Site icon Vistara News

ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ

tatayya thathvamrutam a column by dr m r jayaram about saint kaivara narayanappa

kaivara tatayya

tatayya thathvamrutam a column by dr m r jayaram about saint kaivara narayanappa

“ಆಸೆಯೇ ದುಃಖಕ್ಕೆ ಮೂಲ” ಎಂದು ಸುಮಾರು ಎರಡು ಸಾವಿರದ ಐದುನೂರು ವರ್ಷಗಳ ಹಿಂದೆ ಗೌತಮಬುದ್ಧ ನುಡಿದ ವಾಕ್ಯ ಇಂದಿಗೂ ಪ್ರಸ್ತುತವಾಗಿದೆ. ಪ್ರತಿಯೊಬ್ಬ ಮಾನವರಿಗೂ ಸುಖವಾಗಿರಬೇಕೆಂಬ ಆಸೆಯಿರುತ್ತದೆ. ಇದು ಮನಸ್ಸಿನ ಮೊದಲ ಕೋರಿಕೆಯೂ ಹೌದು. ಕೈವಾರದ ತಾತಯ್ಯನವರು ಆಸೆಗಳಿಂದ ಮಾನವರಿಗೆ ದುಃಖವು ಬರುತ್ತದೆ ಎಂದು ಬೋಧಿಸಿದ್ದಾರೆ.

ಪಚ್ಚಿ ಕಸುವು ಮೀದ ಪಸುಲಕು ಬಹು ಆಶ
ಮರ್ಜಲಮುಲಕು ಮಾಂಸಂಬು ಆಶ
ಕಲುವ ತುಂಡ್ಲಮೀದ ಕಲಹಂಸಲಕು ಆಶ
ತಕ್ಕಿನ ಪಕ್ಷುಲಕು ಫಲಮುಲಾಶ

ಈ ಪದ್ಯದಲ್ಲಿ ಪಶು, ಬೆಕ್ಕು, ಕಲಹಂಸ, ಪಕ್ಷಿಗಳ ಉದಾಹರಣೆಯನ್ನು ಕೊಡುತ್ತಾ ತಾತಯ್ಯನವರು ಪ್ರಾಣಿ-ಪಶುಗಳಿಗಿಂತಲೂ ಆಸೆಯ ವಿಷಯದಲ್ಲಿ ಮಾನವ ಹೇಗೆ ಭಿನ್ನವಾಗಿದ್ದಾನೆ ಎಂಬ ದೃಷ್ಟಾಂತವನ್ನು ಬೋಧಿಸುತ್ತಿದ್ದಾರೆ.

ಪಶುಗಳಿಗೆ ಹಸಿರು ಹುಲ್ಲಿನ ಮೇಲೆ ಅತಿಯಾದ ಆಸೆ ಇರುತ್ತದೆ. ಪಶುವಿನ ಆಸೆಯು ಹಸಿಹುಲ್ಲಿಗಷ್ಟೇ ಸೀಮಿತವಾಗಿರುತ್ತದೆ. ಬೆಕ್ಕುಗಳಿಗೆ ಮಾಂಸದ ಮೇಲೆ ಆಸೆ. ಇಲ್ಲಿ ಮಾಂಸ ಎಂದರೆ ಇಲಿಗಳು ಎಂದರ್ಥ. ಬೆಕ್ಕು ಎಲ್ಲಿಯೇ ಇದ್ದರೂ ಇಲಿಗಳು ಕಾಣಿಸಿತು ಎಂದರೆ ಅದರ ಹಿಂದೆ ಓಡಿಹೋಗಿ ಅಟ್ಟಾಡಿಸಿಕೊಂಡು ಹಿಡಿಯುವವರೆಗೂ ಬಿಡುವುದಿಲ್ಲ. ಬೆಕ್ಕುಗಳ ಆಸೆ ಇಲಿಗಳನ್ನು ಹಿಡಿದು ತಿನ್ನುವುದಗಷ್ಟೇ ಸೀಮಿತವಾಗಿರುತ್ತದೆ.

ಕಲಹಂಸಗಳು ಎಂದರೆ ಬಿಳಿಹಂಸಗಳು. ಇದಕ್ಕೆ ರಾಜಹಂಸವೆಂತಲೂ ಕರೆಯುತ್ತಾರೆ. ಕಲಹಂಸಗಳಿಗೆ ನೈದಿಲೆಯ ದಂಟು, ತುಣಕುಗಳ ಮೇಲೆ ಆಸೆ ಇರುತ್ತದೆ. ಉಳಿದ ಪಕ್ಷಿಗಳಿಗೆ ತಮ್ಮ ತಮ್ಮ ರುಚಿಗೆ ಹಿಡಿಸುವ ಫಲಗಳಾಸೆ ಇರುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು. ಪಕ್ಷಿಗಳಿಗೆ ಹೊಟ್ಟೆ ತುಂಬಿಸಿಕೊಳ್ಳುವ ತವಕವಷ್ಟೇ;

ಅಡವಿಮೃಗಮುಲಕೆಲ್ಲ ಅಂಧಕಾರಾಂಬಾಶ
ಜಲಜಂತುವುಲಕೆಲ್ಲ ಜಲಮುಲಾಶ
ಮಂಚಿ ಪುಷ್ಪಸ್ಪರಿತ ಮಧು ತುಮೈದಲಕಾಶ
ಗ್ರಾಮಶಕ್ತುಲಕೆಲ್ಲ ಯಾಟಲಾಶ
ಅಲ್ಪ ನರುಲ ಆಶ ಅನ್ನಿಟಿಯುಂದುಂಡು
ಆಶ ದುಃಖಂಬುಲಕು ಆಲಯಂಬು||

ಜೀವಿಗಳಿಗಿರುವ ಆಸೆಯ ಬಗ್ಗೆ ತಾತಯ್ಯನವರು ಬೋಧನೆಯನ್ನು ಮುಂದುವರಿಸಿ ಹೀಗೆ ಹೇಳಿದ್ದಾರೆ; ಅಡವಿಯಲ್ಲಿ ಸಂಚರಿಸುವ ಮೃಗಗಳು ಕತ್ತಲಿರಬೇಕೆಂದು ಆಶಿಸುತ್ತದೆ. ಕತ್ತಲಿನಲ್ಲಿ ಬೇಟೆಯಾಡಲು ಬಹಳ ಅನುಕೂಲ ಹಾಗೂ ಕತ್ತಲಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಬೇಟೆಯಾಡಬಹುದೆಂದು ಅಡವಿಮೃಗಗಳು ಅಂಧಕಾರಕ್ಕೆ ಆಸೆಪಡುತ್ತವೆ. ಜಲದಲ್ಲಿ ವಾಸಿಸುವ ಜಂತುಗಳಿಗೆ ತೃಪ್ತಿಯಾಗುವಂತೆ ಸಮೃದ್ಧವಾಗಿ ಜಲವಿರಲೆಂದು ಆಸೆಯಾಗುತ್ತದೆ. ಜೇನು ಕುಡಿಯುವ ದುಂಬಿಗಳಿಗೆ ಒಳ್ಳೆಯ ಪುಷ್ಪಸ್ಪರ್ಶದ ಆಸೆ ಇರುತ್ತದೆ. ಗ್ರಾಮದೇವತೆಗಳಾಗಿರುವ ಉಗ್ರಶಕ್ತಿಗಳಿಗೆಲ್ಲಾ ತಮಗೆ ಬಲಿ ಕೊಡುವ ಪ್ರಾಣಿಗಳ ಬೇಟೆಯ ಆಸೆ ಇರುತ್ತದೆ. ಆದರೆ ಅಲ್ಪನಾದ ಮಾನವರಿಗೆ ಒಂದೇ ಆಸೆಯಂತಿಲ್ಲ, ಎಲ್ಲದರಲ್ಲಿಯೂ ಆಸೆ. ಆಸೆಯು ದುಃಖಗಳಿಗೆ ಆಲಯವಾಗಿದೆ ಎನ್ನುತ್ತಿದ್ದಾರೆ ತಾತಯ್ಯನವರು.

ಮಾನವ ಮತ್ತು ಬೇರೆ ಜೀವಿಗಳನ್ನು ಉದಾಹರಿಸಿ ತತ್ವಬೋಧೆಯನ್ನು ತಾತಯ್ಯನವರು ಈ ಪದ್ಯದಲ್ಲಿ ಬೋಧಿಸಿದ್ದಾರೆ. ಆಸೆಯಿಂದ ಮಾನವನಿಗೆ ದುಃಖವು ಉಂಟಾಗುತ್ತದೆ. ದುರಾಸೆಯ ಕಾರಣ ಭಯವೂ ಒದಗಬಹುದು. ಯಾರು ಆಸೆಯಿಂದ ದೂರವಿರುವರೋ ಅವರಿಗೆ ಭಯವಾಗಲಿ, ದುಃಖವಾಗಲಿ ಇರುವುದಿಲ್ಲ. ಇದೇ ಕೈವಾರ ತಾತಯ್ಯನವರು ಕಂಡುಕೊಂಡ ಸತ್ಯ. ಇದನ್ನೇ ಗೌತಮಬುದ್ಧ “ಯಾವ ಮನುಷ್ಯನೂ ಭೋಗ ಜೀವನಕ್ಕೆ ಅಂಟಿಕೊಳ್ಳದಿರಲಿ, ದುಃಖ ಬರುವುದು ಎಂದು ಮರುಗುವುದನ್ನು ಬಿಡಲಿ. ದುಃಖ ಮತ್ತು ಭಯಗಳಿಗೆ ಕಾರಣ ಆಸೆಯೇ ಆಗಿರುತ್ತದೆ” ಎಂದಿದ್ದಾರೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇತರೆ ಜೀವಿಗಳಿಗೆ ಬದುಕಿಗೆ ಅಗತ್ಯವಾದ ಒಂದೊಂದು ವಸ್ತುವಿನ ಮೇಲೆ ಮಾತ್ರ ಆಸೆ ಇರುತ್ತದೆ ಆದರೆ ಮಾನವನಿಗೆ ಹಾಗಲ್ಲ, ಎಲ್ಲವನ್ನೂ ಬೇಕು, ಬೇಕು ಎನ್ನುತ್ತಿರುತ್ತಾನೆ. ಈ ಕಾರಣದಿಂದ ಮಾನವನು ಪ್ರಾಣಿಗಳ ಮುಂದೆ ಅಲ್ಪನಾಗಿದ್ದಾನೆ. ಇದನ್ನೇ ತಾತಯ್ಯನವರು ಅಲ್ಪಮಾನವನೆಂದು ಕರೆದಿದ್ದಾರೆ. ಎಲ್ಲದರಲ್ಲಿಯೂ ಆಸೆ ಇದ್ದವನಿಗೆ ದುಃಖಗಳು ಹೆಚ್ಚು. ಆಸೆಯು ದುಃಖಗಳಿಗೆ ಮನೆಯಿದ್ದಂತೆ. ಜೀವನಕ್ಕೆ ಅಗತ್ಯವಿರುವುದಷ್ಟನ್ನೇ ಬಯಸಬೇಕು. ಸಿಕ್ಕಷ್ಟರಲ್ಲಿಯೇ ಸಂತೋಷಪಡುವವನು ಜಾಣ. ಇವನಿಗೆ ದುಃಖದ ಭಯವಿಲ್ಲ. ದುಃಖವಿಲ್ಲದೆ ಬದುಕಬೇಕಾದರೆ ಎಲ್ಲವೂ ಬೇಕೆಂಬ ಆಸೆಯನ್ನು ಬಿಡಬೇಕು. ಸಂತೃಪ್ತಿಯೇ ಸುಖ, ಆಸೆಯೇ ದುಃಖ ಎಂಬುದೇ ಈ ಬೋಧನೆಯ ಸಾರಾಂಶ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಪುರಂದರದಾಸರು, ಕನಕದಾಸರನ್ನು ಸ್ಮರಿಸಿರುವ ಕೈವಾರ ತಾತಯ್ಯ

Exit mobile version