Site icon Vistara News

ತಾತಯ್ಯ ತತ್ವಾಮೃತಂ : ಕುಲ, ಕುಲವೆಂದು ಹೊಡೆದಾಡದಿರಿ ಎಂದಿರುವ ತಾತಯ್ಯ!

kaivara tatayya kanakadasa

#image_title

ಕುಲ, ಕುಲ, ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂದು ದಾಸಶ್ರೇಷ್ಠ ಸಂತ ಕನಕದಾಸರು ಕುಲದ ದುರಭಿಮಾನಿಗಳನ್ನು ತಮ್ಮ ಕೀರ್ತನೆಯ ಮೂಲಕ ತಿದ್ದುವ ಪ್ರಯತ್ನವನ್ನು ಮಾಡಿದ್ದಾರೆ. ಸಂತರು, ಮಹಾತ್ಮರು, ಜ್ಞಾನಿಗಳೆಲ್ಲರೂ ಒಂದೇ. ಅವರಲ್ಲಿ ಭೇದವೆಣಿಸಬಾರದು. ಜ್ಞಾನಿಗಳೆಲ್ಲರೂ ತಾವು ಕಂಡುಕೊಂಡ ಜ್ಞಾನದ ಸಾರವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಕನಕದಾಸರ ಈ ಸಾಲುಗಳಿಗೆ ಹೋಲಿಕೆಯಾಗುವಂತೆ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ;
“ಕುಲಮು ವಿಡಚಿನಾರಮು ಯೇ ಕುಲಮುಲೋನಾ ಕಲಿಯಮು
ಕುಲಗೋತ್ರಮುಲ ಕೂಲವೇಸಿ ಕುದರಮೆಕ್ಕಿನಾರಮು”

ನಾನು ಕುಲವನ್ನು ಬಿಟ್ಟಿದ್ದೇನೆ. ಕುಲವನ್ನು ಬಿಟ್ಟು ಮತ್ತೇ ಯಾವ ಕುಲದಲ್ಲಿಯೂ ಸೇರಿದವನಲ್ಲ. ಕುಲ, ಗೋತ್ರ ಎಲ್ಲವನ್ನು ಬಿಟ್ಟು ಕುದುರೆಯೇರಿದ್ದೇನೆ ಎಂದಿದ್ದಾರೆ ತಾತಯ್ಯನವರು. ಕುದುರೆಯೇರಿದ್ದೇನೆ ಎಂದರೆ ಈ ಕುಲ, ಗೋತ್ರ ಎಂಬ ಅಲ್ಪವಾದ ವಿಷಯಗಳನ್ನು ದಾಟಿ, ಮೆಟ್ಟಿನಿಂತು ಸರ್ವ ಸಮಾನವಾದ ಏಕದೃಷ್ಟಿಯನ್ನು ಹೊಂದಿದ್ದೇನೆ ಎಂದು ಅರ್ಥ. ಎತ್ತರದ ಬೆಟ್ಟವನ್ನು ಏರಿದವನಿಗೆ ಭೂಪ್ರದೇಶವು ಅಲ್ಪವಾಗಿ ಕಾಣುತ್ತದೆ. ಇದು ಯೋಗಿಯ ಲಕ್ಷಣ. ಇನ್ನೊಂದು ಪದ್ಯದಲ್ಲಿ ನಾನು ಯಾವ ಮತಕ್ಕೂ ಸೇರದೇ ಯೋಗಿಯ ಮತಕ್ಕೆ ಸೇರಿದವನು ಘಂಟಾಘೋಷವಾಗಿ ಸಾರಿದ್ದಾರೆ ತಾತಯ್ಯನವರು.

“ಅಂಟುಲೇನಿವಾರಮು ಆರಿಂಟ ತುದನು ವುಂದುಮೂ
ಆತ್ಮಚಿಕ್ಕುಲನ್ನಿ ಪಟ್ಟಿ ಅಂಟಕೋಸಿನಾರಮು”

ನನಗೆ ಯಾವುದೇ ರೀತಿಯ ಅಂಟುಗಳಿಲ್ಲ. ಯಾಕೆಂದರೆ ನಾನು ಆರನೇ ಮನೆಯ ತುದಿಯಲ್ಲಿ ಇದ್ದೇನೆ. ಆತ್ಮಕ್ಕೆ ಅಂಟಿಕೊಂಡಿರುವ ಬಂಧನಗಳೆಲ್ಲವನ್ನೂ ಹಿಡಿದು ನಾಶ ಮಾಡಿದ್ದೇನೆ ಎಂದಿದ್ದಾರೆ ತಾತಯ್ಯನವರು. ಆರನೇ ಮನೆಯ ತುದಿ ಎಂದರೆ ಸಹಸ್ರಾರ ಚಕ್ರದಲ್ಲಿದ್ದೇನೆ ಎಂದು ಅರ್ಥ. ಇದು ಜ್ಞಾನ ಮತ್ತು ಅರಿವಿನ ಉತ್ತುಂಗದ ಹಂತ. ಈ ಹಂತದಲ್ಲಿ ಮಡಿ-ಮೈಲಿಗೆ, ಸೂತಕ-ಪಾತಕಗಳ ಭಯವಿರುವುದಿಲ್ಲ. ಇವೆಲ್ಲವನ್ನು ಮೀರಿದ ಅತೀತವಾದ ಸ್ಥಿತಿ.

ಒಬ್ಬ ಸಿದ್ಧಯೋಗಿ ಮಾತ್ರ ಈ ಸಾಧನೆಯನ್ನು ಮಾಡಬಲ್ಲ. ಸಹಸ್ರಾರ ಚಕ್ರದಲ್ಲಿರುವ ನನಗೆ ಯಾವುದೇ ಪ್ರಾಪಂಚಿಕ ಭವಬಂಧನಗಳಿಲ್ಲ. ಈ ಬಂಧನಗಳಿಂದ ಮುಕ್ತನಾಗಿದ್ದೇನೆ ಆದಕಾರಣ ಸರ್ವರೂ ಒಂದೇ, ಯಾರಲ್ಲಿಯೂ ಭೇದಭಾವ ತೋರುವುದಿಲ್ಲ ಎಂಬುದನ್ನು ತಾತಯ್ಯನವರು ಸ್ಪಷ್ಟಪಡಿಸಿದ್ದಾರೆ. “ಸಕಲದೇಹಮುಲ ಸಂಚರಿಂಚು ವಾಡೊಕ್ಕಡೇ ದೈವಮು ಓರನ್ನಾ” ಸಕಲರ ದೇಹಗಳಲ್ಲಿಯೂ ಸಂಚರಿಸುವವನು ಒಬ್ಬನೇ ದೈವವು ಆದ ಕಾರಣ ನಾನು ಎಲ್ಲರಲ್ಲಿಯೂ ಸೇರುವವನು. ನನಗೆ ಯಾವುದೇ ಅಂಟು ಇಲ್ಲ ಎಂದಿದ್ದಾರೆ ತಾತಯ್ಯನವರು.

ಆತ್ಮದ ಬಂಧನಗಳನ್ನು ಬಿಡಿಸಿಕೊಳ್ಳುವುದು ಎಂದರೆ ಇಪ್ಪತ್ತನಾಲ್ಕು ತತ್ವಗಳನ್ನು ದಾಟಿದ ಸಾಧನೆ. ಈ ಸಾಧನೆಯನ್ನು ಮಾಡಿದ ಸಾಧಕನನ್ನು ತಾತಯ್ಯನವರು “ಪ್ರಾಜ್ಞ” ಎಂದಿದ್ದಾರೆ;
“ತತ್ವಮುಲಿರುವದಿ ನಾಲ್ಗುಮೀದ ಪರ
ತತ್ವಮು ತೆಲಿಸಿನ ಪ್ರಾಜ್ಞುಂಡೈತೆ ಬ್ರಹ್ಮಮು ನೀವೇರಾ”

ಇಪ್ಪತ್ತನಾಲ್ಕು ತತ್ವಗಳ ಮೇಲಿರುವ ಅಂದರೆ ಇಪ್ಪತ್ತೈದನೇ ಪರತತ್ವವನ್ನು ಅರಿತ ಪ್ರಾಜ್ಞನಾದರೆ ಬ್ರಹ್ಮವು ನೀನೇ ಎಂದಿದ್ದಾರೆ ತಾತಯ್ಯನವರು. ಪರಬ್ರಹ್ಮತತ್ವದಲ್ಲಿ ಐಕ್ಯವಾಗಿರುವ ಸಾಧಕನು ಸದಾ ಸುಖಿ. ಈ ಸಾಧಕನಿಗೆ ಅಲ್ಪವಾದ ಕುಲಗೋತ್ರಗಳ ಹಂಗಿರುವುದಿಲ್ಲ, ಇದರ ಆಲೋಚನೆಯೂ ಇರುವುದಿಲ್ಲ.

ಕುಲವಿರುವುದು ಎರಡೇ !

ಕುಲದ ಗುಂಗಿನಲ್ಲಿ ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರಯತ್ನವಾಗಬಾರದು, ಏಕರೂಪತ್ವದ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಸಾಧಿಸುತ್ತಾ ಜೀವನವನ್ನು ಸಾರ್ಥಕ ಪಥದೆಡೆಗೆ ನಡೆಸಿಕೊಂಡು ಹೋಗಬೇಕು ಎನ್ನುವುದೇ ತಾತಯ್ಯನವರ ಆಶಯ. ನಾದಬ್ರಹ್ಮಾನಂದ ನಾರೇಯಣ ಕವಿ ಶತಕದಲ್ಲಿ ಕುಲದ ಬಗ್ಗೆ ಹೀಗೆ ಹೇಳಿದ್ದಾರೆ ತಾತಯ್ಯನವರು.

ಮಗವಾರು ವಕ ಕುಲಮು ಮಗುವಲು ವಕ ಕುಲಮು
ವೆದಕಿ ಚೂಚಿನ ವೇರೇ ಕುಲಮು ಲೇದು
ಸೃಷ್ಟೀಶ್ವರುಡು ಯಿನ್ನಿ ಚಿಕ್ಕೆಲು ಜೇಸೆರಾ
ನಾದ ಬ್ರಹ್ಮಾನಂದ ನಾರೇಯಣ ಕವಿ ||

ಈ ಪ್ರಪಂಚದಲ್ಲಿ ಗಂಡು, ಹೆಣ್ಣು ಎಂಬ ಎರಡೇ ಕುಲಗಳು ಇರುವುದು, ಹುಡುಕಿ ನೋಡಿದರೂ ಬೇರೆ ಕುಲಗಳು ಕಾಣ ಸಿಗುವುದಿಲ್ಲ. ಆದರೂ ಸೃಷ್ಟೀಶ್ವರನು ಇಷ್ಟೆಲ್ಲ ತೊಡಕುಗಳನ್ನು ಉಂಟು ಮಾಡಿದನು ಎಂದಿದ್ದಾರೆ ತಾತಯ್ಯನವರು. ಗಂಡು-ಹೆಣ್ಣೆಂಬ ಎರಡೇ ಕುಲಗಳುಳ್ಳ ಏಕೈಕ ಮಾನವ ಸಮಾಜದ ಸಿದ್ದಾಂತವನ್ನು ತಾತಯ್ಯನವರು ಈ ಪದ್ಯದಲ್ಲಿ ಎತ್ತಿ ಹಿಡಿದಿದ್ದಾರೆ.

ತಾತಯ್ಯ ನೀಡಿದ ವಿಶ್ವಮಾನವ ಸಂದೇಶ

ವಿಶ್ವಮಾನವ ಸಂದೇಶವನ್ನು ತಾತಯ್ಯನವರು ಈ ಪದ್ಯದಲ್ಲಿ ಬೋಧಿಸುತ್ತಿದ್ದಾರೆ.

ಜಾತಿ ಕೊಂಚಂಬೈನ ಜನುಲು ಎವ್ವರು ಲೇರು
ಜಾತಿ ವಿಜಾತುಲನಿ ಯೆಂಚರಾದು
ಅಂತ ವಕಟೇ ಜಾತಿ ಮರಿ ವಕಟಿಲೇದುರಾ
ನಾದ ಬ್ರಹ್ಮಾನಂದ ನಾರೇಯಣ ಕವಿ ||

ಅಲ್ಪಜಾತಿಗೆ ಸೇರಿದ ಮಾನರ‍್ಯಾರೂ ಇಲ್ಲ, ಎಲ್ಲರೂ ಉತ್ತಮರೇ, ಜಾತಿಯಲ್ಲಿ ಮೇಲು-ಕೀಳೆಂದು ಭೇದ ಎಣಿಸಬಾರದು, ಮಾನವರೆಲ್ಲರೂ ಒಂದೇ ಜಾತಿ, ಮತ್ತೊಂದು ಜಾತಿ ಇಲ್ಲವಯ್ಯಾ ಎಂದು ವಿಶ್ವ ಭ್ರಾತೃತ್ವದ ಪರಿಕಲ್ಪನೆಯನ್ನು ಈ ಪದ್ಯದಲ್ಲಿ ತಾತಯ್ಯನವರು ಕಟ್ಟಿಕೊಟ್ಟಿದ್ದಾರೆ. ಜಾತಿಗಳಿಗಿಂತಲೂ ಮಾನವೀಯತೆ ದೊಡ್ಡದು. ಮಾನವರಲ್ಲಿ ಆತ್ಮೀಯವಾದ ಭಾವನೆ ಬೆಳೆಯಬೇಕು, ಜಾತಿಗಳ ನಡುವೆ ಸಂಘರ್ಷವಾಗಬಾರದು ಎಂಬುದೇ ತಾತಯ್ಯನವರ ಆಶಯ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ತಾತಯ್ಯನವರು ಒಂದು ಕೀರ್ತನೆಯಲ್ಲಿ “ಜಾತಿಭೇದವ ಮಾಡೋ ಪಾತಕರ ಬಿಡಬೇಕೋ” ಎಂದು ನಿರ್ದಾಕ್ಷಿಣ್ಯವಾಗಿ ನುಡಿದಿದ್ದಾರೆ. ಜಾತಿಭೇದ ಮಾಡುವವರನ್ನು ಪಾತಕರು ಎಂದಿದ್ದಾರೆ. ಜಾತಿಭೇದವ ಮಾಡದೇ ಮೇಲು-ಕೀಳು ಎಂಬ ಸಂಕುಚಿತ ಮನೋಭಾವನೆಯನ್ನು ಮನಸ್ಸಿನಿಂದ ತೊಡೆದುಹಾಕಿ ಎಲ್ಲರೂ ಒಂದೇ ಎಂಬ ಸಾಮರಸ್ಯದ ಸಂಕೇತವಾಗಿ ತಾತಯ್ಯನವರ ಬೋಧನೆಗಳು ಪ್ರತಿಬಿಂಬಿತವಾಗಿದೆ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ಭೇದವಿಲ್ಲದಿರೆ ವಾದವಿಲ್ಲವಯ್ಯಾ…!

Exit mobile version