Site icon Vistara News

ತಾತಯ್ಯ ತತ್ವಾಮೃತಂ : ಶಿಷ್ಯನು ಸಿಗುವುದು ಗುರುವಿನ ಪರಮಭಾಗ್ಯ!

guru shishya

ಸಾಧಕ ಶಿಷ್ಯನ ಲಕ್ಷಣಗಳೇನಾಗಿರಬೇಕು? ಇದು ನಮ್ಮ ಮುಂದಿರುವ ಪ್ರಶ್ನೆ. ಗುರುಗಳ ಬಗ್ಗೆ ಹಲವಾರು ಚಿಂತನೆಗಳಿವೆ. ಆದರೆ ಗುರುವಿನ ಜ್ಞಾನವನ್ನು ಪಡೆಯುವ ಶಿಷ್ಯನ ಗುಣಗಳೇನಾಗಿರಬೇಕು. ಹೇಗಾದರೆ ಹೊಲವನ್ನು ಚೆನ್ನಾಗಿ ಉಳುಮೆ ಮಾಡಿ, ಕಳೆ ತೆಗೆದು ಬಿತ್ತನೆಯನ್ನು ಹಾಕಬೇಕೋ, ಅದೇ ರೀತಿಯಾಗಿ ಗುರುವಿನ ಬಳಿಗೆ ಹೋಗಲು ಶಿಷ್ಯನು ಸಿದ್ಧತೆಯನ್ನು ಮಾಡಿಕೊಳ್ಳಬೇಕು.

ಸಾಧನೆಯ ಮೂಲಕ ಕರ್ಮಗಳನ್ನು ನಾಶಮಾಡಿಕೊಂಡು, ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುವ ಜ್ಞಾನವಂತನಾದೆ. ಇದರ ಮುಂದೆ ಇನ್ನೇನು? ಅಷ್ಟಕ್ಕೆ ಗುರು ನಿನ್ನ ಬಳಿಗೆ ಬರುತ್ತಾನೆಯೇ? ಇಲ್ಲ. ಕರ್ಮಗಳನ್ನು ನಾಶಮಾಡಿಕೊಳ್ಳುವುದು ಒಂದು ಹಂತ. ಇದರಿಂದ ಮನಸ್ಸಿನಲ್ಲಿರುವ ಭಯವು ನಿರ್ಮೂಲವಾಗಿ, ಧೈರ್ಯ ಬರುತ್ತದೆ. ಇದಾದ ನಂತರ ಸುಮ್ಮನೆ ಗುರುಗಳು ನಿನ್ನ ಬಳಿಗೆ ಬಂದು ಬಿಡುವುದಿಲ್ಲ.

ಗುರುಗಳು ನಿನ್ನ ಬಳಿಗೆ ಬರಬೇಕಾದರೆ ಕೆಲವು ನಿಯಮಗಳನ್ನು, ಕರ್ತವ್ಯಗಳನ್ನು ಶಿಷ್ಯನು ಅನುಸರಿಸಬೇಕು. ಗುರುಗಳು ನಿನ್ನ ಬಳಿಗೆ ಬರಬೇಕಾದರೆ, ಅವರ ಒಲವನ್ನು ಪಡೆಯಬೇಕಾದರೆ ಕೆಲವು ಮರ್ಮಗಳನ್ನು ಅರಿವು ಮಾಡಿಕೊಳ್ಳಬೇಕು. ಇದಕ್ಕಾಗಿ ಶಿಷ್ಯನು ಕೆಲವು ಗುಣಗಳನ್ನು ಹೊಂದಿರಬೇಕು, ಅವುಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ಗುರುಸೇವೆಯ ಬಗ್ಗೆ ತಿಳಿಯಿರಿ

ಗುರುಸೇವೆ ಎಂದರೆ ತಾಯಿ, ತಂದೆ, ಗುರು, ದೇವರು ಎಲ್ಲವೂ ನೀನೇ ಎಂದು ಮಾನಸಿಕವಾಗಿ ಗುರುಗಳಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕು. ತಾತಯ್ಯನವರು ತಮ್ಮ ಕೀರ್ತನೆಗಳಲ್ಲಿ ಹೀಗೆ ಬೋಧಿಸಿದ್ದಾರೆ.
“ತಲ್ಲಿತಂಡ್ರಿವೂ ನೀವೇ, ದಾತದೈವಮು ನೀವೇ
ಇಷ್ಟಾರ್ಥಮುಲೊಸಗು ವೀರನಾರೇಯಣ”

ತಾಯಿ, ತಂದೆ, ದಾತ, ದೈವ ಎಲ್ಲವೂ ನೀವೇ ಇಷ್ಟಾರ್ಥಗಳನ್ನು ನೆರವೇರಿಸು ಎಂದು ಪ್ರಾರ್ಥಿಸಿದ್ದಾರೆ.

“ತಲ್ಲಿತಂಡ್ರಿ ಗುರುವು ದೈವಮು
ನಾರೇಯಣಸ್ವಾಮಿ ನಾಕು ನಾತಿರೋ ವಿನವೇ”

ನಾರೇಯಣಸ್ವಾಮಿಯಾದ ಪರಮಾತ್ಮನೊಬ್ಬನೇ ತಾಯಿಯೂ, ತಂದೆಯೂ, ಗುರುವೂ ಆಗಿದ್ದಾರೆ ಎಂದಿದ್ದಾರೆ.

ನಾವು ನೋಡುತ್ತಿರುವುದೆಲ್ಲಾ ಮಾಯಾ ಪ್ರಪಂಚ, ಶಾಶ್ವತವಾಗಿರುವುದು ಗುರುವೊಬ್ಬನೇ ಎಂದು ತಿಳಿದುಕೊಂಡು ಗುರುಗಳ ಸೇವೆಯನ್ನು ನಿರ್ವಂಚನೆಯಿಂದ ಮಾಡಬೇಕು. ಅಂತರಂಗದಲ್ಲಿ ಮಾನಸಿಕವಾಗಿ ಗುರುವೇ ಸರ್ವಸ್ವ ಎಂದು ಹೇಳಿಕೊಳ್ಳಬೇಕು ಹಾಗೂ ಲೌಕಿಕ ಮಾಯಾ ಪ್ರಪಂಚವನ್ನು ಮರೆಯಬೇಕು. ಆಗ ಗುರು ನಿನ್ನನ್ನು ಒಪ್ಪಿಕೊಳ್ಳುತ್ತಾನೆ. ಇದು ಶಿಷ್ಯನು ಮಾಡಬೇಕಾದ ಮೊದಲ ಕರ್ತವ್ಯ. ಇಂತಹ ಶಿಷ್ಯನಿಗೆ ಗುರು ಬಂದು ಉಪದೇಶವನ್ನು ಮಾಡುತ್ತಾನೆ. ಇದನ್ನೇ ತಾತಯ್ಯನವರು ಹೀಗೆ ಹೇಳಿದ್ದಾರೆ;
“ಗುರುಡೇ ತನ ದೈವಮನಿ ಗುರಿಜೇಸಿ ಯೇವೇಳ
ಸೇವಜೇಸಿನ ಮಹಾ ಶ್ರೇಷ್ಠುನಕುನು”
ಗುರುದೇವನೇ ತನ್ನ ದೈವವೆಂದು ಲಕ್ಷ್ಯವಿಟ್ಟುಕೊಂಡು ಅನುಕ್ಷಣವೂ ಸೇವೆ ಮಾಡಿಕೊಂಡಿರುವ ಮಹಾ ಶ್ರೇಷ್ಠನಾಗಿರುವ ಶಿಷ್ಯನಿಗೆ ಗುರು ಬಂದು ಉಪದೇಶವನ್ನು ನೀಡುತ್ತಾನೆ ಎಂದಿದ್ದಾರೆ.

ಆಚಾರ ವೈರಾಗ್ಯ

ಆಚಾರ ವೈರಾಗ್ಯವೆಂದರೇ ಮಾಡುವ ಕೆಲಸ ಕಾರ್ಯಗಳಲ್ಲಿ ವೈರಾಗ್ಯವೆಂದರ್ಥವಲ್ಲ. ಆಚಾರ ವೈರಾಗ್ಯದಲ್ಲಿ ಎರಡು ವಿಧ. ಒಂದು ನಮ್ಮ ಸಂಪ್ರದಾಯಗಳು, ಇನ್ನೊಂದು ನಾವು ಆಚರಿಸುವ ಸ್ವಧರ್ಮ ವೈರಾಗ್ಯ. ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ “ಅರ್ಜುನ, ನೀನು ಕ್ಷತ್ರಿಯನಿದ್ದೀಯಾ, ನಿನ್ನ ಸ್ವಧರ್ಮದ ವೈರಾಗ್ಯವನ್ನು ಅನುಸರಿಸು. ಮಾಯೆಗೆ ಕಟ್ಟುಬೀಳಬೇಡ. ಹೋಗು ಯುದ್ಧ ಮಾಡು ಎಂದು ಎಚ್ಚರಿಸುತ್ತಾನೆ. ಇದು ಆಚಾರ ವೈರಾಗ್ಯ. ಇನ್ನು ಸುಲಭವಾಗಿ ಹೇಳಬೇಕಾದರೆ ಒಬ್ಬ ಶಿಕ್ಷಕ ತನ್ನ ಶಿಷ್ಯರಿಗೆ ಯಾವುದೇ ಭೇದಭಾವ ಮಾಡದೆ ತನ್ನಲ್ಲಿರುವ ಜ್ಞಾನವನ್ನೆಲ್ಲಾ ನಿಷ್ಕಾಮವಾಗಿ ಧಾರೆಯೆರೆಯಬೇಕು.

ಯಾವ ಶಿಷ್ಯನಲ್ಲಿಯೂ ಭೇದ ತೊರದೆ ಈ ಕಾರ್ಯವನ್ನು ಮಾಡಿದರೆ ಅದು ಆಚಾರ ವೈರಾಗ್ಯವೆನಿಸುತ್ತದೆ. ಯಾವಾಗಾದರೇ ಈ ರೀತಿಯ ಆಚಾರ ವೈರಾಗ್ಯ ಬರುತ್ತದೋ ಆಗ ಗುರು ನಿನ್ನನ್ನು ಮೆಚ್ಚುತ್ತಾನೆ. ತಾತಯ್ಯನವರು ಹೀಗೆ ಹೇಳುತ್ತಾರೆ;
“ಆಚಾರಕ್ರಿಯಲನ್ನಿ ಅಬ್ಧಿಲೋ ಬಡವೈಚಿ
ಹರಿಭಜನಲೋವುನ್ನ ಅಧಿಕುನಕುನು”

ಕಾಮ್ಯಫಲಪ್ರಾಪ್ತಿಗಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಸಕಾಮಕರ್ಮವರ್ಗದ ಆಚಾರ ಕ್ರಿಯೆಗಳೆಲ್ಲವನ್ನೂ ಸಮುದ್ರಕ್ಕೆ ಎಸೆದು ಹರಿಭಜನೆಯಲ್ಲಿಯೇ ಮಗ್ನನಾಗಿರುವ ಭಕ್ತಿ ವಿಶೇಷವುಳ್ಳ ಅಧಿಕನಿಗೆ ಗುರು ಉಪದೇಶವನ್ನು ನೀಡುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಕಾಮ್ಯಫಲಗಳಿಗೋಸ್ಕರ, ಫಲಾಪೇಕ್ಷೆಯಿಂದ ಕರ್ಮಾಸಕ್ತನಾಗಬಾರದು. ಆಚಾರಗಳನ್ನು ಬಿಟ್ಟು, ಅನುಕ್ಷಣವೂ ಹರಿಭಜನೆಯಲ್ಲಿ ತಲ್ಲೀನನಾಗಿರುವಂತಹ ಶಿಷ್ಯನು ಶ್ರೇಷ್ಠನು.

kaivara-tatayya

ಹರಿಭಜನೆ ಮಾಡಬೇಕು

ಹರಿಭಜನೆ ಎಂದರೆ ಜಪ, ಮಾನಸಿಕ ಪೂಜೆ, ಭಗವಂತನ ಭಜನೆ. ಹರಿಭಜನೆಯನ್ನು ಹೇಗೆ ಮಾಡಬೇಕು? ಏಕಾಗ್ರಚಿತ್ತವಾಗಿ ಮಾನಸಿಕವಾಗಿ ಹರಿಭಜನೆ ಮಾಡಬೇಕು. ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿ ಹರಿಭಜನೆ ಮಾಡಬೇಕು. ತಾತಯ್ಯನವರು ಹೇಳುತ್ತಾರೆ;
ಮಾಯಾ ಸಂಸಾರಮುನ ಮಗ್ನುಡೈವುನ್ನಾನು
ಕಡತೇರ್ಚು ಭವರೋಗ ವೈದ್ಯ ನಾರೇಯಣ..
.
ಗುರುಗಳು ನಮಗೆ ಹೇಳಿಕೊಡುತ್ತಿದ್ದಾರೆ. ಮಾಯಾ ಸಂಸಾರದಲ್ಲಿ ಮುಳುಗಿ ಹೋಗಿದ್ದೇನೆ, ನನ್ನನ್ನು ಭವರೋಗದಿಂದ ಪಾರುಮಾಡಿ ಗುರಿ ಸೇರಿಸುವ ವೈದ್ಯನು ನೀನು ನಾರೇಯಣ…. ಎಂದು ಪ್ರಾರ್ಥಿಸಬೇಕು.

ನನ್ನಲ್ಲಿರುವ ಶತ್ರುಗಳನ್ನು ನಾನು ಓಡಿಸಲು ಸಾಧ್ಯವಿಲ್ಲ, ಬಲಭದ್ರನಾಗಿರುವ ಗುರುವೇ, ನಿನ್ನ ಬಾಣದಿಂದ ನನ್ನ ಅಂತರಂಗದಲ್ಲಿರುವ ಪ್ರಬಲವಾದ ಶತ್ರುಗಳನ್ನು ಓಡಿಸಿ ಭಗ್ನ ಮಾಡು ಎಂದು ಪ್ರಾರ್ಥಿಸಬೇಕು. ಈ ರೀತಿಯಾಗಿ ನಿರಂತರವಾಗಿ ಏಕಾಗ್ರತೆಯಿಂದ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿ ಮಾನಸಿಕವಾಗಿ ಹರಿಭಜನೆಯನ್ನು ಮಾಡಿದರೆ ಗುರು ಶಿಷ್ಯನ ಮೇಲೆ ಒಲವನ್ನು ತೋರುತ್ತಾನೆ.

ಸ್ತ್ರೀವ್ಯಾಮೋಹ ಬಿಡಬೇಕು!

ಸಾಧಕ ಶಿಷ್ಯನು ಬ್ರಹ್ಮಚರ್ಯವನ್ನು ಪಾಲಿಸುತ್ತಾ, ಸ್ತ್ರೀ ವ್ಯಾಮೋಹವನ್ನು ಬಿಡುವುದು ಬಹಳ ಮುಖ್ಯವಾದುದು. ಇದನ್ನು ಬಿಡುವುದು ಬಹಳ ಕಷ್ಟ. ಯಾರಾದರೇ ಬ್ರಹ್ಮಚರ್ಯವನ್ನು ಪಾಲಿಸುತ್ತಾನೋ ಅವನನ್ನು ತಾತಯ್ಯನವರು “ವಿಕ್ರಮ” ಎಂದಿದ್ದಾರೆ. ಬ್ರಹ್ಮಚರ್ಯ ಪಾಲನೆಯ ಮನಸ್ಸು ಯಾವಾಗಬರುತ್ತದೆಯೆಂದರೆ ಮೇಲೆ ಹೇಳಿರುವ ಮೂರು ಅಂಶಗಳನ್ನು ಪರಿಪೂರ್ಣವಾಗಿ ಅನುಸರಿಸಿದರೆ ಬ್ರಹ್ಮಚರ್ಯವು ಸಿದ್ಧಿಸುತ್ತದೆ. ತಾತಯ್ಯನವರು ಹೀಗೆ ಹೇಳುತ್ತಾರೆ;
“ಕಾಮಿನುಲಪೈ ಆಶ ಕಾಲ್ಚಿಕಡಕು ವೇಸಿ
ನಿಷ್ಕಳಂಕುಂಡೈನ ನಿರ್ಮಲುನಕು”

ಸ್ತ್ರೀ ವ್ಯಾಮೋಹ ಸಲ್ಲದು. ಯೋಗ ಸಾಧನೆಯಲ್ಲಿ ಬ್ರಹ್ಮಚರ್ಯವೇ ಸಾಧಕನ ಮುಖ್ಯ ಬಲ. ಕಾಮಿನಿಯರ ಸಂಸರ್ಗದ ವ್ಯಾಮೋಹವನ್ನು ಸುಟ್ಟುಹಾಕಿ, ನಿಷ್ಕಲಂಕನಾದ ಬ್ರಹ್ಮಚಾರಿಯು ಶಿಷ್ಯತ್ವಕ್ಕೆ ಅರ್ಹನು ಎನ್ನುತ್ತಿದ್ದಾರೆ. ಕಾಂತೆಯರನ್ನು ಕಂಡಾಗ ಕಣ್ಣಿನ ಕೆಟ್ಟ ನೋಟದ ಫಲವಾಗಿ ಮನಸ್ಸಿನಲ್ಲೂ ಪಾಪದೃಷ್ಠಿ ಬರುವ ಮುನ್ನವೇ ಮಾತೆಗೆ ಸಮಾನವೆಂದು ಭಾವಿಸುವವನೇ ತತ್ವನಿಷ್ಠನಾದ ಯೋಗಿ ಎಂದಿದ್ದಾರೆ ತಾತಯ್ಯನವರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ವರದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಭೇದ ಭಾವವಿಲ್ಲದ ಮಾರ್ಗ

ತಾತಯ್ಯನವರು ಶ್ರೀಕೃಷ್ಣಚರಿತಾಮೃತಯೋಗಸಾರಮು ಎಂಬ ಉಪನಿಷತ್ ವಾಕ್ಯಗಳಿಂದ ಕೂಡಿರುವ ಗ್ರಂಥವನ್ನು ರಚಿಸಿದ್ದಾರೆ. ಅದರಲ್ಲಿ ಆತ್ಮಸಾಮರಸ್ಯ ಮತ್ತು ಸಮಭಾವನೆಯ ಬಗ್ಗೆ ತಿಳಿಸಿದ್ದಾರೆ. ಪ್ರಸ್ತುತ ಇಡೀ ಪ್ರಪಂಚವೇ ಕುಲದ ಮಾಯೆಯಲ್ಲಿ ಬಿದ್ದಿದೆ. ಕುಲದ ಅಹಂಕಾರ ವಿಜೃಂಭಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಾತಯ್ಯನವರು “ನಾನು ಅಮರನಾರೇಯಣಸ್ವಾಮಿ ಕುಲಕ್ಕೆ ಸೇರಿದ್ದೇನೆ” ಎಂದು ಪರಮಾತ್ಮನಿಗೆ ಸಮರ್ಪಿಸಿಕೊಂಡು ಹೇಳಿರುವ ಬೋಧನೆಯನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಜೀವಿಯಲ್ಲಿಯೂ ಭೇದಭಾವ ತೋರದಂತಹ ಮನಸ್ಥಿತಿ ನಿರ್ಮಾಣವಾಗಬೇಕು. ಈ ಮನಸ್ಥಿತಿ ಬಂದರೆ ಗುರು ನಿನ್ನನ್ನು ಮೆಚ್ಚುತ್ತಾನೆ.

ತಾತಯ್ಯನವರು ಹೀಗೆ ಹೇಳಿದ್ದಾರೆ;
“ಸಕಲ ಜೀವುಲನೊಕ್ಕ ಸಮಮುಗಾ
ಭಾವಿಂಚು ಸತ್ಯಾತ್ಮುಡೈನ ಸಂಪನ್ನುನಕು”

ಎಲ್ಲರನ್ನೂ, ಎಲ್ಲ ಜೀವಿಗಳನ್ನೂ ಮೇಲು-ಕೀಳುಗಳೆಣಿಸದೆ, ಉಚ್ಚ-ನೀಚದ ತಾರತಮ್ಯವಿಲ್ಲದೆ, ಭೇದಭಾವದ ಭಿನ್ನತೆಯಿಲ್ಲದೆ ಅವರೊಡನೆ ಸಮಭಾವದಿಂದ ವರ್ತಿಸುವ, ಎಲ್ಲ ಜೀವಿಗಳಲ್ಲೂ ವಾಸಿಸಿರುವ ಪರಮಾತ್ಮನು ಒಬ್ಬನೇ ಆಗಿರುವನು ಎಂಬ ದೃಢಭಾವವುಳ್ಳ ಸತ್ಯಾತ್ಮ ಸಂಪನ್ನನಾದ ಸಮದರ್ಶಿತ್ವವುಳ್ಳ ಶಿಷ್ಯನಿಗೆ ಗುರುವು ಉಪದೇಶವನ್ನು ನೀಡುತ್ತಾನೆ ಎಂದಿದ್ದಾರೆ. ಇಂತಹ ಶಿಷ್ಯನು ಸಿಗುವುದು ಗುರುವಿನ ಪರಮಭಾಗ್ಯವೂ ಹೌದು.

ಈ ಐದು ಗುಣಗಳನ್ನು ಯಾರಾದರೇ ಸಾಧಿಸುತ್ತಾರೋ ಅಂತಹ ಶಿಷ್ಯನ ಬಳಿಗೆ ಗುರು ಬಂದು ʻʻಮಗು, ಅಂಜಬೇಡʼʼ ಎಂದು ಹೇಳಿ ಅಭಯವನ್ನು ಕೊಟ್ಟು ಮುಕ್ತಿಯ ದಾರಿಯನ್ನು ತೋರಿಸಿ ಕೈಹಿಡಿದು ಕರೆದುಕೊಂಡು ಹೋಗಿ ಗುರಿಯನ್ನು ಸೇರಿಸಿ ಮುಕ್ತನನ್ನಾಗಿ ಮಾಡುತ್ತಾನೆ. ಇದು ಸತ್ಯ, ಸತ್ಯ, ಸತ್ಯ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಗುರುವಿನ ಕೃಪೆಯಿರಲು ಮಾಯೆ ಮಾಯವಾದೀತು!

Exit mobile version