Site icon Vistara News

ತಾತಯ್ಯ ತತ್ವಾಮೃತಂ : ಭೇದವಿಲ್ಲದಿರೆ ವಾದವಿಲ್ಲವಯ್ಯಾ…!

tatayya thathvamrutam a column by dr m r jayaram about saint kaivara narayanappa

tatayya

ಕೈವಾರದ ಶ್ರೀಯೋಗಿನಾರೇಯಣ ತಾತಯ್ಯನವರು ಜಗತ್ತಿನ ಮುಂಬರುವ ದಿನಗಳ ಭವಿಷ್ಯತ್ತಿನಲ್ಲಿ ಕಾಡುವ ಸಮಸ್ಯೆಗಳ ಬಗ್ಗೆ ತಮ್ಮ ತತ್ವಬೋಧನೆಗಳಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಒಂದು ಕೀರ್ತನೆಯಲ್ಲಿ “ಭೇದಮು ವುಡುಗಿತೇ, ವಾದಮು ವುಡುಗುನು” (ಭೇದವು ಇಲ್ಲದಿದ್ದರೆ, ವಾದವು ಇರುವುದಿಲ್ಲ) ಎಂದಿದ್ದಾರೆ.

ಇಂದು ಮಾನವ, ಮಾನವರ ನಡುವೆ ಭೇದವು ಹೆಚ್ಚಾಗಿ, ಸಮಾಜದ ಸಾಮರಸ್ಯವು ಹದಗೆಡುತ್ತಿದೆ. ಎಲ್ಲಿ ಭೇದವಿರುವುದಿಲ್ಲವೋ ಅಲ್ಲಿ ವಾದ-ವಿವಾದಗಳು ಬೆಳೆಯುವುದಿಲ್ಲ, ಭೇದವಿಲ್ಲದಿದ್ದರೆ ದ್ವಂದ್ವ ಭಾವನೆ ಬೆಳೆಯುವುದಿಲ್ಲ, ಎಲ್ಲಿ ಭೇದವಿರುವುದಿಲ್ಲವೋ ಅಲ್ಲಿ ಆತ್ಮಸಾಮರಸ್ಯ ಉಂಟಾಗುತ್ತದೆ, ಶಾಂತಿ, ನೆಮ್ಮದಿ ನೆಲೆಸುತ್ತದೆ.

ಒಂದೇ ವೇದವಿದ್ದ ಕಾಲದಲ್ಲಿ ಜನರಲ್ಲಿ ಭೇದವಿರಲಿಲ್ಲ. ದ್ವಾಪರಯುಗದಲ್ಲಿ ಶ್ರೀವೇದವ್ಯಾಸರು ಮುಂದಿನ ದಿನಗಳಿಗೆ ವೇದವನ್ನು ಮತ್ತಷ್ಟು ಸರಳೀಕರಣಗೊಳಿಸಿ ಕೊಟ್ಟರು. ಆಗ ವೇದಗಳು ನಾಲ್ಕು ಭಾಗಗಳಾಯಿತು. ಕಾಲನುಕ್ರಮವಾಗಿ ಉಪವೇದಗಳು, ಉಪನಿಷತ್ತುಗಳು, ಪುರಾಣಗಳು ರೂಪುಗೊಂಡವು. ಇವುಗಳ ಮೂಲ ಉದ್ದೇಶವೆಂದರೆ ಜನರಲ್ಲಿ ಸರಳವಾಗಿ ಭಕ್ತಿಯ ಭಾವವು ಮೂಡಲಿ, ಜ್ಞಾನವು ವೃದ್ಧಿಯಾಗಲಿ ಎಂಬುದಷ್ಟೇ ಆಗಿತ್ತು. ಮೂಲದಲ್ಲಿ ಯಾವ ರೀತಿಯಾದ ಉದ್ದೇಶದಿಂದ ತತ್ವಬೋಧನೆಗಳು ರೂಪುಗೊಂಡವೋ, ಅದೇ ಉದ್ದೇಶವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಯಿತು. ಮತಗಳಲ್ಲಿ ವಿಭಜನೆಯಾಯಿತು. ಮತಗುರುಗಳು ಹುಟ್ಟಿಕೊಂಡರು. ಮತಭೇದಗಳು ಹೆಚ್ಚು, ಹೆಚ್ಚಾಯಿತು. ಇದನ್ನೇ ತಾತಯ್ಯನವರು ಹೀಗೆ ಹೇಳಿದ್ದಾರೆ.

ಆರು ಮತಮುಲಂದು ಅಖಿಲಾಂಡನಾಯಕುಡು
ಸಂಪ್ರೀತಿತೋ ವುಂಡು ಸಹಜಮುಗನು
ಮರ್ಮಂಬು ತೆಲಿಯಕನು ಮತಭೇದಮುಲು ಜೇಸಿ
ಕಟ್ಟಡೀ ಕರ್ಮಮುಲ ಕರಿಗಿನಾರು||

ಆರು ಮತಗಳ ದರ್ಶನ ಸಂಪ್ರದಾಯಗಳಲ್ಲಿ ಅಖಿಲಾಂಡನಾಯಕನಾದ ಒಬ್ಬನೇ ಪರಮಾತ್ಮನು ಪರಿಪೂರ್ಣ ಭಾವದಿಂದ ಸಮಾನವಾಗಿ ತುಂಬಿಕೊಂಡಿದ್ದಾನೆ. ಈ ಮರ್ಮವನ್ನು ಅರಿತುಕೊಳ್ಳದೆ ಮತಸಂಪ್ರದಾಯವಾದಿಗಳು ಮತಭೇದ ಮಾಡಿಕೊಂಡು, ವಿಭಿನ್ನವಾದ ಆಚಾರ ಸಂಪ್ರದಾಯಗಳ ಕಟ್ಟಳೆ ಮತ್ತು ಕರ್ಮಗಳನ್ನು ರಚಿಸಿಕೊಂಡು ಭೇದಭಾವಗಳಲ್ಲಿ ಮುಳುಗಿದ್ದಾರೆ ಎನ್ನುತ್ತಿದ್ದಾರೆ ತಾತಯ್ಯನವರು.

“ಮತಮುಲನ್ನಿಯು ವೇರೆ ಮಾರ್ಗಂಬು ವೊಕ್ಕಟೇ” (ಮತಗಳು ಬೇರೆ,ಬೇರೆಯಾಗಿರಬಹುದು, ಆದರೆ ಸೇರುವ ಮಾರ್ಗವು ಒಂದೇ) ಎಂದಿದ್ದಾರೆ ತಾತಯ್ಯನವರು. ಮತ ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಆದರೆ ಪರಮಾತ್ಮನ ಬಳಿಗೆ ಸೇರಲು ಮಾರ್ಗವನ್ನು ತೋರಿಸುವುದೇ ಆ ಮತಗಳ ಗುರಿಯಾಗಿದೆ. ಉಪಾಸನೆ ಮಾಡುವ ಭಕ್ತರ ಮಾರ್ಗದರ್ಶನಕ್ಕಾಗಿ ಮತೀಯ ದರ್ಶನಗಳಿವೆ.

ಭೇದವಾದವನ್ನು ಸಮಾಜದಲ್ಲಿ ಹರಡಿ ಮೇಲು, ಕೀಳುಗಳ ತಾರತಮ್ಯವನ್ನು ಉಂಟುಮಾಡಿ, ಜನರ ದಿಕ್ಕು ತಪ್ಪಿಸುವುದು ಮತಗಳ ಉದ್ದೇಶವಾಗಿರಬಾರದು. ಮತಗಳೆಲ್ಲ ಮಾರ್ಗಗಳು, ಅವೆಲ್ಲ ಕೊನೆಗೆ ಒಂದೇ ಮಾರ್ಗದಲ್ಲಿ ಸೇರುತ್ತದೆ. ಹೇಗಾದರೆ ಒಂದು ಊರಿಗೆ ನಾಲ್ಕು ದಾರಿಗಳಿರುತ್ತದೆಯೋ, ಹಾಗೆಯೇ ಪರಮಾತ್ಮನಲ್ಲಿ ಸೇರಲು ನಾನಾ ಮಾರ್ಗಗಳಿವೆ. ಮಾರ್ಗ ತೋರಿಸುವುದಷ್ಟೇ ಮತಗಳ ಲಕ್ಷ್ಯವಾಗಬೇಕು.

ಸ್ತ್ರೀಲು ಪುರುಷಲಂದು ಶಿವಯೋಗಿವರುಲಂದು
ಜ್ಞಾನಹೀನಲಂದು ಸುಜ್ಞಾನುಲಂದು
ಸರ್ವಸಮುಡು ವುಂಡು ಸಕಲದೇಹಮುಲಂದು
ತೆಲಿಯನಿಯ್ಯದು ಮಾಯ ತೇಟಪಡದು ||

ಪರಮಾತ್ಮನು ಯಾವುದೇ ಭೇದಭಾವಕ್ಕೆ ಅವಕಾಶವಿಲ್ಲದಂತೆ ಸ್ತ್ರೀ ಮತ್ತು ಪುರುಷರಲ್ಲಿ, ಶಿವಯೋಗಿವರ್ಯರಲ್ಲಿ, ಜ್ಞಾನಹೀನರಲ್ಲಿ, ಸುಜ್ಞಾನಿಗಳಲ್ಲಿ ಸರ್ವರಲ್ಲೂ ಸಮಭಾವದಿಂದ ಎಲ್ಲಾ ದೇಹಗಳಲ್ಲಿಯೂ ನೆಲೆಸಿದ್ದಾನೆ. ಆದರೆ ಈ ಸತ್ಯದ ಅರಿವನ್ನು ಮಾಡಿಕೊಡಲು ಮಾಯೆಯ ಭ್ರಾಂತಿ ಬಿಡುತ್ತಿಲ್ಲ ಎನ್ನುತ್ತಿದ್ದಾರೆ ತಾತಯ್ಯನವರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಸತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಜನರು ಭೇದವಾದ ಮಾಡಿ ದೇವರು-ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿದ್ದಾರೆ. ದೇವರು ಸಕಲದೇಹವಿಹಾರಿ ಎಂದಿದ್ದಾರೆ. ಇಂತಹ ಸತ್ಯವನ್ನು ಅರಿವು ಮಾಡಿಕೊಟ್ಟು, ಪರತತ್ವದ ಬೋಧನೆಯನ್ನು ಮಾಡುವಂತಹ ಗುರು ಹೇಗಿರುತ್ತಾನೆ? ಇದಕ್ಕೆ ತಾತಯ್ಯನವರು ಹೀಗೆ ಉತ್ತರಿಸಿದ್ದಾರೆ.

ತೆಲಿಯವಚ್ಚುನು ಗುರುನಿ ತತ್ವೋಪದೇಶಮುನ
ತಲ್ಲಿವಂಟಿ ಗುರುಡು ದೊರಕುಟರುದು||

ಪರಮಾತ್ಮತತ್ವದ ಸತ್ಯವನ್ನು ಗುರುವಿನ ತತ್ವೋಪದೇಶದ ಸಹಾಯದಿಂದ ತಿಳಿಯಲು ಸಾಧ್ಯವಿದೆ. ಆದರೆ ಲೋಕದಲ್ಲಿ ತಾಯಿಯಂತಹ ಗುರು ಸಿಗುವುದು ವಿರಳ ಎಂದಿದ್ದಾರೆ. ಗುರು ತಾಯಿಯಂತೆ ಇರಬೇಕು. ಅಂತಹ ಗುರು ಸಿಕ್ಕುವುದು ಶಿಷ್ಯನ ಭಾಗ್ಯ. ಗುರುವೇ ತಾಯಿ, ಶಿಷ್ಯನೇ ಮಗು. ದೈವತತ್ವೋಪದೇಶ ತಿಳಿಯಬೇಕಾದರೆ ತಾಯಿಯಂಥ ಗುರುವಿನ ಉಪದೇಶ ಬೇಕು. ಆಗ ಜ್ಞಾನದ ಬೆಳಕು ಹೊಮ್ಮುತ್ತದೆ. ಆದರೆ ಅಂತಹ ಗುರು ಸಿಕ್ಕುವುದು ದುರ್ಲಭ.

ಒಟ್ಟಿನಲ್ಲಿ, ಸರ್ವರಲ್ಲೂ ದೈವವು ವ್ಯಾಪಿಸಿರುವ ಸತ್ಯವನ್ನು ಕಂಡುಕೊಂಡು, ಮಾಯೆಗೆ ಒಳಗಾಗದೆ, ಭೇದಭಾವ ಮಾಡದೆ, ಭಕ್ತಿಯ ಉಪಾಸನೆಯಲ್ಲಿ ಅರಿವನ್ನು ಪಡೆಯಬೇಕೆಂಬುದೇ ತಾತಯ್ಯನವರ ಬೋಧನೆಗಳ ಸಾರವಾಗಿದೆ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ

Exit mobile version