Site icon Vistara News

ತಾತಯ್ಯ ತತ್ವಾಮೃತಂ : ನೀವು ಏನೇ ಆಗಿರಿ, ನಿರ್ಮಲ ಹೃದಯವಂತರಾಗಿರಿ!

tatayya thathvamrutam a column by dr m r jayaram about saint kaivara narayanappa

tatayya

ಸನಾತನ ಗುರು-ಶಿಷ್ಯ ಪರಂಪರೆಯು ಬಹಳ ವಿಶೇಷತೆಗಳಿಂದ ಕೂಡಿದೆ. ಪರಿಪೂರ್ಣ ಜ್ಞಾನದ ಸಂಪತ್ತಾದ ಗುರುವಿನ ಅನುಗ್ರಹವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಮೋಕ್ಷಮಾರ್ಗದ ಮೂಲವನ್ನು ತೋರಿಸಬಹುದು ಆದರೆ, ಅಂತಹ ಬದ್ಧತೆ, ವಿಧೇಯತೆಯಿಂದ ಕೂಡಿರುವ ಶಿಷ್ಯನು ಕಾಣಸಿಗುವುದು ದುರ್ಲಭ ಎಂದಿದ್ದಾರೆ ಕೈವಾರ ತಾತಯ್ಯನವರು.

ಗುರುಸೂತ್ರದಲ್ಲಿರುವ ಗುಣವಂತ ಬಲ್ಲ...
ಗುರು, ಸದ್ಗುರುವಾಗುತ್ತಾನೆ. ಸದ್ಗುರುವೆಂದರೆ ಪರಮಾತ್ಮನೇ. ಸದ್ಗುರುವಿನ ವಾಕ್ಯಗಳು ಸತ್ಯವಾದವು. ಲೌಕಿಕ ಪ್ರಪಂಚದಲ್ಲಿ ಮುಳುಗಿರುವ ಅಜ್ಞಾನಿಗಳಿಗೆ ತಾತಯ್ಯನವರ ಬೋಧನೆಯ ವಾಕ್ಯಗಳು ಕಠಿಣವೆನಿಸಬಹುದು ಆದರೆ ಆ ವಾಕ್ಯಗಳು ಸಂಪೂರ್ಣವಾದ ಸತ್ಯದಿಂದ ಕೂಡಿದೆ. “ಗುರುಸೂತ್ರದಲ್ಲಿರುವ ಗುಣವಂತ ಬಲ್ಲ” ಎಂದಿದ್ದಾರೆ ತಾತಯ್ಯನವರು.

ಈ ಸತ್ಯವು ಅರಿವಾಗಬೇಕಾದರೆ ಗುರುವಿನ ಕೃಪೆಯಿರುವ, ಗುರುಸೂತ್ರದಲ್ಲಿರುವ ಗುಣವಂತನಿಗೆ ಮಾತ್ರ ಅರ್ಥವಾಗುತ್ತದೆ ಎನ್ನುತ್ತಾರೆ. ತಾತಯ್ಯನವರು ಹೇಳಿರುವ ವಿದ್ಯೆ ಬ್ರಹ್ಮವಿದ್ಯೆ. ಜೀವನು ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದಲ್ಲಿ ಸೇರಿ ಪರಮಾತ್ಮನಲ್ಲಿ ಐಕ್ಯವಾಗುವ ವಿದ್ಯೆಯೇ ಬ್ರಹ್ಮವಿದ್ಯೆ. ಇಂತಹ ಬ್ರಹ್ಮವಿದ್ಯೆಯನ್ನು ಸಾಧನೆ ಮಾಡುವ ಶಿಷ್ಯನು ಕಾಣುತ್ತಿಲ್ಲ ಎಂದಿದ್ದಾರೆ ತಾತಯ್ಯನವರು. ಹಾಗಾದರೆ ಇಂತಹ ಸಾಧನೆ ಮಾಡುವ ಶಿಷ್ಯರು ಎಲ್ಲಿ ಹೋದರು? ಸಾಧನೆಯನ್ನು ಹೇಳಿಕೊಡುವ ಗುರುಗಳು ಎಲ್ಲಿ ಹೋದರು? ಎಂಬ ಪ್ರಶ್ನೆ ಉದ್ಭವವಾಗುತ್ತದೆ ಮತ್ತು ಚಿಂತನೆ ಆರಂಭವಾಗುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ಮಹಾಭಾರತದ ಈ ಘಟ್ಟವನ್ನು ಅರ್ಥಮಾಡಿಕೊಳ್ಳಬೇಕು.

ಅನುಭವದ ಉಪದೇಶ

ಮಹಾಭಾರತದ ಕೊನೆಯ ಭಾಗ. ಕುರುಕ್ಷೇತ್ರ ಯುದ್ಧ ಮುಗಿದಿದೆ. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಗಿದೆ. ರಾಜ್ಯಭಾರವನ್ನು ವಹಿಸಿಕೊಂಡಿದ್ದಾನೆ. ರಾಜ್ಯ ಪರಿಪಾಲನೆ ಮಾಡುತ್ತಿರುವ ಸಮಯದಲ್ಲೊಂದು ದಿನ ಶ್ರೀಕೃಷ್ಣನು ಅರಮನೆಗೆ ಬಂದು ಯುಧಿಷ್ಠಿರನಿಗೆ ಈ ರೀತಿಯಾಗಿ ಬೋಧಿಸುತ್ತಾನೆ. “ಯುಧಿಷ್ಠಿರ ನೀನು ರಾಜನಾಗಿ ಪ್ರಜೆಗಳನ್ನು ಪಾಲಿಸುತ್ತಿದ್ದೀಯ, ಈಗ ನೀನು ರಾಜಧರ್ಮವನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಭೀಷ್ಮ ಪಿತಾಮಹನು ರಾಜಧರ್ಮವನ್ನು ಚೆನ್ನಾಗಿ ತಿಳಿದುಕೊಂಡಿರುವ ಜ್ಞಾನಿ. ಆದಕಾರಣ ರಾಜನಾಗಿರುವ ನೀನು ರಾಜಧರ್ಮವನ್ನು ಭೀಷ್ಮನಿಂದ ತಿಳಿದುಕೊಳ್ಳಬೇಕು ಎನ್ನುತ್ತಾನೆ.

ಈ ಮಾತನ್ನು ಮನ್ನಿಸಿದ ಯುಧಿಷ್ಠಿರ, ಶ್ರೀಕೃಷ್ಣ ಹಾಗೂ ತನ್ನ ತಮ್ಮಂದಿರೊಂದಿಗೆ ಕುರುಕ್ಷೇತ್ರದ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನ ಬಳಿಗೆ ಬರುತ್ತಾನೆ. ಭೀಷ್ಮನ ಪಾದಗಳಿಗೆ ವಂದಿಸಿ ಸಾಲಾಗಿ ನಿಂತುಕೊಳ್ಳುತ್ತಾರೆ. ಆಗ ಶ್ರೀಕೃಷ್ಣನು ಭೀಷ್ಮನನ್ನು ಕುರಿತು, ಇಂದು ಯುಧಿಷ್ಠಿರ ರಾಜನಾಗಿ ಬಂದು, ತಮ್ಮ ಬಳಿ ರಾಜಧರ್ಮವನ್ನು ತಿಳಿದುಕೊಳ್ಳಬೇಕೆಂದು ಅಪೇಕ್ಷಿಸಿದ್ದಾನೆ. ದಯವಿಟ್ಟು ರಾಜನಿಗೆ ರಾಜಧರ್ಮದ ನೀತಿಯನ್ನು ಉಪದೇಶ ಮಾಡಿ ಎನ್ನುತ್ತಾನೆ.

ಈ ಮಾತನ್ನು ಕೇಳಿದ ಭೀಷ್ಮನು ನಸುನಗುತ್ತಾನೆ. ನಗುತ್ತಾ ಭೀಷ್ಮ ಶ್ರೀಕೃಷ್ಣನನ್ನು ಕುರಿತು “ಜಗತ್ತಿಗೆ ಓಡೆಯ ನೀನು, ನೀನೇ ಅವರಿಗೆ ರಾಜಧರ್ಮವನ್ನು ಬೋಧಿಸಬಹುದಲ್ಲವೇ? ಅದು ಬಿಟ್ಟು ನನ್ನ ಬಳಿ ಕರೆತಂದಿದಿಯಲ್ಲಾ” ಎನ್ನುತ್ತಾನೆ.
ಆಗ ಶ್ರೀಕೃಷ್ಣನು ಹೇಳುತ್ತಾನೆ “ನೀವು ಅನುಭವದಿಂದ ಕಲಿತಿದ್ದೀರಿ, ಉಪದೇಶ ಮಾಡಲು ಅನುಭವ ಬಹಳ ಮುಖ್ಯ. ನಿಮಗಿರುವ ಅನುಭವ ಯಾರಿಗೂ ಇಲ್ಲ. ಈ ರಾಜಧರ್ಮ ನಿಮ್ಮ ಬಾಯಿಂದ ಉಪದೇಶವಾಗಲಿ ಎಂಬುದು ನನ್ನ ಇಚ್ಛೆ. ಅನುಭವದಿಂದ ಕೂಡಿದ ಉಪದೇಶ ಹೃದಯಕ್ಕೆ ಮುಟ್ಟುತ್ತದೆ. ಅನುಭವದ ಜ್ಞಾನ ದೊಡ್ಡದು, ನೀವೇ ಇವರಿಗೆ ಉಪದೇಶವನ್ನು ಮಾಡಿರಿ ಎನ್ನುತ್ತಾನೆ ಶ್ರೀಕೃಷ್ಣ.

ಪರಮಾತ್ಮನಾದ ಶ್ರೀಕೃಷ್ಣನ ಮಾತಿಗೆ ಕಟ್ಟುಬಿದ್ದು ಭೀಷ್ಮ ಪಿತಾಮಹ ರಾಜನೀತಿಧರ್ಮವನ್ನು ಉಪದೇಶಿಸಲು ಶುರುಮಾಡುತ್ತಾನೆ. ಅವರ ಉಪದೇಶವು ಮೊದಲಿಗೆ ವಿಷ್ಣುಸಹಸ್ರನಾಮದಿಂದ ಪ್ರಾರಂಭವಾಗುತ್ತದೆ. ನಂತರ ರಾಜಧರ್ಮವನ್ನು ಬೋಧಿಸುತ್ತಾರೆ. ಯಾಕೆ ಭೀಷ್ಮಪಿತಾಮಹರು ಮೊದಲಿಗೆ ವಿಷ್ಣುಸಹಸ್ರನಾಮವನ್ನು ಹೇಳಿದರು. ಇದೊಂದು ಯಕ್ಷಪ್ರಶ್ನೆ. ಯಾಕೆಂದರೆ ಕೇಳಿದ್ದು ರಾಜಧರ್ಮನೀತಿ, ಆದರೆ ಹೇಳಿದ್ದು ವಿಷ್ಣುಸಹಸ್ರನಾಮ. ಇದೊಂದು ಅಪರೂಪದ ಸನ್ನಿವೇಶ. ಇಲ್ಲಿ ಶ್ರೀಕೃಷ್ಣನು ಪರಮಾತ್ಮನಾಗಿದ್ದಾನೆ. ಭೀಷ್ಮ ಪಿತಾಮಹನು ಅನುಭವದ ಗುರುವಾಗಿದ್ದಾನೆ. ರಾಜನಾದ ಯುಧಿಷ್ಠಿರ ಹಾಗೂ ಸೋದರರು ಶಿಷ್ಯರಾಗಿದ್ದಾರೆ. ಭೀಷ್ಮರು ಅವರಿಗೆ ವಿಷ್ಣು ಸಹಸ್ರನಾಮವನ್ನು ಬೋಧಿಸಿದ್ದಾರೆ.

ಈ ಪ್ರಸಂಗದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಯುಧಿಷ್ಠಿರ ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಸಂಬಂಧಿಕರನ್ನು ಸೋಲಿಸಿ ಸಾಯಿಸಿದ್ದಾನೆ. ಸಂಬಂಧಿಕರಷ್ಟೇ ಅಲ್ಲ ಗುರುಗಳನ್ನು ಸಾಯಿಸಿದ್ದಾನೆ. ಇದೆಲ್ಲದಕ್ಕೂ ಕಾರಣ ರಾಜ್ಯವನ್ನು ಪಡೆಯಬೇಕೆಂಬ ಬಯಕೆ, ಆಸೆಯ ಹಸಿವು. ಅದೇ ಅಜ್ಞಾನ. ಯುಧಿಷ್ಠಿರ ಕರ್ಮದಲ್ಲಿದ್ದಾನೆ. ಈ ಅಜ್ಞಾನದಿಂದ ಹೊರಬರಬೇಕಾದರೆ ಏನು ಮಾಡಬೇಕು? ರಾಜ್ಯಕ್ಕಾಗಿ ಯುದ್ಧ ಮಾಡಿದ್ದಾಯಿತು, ಸಾವುನೋವುಗಳಾಯಿತು. ಆದರೆ ಸಕಲ ಜೀವರಾಶಿಗಳನ್ನು ಸಮಭಾವದಿಂದ ನೋಡುವುದೇ ರಾಜಧರ್ಮ.

ಅನುಕ್ಷಣವೂ ಪರಮಾತ್ಮನು ಪಕ್ಕದಲ್ಲೇ ಇದ್ದರೂ ನಿಶ್ಚಲವಾದ ಮನಸ್ಸಿನಿಂದ ಗಮನಿಸಲಿಲ್ಲ. ಈಗ ಗುರುವಿನ ಹತ್ತಿರ ಬಂದಾಗ ಯುಧಿಷ್ಠಿರನಿಗೆ ಪರಮಾತ್ಮನ ಮಹತ್ವ ತಿಳಿಯಿತು. ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿ ವಿಷ್ಣುಸಹಸ್ರನಾಮವನ್ನು ಪಠಿಸುವ ಜ್ಞಾನ ಪ್ರಾಪ್ತವಾಯಿತು. ಈ ಜ್ಞಾನದಿಂದ ಯುಧಿಷ್ಠಿರ ರಾಜ್ಯಭಾರವನ್ನು ಶ್ರದ್ಧೆಯಿಂದ ಮಾಡಿ, ಮೋಕ್ಷವನ್ನು ಪಡೆದ.

ಹೃದಯದ ಭಾವನೆ ದೊಡ್ಡದು

ವಿಷ್ಣುಸಹಸ್ರನಾಮ ಪಠಿಸುವಾಗ ಮನಸ್ಸನ್ನು ನಿಶ್ಚಲವಾಗಿ, ಸ್ಥಿರವಾಗಿ ನಿಲ್ಲಿಸಿ ಪ್ರತಿಯೊಂದು ನಾಮಕ್ಕೂ ತುಳಸೀದಳಗಳನ್ನು ಮಾನಸಿಕವಾಗಿ ಪರಮಾತ್ಮನ ಪಾದಗಳಿಗೆ ಸಲ್ಲಿಸಬೇಕು. ಹೀಗಾದಾಗ ಮಾತ್ರ ನಮ್ಮ ಅಜ್ಞಾನ ತೊಲಗುತ್ತದೆ. ನಿಶ್ಚಲವಾಗಿ ಮನಸ್ಸನ್ನು ನಿಲ್ಲಿಸದೆ ಕೇವಲ ಬಾಯಿಪಾಠ ಮಾಡಿಕೊಂಡು ಹೇಳಿದರೆ ಅದರಿಂದ ಪ್ರಯೋಜನವಿಲ್ಲ. ಬಾಯಿಪಾಠಕ್ಕಿಂತಲೂ, ನಿರ್ಮಲ ಹೃದಯದ ಭಾವನೆ ದೊಡ್ಡದು. ಇದನ್ನು ಗುರುವಿನ ಬಳಿಗೆ ಹೋಗುವ ಮುನ್ನ ಶಿಷ್ಯನು ಅರಿತುಕೊಳ್ಳಬೇಕಾದ ಬಹುದೊಡ್ಡ ಪಾಠ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ವರದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ನಿರ್ಮಲ ಹೃದಯವಂತನಾಗಬೇಕು

ತಾತಯ್ಯನವರು ತಾರಕ ಬ್ರಹ್ಮಾನಂದ ದ್ವಯಕಂದ ಶತಕದ ಒಂದು ಪದ್ಯದಲ್ಲಿ ಈ ರೀತಿಯ ಉಪದೇಶವನ್ನು ಮಾಡಿದ್ದಾರೆ;
ಶಾಸ್ತ್ರಮು ಲೆನ್ನಿ ಚದಿವಿನನ್
ನಿರ್ಮಲ ಹೃದಯುಂಡು ಕಾಡು ನೀಚಾತ್ಮಕುಡೈ
ಸಂಸಾರ ಜಲಧಿಲೋ ಬಡಿ
ಪೋರ್ಲುಚು ಕೊನ್ನಾಳುವುಂಡಿ ಚನು ದುರ್ಗತಿನ್ ||

ಆತ್ಮಶುದ್ಧಿಯಿಲ್ಲದವರು ಎಷ್ಟು ಶಾಸ್ತ್ರಗಳನ್ನು ಅಭ್ಯಾಸಮಾಡಿ ಪಾಂಡಿತ್ಯವನ್ನು ಪಡೆದುಕೊಂಡಿದ್ದರೂ ನಿರ್ಮಲ ಹೃದಯವುಳ್ಳವನಾಗುವುದಿಲ್ಲ. ಅಂತಹವರು ನೀಚಾತ್ಮಕರಾಗಿಯೇ ಸಂಸಾರವೆಂಬ ಸಾಗರದಲ್ಲಿ ಬಿದ್ದು ಹೊರಳಾಡುತ್ತಾ ಕೆಲವು ದಿನಗಳು ಬದುಕಿ ಕೊನೆಗೆ ದುರ್ಗತಿಗೆ ಸಲ್ಲುವರು ಎಂಬ ತತ್ವವನ್ನು ತಾತಯ್ಯನವರು ಬೋಧಿಸಿದ್ದಾರೆ.

ಶಾಸ್ತ್ರಗಳನ್ನು ಓದುತ್ತಾ, ಓದುತ್ತಾ ಅಹಂಕಾರ ನಾಶವಾಗಿ ಶುದ್ಧ ಮನಸ್ಸಿನಿಂದ ನಿರ್ಮಲ ಹೃದಯವಂತನಾಗಬೇಕು. ಆತ್ಮಶೋಧನೆ ಮಾಡದೆ ಶಾಸ್ತ್ರಗಳನ್ನು ಓದುವುದಷ್ಟೇ ಉದ್ದೇಶವಾಗಿರುವ ನೀಚಾತ್ಮನು ಸತ್ತಮೇಲೆ ಕರ್ಮಫಲಕ್ಕೆ ಅನುಸಾರವಾಗಿ ದುರ್ಗತಿಗೆ ಹೋಗುವನೇ ಹೊರತು ಮುಕ್ತನಾಗುವುದಿಲ್ಲವೆಂದು ತಾತಯ್ಯನವರು ಹೇಳಿದ್ದಾರೆ. ಮುಕ್ತನಾಗುವುದಕ್ಕೆ ನರಜನ್ಮ ಶ್ರೇಷ್ಠವಾದುದೆಂದು ತಾತಯ್ಯನವರು ಈ ರೀತಿಯಾಗಿ ಬೋಧಿಸಿದ್ದಾರೆ;
ನರಜನ್ಮಂಬುನ ಮೋಕ್ಷಮು
ಕನಕುಂಡಿನ ಲೇದು ಲೇದು ಯೇ ಜನ್ಮಮುನನ್
ಯಿದಿಗೋ ಇಪುö್ಪಡು ಸಮಯಮು
ನಿನು ನೀವೇ ತೆಲಿಯವಯ್ಯ ನಾರೇಯಣ ಕವಿ||

ಮಾನವ ಜನ್ಮದಲ್ಲಿ ಮೋಕ್ಷವನ್ನು ಪಡೆದುಕೊಳ್ಳದಿದ್ದರೆ ಬೇರೆ ಯಾವ ಜನ್ಮದಲ್ಲೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸತ್ಯವನ್ನು ತಾತಯ್ಯನವರು ಘಂಟಾಘೋಷವಾಗಿ ಹೇಳಿದ್ದಾರೆ. ಈಗ ಸರಿಯಾದ ಸಮಯ ಬಂದಿದೆ, ಈಗ ನಿನ್ನನ್ನು ನೀನು ಅರಿತುಕೊಂಡು ಮೋಕ್ಷವನ್ನು ಸಂಪಾದಿಸಿಕೋ ಎಂದಿದ್ದಾರೆ. ಮಾನವರಾಗಿ ಹುಟ್ಟಿದ ಮೇಲೆ ಮೋಕ್ಷಕ್ಕೆ ಬೇಕಾದ ಬುತ್ತಿಯನ್ನು ಇಂದಿನಿಂದಲೇ ಸಿದ್ಧಪಡಿಸಿಕೊಳ್ಳೋಣ, ಜಾಗೃತವಾಗೋಣ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ : Kaivara Tatayya Jayanthi : ಜೀವಪರ ಸಂತ ಕೈವಾರ ತಾತಯ್ಯ

Exit mobile version