತ್ತಿದ್ದಾರೆ ತಾತಯ್ಯನವರು. ಹಲವಾರು ಉದಾಹರಣೆಗಳ ಸಹಿತ ತಾತಯ್ಯನವರು ಮಾನವರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಭವರೋಗವೆಂದರೆ ಮತ್ತೆ ಮತ್ತೆ ಹುಟ್ಟಿ ಸಾಯುವ ರೋಗ. ಜಾತಿಭೇದವನ್ನು ಖಂಡಿಸುತ್ತಾ, ಅನೇಕ ನೀತಿ, ಸಂಪ್ರದಾಯಗಳು ಇರಬಹುದು ಆದರೆ ಮಾನವ ಜನ್ಮ ಒಂದೇ ಎನ್ನುತ್ತಿದ್ದಾರೆ. ಆತ್ಮಜ್ಞಾನವನ್ನು ಕೊಡುವ ತತ್ವಶಾಸ್ತ್ರಕ್ಕೆ ದರ್ಶನವೆನ್ನುತ್ತಾರೆ. ದರ್ಶನವೆಂದರೆ ತತ್ವಮಾರ್ಗ, ಮತವೆಂದರೆ ಭಕ್ತಿಮಾರ್ಗ. ಎಲ್ಲಾ ದರ್ಶನಗಳ ಉದ್ದೇಶ ದೈವ ಸಾಕ್ಷಾತ್ಕಾರ. ಆ ದೈವ ಮಾತ್ರ ಒಬ್ಬನೇ ಆಗಿದ್ದಾನೆ ಎನ್ನುತ್ತಿದ್ದಾರೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಸಮಾಜದಲ್ಲಿನ ತಾರತಮ್ಯವನ್ನು ತಿದ್ದುವ ಪ್ರಯತ್ನವನ್ನು ತಾತಯ್ಯನವರು ಮಾಡಿದ್ದಾರೆ. ಮಾನವರಾದವರು ಇದರ ವಿಚಾರಮಾಡಿ ಭ್ರಾಂತಿಗೆ ಒಳಗಾಗದೆ, ಮತಿಗೆಡದೆ ಒಂದಾಗಿ ಬಾಳಿ ಭವರೋಗಗಳಿಂದ ಮುಕ್ತರಾಗಬೇಕು ಎನ್ನುವುದೇ ಕೈವಾರ ತಾತಯ್ಯನವರ ಈ ಬೋಧನೆಯ ಆಶಯ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಆತ್ಮಶುದ್ಧಿಯಿಲ್ಲದ ಮೇಲೆ ಅಗ್ರಜನ್ಮವ ಪಡೆದು ಪ್ರಯೋಜನವೇನು?

Exit mobile version