“ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೇ ಸಾಕೋ” ಎಂದು ದಾಸಶ್ರೇಷ್ಠರಾದ ಪುರಂದರದಾಸರು ಪರಮಾತ್ಮನ ನಾಮಸ್ಮರಣೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಹುಟ್ಟು ಸಾವುಗಳೆಂಬ ಭವರೋಗವನ್ನು ಪರಿಹರಿಸುವ ಶಕ್ತಿ ಪರಮಾತ್ಮನ ನಾಮಸ್ಮರಣೆಗೆ ಇದೆ. ನಾಮಸ್ಮರಣೆಯ ಮಹಿಮೆಯನ್ನು ತಮ್ಮ ಕೀರ್ತನೆಯಲ್ಲಿ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ.
“ಆತ್ಮಧ್ಯಾನಿಸೋ ಮನುಜ ಹರಿಪುಣ್ಯನಾಮ
ಬಲವಂತವಾದ ಭವಹರ ಮಾಡೋ ನಾಮ” ಎಂದಿದ್ದಾರೆ.
ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡು, ಇದು ಎಷ್ಟು ಪ್ರಭಾವಶಾಲಿಯಾದದು ಎಂದರೆ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ ಎನ್ನುತ್ತಾರೆ ತಾತಯ್ಯನವರು. ನಾಮಸ್ಮರಣೆ ಮಾಡು ಎಂದು ಹೇಳಿ ತಾತಯ್ಯನವರು ಸುಮ್ಮನಾಗುವುದಿಲ್ಲ. ನಮಗೆ ಅಂತರಂಗದಲ್ಲಿ ಮಾಡುವ ನಾಮಸ್ಮರಣೆಯ ಮಹಿಮೆಯನ್ನು ಅರ್ಥಮಾಡಿಸಲು ಉದಾಹರಣೆಯ ಸಹಿತವಾಗಿ ತಿಳಿಸಿಕೊಡುತ್ತಾರೆ.
ಘೋರಪಾತಕ ಅಜಾಮಿಳನ ಸಲಹಿದ ನಾಮ
ವಾಲ್ಮೀಕಿಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗ ಕಾಯ್ದ ನಾಮ||
ಆಜಾಮಿಳನು ಮಾಡಿರುವ ಪಾಪಗಳನ್ನು ಕಂಡು ತಾತಯ್ಯನವರು ಅವನನ್ನು ಘೋರಪಾತಕ ಎಂದಿದ್ದಾರೆ. ಭಾಗವತದ ಆರನೇಯ ಸ್ಕಂದದಲ್ಲಿ ಬರುವ ಆಜಾಮಿಳನ ಕಥೆಗೆ ಬಹಳ ಮಹತ್ವವಿದೆ. ಅಜಾಮಿಳನು ತಂದೆ, ತಾಯಿ ಮತ್ತು ಹೆಂಡತಿಯನ್ನು ತ್ಯಜಿಸಿ, ಅನ್ಯಸ್ತ್ರೀಯ ಸಂಪರ್ಕವನ್ನು ಮಾಡಿ, ದುರಾಚಾರದಿಂದ ಮಾಡಬಾರದ ಪಾಪಗಳನ್ನು ಮಾಡಿರುತ್ತಾನೆ. ಕೊನೆಗೆ ತನ್ನ ಮರಣದ ಸಂದರ್ಭದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಕೂಡಿದ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಹೊಂದುತ್ತಾನೆ. ಇದರಿಂದ ನಮಗೆ ತಿಳಿಯುವುದೆನೆಂದರೆ ಪರಮಾತ್ಮನಿಗೂ, ಪರಮಾತ್ಮನ ನಾಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹೃದಯದ ಭಾವನೆಗೆ ತಕ್ಕಂತೆ ಒಲಿಯುವವನು ಪರಮಾತ್ಮ..
ವಾಲ್ಮೀಕಿ ಮಹರ್ಷಿ ಶ್ರೇಷ್ಠವಾದ ರಾಮಾಯಣದ ಕರ್ತೃ. ರಾಮನಾಮ ಸ್ಮರಣೆಯಿಂದ ತನ್ನ ಪೂರ್ವಕರ್ಮಗಳೆಲ್ಲವನ್ನೂ ನಾಶಪಡಿಸಿಕೊಂಡು ಜ್ಞಾನಿಯಾಗಿ, ರಾಮನಾಮವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಹೊರಬಂದವರು ವಾಲ್ಮೀಕಿ ಮಹರ್ಷಿಗಳು. ಈ ಕಾರಣದಿಂದಲೇ ತಾತಯ್ಯನವರು ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ ಎಂದಿದ್ದಾರೆ.
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ ತಾತಯ್ಯನವರು. ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ ವಿದುರ. ವಿದುರನು ದಾಸಿಯ ಪುತ್ರನಾದ ಕಾರಣ ರಾಜನೆಂದು ಪರಿಗಣಿಸಲಿಲ್ಲ. ಆದರೆ ಪರಮಾತ್ಮನ ಮಹಾಭಕ್ತ. ನೀತಿ ಮತ್ತು ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು. ತನ್ನ ನೀತಿ ಮಾತುಗಳಿಂದ ಪಾಂಡವರನ್ನು ಎಚ್ಚರಿಸುತ್ತಿದ್ದನು. ರಾಯಭಾರಕ್ಕೆಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ಆತಿಥ್ಯವನ್ನೂ ಸ್ವೀಕರಿಸದೆ ನೇರವಾಗಿ ವಿದುರನ ಮನೆಗೆ ತೆರಳುತ್ತಾನೆ. ಇದು ನನ್ನ ಸೌಭಾಗ್ಯವೆಂದು ತಿಳಿದ ವಿದುರನು ಶ್ರೀಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ ಅತಿಥ್ಯವನ್ನು ನೀಡುತ್ತಾನೆ.
ಶ್ರೀಕೃಷ್ಣನು ಬಂದನೆಂಬ ಸಂತೋಷದಲ್ಲಿ ಬಾಳೆಹಣ್ಣನ್ನು ನೀಡುವಾಗ ಹಣ್ಣನ್ನು ಬಿಸಾಕಿ, ಮೇಲಿನ ಸಿಪ್ಪೆಯನ್ನು ಕೃಷ್ಣನಿಗೆ ನೀಡುತ್ತಾನೆ. ಆಗ ಶ್ರೀಕೃಷ್ಣನು ಅವನ ಅಂತರAಗದ ಮುಗ್ಧ ಭಕ್ತಿಯನ್ನು ಕಂಡು ಸಿಪ್ಪೆಯನ್ನೇ ಸ್ವೀಕರಿಸಿ ಅವನನ್ನು ಹರಸಿ ಹಾರೈಸುತ್ತಾನೆ. ಇದನ್ನೇ ತಾತಯ್ಯನವರು ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ.
ದ್ರೌಪದಿಯು ಪಂಚ ಪಾಂಡವರ ಧರ್ಮಪತ್ನಿ. ಧರ್ಮರಾಯನು ಜೂಜಾಟದಲ್ಲಿ ಸರ್ವಸ್ವವನ್ನು ಸೋತಾಗ ಕೊನೆಗೆ ದ್ರೌಪದಿಯನ್ನೇ ಪಣವಾಗಿ ಇಡುತ್ತಾನೆ. ಪಣದಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುತ್ತಾರೆ. ವಸ್ತ್ರಾಪಹರಣದ ಸಂದರ್ಭದಲ್ಲಿ ದ್ರೌಪದಿಯ ರಕ್ಷಣೆಗೆ ಯಾರೂ ಬರದಿದ್ದಾಗ, ತಾನು ನಂಬಿರುವ ಶ್ರೀಕೃಷ್ಣನನ್ನು ಮನಪೂರ್ವಕವಾಗಿ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣನು ಅಕೆಗೆ ಅಭಯವನ್ನು ನೀಡಿ ಅವಮಾನದಿಂದ ರಕ್ಷಿಸುತ್ತಾನೆ. ಇದನ್ನೇ ತಾತಯ್ಯನವರು ದ್ರೌಪದಿಯ ಮಾನಭಂಗ ಕಾಯ್ದ ನಾಮ ಎಂದಿದ್ದಾರೆ.
ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನವು ಜಪಿಸುವ ನಾಮ
ಗಜವ ಪಾಲಿಸಿದ-ಜಗದೀಶ್ವರನ ನಾಮ||
ರಕ್ಕಸನ ಅನುಜನೆಂದರೆ ರಾವಣನ ಸಹೋದರ ವಿಭೀಷಣ. ವಿಬೀಷಣ ರಾಕ್ಷಸನಾದರೂ ಉತ್ತಮ ಗುಣಗಳನ್ನು ಹೊಂದಿದ್ದನು. ತಪಸ್ಸಿನ ಫಲದಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು ವಿಭೀಷಣ. ವಿಭೀಷನು ಕೇಳಿದ ವರವೆಂದರೆ “ನನಗೆ ಮಹಾವಿಷ್ಣುವಿನ ದರ್ಶನವಾಗಬೇಕು ಹಾಗೂ ಪರಮಾತ್ಮನ ಚರಣಕಮಲಗಳಲ್ಲಿ ಮನಸ್ಸು ಸ್ಥಿರವಾಗಿರಬೇಕು” ಎಂದು ವರ ಪಡೆದಿರುತ್ತಾನೆ. ಅದರಂತೆ ಶ್ರೀರಾಮನ ದರ್ಶನವಾಗುತ್ತದೆ. ಸರ್ವಸ್ವವನ್ನು ತ್ಯಜಿಸಿ ಪರಮಾತ್ಮನ ಪಾದದಲ್ಲಿ ಶರಣಾಗುತ್ತಾನೆ. ಕೊನೆಗೆ ಲಂಕೆಗೆ ರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ. ರಕ್ಕಸನ ಅನುಜನಿಗೆ ಪಟ್ಟ ಕಟ್ಟಿದ ನಾಮ ಎಂದಿದ್ದಾರೆ ತಾತಯ್ಯನವರು.
ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ. ಹಿರಣ್ಯಕಶ್ಯಪು ಅಹಂಕಾರದಿAದ ಮೆರೆಯುತ್ತಿರುತ್ತಾನೆ. ಆದರೆ ಪ್ರಹ್ಲಾದ ಮಾತ್ರ ಭಗವಂತನ ನಾಮಸ್ಮರಣೆಯಲ್ಲಿಯೇ ಮಗ್ನನಾದವನು. ತಂದೆ ಎಷ್ಟೇ ಕಷ್ಟಗಳನ್ನು ಕೊಟ್ಟರೂ ಧೃತಿಗೆಡದೆ ಪರಮಾತ್ಮನಲ್ಲಿ ಶರಣಾದವನು ಪ್ರಹ್ಲಾದ. ನಾಮಸ್ಮರಣೆಯಿಂದಲೇ ಕೊನೆಗೆ ಶ್ರೀನರಸಿಂಹ ಅವತಾರದಲ್ಲಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಕಾರಣದಿಂದ ಪ್ರಹ್ಲಾದನಿಗೆ ಪ್ರಸನ್ನವಾದ ನಾಮ ಎಂದಿದ್ದಾರೆ ತಾತಯ್ಯನವರು.
ಬ್ರಹ್ಮಾದಿಯಾಗಿ ದೇವತೆಗಳೆಲ್ಲರೂ ಅನುದಿನವೂ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾರೆ ಎನ್ನುತ್ತಾ ಗಜೇಂದ್ರ ಮೋಕ್ಷದ ಪ್ರಸಂಗವನ್ನು ತಾತಯ್ಯನವರು ನೆನಪಿಸಿಕೊಳ್ಳುತ್ತಾರೆ. ಪರಮಾತ್ಮನು ಆತ್ಮದ ಅಂತರಂಗದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾನೆ ಎನ್ನುವುದಕ್ಕೆ ಗಜವನ್ನು ರಕ್ಷಿಸುವುದೇ ಸಾಕ್ಷಿಯಾಗಿದೆ.
ಹಂತಕನ ದೂತರನ ಹೊಡೆದು ಓಡಿಸೋ ನಾಮ
ಆಂಜನೇಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ಅಮರ ನಾರೇಯಣಸ್ವಾಮಿ ನಾಮ||
ಯಮದೂತರನ್ನು ಹೊಡೆದು ಓಡಿಸುವ ಶಕ್ತಿಯನ್ನು ನಾಮಸ್ಮರಣೆಯು ಪಡೆದುಕೊಂಡಿದೆ ಎನ್ನುತ್ತಿದ್ದಾರೆ ತಾತಯ್ಯನವರು. ಭಗವಂತನ ನಾಮಸ್ಮರಣೆಯ ಬಲದ ಆಧಾರದಿಂದ ಆಂಜನೇಯನು ಎಲ್ಲಾ ಸಾಧನೆಯನ್ನು ಮಾಡಿದ ಎನ್ನುವ ಉದಾಹರಣೆಯನ್ನು ನೀಡುತ್ತಾ ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಎಲ್ಲಾ ಕಾರಣಗಳಿಂದ ಭಗವಂತನ ನಾಮಸ್ಮರಣೆಯನ್ನು ನಂಬಿಕೊಳ್ಳಿ ಎಂದು ಮನದಟ್ಟು ಮಾಡಿಕೊಡುತ್ತಾ, ಕೊನೆಯದಾಗಿ ಶ್ರೀಅಮರನಾರೇಯಣಸ್ವಾಮಿಯ ಅಂಕಿತವನ್ನು ಹಾಕಿ, ಪರಮಾತ್ಮನಿಗೆ ಸಮರ್ಪಣೆಯನ್ನು ಮಾಡಿದ್ದಾರೆ. ಇದೇ ನಾಮಸ್ಮರಣೆಯ ಶ್ರೇಷ್ಠತೆ.
– ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ