Site icon Vistara News

ತಾತಯ್ಯ ತತ್ವಾಮೃತಂ : ಮಾಯೆ ಮತ್ತು ಮನಸ್ಸು; ಕೈವಾರ ತಾತಯ್ಯ ಹೇಳಿರುವುದೇನು?

kaivara-tatayya

kaivara-tatayya

ಮಾನವರಲ್ಲಿ ಆಸೆಗಳ ಭ್ರಾಂತಿಯನ್ನು ಬೆಳೆಸಿ ಆತ್ಮ ರಹಸ್ಯವನ್ನು ತಿಳಿಯದಂತೆ ಮಾಡಿರುವುದೇ ಮಾಯೆ. ಮಾನವರಲ್ಲಿ ರಾಗ ದ್ವೇಷಗಳನ್ನು ಹುಟ್ಟಿಸುತ್ತಾ ತತ್ವಜ್ಞಾನಕ್ಕೆ ಅಡ್ಡಿಯುಂಟು ಮಾಡುತ್ತಾ, ಮರಣಕಾಲದವರೆಗೂ ಅಜ್ಞಾನಿ ಯಾಗಿಯೇ ಉಳಿಸುವುದು ಮಾಯೆ.

ಮಾನವರಾಗಿ ಹುಟ್ಟುವ ಮೊದಲು ಈ ಆತ್ಮ ಪರಮಾತ್ಮನ ಪಾದದಲ್ಲಿತ್ತು. ಆಗ ಆತ್ಮದ ಉದ್ದೇಶವೇನು ಎಂಬುದು ಮನದಟ್ಟಾಗಿತ್ತು. ಆದರೆ ಈ ಭೂಮಿಗೆ ಬಂದ ಆತ್ಮ ಅವಿದ್ಯೆಗಳ ತೊಡಕಿಗೆ ಸಿಕ್ಕಿ ಜಾರುತ್ತಾ ತನ್ನ ಗುರಿ, ಉದ್ದೇಶಗಳನ್ನು ಮರೆತು ಮಾಯೆಯ ವಶವಾಯಿತು.

ಮಾಯೆ ಎಂದರೇನು?

ಮಾಯೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಭಾಗವತದಲ್ಲಿ ಭರತದೇಶವನ್ನು ಆಳಿದ ರಾಜ ಭರತನ ಕಥೆ ಇದಕ್ಕೆ ಸುಲಭ ಉದಾಹರಣೆಯಾಗಿದೆ.

ಭಾರತ ದೇಶವನ್ನು ಭರತದೇಶ ಎಂದು ಕರೆಯುತ್ತೇವೆ. ಭರತ ನ್ಯಾಯವನ್ನು ನೀಡುವಂತಹ ದೊಡ್ಡ ರಾಜ. ಭರತರಾಜನ ಬಳಿ ಎಲ್ಲರಿಗೂ ಒಂದೇ ನ್ಯಾಯ. ಧರ್ಮಯುತವಾದ ನ್ಯಾಯವನ್ನು ಭರತ ನೀಡುತ್ತಿದ್ದ. ಭರತ ಪ್ರಜೆಗಳಿಗೆ ಅಚ್ಚುಮೆಚ್ಚಿನ ರಾಜನಾಗಿದ್ದ. ಒಮ್ಮೆ ಭರತ ಈ ತೀರ್ಮಾನಕ್ಕೆ ಬರುತ್ತಾನೆ. ಏನೆಂದರೆ ಮಾನವನಾಗಿ ಹುಟ್ಟಿದ ಮೇಲೆ ಏನೇನು ಕರ್ತವ್ಯಗಳಿದ್ದವೋ ಎಲ್ಲವನ್ನು ಪರಮಾತ್ಮನ ಕೃಪೆಯಿಂದ ಸಮರ್ಪಕವಾಗಿ ಮಾಡಿ ಮುಗಿಸಿದ್ದೇನೆ. ರಾಜನಾಗಿ ಸಂತೃಪ್ತವಾದ ರಾಜ್ಯಭಾರವನ್ನು ಮಾಡಿದ್ದೇನೆ. ಈಗ ಸಮಯ ಬಂದಿದೆ. ರಾಜ್ಯಭಾರವನ್ನು ತೊರೆದು ಅಡವಿಗೆ ಹೋಗಿ ಮುಕ್ತಿಯನ್ನು ಪಡೆಯುವ ಆತ್ಮಚಿಂತನೆಯನ್ನು ಮಾಡುವ ಸಮಯವಾಗಿದೆ ಎಂದು ಮನಸ್ಸಿನಲ್ಲಿ ನಿರ್ಧರಿಸಿದನು.

ಇದರಂತೆ ರಾಜ್ಯವನ್ನು ತ್ಯಾಗಮಾಡಿ ಅಡವಿಗೆ ಹೊರಟ. ತನ್ನ ಧನ,ಕನಕ,ಆಸ್ತಿ, ಸಂಪತ್ತು ಎಲ್ಲವನ್ನೂ ದಾನ ಮಾಡಿದ. ನಾರುಮುಡಿಯನ್ನು ಉಟ್ಟು ಮನಸ್ಸನ್ನು ಗಟ್ಟಿ ಮಾಡಿಕೊಂಡು ಮೋಕ್ಷವನ್ನು ಪಡೆಯಲೇ ಬೇಕೆಂದು ಸಂಕಲ್ಪಮಾಡಿ ಹೊರಟ. ಅರಣ್ಯದಲ್ಲಿ ಒಂದು ಗುಡಿಸಲನ್ನು ಹಾಕಿಕೊಂಡು, ಹುಲ್ಲನ್ನು ಹಾಸಿಗೆಯನ್ನಾಗಿ ಮಾಡಿಕೊಂಡು ಸಂಪೂರ್ಣವಾದ ವೈರಾಗ್ಯಭಾವದಿಂದ ಜೀವಿಸುತ್ತಿದ್ದ. ಭರತದೇಶದ ರಾಜ ಹುಲ್ಲಿನ ಮೇಲೆ ಮಲಗುತ್ತಿದ್ದ. ದಿನ ಕಳೆದಂತೆ ಒಂದು ದಿನ ತನ್ನ ಗುಡಿಸಲಿನ ಎದುರು ಹರಿಯುತ್ತಿದ್ದ ನದಿಯನ್ನು ನೋಡುತ್ತಿದ್ದಾನೆ. ಮನಸ್ಸು ಪ್ರಶಾಂತವಾಗಿದೆ. ನದಿಯ ನೀರು ನಿರ್ಮಲವಾಗಿ ಹರಿಯುತ್ತಿದೆ. ಇದನ್ನು ನೋಡುತ್ತಾ ಆತ್ಮಶುದ್ಧಿಗಾಗಿ ನಾನು ಇನ್ನೇನು ಮಾಡಬೇಕು ಎಂದು ಆಲೋಚಿಸುತ್ತಿದ್ದಾನೆ.

ಇದೇ ಸಮಯದಲ್ಲಿ ಒಂದು ಗರ್ಭಿಣಿ ಜಿಂಕೆ ನೀರನ್ನು ಕುಡಿಯಲು ನದಿಯ ತೀರಕ್ಕೆ ಬರುತ್ತದೆ. ಜಿಂಕೆ ನೀರನ್ನು ಕುಡಿಯುತ್ತಿರುವಾಗ ಹಸಿದ ಮೊಸಳೆಯೊಂದು ಬಂದು ಜಿಂಕೆಯ ಮೇಲೆ ಆಕ್ರಮಣ ಮಾಡುತ್ತದೆ. ಆ ಜಿಂಕೆಯು ಭಯಭೀತವಾಗಿ ಹೆದರುತ್ತದೆ. ಈ ಹೆದರಿಕೆಯಲ್ಲಿ ಜಿಂಕೆಯು ಮಗುವಿಗೆ ಜನ್ಮ ನೀಡುತ್ತದೆ. ತಾಯಿ ಜಿಂಕೆಯು ಮೊಸಳೆಯ ಪಾಲಾಗುತ್ತದೆ. ಮರಿ ಜಿಂಕೆಯು ನದಿಯ ತೀರದಲ್ಲಿ ಬಿದ್ದಿದೆ. ಇದನ್ನು ಸೂಕ್ಷ÷್ಮವಾಗಿ ಗಮನಿಸುತ್ತಿದ್ದ ಭರತನಿಗೆ ಖೇದವಾಯಿತು. ಅಯ್ಯೋ..ವಿಧಿಯ ವಿಪರ್ಯಾಸ ಎಂಥಹುದು ಎಂದುಕೊಳ್ಳುತ್ತಾ ನದಿತೀರದಲ್ಲಿ ಆಗತಾನೆ ಹುಟ್ಟಿ ಬಿದ್ದಿದ್ದ ಮರಿಜಿಂಕೆಯ ಬಳಿ ಬಂದು, ಅದರ ಮೈದಡವಿ, ತನ್ನ ಗುಡಿಸಲಿಗೆ ಎತ್ತಿಕೊಂಡು ಬರುತ್ತಾನೆ.

ತಾಯಿ ಇಲ್ಲದ ಜಿಂಕೆಮರಿಯನ್ನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಾನೆ. ಹಾಲು ಉಣಿಸುತ್ತಾನೆ, ತನ್ನ ಪಕ್ಕದಲ್ಲಿಯೇ ಮಲಗಿಸಿಕೊಳ್ಳುತ್ತಾನೆ. ತನ್ನ ಜೀವನದ ಬಹುಭಾಗವನ್ನು ಆ ಜಿಂಕೆಯ ಯೋಗಕ್ಷೇಮವನ್ನು ನೋಡಿಕೊಳ್ಳುವುದರಲ್ಲಿಯೇ ಕಾಲ ಕಳೆಯುತ್ತಾನೆ. ಸದಾಕಾಲ ಜಿಂಕೆಯ ಬಗ್ಗೆಯೇ ಚಿಂತಿಸುತ್ತಿರುತ್ತಾನೆ. ಹೀಗಿರುವಾಗ ಭರತನಿಗೆ ವಯಸ್ಸಾಗುತ್ತಾ ಬಂತು ಇನ್ನೇನು ಕಾಲನ ಕರೆ ಬರುತ್ತಿದೆ. ಸಾಯುವ ಸಮಯದಲ್ಲಿ ಭರತನಿಗೆ ಈ ಜಿಂಕೆಯ ಬಗ್ಗೆಯೇ ಯೋಚನೆ. ತಾನು ರಾಜನಾಗಿ ಸರ್ವವನ್ನು ತ್ಯಾಗ ಮಾಡಿದ ಉದ್ದೇಶವೇನು? ಮರೆತುಹೋದ. ಮಧ್ಯದಲ್ಲಿ ಬಂದ ಜಿಂಕೆಮರಿಯ ಬಗ್ಗೆಯೇ ವ್ಯಾಮೋಹ. ಸಾವು ಸಂಭವಿಸಿತು. ನಂತರ ಭರತ ಒಂದು ಜಿಂಕೆಯಾಗಿ ಹುಟ್ಟುತ್ತಾನೆ.

ಇದೇ ಮಾಯೆ. ಮಾಯೆಯು ನಮ್ಮ ಗುರಿಯ ದಿಕ್ಕನ್ನು ತಪ್ಪಿಸುತ್ತದೆ. ಗುರಿಯೆಡೆಗೆ ನಿಶ್ಚಲವಾದ ಮನಸ್ಸನ್ನು ಮಾಡದ ಹೊರತು ಮಾಯೆಯನ್ನು ಗೆಲ್ಲಲು ಸಾಧ್ಯವಿಲ್ಲ.

ಹಿಂಸೆಯ ಮೂಲ ಮನಸ್ಸು

ಜಗತ್ತಿನಲ್ಲಿ ಮಾನವರು ಹಿಂಸೆ, ಕಷ್ಟಗಳನ್ನು ಪಡಲು ಕಾರಣವೇನು ಎಂಬುದನ್ನು ಕೈವಾರ ತಾತಯ್ಯನವರು ಈ ಪದ್ಯದಲ್ಲಿ ಬೋಧಿಸುತ್ತಿದ್ದಾರೆ.

ಮನಸನೇ ದೊಂಗನು ಮಟ್ಟುಪೆಟ್ಟಲೇಕ
ಹಿಂಸಲು ಪಡವಲೆನೆ ಯಟ್ಲಯಿಘನು
ವೇರು ತೆಗಿನ ತರುವು ಯೆಂಡಕ ವುಂಡುನಾ?
ನಾದ ಬ್ರಹ್ಮಾನಂದ ನಾರೇಯಣ ಕವಿ||

ಮನಸ್ಸೆಂಬ ಕಳ್ಳನನ್ನು ಹಿಡಿತದಲ್ಲಿಟ್ಟುಕೊಳ್ಳದೆ, ಹಿಂಸೆಯನ್ನು ಪಡಬೇಕಾಗಿದೆ. ಹಿಂಸೆಯ ಮೂಲ ಮನಸ್ಸು. ಮರಕ್ಕೆ ಮೂಲ ಬೇರುಗಳು. ಇಂತಹ ಬೇರುಗಳನ್ನು ಕಡಿದ ಮೇಲೆ ಮರ ಒಣಗಿಹೋಗದೆ ಹಸಿರಾಗಿರಲು ಸಾಧ್ಯವೇ? ಎಂದು ತಾತಯ್ಯನವರು ಪ್ರಶ್ನಿಸುತ್ತಿದ್ದಾರೆ. ಮನಸ್ಸು ಸುಖ, ದುಃಖಗಳ ಆಗರ. ತನಗೆ ಬೇಕೆನಿಸಿದ ವಸ್ತುಗಳನ್ನು ಕಳ್ಳನು ಕದಿಯುವಂತೆ, ಚಂಚಲ ಸ್ವಭಾವದ ಮನಸ್ಸು ತನಗೆ ಇಷ್ಟವಾದ ವಿಷಯಗಳಲ್ಲಿ ಹರಿದಾಡುತ್ತಿರುತ್ತದೆ. ಮನಸ್ಸನ್ನು ಹತೋಟಿಯಲ್ಲಿಡುವುದೇ ಒಂದು ದೊಡ್ಡ ಸಮಸ್ಯೆ. ವೃಕ್ಷಕ್ಕೆ ಬೇರು ಹೇಗೆ ಮುಖ್ಯವೋ ಹಾಗೆಯೇ ಶರೀರಕ್ಕೆ ಮನಸ್ಸು ಬಹಳ ಮುಖ್ಯ. ಬುಡದಲ್ಲಿರುವ ಬೇರಿಗೆ ನೀರುಣಿಸಿದರೆ ಅದು ಮರದ ತುಟ್ಟ ತುದಿಯಲ್ಲಿರುವ ಎಲೆಯನ್ನೂ ಜೀವಂತವಾಗಿರಿಸುವಂತೆ, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡರೆ ಶರೀರವು ಸ್ವಸ್ಥವಾಗಿರುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಸ್ವಸ್ಥವಾದ ಮನಸ್ಸೇ ಮಿತ್ರ. ಸ್ವಸ್ಥವಲ್ಲದ ಮನಸ್ಸೇ ಶತ್ರು. ಮನಸ್ಸಿಗೆ ಉತ್ತಮವಾದ ಆಹಾರವನ್ನು ನೀಡಿ ಶುದ್ಧವಾಗಿ ಕಾಪಾಡಿಕೊಳ್ಳಬೇಕು. ಆಗ ಮನಸ್ಸಿನಿಂದ ಹೊರಬರುವ ಆಲೋಚನೆಗಳು ನಮ್ಮನ್ನು ಉದ್ದರಿಸುತ್ತದೆ. ಈ ಪದ್ಯದಲ್ಲಿ ಇನ್ನೊಂದು ಗೂಡಾರ್ಥವೂ ಅಡಗಿದೆ. ಚಂಚಲವಾಗಿರುವ ಮನಸ್ಸನ್ನು ಸಾಧನೆಯ ಹಗ್ಗದಿಂದ ಬಂಧಿಸಬೇಕು. ನಾನು, ನನ್ನದೆಂಬ ದೇಹಾಭಿಮಾನದ ಬೇರನ್ನು ಸಂಪೂರ್ಣವಾಗಿ ಒಣಗಿಸಿದರೆ ಹುಟ್ಟು-ಸಾವು ಎಂಬ ದುಃಖರೂಪದ ಹಿಂಸೆಗಳಿAದ ಪಾರಾಗಬಹುದು ಎಂಬ ಅಭಿಪ್ರಾಯವೂ ಈ ಪದ್ಯದಲ್ಲಿ ಅಡಗಿದೆ.

ಮಾಯೆಯು ಹುಟ್ಟುವುದೆಲ್ಲಿ?

ಕೈವಾರ ತಾತಯ್ಯನವರು ಮನಸ್ಸು ಮತ್ತು ಮಾಯೆಗೆ ಸಂಬಂಧಿಸಿದಂತೆ ಹಲವಾರು ಬೋಧನೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರಮು ಎಂಬ ಕೃತಿಯಲ್ಲಿ ತಾತಯ್ಯನವರು ಮಾಯೆಯು ಎಲ್ಲಿ ಹುಟ್ಟುತ್ತದೆ ಎಂಬುದನ್ನು ಈ ರೀತಿಯಾಗಿ ಹೇಳಿದ್ದಾರೆ.
“ಮಾಯನಗಾ ವೇರೆ ಲೇದು ಮನಸುನ ಬುಟ್ಟುನ್
ಮನಸುನ ಬುಟ್ಟಿನ ಮಾಯನು
ಮನಸಂದೇ ತ್ಸಂಪವಲಯು”

ಮಾಯೆ ಎನ್ನುವುದು ಬೇರೆಲ್ಲಿಂದಲೋ ಹುಟ್ಟಿ ಬರುವುದಲ್ಲ. ಮಾಯೆ ಎನ್ನುವುದು ಮನಸ್ಸಿನಲ್ಲೇ ಹುಟ್ಟುತ್ತದೆ. ಈ ಮಾಯೆಯನ್ನು ನಾಶ ಮಾಡಲು ಬೇರೆ ಶಕ್ತಿಗಳ ಅಗತ್ಯವಿಲ್ಲ. ಮನಸ್ಸಿನಲ್ಲಿ ಹುಟ್ಟುವ ಮಾಯೆಯನ್ನು ಮನಸ್ಸಿನಲ್ಲೇ ಕೊಲ್ಲಬೇಕು ಎಂದಿದ್ದಾರೆ ತಾತಯ್ಯನವರು. ಇದರಿಂದ ನಮಗೆ ತಿಳಿಯುವುದೆನೆಂದರೆ ಮಾಯೆಗೂ ಮನಸ್ಸಿಗೂ ಬಿಡಿಸಲಾಗದ ನಂಟು ಇದೆ. ಮಾಯೆ ಹುಟ್ಟುವುದು ಮನಸ್ಸಿನಲ್ಲೇ, ಇದನ್ನು ಕೊಲ್ಲಬೇಕಾಗಿರುವುದು ಮನಸ್ಸಿನಿಂದಲೇ. ಇದು ಅಷ್ಟು ಸುಲಭವಲ್ಲ. ಇದಕ್ಕೆ ಸಾಧನೆ ಅಗತ್ಯವಾಗಿದೆ.

ಬಂಧಮೋಕ್ಷಗಳಿಗೆ ಮನಸ್ಸು ಕಾರಣ. ಮನಸ್ಸು ಮಾಯೆಯಿಂದ ಕೂಡಿದ್ದಾಗ ಬಂಧವುಂಟಾಗುತ್ತದೆ. ಕೈವಾರ ತಾತಯ್ಯನವರ ಬೋಧನೆಯನ್ನು ಅರ್ಥಮಾಡಿಕೊಂಡರೆ ಮಾಯೆಯ ಬಲೆಯಿಂದ ಹೊರಬರಬಹುದು. ಶುದ್ಧವಾದ ಮನಸ್ಸನ್ನು ಹೊಂದಬಹುದು.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: Prerane : ಧ್ಯಾನದಿಂದ ಮಾತ್ರ ಮೃತ್ಯು ಭಯ ದಾಟಲು ಸಾಧ್ಯ!

Exit mobile version