Site icon Vistara News

ತಾತಯ್ಯ ತತ್ವಾಮೃತಂ : ಪುರಂದರದಾಸರು, ಕನಕದಾಸರನ್ನು ಸ್ಮರಿಸಿರುವ ಕೈವಾರ ತಾತಯ್ಯ

tatayya thathvamrutam a column by dr m r jayaram about saint kaivara narayanappa

#image_title

ಕೈವಾರ ತಾತಯ್ಯನವರು ಭಕ್ತಿ ಪಂಥದ ಪ್ರತಿಪಾದಕರು. ತಾತಯ್ಯನವರು ಸ್ವತಃ ಯೋಗಿಗಳಾಗಿದ್ದರೂ ಕೂಡ ಭಗವಂತನನ್ನು ನೆನೆದು ಸೇವೆ ಸಲ್ಲಿಸಿದ ಭಾಗವತೋತ್ತಮ ಭಕ್ತರನ್ನು ಸ್ತುತಿಸುತ್ತಾ ಕೊಂಡಾಡಿದ್ದಾರೆ. ಒಂದು ಕೀರ್ತನೆಯಲ್ಲಿ ದಾಸವರೇಣ್ಯರಾದ ಕನಕದಾಸರು ಹಾಗೂ ಪುರಂದರದಾಸರನ್ನು ಹೀಗೆ ಸ್ಮರಿಸಿದ್ದಾರೆ.
“ಕನಕದಾಸರ ಮನೆಯ ಕಸಗುಡಿಸೋ ಬಡದಾಸ
ಪುರಂದರದಾಸರಿಗೆ ಮಡಿ ಮಾಡೋದಾಸ
ನಿನ್ನ ನಂಬಿದ ದಾಸ ಎನ್ನ ಬಿಡುವುದು ಮೋಸ
ಕೈವರದ ಪುರವಾಸ ಅಮರನಾರೇಯಣೇಶ”

ಇದು ತಾತಯ್ಯನವರ ವಿನಮ್ರತೆಗೆ ಸಾಕ್ಷಿಯಾಗಿದೆ. ಭಕ್ತನಿಗೆ ವಿನಮ್ರತೆ ಬಂದರೆ ಅಹಂಕಾರಕ್ಕೆ ಸ್ಥಾನವಿರುವುದಿಲ್ಲ. ಒಬ್ಬ ಸಾಧಕ ಭಕ್ತನು ಹೇಗೆ ವಿನಮ್ರನಾಗಿರಬೇಕು ಎಂಬುದನ್ನು ತಾತಯ್ಯನವರ ಅಮರನಾರೇಯಣ ಶತಕದಲ್ಲಿ ಈ ರೀತಿಯಾಗಿ ಸ್ಮರಿಸಿದ್ದಾರೆ.

ನೀ ಸ್ಮರಣ ಮದಿಲೋನ ನಿಜಮುಗಾ ನಿಲುಪುಟಕು
ವಾಲ್ಮೀಕಿಮುನಿ ಗಾನು ವಾರಿಜಾಕ್ಷ
ಚೆಲಿಕಾನಿ ರೀತಿ ಮಿಮು ಚೇರಿ ಸೇವಿಂಚುಟಕು
ಅಲ ನಾರದುಡು ಗಾನು ಅಪ್ರಮೇಯ

ಕಮಲದಂತೆ ಕಣ್ಣುಳ್ಳ ವಾರಿಜಾಕ್ಷನೇ, ಮನಸ್ಸಿನಲ್ಲಿ ನಿನ್ನ ಸ್ಮರಣೆ ನಿಲ್ಲಿಸಿ ಧ್ಯಾನಿಸುವುದಕ್ಕೆ ನಾನು ವಾಲ್ಮೀಕಿ ಮುನಿಯಲ್ಲ. ಯಾವುದೇ ಪ್ರಮಾಣದಿಂದಲೂ ಅಳೆಯಲಾಗದ ಸ್ವರೂಪವುಳ್ಳ ಅಪ್ರಮೇಯನೇ, ನಾನು ನಿಮ್ಮ ಸ್ನೇಹಿತನಂತೆ ಬಳಿಯಿದ್ದು, ನಿಮ್ಮ ಸೇವೆಯನ್ನು ಮಾಡುವುದಕ್ಕೆ ನಾನು ನಾರದನಲ್ಲ ಎನ್ನುತ್ತಿದ್ದಾರೆ.

ಸ್ಮರಣೆ ಎಂದರೆ ಜಪ, ಧ್ಯಾನಗಳಿಂದ ಪರಮಾತ್ಮನ ಮೇಲೆ ಮನಸ್ಸಿಡುವುದು. ಮನಸ್ಸನ್ನು ಪ್ರಾಪಂಚಿಕವಾದ ಭೋಗವಸ್ತುಗಳ ಮೇಲೆ ಮನಸ್ಸನ್ನು ಇಡುವವರು ಬಹಳಷ್ಟು ಜನರು ಸಿಗುತ್ತಾರೆ. ಇದೇ ಮನಸ್ಸನ್ನು ಭಗವಂತನ ಮೇಲೆ ಇಡುವವರು ಸಿಕ್ಕುವುದು ದುರ್ಲಭ. ವಾಲ್ಮೀಕಿ ಮುನಿಯು ರಾಮಾಯಣ ಕೃತಿಯ ರಚನೆಕಾರರು. ರಾಮಜಪವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಬಂದವರು ವಾಲ್ಮೀಕಿ ಮಹರ್ಷಿ.

ನಿರಂತರ ರಾಮನಾಮ ಸ್ಮರಣೆ ಮಾಡಿದ ವಾಲ್ಮೀಕಿಯ ಭಾಗ್ಯವನ್ನು ತಾತಯ್ಯನವರು ಈ ವಾಕ್ಯದಲ್ಲಿ ಕೊಂಡಾಡಿದ್ದಾರೆ. ಪರಮಾತ್ಮನೇ, ನಿಮ್ಮ ಸ್ಮರಣೆಯನ್ನು ಮನಸ್ಸಿನಲ್ಲಿ ನಿಶ್ಚಲವಾಗಿ ನಿಲ್ಲಿಸಲು ನಾನು ವಾಲ್ಮೀಕಿಮುನಿಯಲ್ಲ ಎಂದು ಭಿನ್ನವಿಸಿಕೊಂಡಿದ್ದಾರೆ. ಧ್ಯಾನ, ಜಪಗಳಿಂದ ಪರಮಾತ್ಮನನ್ನು ಒಲಿಸಿಕೊಳ್ಳಬಯಸುವವರಿಗೆ ವಾಲ್ಮೀಕಿ ಮುನಿಯು ಸ್ಮರಣಭಕ್ತಿಯ ಆದರ್ಶಮೂರ್ತಿ.

ಶ್ರೀ ಕೈವಾರ ತಾತಯ್ಯ

ಮಹತೀ ಎಂಬ ವೀಣೆಯೊಂದಿಗೆ ಭಗವಂತನನ್ನು ಗುಣಗಾನದಿಂದ ಮೆಚ್ಚಿಸುವ ಕೀರ್ತನಭಕ್ತ ನಾರದ ಮುನಿ. ತಾತಯ್ಯನವರು ನಾರದರನ್ನು ಬಹಳವಾಗಿ ಕೊಂಡಾಡಿದ್ದಾರೆ. ಶ್ರೀಕೃಷ್ಣಚರಿತ ತತ್ತ್ವಾಮೃತ ಯೋಗಸಾರದಲ್ಲಿ ನಾರದಮುನಿಯು ಇಂದ್ರನಿಗೆ ಪರಮಾತ್ಮ ತತ್ವವನ್ನು ವಿವರಿಸಿದ್ದಾರೆ. ಕೀರ್ತನ ಭಕ್ತಿಯ ನಾರದರನ್ನು ಪರಮಾತ್ಮನ ಸ್ನೇಹಿತನೆಂದು ಈ ಪದ್ಯದಲ್ಲಿ ಉಲ್ಲೇಖಿಸಲಾಗಿದೆ. ನಾನು ನಾರದನಂತೆ ಸ್ನೇಹಿತನಲ್ಲ ಅಪ್ರಮೇಯ ಎನ್ನುತ್ತಿದ್ದಾರೆ ತಾತಯ್ಯನವರು.

ತಾತಯ್ಯನವರು ಭಕ್ತ ದಾಸರುಗಳನ್ನು ಸ್ಮರಿಸುತ್ತಾ ಹೀಗೆ ವರ್ಣಿಸಿದ್ದಾರೆ;

ಶಯನಿಂಚು ವೇಳ ಮೀ ಚರಣಮುಲ್ ವೊತ್ತುಟಕು
ಪನ್ನಗೇಂದ್ರುಡು ಗಾನು ಪದ್ಮನಾಭ
ಭುಜಮುಲನಿಡುಕೊನಿ ಭುವಿಯೆಲ್ಲ ತಿರುಗುಟಕು
ಪಕ್ಷಿರಾಜುನು ಗಾನು ಪರಮಪುರುಷ
ಚಾಲ ನಮ್ಮಿತಿನಿ ನೀ ಪಾದಸರಸಿಜಮುಲು
ವೇರು ಶಾಯಕು ಯಿಘ ನನ್ನು ವಿಶ್ವರೂಪ||

ನಾಭಿಯಲ್ಲಿ ಪದ್ಮವುಳ್ಳ ಪದ್ಮನಾಭನೇ, ನೀವು ಮಲಗಿರುವಾಗ ನಿಮ್ಮ ಪಾದಗಳನ್ನು ಒತ್ತಿ ಉಪಚಾರ ಮಾಡುವುದಕ್ಕೆ ನಾನು ಪನ್ನಗೇಂದ್ರನಾದ ಆದಿಶೇಷನಲ್ಲ. ಮಹಾವಿಷ್ಣುವಿನ ಶಯನಕ್ಕೆ ಮೆತ್ತಗಿರುವ ಹಾಸಿಗೆಯಾಗಿ, ಆತನ ಪಾದಗಳನ್ನು ಒತ್ತುವ ಸೇವಾಭಾಗ್ಯವುಳ್ಳ ಆದಿಶೇಷನನ್ನು ಪರಮಭಕ್ತನೆಂದು ತಾತಯ್ಯನವರು ಇಲ್ಲಿ ಸ್ಮರಿಸಿದ್ದಾರೆ. ಆದಿಶೇಷನು ನವಭಕ್ತಿಯ ನಾಲ್ಕನೆಯ ಭಕ್ತಿವಿಧವಾದ ಪಾದಸೇವನೆ ಭಕ್ತಿಯ ಪ್ರತೀಕ. ಇಂತಹ ಪಾದಸೇವನ ಭಕ್ತಿಯಿಂದ ನಿನ್ನನ್ನು ಮೆಚ್ಚಿಸಲು ಆದಿಶೇಷನಿಂದ ಮಾತ್ರ ಸಾಧ್ಯ. ಆದರೆ ನಾನು ಪನ್ನಗೇಂದ್ರನಲ್ಲ ಪ್ರಭೋ ಎನ್ನುತ್ತಿದ್ದಾರೆ.

ಪುರುಷರಲ್ಲಿ ಶ್ರೇಷ್ಠನಾದ ಪರಮಪುರುಷನೇ, ನಿಮ್ಮನ್ನು ಭುಜಗಳ ಮೇಲೆ ಹೊತ್ತುಕೊಂಡು ಬ್ರಹ್ಮಾಂಡಾದಿ ಲೋಕಗಳನ್ನೆಲ್ಲ ಸುತ್ತುವುದಕ್ಕೆ ನಾನು ಪಕ್ಷಿರಾಜನಾದ ಗರುಡನಲ್ಲ ಎನ್ನುತ್ತಿದ್ದಾರೆ. ದಾಸ್ಯಭಕ್ತಿಯ ಪ್ರತೀಕ ಪಕ್ಷಿರಾಜನಾದ ಗರುಡ. ವಾಸ್ತವವಾಗಿ ಪಕ್ಷಿರಾಜನಾದ ಗರುಡನ ಭಾಗ್ಯ ಬೇರಾರಿಗೂ ಇಲ್ಲ. ದೇವೇಂದ್ರನ ಹಾಗೇ ಪಕ್ಷಿರಾಜ ಖಗೇಂದ್ರ. ಭಗವಂತನ ವರದಾನ ಪಡೆದು ಪಕ್ಷಿಗಳ ರಾಜನಾದ ಗರುಡ. ಭುಜದ ಮೇಲೆ ಹೊತ್ತು ಭಕ್ತರ ಸಂರಕ್ಷಣೆಗಾಗಿ ಬ್ರಹ್ಮಾಂಡಗಳನ್ನು ಸುತ್ತುವ ವಿಷ್ಣುವಾಹನನಾದ ಗರುಡಪಕ್ಷಿಯ ಕೆಲಸವನ್ನು ಯಾರೂ ಮಾಡಲಾರರು. ಭಕ್ತಿ ಕಾರಣಕ್ಕಾಗಿ ದಾಸ್ಯಭಕ್ತಿಯಿಂದ ಪರಮಾತ್ಮನನ್ನು ಹೊರುವುದಕ್ಕಾಗಿಯೇ ತನ್ನನ್ನು ಅರ್ಪಿಸಿಕೊಂಡು, ಸೇವೆಯಿಂದ ಸ್ವಾಮಿಯೊಡನೆ ವಂದನೆಗಳಿಗೆ ಪಾತ್ರನಾದ ಏಕೈಕ ಭಕ್ತ, ವಾಹನ ಗರುಡ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಅಂತ್ಯದಲ್ಲಿ ಪರಮಾತ್ಮನಲ್ಲಿ ಮನವಿ ಹೀಗಿದೆ. ಅಯ್ಯಾ ಪರಮಾತ್ಮನೇ, ನಿಮ್ಮ ಪಾದಪದ್ಮಗಳನ್ನೇ ನಂಬಿ, ಹಿಡಿದ್ದೇನೆ. ಮೇಲಿನವರಂತೆ ನಿಮ್ಮ ಸೇವೆಯನ್ನು ನಾನು ಮಾಡಲು ಆಗುವುದಿಲ್ಲ. ನಿಮ್ಮ ಪಾದಗಳನ್ನೇ ದೃಢಭಕ್ತಿಯಿಂದ ನಂಬಿಕೊಂಡಿರುವ ಕೇವಲ ದಾಸ ನಾನು. ವ್ಯಾಪಕನಾಗಿ ವಿಶ್ವದ ರೂಪದಲ್ಲಿ ಗೋಚರಿಸಿರುವ ವಿಶ್ವರೂಪನೇ, ನನ್ನನ್ನು ನಿಮ್ಮಿಂದ ದೂರಮಾಡದಿರಿ ಎಂದು ಭಿನ್ನವಿಸಿಕೊಳ್ಳುತ್ತಾ ಪ್ರಾರ್ಥಿಸುತ್ತಿದ್ದಾರೆ ತಾತಯ್ಯನವರು. ಪರಮಾತ್ಮನ ಪಾದಗಳು ಶರಣಾಗತಿಯ ಸಂಕೇತ. ಇದೇ ಭಕ್ತ ಯೋಗಿಯ ವಿನಮ್ರ ನಿವೇದನೆ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಎಲ್ಲಾ ದರ್ಶನಗಳ ಉದ್ದೇಶ ದೈವ ಸಾಕ್ಷಾತ್ಕಾರ!

Exit mobile version