Site icon Vistara News

ತಾತಯ್ಯ ತತ್ವಾಮೃತಂ : ಯೋಗಿ ಎಂದರೆ ಯಾರು? ಉತ್ತಮ ಯೋಗಿಯ ಲಕ್ಷಣಗಳೇನು?

kaivara thathayya

ಕೈವಾರ ತಾತಯ್ಯ

ಕೈವಾರ ತಾತಯ್ಯನವರು ಯೋಗಿ ಸ್ವರೂಪರು. ಯೋಗಿಯ ಸ್ವರೂಪವನ್ನು ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ತಾತಯ್ಯನವರು ರಚಿಸಿರುವ ಅಮರನಾರೇಯಣ ಶತಕದ ಒಂದು ಪದ್ಯದಲ್ಲಿ ಈ ರೀತಿಯಾಗಿ ಯೋಗಿಯ ವರ್ಣನೆ ಇದೆ;
“ತಲಪುಲನ್ನಿಯು ದಿಗನಾಡಿ – ತನುವು ಮರಚಿ
ತನ್ನು ದೆಲಿಸಿನ ಘನುಡು – ಪರತತ್ವಯೋಗಿ”
ಎಂದಿದ್ದಾರೆ.

ಅಂದರೆ ತುಚ್ಛವಾದ ಲೌಕಿಕಭೋಗದ ಬಯಕೆಗಳೆಲ್ಲವನ್ನೂ ಧಿಕ್ಕರಿಸಬೇಕು, ಧ್ಯಾನಮಗ್ನನಾಗಿ ದೇಹವನ್ನು ಮರೆಯಬೇಕು. ಅಂತರ್ಮುಖ ದೃಷ್ಠಿಯಿಂದ ತನ್ನನ್ನು ತಾನು ತಿಳಿಯಬೇಕು. ಹೀಗೆ ಸ್ವರೂಪವನ್ನು ತಿಳಿದ ಸಾಧಕನೇ ಪರತತ್ವಯೋಗಿ ಎಂದು ತಾತಯ್ಯನವರು ಬಣ್ಣಿಸಿದ್ದಾರೆ.

ಉತ್ತಮ ಯೋಗಿ ಯಾರು?

ಯೋಗ ಸಾಧನೆಯಲ್ಲಿ ಉತ್ತಮ ಯೋಗಿ ಯಾರು? ಎಂಬ ಪ್ರಶ್ನೆಗೆ ತಾತಯ್ಯನವರು ಈ ಪದ್ಯದಲ್ಲಿ ಉತ್ತರಿಸಿದ್ದಾರೆ.
ಅಗ್ನಿಯೆಕ್ಕಡ ಬುಟ್ಟೆ ವಾಯು ವೆಕ್ಕಡ ಬುಟ್ಟೆ
ಗಾಲಿ ಯೆಕ್ಕಡ ಬುಟ್ಟೇ ಘಟಮು ಲೋನ
ವುಂಡ ಚೂಚಿನವಾಡು ಉತ್ತಮ ಯೋಗಿರಾ
ನಾದ ಬ್ರಹ್ಮಾನಂದ ನಾರೇಯಣ ಕವಿ||

ಶರೀರದಲ್ಲಿ ಬೆಂಕಿಯೆಲ್ಲಿ ಉತ್ಪತ್ತಿಯಾಗುತ್ತಿದೆ, ಜೀವಕ್ಕೆ ಆಧಾರವಾಗಿರುವ ಪ್ರಾಣವಾಯು ಎಲ್ಲಿ ಹುಟ್ಟುತ್ತಿದೆ ಹಾಗೆಯೇ ನಾವು ಉಸಿರಾಡುವ ಗಾಳಿ ಎಲ್ಲಿಂದ ಹುಟ್ಟಿ ಬಂದಿತು? ಈ ವಿವರಗಳನ್ನು ಸವಿಸ್ತಾರವಾಗಿ ಕಂಡುಕೊಂಡವನೇ ಉತ್ತಮವಾದ ಯೋಗಿ ಎನ್ನುತ್ತಿದ್ದಾರೆ ತಾತಯ್ಯನವರು.

ದೇಹವು ಪಂಚಭೂತಗಳಿಂದ ನಿರ್ಮಾಣವಾಗಿದೆ. ದೇಹದಲ್ಲಿರುವ ಅಗ್ನಿತತ್ವ, ವಾಯುತತ್ವ, ಪ್ರಾಣತತ್ವಗಳ ಸಂಚಾರ ಕಾರ್ಯಾದಿಗಳನ್ನು ಸಾಧನಾನುಭವದಿಂದ ಕಂಡುಕೊಂಡವನೇ ಉತ್ತಮ ಯೋಗಿಯೆಂದು ಈ ಪದ್ಯದಲ್ಲಿ ಹೇಳುತ್ತಿದ್ದಾರೆ. ಅಷ್ಟಾಂಗಯೋಗದ ಅಂತರಂಗದ ಸಮಾಧಿಸ್ಥಿತಿಯನ್ನು ಸಾಧನೆಯನ್ನು ಮಾಡಲು ಈ ತತ್ವಗಳನ್ನು ಕಂಡುಕೊಳ್ಳುವುದು ಅತಿ ಅವಶ್ಯವಾಗಿದೆ. ಅಗ್ನಿ-ಪ್ರಾಣ-ವಾಯು ಶರೀರದಲ್ಲಿ ಎಲ್ಲಿದೆ ಎಂದು ಶೋಧಿಸಿ ಅದರ ಮರ್ಮವನ್ನು ಅರಿತು ಸಾಧಕನಾಗಬೇಕು.

ಪಿಂಡಾಂಡವಾದ ದೇಹದಲ್ಲಿ ಉಷ್ಣತೆಯ ರೂಪದಲ್ಲಿ ಅಗ್ನಿಯಿದೆ. ಸೂರ್ಯದೇವನ ಬೆಳಕಿನ ಕಿರಣಗಳ ಮೂಲಕ ಈ ತೇಜಸ್ಸು ದೇಹದೊಳಗೆ ಬರುತ್ತದೆ. ಮಾನವನ ಅಂತ್ಯಕಾಲದಲ್ಲಿ ಜೀವಾತ್ಮನು ದೇಹವನ್ನು ತ್ಯಾಗಮಾಡುವಾಗ ಈ ಅಂತಃ ಸತ್ವದ ಚೇತನವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಆ ನಂತರವೇ ದೇಹವು ತಣ್ಣಗಾಗುತ್ತದೆ. ನಾವು ಸೇವಿಸುವ ಆಹಾರವು ಜೀರ್ಣವಾಗಬೇಕಾದರೆ ಜಠರದಲ್ಲಿರುವ ಅಗ್ನಿತತ್ವವೇ ಕಾರಣ. ಇದರಿಂದಾಗಿಯೇ ಪಚನಕ್ರಿಯೆಯು ನಡೆಯುತ್ತದೆ. ಹಾಗೆಯೇ ಈ ಅಗ್ನಿತತ್ವದಿಂದಲೇ ಅನ್ನದ ಸಾರವು ಶರೀರದ ಎಲ್ಲಾ ಭಾಗಗಳಿಗೂ ಹಂಚಲ್ಪಡುತ್ತದೆ. ದೇಹದಲ್ಲಿ ಜೀವನು ಪ್ರಾಣರೂಪಿಯಾಗಿರುತ್ತಾನೆ.

ಹೀಗೆ ಅಗ್ನಿ-ಪ್ರಾಣವಾಯು-ಗಾಳಿಯ ಮೂಲಮರ್ಮವನ್ನಿರಿತು ಸಾಧನೆಯ ಪಥದಲ್ಲಿ ನಡೆದವನೇ ಉತ್ತಮ ಯೋಗಿ ಎಂದಿದ್ದಾರೆ ತಾತಯ್ಯನವರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ವರದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಯೋಗಿಯ ಲಕ್ಷಣಗಳೇನು?

ಯೋಗಸಾಧನೆಯ ಮೂಲಕ ಜ್ಞಾನದ ಸಾಕ್ಷಾತ್ಕಾರವನ್ನು ಪಡೆದು, ಪರಮಾತ್ಮನೇ ಆದ ಯೋಗಪುರುಷನ ಲಕ್ಷಣಗಳನ್ನು ಪಾತಂಜಲಯೋಗಸೂತ್ರದಲ್ಲಿ ವರ್ಣಿಸಲಾಗಿದೆ. ಯೋಗಿಯು ಈ ಕೆಳಕಂಡ ಎಲ್ಲಾ ಸಿದ್ಧಿಗಳನ್ನು ಪಡೆದಿರುತ್ತಾನೆ.

೧. ಕಾಲಜ್ಞಾನ: ಮೊದಲನೆಯದಾಗಿ ಆ ಯೋಗಿಗೆ ಕಾಲಜ್ಞಾನದ ಅರಿವಿರುತ್ತದೆ. ಕಾಲದ ಅಧಿಪತಿ ಪರಮಾತ್ಮ. ಭೂತಕಾಲ, ಭವಿಷ್ಯತ್‌ಕಾಲ ಹಾಗೂ ವರ್ತಮಾನಕಾಲ, ಈ ಮೂರು ಕಾಲಗಳ ಅರಿವು ಯೋಗಿಗೆ ಇರುತ್ತದೆ. ಆದ್ದರಿಂದಲೇ ತಾತಯ್ಯನವರನ್ನು ಕಾಲಜ್ಞಾನಿ ಎಂದು ಕರೆಯುತ್ತೇವೆ.

೨. ಪ್ರಾಣಿಗಳ ಭಾಷಾಜ್ಞಾನ : ಯೋಗಿಗೆ ಬ್ರಹ್ಮಾಂಡದಲ್ಲಿರುವ ಸಮಸ್ತ ಪ್ರಾಣಿಗಳ ಭಾಷಾಜ್ಞಾನದ ಅರಿವಿರುತ್ತದೆ. ಯಾವುದೇ ಪ್ರಾಣಿಯಾಗಿರಲಿ ಬಂದು ಯೋಗಿಗಳ ಬಳಿ ಮಾತನಾಡಬಹುದು ತಮ್ಮ ಕಷ್ಟವನ್ನು ಹೇಳಿಕೊಳ್ಳಬಹುದು, ಮುಕ್ತಿಯ ಹಾದಿಯನ್ನು ತೋರಿಸಿಕೊಡು ಎಂದು ಕೇಳಬಹುದು. ಇಂತಹ ಮಹತ್ತರವಾದ ಜ್ಞಾನ ಯೋಗಿಗಿರುತ್ತದೆ. ಬ್ರಹ್ಮಾಂಡದಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಬ್ರಹ್ಮನು ಬರೆದಿರುವ ಹಣೆಬರಹದ ಅರಿವು ಯೋಗಿಗಳಿಗಿರುತ್ತದೆ.

೩.ಪೂರ್ವಜನ್ಮದ ಜ್ಞಾನ: ಯೋಗಿಗಳಿಗೆ ಹಿಂದಿನ ಅಂದರೆ ಪೂರ್ವಜನ್ಮಗಳ ಜ್ಞಾನ ಸಂಪೂರ್ಣವಾಗಿರುತ್ತದೆ.

೪. ಅದೃಶವಾಗುವ ಶಕ್ತಿ : ಯೋಗಿಗಳಿಗೆ ಅದೃಶ್ಯವಾಗುವ ಶಕ್ತಿ ಇರುತ್ತದೆ. ಯಾವರೀತಿಯಾಗಿ ಪರಮಾತ್ಮನು ಕಾಣಿಸಿಕೊಂಡು ಮಾಯವಾಗುತ್ತಾನೋ ಅಂತಹ ಸಾಧನಾ ಶಕ್ತಿಯು ಯೋಗಿಗಿರುತ್ತದೆ. ಕಾಣಿಸಿಕೊಳ್ಳಬಹುದು ಹಾಗೆಯೇ ಮಾಯವಾಗುವ ಶಕ್ತಿ ಯೋಗಿಗಿರುತ್ತದೆ.

೫. ಚಂದ್ರನಕ್ಷತ್ರ ಲೋಕಜ್ಞಾನ : ಯೋಗಿಗೆ ಚಂದ್ರ ನಕ್ಷತ್ರ ಲೋಕಜ್ಞಾನವಿರುತ್ತದೆ ಎಂದಿದ್ದಾರೆ. ಬ್ರಹ್ಮಾಂಡದಲ್ಲಿ ಲಕ್ಷಾಂತರ ನಕ್ಷತ್ರಗಳಿವೆ. ಈ ಇಡೀ ಬ್ರಹ್ಮಾಂಡದಲ್ಲಿರುವ ಎಲ್ಲಾ ನಕ್ಷತ್ರಗಳ ಜ್ಞಾನ ಯೋಗಿಗೆ ಇರುತ್ತದೆ ಎಂದಿದ್ದಾರೆ. ತಾತಯ್ಯನವರು “ಚಂದಮಾಮನು ಚೂಚಿ ವಸ್ತಾಮಾ..” ಎಂದಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಹೋಗಿ ಚಂದ್ರನನ್ನು ತೋರಿಸುವ ಅತೀಂದ್ರಿಯಶಕ್ತಿ ತಾತಯ್ಯನವರಿಗಿದೆ.

೬.ಆಕಾಶಗಮನ : ಆಕಾಶ ಎಂದರೆ ಬಟ್ಟಬಯಲು. ಈ ಬಟ್ಟಬಯಲಿನ ಜ್ಞಾನ ಯೋಗಿಗಿರುತ್ತದೆ. ಇದನ್ನೇ ಆಕಾಶಗಮನ ಎಂದಿದ್ದಾರೆ. ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಬಟ್ಟಬಯಲಿನ ಪ್ರಸ್ತಾಪವಿದೆ.

೭.ಎಲ್ಲ ಲೋಕಗಳ ಜ್ಞಾನ: ಈ ಬ್ರಹ್ಮಾಂಡದಲ್ಲಿರುವ ಎಲ್ಲಾ ಲೋಕಗಳ ಜ್ಞಾನವನ್ನು ಯೋಗಿಯು ಹೊಂದಿರುತ್ತಾನೆ. ಅವರಿಗೆ ಎಲ್ಲಾ ಲೋಕಗಳ ಅರಿವು ಇರುತ್ತದೆ.

೮. ಹಸಿವು-ಬಾಯಾರಿಕೆಗಳ ಜಯ: ಸಂಸಾರದಲ್ಲಿ ಹಸಿವಿನಿಂದಲೇ ಆಸೆ ಉಂಟಾಗುತ್ತದೆ. ಮಾನವರಿಗೆ ಎಲ್ಲಾ ಕರ್ಮಗಳು ಪ್ರಾರಂಭವಾಗುವುದು ಹಸಿವಿನಿಂದಲೇ, ಇದೇ ಮೂಲ. ಯಾರಾದರೆ ಹಸಿವು ಮತ್ತು ಬಾಯಾರಿಕೆಗಳನ್ನು ಗೆದ್ದಿರುತ್ತಾರೋ ಅವರೇ ಪರಮಾತ್ಮ, ಅವರೇ ಯೋಗಿ. ತಾತಯ್ಯನವರು ಹಸಿವು ಮತ್ತು ಬಾಯಾರಿಕೆಗಳನ್ನು ಜಯಿಸಿದವರು.

೯. ದೇಶಾಂತರ ವಸ್ತುಜ್ಞಾನ : ಯೋಗಿಗೆ ಸಮಸ್ತ ಬ್ರಹ್ಮಾಂಡದಲ್ಲಿರುವ ವಸ್ತು ಜ್ಞಾನವಿರುತ್ತದೆ. ತಾತಯ್ಯನವರ ಜೀವನ ಚರಿತ್ರೆಯಲ್ಲಿ ಇಂತಹ ಹಲವಾರು ಸನ್ನಿವೇಶಗಳನ್ನು ಕಾಣಬಹುದಾಗಿದೆ.

೧೦.ಮೃತ್ಯುಜ್ಞಾನ : ಬ್ರಹ್ಮಾಂಡದಲ್ಲಿರುವ ಸಕಲ ಜೀವರಾಶಿಗಳ ಮೃತ್ಯುಜ್ಞಾನ ಯೋಗಿಗಳಿಗಿರುತ್ತದೆ. ಸೃಷ್ಠಿ,ಸ್ಠಿತಿ,ಲಯಗಳ ಜ್ಞಾನವನ್ನು ಪಡೆದಿರುವ ಯೋಗಿಗೆ ಎಲ್ಲಾ ಜೀವರಾಶಿಗಳ ಮೃತ್ಯುಜ್ಞಾನ ಪ್ರಾಪ್ತವಾಗಿರುತ್ತದೆ.

೧೧.ಸಿದ್ಧರ ದರ್ಶನಶಕ್ತಿ : ಯೋಗಿಗಳು ಸಿದ್ಧರ ದರ್ಶನವನ್ನು ಪಡೆಯುವ ಶಕ್ತಿಯನ್ನು ಹೊಂದಿರುತ್ತಾರೆ. ಎಲ್ಲಾ ವೇದಗಳ ಸಾರವನ್ನು ಯೋಗಿಯು ಹೊಂದಿರುತ್ತಾರೆ.

೧೨. ಭೂತಜಯ: ಯೋಗಿಗಳು ಭೂತಜಯವನ್ನು ಪಡೆದಿರುತ್ತಾರೆ. ಯಂತ್ರ, ತಂತ್ರ, ಮಂತ್ರ ಇವುಗಳ ಸಂಪೂರ್ಣವಾದ ಅರಿವು ಯೋಗಿಗಳಿರುತ್ತದೆ. ಇವುಗಳ ಮೆಲೆ ಸಂಪೂರ್ಣ ಹತೋಟಿಯನ್ನು ಹೊಂದಿ, ಜಯವನ್ನು ಪಡೆದಿರುತ್ತಾರೆ. ಯಾರೂ ಇವರ ಹತ್ತಿರ ಬರಲು ಸಾಧ್ಯವಿಲ್ಲ.

೧೩. ಪರಕಾಯ ಪ್ರವೇಶಜ್ಞಾನ: ಯೋಗಿಯು ಪರಕಾಯ ಪ್ರವೇಶದ ಜ್ಞಾನವನ್ನು ಸಂಪೂರ್ಣವಾಗಿ ಹೊಂದಿರುತ್ತಾರೆ. ಅವರು ಯಾವುದೇ ಕಾಯದಲ್ಲಿ ಬೇಕಾದರೂ ಪ್ರವೇಶ ಮಾಡುವ ಶಕ್ತಿಯನ್ನು ಪಡೆದಿರುತ್ತಾರೆ.

೧೪.ಇಚ್ಚಾವಿಹಾರಿ : ಯೋಗಿಯು ಇಚ್ಛಾ ವಿಹಾರಿ. ಎಲ್ಲಿಗೆ ಹೋಗಬೇಕೆಂದು ಅವರು ನಿರ್ಣಯಿಸಿದರೆ ಅಲ್ಲಿಗೆ ಅವರು ವಿಹಾರವನ್ನು ಮಾಡುತ್ತಾರೆ. ತಾತಯ್ಯನವರು ಇಚ್ಛಾವಿಹಾರಿಗಳು. ಇಂತಹ ಇಚ್ಛಾವಿಹಾರಿಗಳಿಗೆ ನಾವು ಶರಣಾಗಬೇಕು, ನಮ್ಮ ಭಕ್ತಿಯನ್ನು ಅವರಿಗೆ ಸಮರ್ಪಿಸಬೇಕು.

೧೫. ವಿವೇಕಜ್ಞಾನ : ವಿವೇಕಜ್ಞಾನ ಬಹಳ ಮುಖ್ಯವಾದುದು. ಪರಮಾತ್ಮನಿಗೆ ಯಾವ ರೀತಿಯ ಜ್ಞಾನವಿದೆಯೇ ಅದೇ ಜ್ಞಾನವನ್ನು ಯೋಗಿಯು ಹೊಂದಿರುತ್ತಾರೆ. ತಾತಯ್ಯನವರು ತಮ್ಮ ಕಾಲಜ್ಞಾನದಲ್ಲಿ ಯುಗಗಳ ಬದಲಾವಣೆಯ ಬಗ್ಗೆ ತಿಳಿಸಿದ್ದಾರೆ. ಯುಗಗಳ ಬಗ್ಗೆ ತಿಳಿಸಲು ಪರಮಾತ್ಮನಿಗೆ ಮಾತ್ರ ಅಧಿಕಾರವಿರುತ್ತದೆ, ಬೇರೆ ಯಾರಿಗೂ ಅಧಿಕಾರವಿಲ್ಲ. ಇದರಿಂದ ನಮಗೆ ತಿಳಿಯುತ್ತದೆ ತಾತಯ್ಯನವರು ಬೇರೆಯಲ್ಲ, ಪರಮಾತ್ಮನು ಬೇರೆಯಲ್ಲ. ಇಬ್ಬರೂ ಒಂದೇ ಎಂಬುದು ಅರ್ಥವಾಗುತ್ತದೆ.

ಭರತಭೂಮಿ ಇಂತಹ ಯೋಗಿಸಂತರನ್ನು ಪಡೆದು ಧನ್ಯವಾಗಿದೆ. ಯೋಗಿಗಳನ್ನು ಧ್ಯಾನಿಸೋಣ, ಸ್ಮರಿಸೋಣ, ಧನ್ಯರಾಗೋಣ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ಮಾಯೆ ಮತ್ತು ಮನಸ್ಸು; ಕೈವಾರ ತಾತಯ್ಯ ಹೇಳಿರುವುದೇನು?

Exit mobile version