ಚೂಡರಾದ ಬ್ರಹ್ಮಮು ನೀಲೋ ನೀವೇ…. ಎಂದರೆ ನಿನ್ನೊಳಗಿರುವ ಬ್ರಹ್ಮನನ್ನು ನೀನೇ ನೋಡಬಾರದೇ…. ಎಂದು ಸಾರಿರುವ ಕೈವಾರದ ಸಂತ ಶಿರೋಮಣಿ ಶ್ರೀಯೋಗಿನಾರೇಯಣ ತಾತಯ್ಯನವರು ದೇಹವನ್ನೇ ದೇವಾಲಯವೆಂದು ಸರಳವಾಗಿ ತಿಳಿಹೇಳಿದ್ದಾರೆ. ದೇವರನ್ನು ಹುಡುಕುವುದಾದರೆ ಶರೀರದ ಒಳಗೆ ಹುಡುಕಬೇಕು ಎನ್ನುವುದೇ ತಾತಯ್ಯನವರ ತತ್ವ. ಯೋಗದ ಮಹತ್ವವನ್ನರಿತು ಶರೀರದಲ್ಲೇ ಹುಡುಕಿದರೆ ಶೀಘ್ರವಾಗಿ ಪರಮಾತ್ಮನ ದರ್ಶನವಾಗುವುದು ಎಂಬುದನ್ನು ತಮ್ಮ ಬೋಧನೆಗಳಲ್ಲಿ ತಾತಯ್ಯನವರು ಬೋಧಿಸಿದ್ದಾರೆ.
“ದೇವುಡು ತನಲೋ ದಂಡಿಗ ವುಂಡುಟ
ತೆಲಿಯನಿ ಮಾನವಪಶುವುಕುನೂ
ಸದ್ಗತಿ ಕಲುಗದು ಸಂಶಯಮಿಡುವದು
ರಾಕಪೋಕಲಕು ತಗುಲೌನು”
ತನ್ನಲ್ಲೇ ದೇವರಿರುವುದನ್ನು ತಿಳಿದುಕೊಳ್ಳದ ಮಾನವರೂಪದ ಪಶುವಿಗೆ ಹುಟ್ಟುಸಾವುಗಳುಂಟೇ ಹೊರತು ಮೋಕ್ಷವೆಂಬ ಸದ್ಗತಿ ಇಲ್ಲ ಎನ್ನುತ್ತಿದ್ದಾರೆ ತಾತಯ್ಯನವರು.
ಶರೀರವೇ ವೈಕುಂಠ
ತಾತಯ್ಯನವರು ಒಂದು ಕೀರ್ತನೆಯಲ್ಲಿ “ಇದಿಗೋ ತಿರುಪತಿ ಕಾಶಿ ಈ ಪುರಮುಲೋನಾ, ಚೆಡಿ ತಿರುಗುಟದಿ ಯೇಮೊ ಚಪಲಮೇ ಕಾನಿ” (ತಿರುಪತಿ, ಕಾಶಿ ಪಟ್ಟಣಗಳು ಈ ಪುರದಲ್ಲಿಯೇ ಅಂದರೆ ಶರೀರದಲ್ಲಿಯೇ ಇದೆ. ಕೆಟ್ಟು ತಿರುಗುವುದು ಚಲಪಕ್ಕಾಗಿಯಷ್ಟೇ) ಎಂದಿದ್ದಾರೆ. ತಾತಯ್ಯನವರು ಶರೀರದ ಬಗ್ಗೆ ಗಮನಾರ್ಹವಾದ ಪ್ರಸ್ತಾಪವನ್ನು ಈ ಪದ್ಯದಲ್ಲಿ ಹೀಗೆ ಮಾಡಿದ್ದಾರೆ;
ಕಾಯಂಬುನ ವೈಕುಂಠಮು
ಕಾಯಂಬುನ ಸಕಲದೇಶ ತಿರುಪತುಲೆಲ್ಲನ್
ಕಾಯಂಬುನ ಪುಣ್ಯ ತೀರ್ಥಮು
ಕಾಯಮು ಕನಲೇರು ನರುಲು ಕಲಿಯುಗಮುನನೂ||
ಶರೀರದಲ್ಲಿಯೇ ವೈಕುಂಠವಿದೆ. ಎಲ್ಲಾ ದೇಶಗಳ ಪುಣ್ಯಸ್ಥಳಗಳೂ, ಎಲ್ಲಾ ತಿರುಪತಿಗಳೂ ದೇಹದಲ್ಲೇ ಇವೆ. ಈ ಕಾಯದಲ್ಲೇ ಎಲ್ಲಾ ಪುಣ್ಯತೀರ್ಥಗಳಿವೆ. ಆದರೂ ಕಲಿಯುಗದಲ್ಲಿ ಈ ಮಾನವರು ಕಾಯದೊಳಗೆ ಪ್ರವೇಶಿಸಿ ಇದನ್ನು ಕಾಣದಾಗಿರುವವರಲ್ಲಾ ಎಂದು ಕಳಕಳಿಯಿಂದ ವಿಷಾಧವನ್ನು ವ್ಯಕ್ತಪಡಿಸುತ್ತಿದ್ದಾರೆ ತಾತಯ್ಯನವರು.
ಅಂತರ್ಮುಖವಾದ ಸಾಧನೆಯ ಮೂಲಕ ದೇಹಶೋಧನೆ ಮಾಡಿ ಸಾಧಿಸುವವರು ವಿರಳ. ಯೋಗಿಯು ಮಾತ್ರ ದೇಹದಲ್ಲಿರುವ ಎಲ್ಲಾ ಪುಣ್ಯಸ್ಥಳಗಳನ್ನೂ, ಪ್ಯಣ್ಯತೀರ್ಥಗಳನ್ನೂ ಕಂಡು ಜ್ಞಾನಿಯಾಗಿರುತ್ತಾನೆ. ಆದರೆ ಮಾನವರು ಈ ಕಾಯದ ಮಹಿಮೆಯನ್ನು ಅರಿಯದೆ ಭೋಗಾದಿಗಳ ಚಿಂತೆಯಲ್ಲಿ ಮುಳುಗಿ ಮಾಯೆಯ ವಶವಾಗಿರುತ್ತಾರೆ. ಎಲ್ಲಾ ಪುಣ್ಯಕ್ಷೇತ್ರಗಳನ್ನು ದೇಹದಲ್ಲೇ ಕಲ್ಪಿಸಿಕೊಳ್ಳಬೇಕಾದರೆ ಸಾಧಕನಿಗೆ ಜ್ಞಾನನೇತ್ರದ ಅಗತ್ಯವಿದೆ. ಆದರೆ ಮಾನವರು ಶರೀರದಲ್ಲಿರುವ ತೀರ್ಥಕ್ಷೇತ್ರಗಳನ್ನು ಅಂತರಂಗದಲ್ಲಿ ಕಾಣದೆ ಹೊರಗಡೆ ಅಂದರೆ ಬಾಹ್ಯದಲ್ಲಿ ಕಾಣುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ನಿಜವಾದ ವೈಕುಂಠವು ಶರೀರವೇ ಆಗಿದೆ ಎನ್ನುತ್ತಿದ್ದಾರೆ. ಶರೀರದಲ್ಲಿಯೇ ವೈಕುಂಠವನ್ನು ಕಾಣುವುದೇ ಸಾಧನೆ.
ಆತ್ಮರಾಮನ ಮಂದಿರ
ಬಾಹ್ಯತೀರ್ಥಗಳ, ಶಿಲೆಗಳ ಮತ್ತು ವಿಗ್ರಹಗಳ ಪೂಜೆಯಿಂದ ಯೋಗಿಗಳಿಗೆ ತೃಪ್ತಿಯಾಗುವುದಿಲ್ಲ. ಹೊರಗಿನ ಧೂಪ, ದೀಪ ನೈವೇದ್ಯಾದಿ ಆಡಂಬರಗಳು ಯೋಗಿಗಳಿಗೆ ಶ್ರೇಷ್ಠವೆನಿಸುವುದಿಲ್ಲ. ಹೊರಗಿನ ಬಾಹ್ಯ ಪೂಜೆಗಳೆನಿದ್ದರೂ ಜ್ಞಾನದ ಮೆಟ್ಟಿಲನ್ನು ಮುಟ್ಟುವವರೆಗೆ ಮಾತ್ರ. ಪರಿಪೂರ್ಣವಾದ ಜ್ಞಾನವನ್ನು ಪಡೆದ ಮೇಲೆ ಅಂತರಂಗದ ಮಾನಸಪೂಜೆಯೇ ಶ್ರೇಷ್ಠವೆನಿಸುತ್ತದೆ. ಇದನ್ನೇ ತಾತಯ್ಯನವರು ಹೀಗೆ ಹೇಳಿದ್ದಾರೆ;
ದೇಹಮು ದೇವಳ ಮಾಯೆನು
ಜೀವುಡು ಬ್ರಹ್ಮಸ್ವರೂಪ ದೇವುಂಡಾಯೆನ್
ಅನುದಿನಮು ಆತ್ಮರಾಮುನಿ ಮಂದಿರಮುನ
ಚೇರಿ ಸೇತು ಮಾನಸಪೂಜಾ||
ಈ ಪದ್ಯದಲ್ಲಿ ಮಾನಸ ಪೂಜೆಯನ್ನು ಮಾಡುವ ಸ್ಥಳವನ್ನು ವಿವರಿಸುತ್ತಿದ್ದಾರೆ. ದೇಹವೇ ದೇವಾಲಯವಾಯಿತು. ಈ ದೇಹದಲ್ಲಿ ನೆಲೆಗೊಂಡಿರುವ ಬ್ರಹ್ಮಸ್ವರೂಪವಾದ ಜೀವನೇ ದೇವರಾದರು. ಆದುದರಿಂದ ಅನುದಿನವೂ ಆತ್ಮರಾಮನ ನೆಲೆಯಾಗಿರುವ ಹೃದಯಮಂದಿರವನ್ನು ಸೇರಿ ಮಾನಸ ಪೂಜೆಯನ್ನು ಮಾಡುತ್ತೇನೆ ಎನ್ನುತ್ತಿದ್ದಾರೆ ತಾತಯ್ಯನವರು. ಯೋಗಿಯು ಅನುದಿನವು ಜೀವನನ್ನು ಬ್ರಹ್ಮಸ್ವರೂಪವಾದ ದೇವರೆಂದು ತಿಳಿದುಕೊಂಡು ಆತ್ಮರಾಮನ ಮಂದಿರವನ್ನು ಸೇರಿ ಮಾನಸಪೂಜೆಯನ್ನು ಮಾಡುತ್ತಾರೆ. ಇದನ್ನೇ ತಾತಯ್ಯನವರು “ಆತ್ಮರಾಮನ ಪೂಜೆ ಮಾಡಬೇಕಣ್ಣಾ…” ಎಂದಿದ್ದಾರೆ.
ದಿವ್ಯಾಮೃತದ ಕೊಳ
ತಾತಯ್ಯನವರು ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಕಣ್ಣಿನ ಪುಣ್ಯವೇನು? ಶರೀರದಲ್ಲಿರುವ ಕೊಳ ಯಾವುದು? ಯಾವುದನ್ನು ಸೇವಿಸಿದರೆ ಗುರುವನ್ನು ಸೇರಬಹುದು? ಈ ಮೂರು ಅಂಶಗಳನ್ನು ತಾತಯ್ಯನವರು ಈ ಪದ್ಯದಲ್ಲಿ ಬೋಧಿಸಿದ್ದಾರೆ;
ಕನ್ನುಲ ಕಲಿಗಿನ ಪುಣ್ಯಮು
ಕನವಲೆ ಲೋಜೂಪು ಜೂಚಿ ಕಾಯಮುಲೋನನ್
ದಿವ್ಯಾಮೃತ ಕೊಲನುನ್ನದಿ
ಸೇವಿಂಚಿನ ಧನ್ಯುಡೈತೆ ಚೇರುನು ಗುರುನಿ||
ಶರೀರದಲ್ಲಿ ಒಳನೋಟವುಂಟಾದಾಗಲೇ ಕಣ್ಣುಗಳಿರುವುದಕ್ಕೆ ಸಾರ್ಥಕ. ಕಾಯದ ಒಳನೋಟವನ್ನು ನೋಡುವುದರಿಂದಲೇ ಕಣ್ಣುಗಳಿಗೆ ಪುಣ್ಯ. ಈ ಶರೀರದಲ್ಲಿ ಜ್ಞಾನವೆಂಬ ದಿವ್ಯಾಮೃತದ ಕೊಳವಿದೆ. ಒಳನೋಟದಿಂದ ಅದನ್ನು ಕಂಡುಕೊಂಡು ಆ ಅಮೃತವನ್ನು ಸೇವನೆ ಮಾಡಿ ಧನ್ಯನಾದರೆ ಪರಮಾತ್ಮ ಸ್ವರೂಪನಾದ ಗುರುವಿನಲ್ಲಿ ಸೇರಿಹೋಗುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು.
“ಕನ್ನುಲಂದೇ ವಚ್ಚು ದುರಿತಮು, ಕನ್ನುಲಂದೇ ಮೋಕ್ಷಮು” ಕಣ್ಣುಗಳಿಂದಲೇ ದುರಿತಗಳು ಬರುತ್ತದೆ ಹಾಗೂ ಕಣ್ಣುಗಳಿಂದಲೇ ಮೋಕ್ಷವು ಪ್ರಾಪ್ತವಾಗುತ್ತದೆ. ಕಣ್ಣುಗಳು ಮಯಾಲೋಕಕ್ಕೆ ಕಾರಣವಾದಂತೆ ಮೋಕ್ಷಕ್ಕೂ ಕಾರಣವಾಗಿದೆ. ಕಣ್ಣುಗಳ ನೋಟ ಬಾಹ್ಯ ಪ್ರಪಂಚದ ಕಡೆಗೆ ಆಸಕ್ತವಾಗಿ ಹರಿದಾಗ ಪಾಪವೂ, ಅಂತರ್ಮುಖವಾಗಿ ಹರಿದಾಗ ಪುಣ್ಯವೂ ಉಂಟಾಗುತ್ತದೆ. ಅಂತರ್ಮುಖ ದೃಷ್ಟಿಯೇ ಯೋಗದೃಷ್ಟಿ.
ಯೋಗದೃಷ್ಟಿಗೆ ಮಾತ್ರ ಶರೀರದಲ್ಲಿರುವ ದಿವ್ಯಾಮೃತ ಗೋಚರವಾಗುತ್ತದೆ. ಬಾಹ್ಯನೋಟದಿಂದ ಗುರುವನ್ನು ಸೇರಲು ಸಾಧ್ಯವಿಲ್ಲ. ತನ್ನ ದೇಹದಲ್ಲೇ ಇರುವ ದಿವ್ಯಾಮೃತದ ಕೊಳ ಅಂದರೆ ಜ್ಞಾನಾಮೃತದ ಧಾರೆಯನ್ನು ಯೋಗದೃಷ್ಠಿಯಿಂದ ಕಂಡುಕೊಂಡು ಅದನ್ನು ಸವಿದವನು ಮಾತ್ರವೇ ಧನ್ಯನು, ಗುರುವನ್ನು ಸೇರುವವನು ಎಂದಿದ್ದಾರೆ. ಇದರಿಂದ ನಮಗೆ ಶರೀರದ ಮಹತ್ವ ಅರ್ಥವಾಗುತ್ತದೆ.
ಶರೀರವೇ ಬ್ರಹ್ಮರಥ
ತಾತಯ್ಯನವರು ಶರೀರವನ್ನು ಬ್ರಹ್ಮರಥವೆಂದು ಕರೆದು ಈ ಪದ್ಯವನ್ನು ಬೋಧಿಸುತ್ತಿದ್ದಾರೆ;
ಬಲಮೈನ ಬ್ರಹ್ಮರಥಮಿದಿ
ವರ್ಣಿಂಚನು ವಶಮು ಕಾದು ವಾಸವುಕೈನನ್
ಶ್ರೀನಾರೇಯಣ ಸದ್ಗುರು
ವರಕವಿಶಿಷ್ಯುನಕ ಯೆರುಕ ಯೆರುಗರು ಯೆವರುನ್||
ಬ್ರಹ್ಮವಸ್ತುವಾದ ಪರಮಾತ್ಮನ ನೆಲೆಯಾಗಿರುವ ಈ ದೇಹವು ಒಂದು ಬ್ರಹ್ಮರಥವಾಗಿದೆ. ಈ ಬ್ರಹ್ಮರಥದ ಮಹಿಮೆಯನ್ನು ವರ್ಣಿಸಲು ಇಂದ್ರನಿಗಾದರೂ ಸಾಧ್ಯವಿಲ್ಲ. ಸದ್ಗುರುಸ್ವಾಮಿಯಾದ ನಾರೇಯಣಾ ಸದ್ಗುರು ವರಕವಿಗಳ ಶಿಷ್ಯನಿಗೆ ಇದರ ಮಹಿಮೆ ತಿಳಿದಿದೆ. ಇತರ ಸಾಮಾನ್ಯ ಜನರು ಈ ಮಹಿಮೆಯನ್ನು ಅರಿಯರು ಎನ್ನುತ್ತಿದ್ದಾರೆ ತಾತಯ್ಯನವರು.
ಒಂದು ರಥಕ್ಕೆ ಹೇಗೆ ವಿಧವಿಧವಾದ ಅಂಕಣಗಳಿರುತ್ತವೆಯೋ ಹಾಗೆಯೇ ದೇಹದಲ್ಲಿಯು ಅಂಕಣಗಳಿವೆ. ದೇಹದಲ್ಲಿ ಅರವತ್ತೊಂಬತ್ತು ಕೀಲುಗಳಿವೆ. ಗುದಸ್ಥಾನದಿಂದ ಪ್ರಾರಂಭಿಸಿ ಕ್ರಮವಾಗಿ ಗುಹ್ಯ, ಲಿಂಗ,ನಾಭಿ,ಹೃದಯ, ಕಂಠ, ಭ್ರೂಮಧ್ಯ, ಮಸ್ತಕಗಳೆಂಬ ಅಂಕಣಗಳಿಂದ ಕೂಡಿದೆ. ಇದರಲ್ಲಿ ಷಟ್ಚಕ್ರಗಳು ನೆಲೆಗೊಂಡಿದೆ. ನವದ್ವಾರಗಳು ಈ ಶರೀರದಲ್ಲಿದೆ. ಪೃಷ್ಠಭಾಗದಲ್ಲಿ ಒಂದೂವರೆ ಮೊಳದ ಬೆನ್ನುಮೂಳೆಯು ದೇಹವನ್ನು ನೆಟ್ಟಗೆ ನಿಲ್ಲಿಸುವ ಸ್ತಂಭವಾಗಿದೆ. ಎಲುಬುಗಳೇ ಇದರ ಜಂತಿಗಳು, ಇದರ ಮೇಲೆ ರಕ್ತಮಾಂಸಗಳಿದ್ದು ಮೇಲು ಹೊದಿಕೆಯಾಗಿ ಚರ್ಮವಿದೆ. ಇಷ್ಟೇಲ್ಲವನ್ನು ಹೊಂದಿರುವ ಶರೀರವನ್ನು ಬ್ರಹ್ಮರಥ ಎಂದಿದ್ದಾರೆ ತಾತಯ್ಯನವರು.
ದೇಹವೇ ಲೋಕ…
ಪರಮಾತ್ಮನೇ ಈ ಲೋಕಗಳ ಒಡೆಯ, ಸೃಷ್ಟಿಕರ್ತ. ಎಲ್ಲ ಚರಾಚರಗಳನ್ನು ಸೃಷ್ಟಿಸಿದ ನಂತರ ಅಂತರ್ಯಾಮಿಯಾಗಿ ಪರಮಾತ್ಮನು ಈ ಶರೀರದಲ್ಲಿ ನೆಲೆಸಿದ್ದಾನೆಂದು ತಾತಯ್ಯನವರು ಸ್ಪಷ್ಟಪಡಿಸುತ್ತಾ ಈ ಬೋಧನೆಯನ್ನು ಮಾಡುತ್ತಿದ್ದಾರೆ;
ಈ ದೇಹಮುನ ವುಂಡು ಯೆಲ್ಲ ಲೋಕಂಬುಲು
ಈ ದೇಹಮುನ ವುಂಡು ಈಶ್ವರುಂಡು
ಈ ದೇಹಮುನ ವುಂಡು ಇಕ್ಷ್ವಾಕುಂವಶಜುಡು
ಈ ದೇಹಮುನ ವುಂಡು ಆದಿಗುರುಡು||
ಲೋಕಗಳೆಲ್ಲವೂ ಈ ದೇಹದಲ್ಲೇ ಇವೆ. ಈಶ್ವರನು ಈ ದೇಹದಲ್ಲಿದ್ದಾನೆ. ಇಕ್ಷ್ವಾಕುಂವಶಜುಡುದಲ್ಲಿ ಜನಿಸಿದ ರಾಮನು ಈ ದೇಹದಲ್ಲಿದ್ದಾನೆ. ಈ ದೇಹದಲ್ಲಿ ಆದಿಗುರು ಇದ್ದಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಯಾವ ತತ್ವಗಳಿಂದ ಲೋಕದ ಸೃಷ್ಟಿಯಾಗಿದೆಯೋ, ಅದೇ ಪಂಚಭೂತಾದಿ ತತ್ವಗಳಿಂದಲೇ ಈ ದೇಹವೂ ಸೃಷ್ಟಿಯಾಗಿದೆ.
ಇಕ್ಷ್ವಾಕುಂವಂಶಜನೆಂದರೆ ಶ್ರೀರಾಮ. ರಾಮನು ಪರಬ್ರಹ್ಮನೆಂದು, ಅವತಾರಪುರುಷನೆಂದು ಭಾವಿಸಲಾಗಿದೆ. ಇದನ್ನು ತಾತಯ್ಯನವರು ಸ್ಪಷ್ಟಪಡಿಸುತ್ತಾ ಇಕ್ಷ್ವಾಕುಂವಂಶಜನಾದ ಶ್ರೀರಾಮನು ಕೂಡ ಶರೀರದಲ್ಲಿದ್ದಾನೆ. ಆದಿಗುರುವೆಂದರೆ ಸೃಷ್ಟಿಗಿಂತಲೂ ಮೊದಲು ಆದಿಯಲ್ಲಿದ್ದ ಪರತತ್ವವಾಗಿರುವ ಪರಬ್ರಹ್ಮ ಎಂದರ್ಥ.
ಶರೀರವೇ ಗುರುಕುಲವಾಸದ ಮಠವಾಯಿತು. ಪರಮಾತ್ಮನೇ ಗುರುವಾದನು, ಜೀವಾತ್ಮನೇ ಶಿಷ್ಯನಾದನು ಎಂದು ಹೇಳುತ್ತಾ ತಾತಯ್ಯನವರು ದೇಹದ ಮಹತ್ವವನ್ನು ಸಾರಿದ್ದಾರೆ. ಇಹ-ಪರಕ್ಕೆ ಶರೀರವು ಸಾಧನವಾಗಿದೆ. ಶರೀರವನ್ನು ಸ್ವಸ್ಥವಾಗಿಟ್ಟುಕೊಂಡು ಸಾಧನೆಯನ್ನು ಮಾಡೋಣ, ದೇಹದಲ್ಲಿರುವ ದೈವವನ್ನು ಕಾಣೋಣ.
ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಶಿಷ್ಯನು ಸಿಗುವುದು ಗುರುವಿನ ಪರಮಭಾಗ್ಯ!