ಮಾನವನಾಗಿ ಹುಟ್ಟಿದ ಮೇಲೆ ಅಜ್ಞಾನಿಯಾಗದೆ ಜ್ಞಾನಿಯಾಗಬೇಕು, ಭೋಗಚಿಂತನೆಯಲ್ಲಿ ಜೀವನವನ್ನು ಕಳೆಯದೆ ಯೋಗಚಿಂತನೆಯಲ್ಲಿ ಸಂತೋಷ ಪಡಬೇಕು ಎಂಬ ತತ್ವವನ್ನು ಕೈವಾರ ತಾತಯ್ಯನವರು ಬೋಧಿಸಿದ್ದಾರೆ.
ಈ ಜೀವಾತ್ಮನು ದೇವನಾಗಬಹುದೇ? ದೇವನಾಗಬಹುದಾದರೆ ಪಾಲಿಸಬೇಕಾದ ನಿಯಮ ಗಳೇನು? ಸಾಧನೆಗಳೇನು? ಎಂಬ ವಿಚಾರವಾಗಿ ತಾತಯ್ಯನವರ ತತ್ವಬೋಧನೆಗಳನ್ನು ವಿಚಾರ ಮಾಡೋಣ;
ಜೀವನು ದೇವನಾಗಬೇಕಾದರೆ ಮೊದಲಿಗೆ ತನ್ನೊಳಗಿರುವ ದೈವಶಕ್ತಿಯ ಅರಿವಾಗಬೇಕು. ತಾತಯ್ಯನವರಿಗೆ ಈ ಅರಿವು ಬಂದ ಜೀವನ ಘಟನೆಯನ್ನು ತಮ್ಮ ಗ್ರಂಥದಲ್ಲಿ ತಿಳಿಸಿದ್ದಾರೆ.
ಸಂತ ಶ್ರೀಯೋಗಿನಾರೇಯಣ ತಾತಯ್ಯನವರು ತಮ್ಮ ಐವತ್ತನೇಯ ವಯಸ್ಸಿನವರೆಗೂ ಗೃಹಸ್ಥಾಶ್ರಮದಲ್ಲಿದ್ದರು. ಹೆಂಡತಿಯ ಮಂದಬುದ್ಧಿಯ ಕಾರಣದಿಂದ ಮನೆಯಿಂದ ಹೊರ ಬಂದರು. ನಂತರ ಆದದ್ದೇ ಪವಾಡ. ತಾತಯ್ಯನವರು ಕೈವಾರದಿಂದ ಒಂದು ಕಿ.ಮೀ ದೂರದಲ್ಲಿರುವ ಶ್ರೀಯೋಗನರಸಿಂಹಸ್ವಾಮಿ ತಪೋವನದ ಬಳಿ ಚಿಂತಾಕ್ರಾಂತರಾಗಿ ನನಗಿನ್ಯಾರು ದಿಕ್ಕು ಎಂದು ಯೋಚಿಸುತ್ತಾ ಕುಳಿತಿದ್ದಾರೆ. ಆ ವೇಳೆಗೆ ಪರಮಾತ್ಮನು ಬಾಲಗೋಪಾಲಕನ ರೂಪದಲ್ಲಿ ಓಡೋಡಿ ಬಂದು ತಾತಯ್ಯನವರನ್ನು ಹೀಗೆ ಪ್ರಶ್ನಿಸುತ್ತಾನೆ.
“ಇದಿ ಯೇಮಿರಾ ನೀಕಿಪುಡಿಂತ ಶೋಕಂಬು
ಏಮಿ ರೋಗಮು ನೀಕು ಯೆರಿಗಿಂಪು ನಾಕು
ಪಸುಲ ರೋಗಮುಲಕು ವೈದ್ಯುಡು ನೇನು
ಪರಮಹಂಸ ಕ್ರಿಯಲು ನೇರ್ಚಿಯುನ್ನಾನು” ಎನ್ನುತ್ತಾನೆ.
ಈಗ ನೀನು ಇಷ್ಟು ಶೋಕಿಸುತ್ತಿರಲು ಕಾರಣವೇನು? ನಿನಗೆ ಯಾವ ರೋಗವಿದೆ ನನಗೆ ಬಿಡಿಸಿ ಹೇಳು? ಪಶುಗಳ ರೋಗಗಳನ್ನು ಗುಣಪಡಿಸುವ ವೈದ್ಯ ನಾನು. ಪರಮಹಂಸ ಕ್ರಿಯೆಗಳನ್ನು ಕಲಿತಿದ್ದೇನೆ ಎನ್ನುತ್ತಾನೆ ಆ ಬಾಲಕ. ಈ ಮಾತುಗಳನ್ನು ಕೇಳಿ ತಾತಯ್ಯನವರು ಹೀಗೆ ಹೇಳುತ್ತಾರೆ;
“ಭಾರ್ಯ ವಿರುದ್ಧಂಬಾಯೆ ಬ್ರತುಕು ಚೆಡಿಪೋಯೆ
ಅನ್ನಾಹಾರಮು ಲೇಕ ಅಲಸಿಯುನ್ನಾನು
ಇದಿ ರೋಗಮೇ ಕಾನಿ ಯಿಕ ಯೇಮಿ ಲೇದು”
ಹೆಂಡತಿ ವಿರುದ್ಧವಾದಳು, ಬದುಕು ಕೆಟ್ಟುಹೋಯಿತು, ಅನ್ನಹಾರವಿಲ್ಲದೆ ಬಳಲಿದ್ದೇನೆ. ನನ್ನ ರೋಗ ಇಷ್ಟೇ ಹೊರತು ಬೇರೇನೂ ಇಲ್ಲ ಎನ್ನುತ್ತಾರೆ ತಾತಯ್ಯನವರು. ಇದಕ್ಕೆ ಆ ಬಾಲಗೋಪಾಲಕನು ಹೀಗೆ ಹೇಳುತ್ತಾನೆ;
“ರೋಗಮು ತೆರಗೆಲ್ಲ ತೆಲಿಸೆನು ನಾಕು
ಇದಿ ಮನೋರೋಗಂಬು ದೀನಿಕಿ ಮಂದು ಲೇದು
ವ್ಶೆದ್ಯುಂಡನನಿವಚ್ಚಿ ವೈ ತೊಲಗರಾದು
ನೀಲೋನ ಈಶ್ವರಡು ನಿಂಡಿಯುನ್ನಾಡು
ನಿನು ನೀವು ತೆಲಿಸಿತೇ ನೀವೇ ಈಶ್ವರಡು
ಅನಿ ಬೋಧ ಬೋಧಿಂಚಿ ಅದೃಶ್ಯಡಾಯೆ”
ನಿನ್ನ ರೋಗ ಲಕ್ಷಣ ಹಾಗೂ ವಿವರಗಳು ನನಗೆ ತಿಳಿಯಿತು. ಇದು ಮನೋರೋಗ. ಇದಕ್ಕೆ ಔಷದವಿಲ್ಲ. ನಾನು ವೈದ್ಯನೆಂದು ಬಂದು ರೋಗಶಮದ ಉಪಾಯವನ್ನು ಹೇಳದೆ ಹೊರಟುಹೋಗಬಾರದು ಎಂದು ಹೇಳುತ್ತಾ “ನಿನ್ನಲ್ಲೇ ಈಶ್ವರನು ತುಂಬಿದ್ದಾನೆ, ನಿನ್ನ ನೀ ಅರಿತರೆ ನೀನೇ ಈಶ್ವರ” ಎಂದು ಆತ್ಮತತ್ವವನ್ನು ಹೇಳಿ ಆ ಬಾಲಕನು ಅದೃಶ್ಯನಾಗುತ್ತಾನೆ.
ನಂತರ ತಾತಯ್ಯನವರು ಪರಮಾತ್ಮನ ಉಪದೇಶದಂತೆ ಯೋಗಸಾಧನೆಯಲ್ಲಿ ತೊಡಗುತ್ತಾರೆ. ಹಂಸಮಾರ್ಗದಲ್ಲಿ ಸಂಚರಿಸಿ ಪರಂಜ್ಯೋತಿಯ ಪ್ರಕಾಶಮಾನವಾದ ಸಹಸ್ರಾರ ಚಕ್ರದಲ್ಲಿ ಜೀವಾತ್ಮನನ್ನು ಸೇರಿಸುತ್ತಾರೆ. ತಾತಯ್ಯನವರ ಜೀವನದಲ್ಲಿ ನಡೆದ ಈ ಘಟನೆಯ ಸೂಕ್ಷ್ಮ ತೆಯನ್ನು ಅರಿತರೆ ನಮಗೆ ಜೀವಾತ್ಮನ ನಿಜಸ್ವರೂಪ ಅರ್ಥವಾಗುತ್ತದೆ.
ಏಕಾಂತಪುರಿಯ ಅರಿವು
ತಾತಯ್ಯನವರು ಯೋಗಸಾಧನೆಯ ಶಿಖರವನ್ನು ಏರಿ ಪರಿಪೂರ್ಣವಾದ ಜ್ಞಾನವನ್ನು ಪಡೆದ ಮೇಲೆ ಹಲವಾರು ಬೋಧನೆಗಳನ್ನು ಮಾಡಿದ್ದಾರೆ. ಯಾವ ರೀತಿಯಾಗಿ ಜೀವಾತ್ಮನು ಪರಮಾತ್ಮನ ನೆಲೆಯಾಗಿರುವ ಏಕಾಂತಪುರಿಯನ್ನು ಸೇರಬೇಕು ಎಂದು ಈ ರೀತಿಯಾಗಿ ಬೋಧಿಸಿದ್ದಾರೆ.
ಏನುಗಲೆನಿಮಿದಿ ಮದಮುಲ್
ವುಡುಗುನು ಪಂಚೇಂದ್ರಿಯಾದಿ ಅರಿಷಡ್ವರ್ಗಂ
ಚೇಷ್ಟಲು ಮಾನುನು ಕ್ಷಣಮುನ
ಯೆರುಕಾ ಯೇಕಾಂತಪುರಮು ನಾರೇಯಣ ಕವಿ||
ಈ ಪದ್ಯದಲ್ಲಿ ಅಷ್ಟಮದ, ಪಂಚೇಂದ್ರಿಯಗಳು, ಅರಿಷಡ್ವರ್ಗಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂತರ್ಮುಖಿಯಾಗಿ ಮನಸ್ಸು ಮತ್ತು ದೃಷ್ಟಿಯನ್ನು ಆತ್ಮನ ಕಡೆಗೆ ತಿರುಗಿಸಿದಾಗ ಆಗುವ ಪರಿಣಾಮಗಳನ್ನು ಬೋಧಿಸುತ್ತಿದ್ದಾರೆ. ಅಷ್ಟಮದಗಳು ಮಾನವರಲ್ಲಿ ಅಡಗಿರುವ ಶತ್ರುಗಳಲ್ಲಿ ಒಂದು. ಎಂಟು ರೀತಿಯ ಮದಗಳಿವೆ. ಕುಲಮದ, ಶೀಲಮದ, ಧನಮದ, ರೂಪಮದ, ಯೌವ್ವನಮದ, ವಿದ್ಯಾಮದ, ತಪೋಮದ, ರಾಜ್ಯಮದ, ಇವು ಅಷ್ಟಮದಗಳು. ಒಂದೊಂದು ಆನೆಯ ರೂಪದಲ್ಲಿದೆ ಮಾನವರಲ್ಲಿ ಅಡಗಿದೆ. ಅಂದರೆ ಆನೆಯಷ್ಟು ಶಕ್ತಿಪ್ರಬಲ್ಯವನ್ನು ಹೊಂದಿದೆ.
ಮನಸ್ಸು-ದೃಷ್ಟಿ ಅಂತರ್ಮುಖಿಯಾದಾಗ ಈ ಅಷ್ಟಮದಗಳು ಇಲ್ಲವಾಗಿ ಅಡಗುತ್ತದೆ ಎನ್ನುತ್ತಿದ್ದಾರೆ. ಇನ್ನು ಪಂಚೇಂದ್ರಿಯಗಳು. ಪಂಚೇಂದ್ರಿಯಗಳಲ್ಲಿ ಎರಡು ಭಾಗ. ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಇವು ಐದು ಜ್ಞಾನೇಂದ್ರಿಯಗಳು. ವಾಕ್ಕು, ಕೈ, ಕಾಲು, ಗುದ ಮತ್ತು ಉಪಸ್ಥ ಇವು ಐದು ಕರ್ಮೇಂದ್ರಿಯಗಳು. ಅರಿಷಡ್ವರ್ಗಗಳು ಆರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ. ಇವೆಲ್ಲವೂ ಸೇರಿ ಮಾನವರನ್ನು ಬಹಳಷ್ಟು ಬಾಧಿಸುತ್ತದೆ. ಇವೆಲ್ಲವೂ ಬಾಹ್ಯ ಶತ್ರುಗಳಲ್ಲ. ಅಂತರಂಗದ ಶತ್ರುಗಳು. ಇಂದ್ರಿಯ ವಿಷಯಗಳಲ್ಲಿ ಮನಸ್ಸು ಪ್ರವೃತ್ತವಾಗಿ ಬಹಿರ್ಮುಖವಾಗಿದ್ದಾಗ ಅಷ್ಟಮದಗಳ ಮತ್ತು ಅರಿಷಡ್ವರ್ಗಗಳ ಚೇಷ್ಟೆಗಳಿಗೆ ಪ್ರಾಬಲ್ಯವಿರುತ್ತದೆ. ಅದು ಅಂತರ್ಮುಖವಾದರೆ ಇವುಗಳ ಚೇಷ್ಟೆಗಳು ಅಡಗಿಹೋಗುತ್ತವೆ. ಆಗ ಇವುಗಳು ಮಾಡುವ ಚೇಷ್ಟೆಗಳೆಲ್ಲಾ ಕ್ಷಣದಲ್ಲಿ ನಿಲ್ಲುವುದು ಎನ್ನುತ್ತಿದ್ದಾರೆ.
ಆ ರೀತಿಯಾಗಿ ಮನಸ್ಸು-ದೃಷ್ಟಿ ಅಂತರ್ಮುಖವಾದಾಗ ಅಂತರಂಗದ ಶತ್ರುಗಳ ಚೇಷ್ಟೆಗಳು ನಿಂತುಹೋಗಿ ಮನಸ್ಸು ನಿರ್ಮಲವಾಗುತ್ತದೆ. ಈ ಸಮಯದಲ್ಲಿ ಏಕಾಂತಪುರವೆನಿಸಿರುವ ಪರಮಾತ್ಮನ ನೆಲೆಯು ಅರಿವಾಗುವುದು ಎನ್ನುತ್ತಿದ್ದಾರೆ ತಾತಯ್ಯನವರು.
ಜೀವುಡು ತಾ ದೇವುಡಾಯ…
ಏಕಾಂತಪುರವನ್ನು ಕಂಡುಕೊಂಡ ನಂತರ ಅಂತರ್ಮುಖವಾದ ಧ್ಯಾನದಿಂದ ಮನಸ್ಸನ್ನು ನಿಯಂತ್ರಣಗೊಳಿಸಬೇಕು. ಜೀವನನು ದೇವನಾಗುವ ಬಗೆಯನ್ನು ತಾತಯ್ಯನವರು ಹೀಗೆ ತಿಳಿಸುತ್ತಿದ್ದಾರೆ;
ಪುಲಕಾಪು ಚೇಸಿ ಹೃದಯಮು
ಮಲಿನಮು ತೆಗತೀಸಿ ಮಂಚಿ ಮಾನಸ ಕಳಲನ್
ಚೆಲಗುಚು ವೆಲಿಲೋ ವೊಕಟೈ
ಜೀವುಡು ತಾ ದೇವುಡಾಯ ನಾರೇಯಣ ಕವಿ||
ತಾತಯ್ಯನವರು ಈ ಪದ್ಯದಲ್ಲಿ ಸೂತ್ರರೂಪದಲ್ಲಿ ಉತ್ತರವನ್ನು ಬೋಧಿಸಿದ್ದಾರೆ. ಹೃದಯವನ್ನು ಪುಲಕನಗೊಳಿಸು ಎಂದಿದ್ದಾರೆ. ಪುಲಕನಗೊಳಿಸುದು ಎಂದರೆ ನಿರಂತರ ಅಂತರ್ಮುಖವಾದ ಧ್ಯಾನದಿಂದ ಮನಸ್ಸನ್ನು ಸ್ಥಿತಪ್ರಜ್ಞತೆಯ ಸ್ಥಿತಿಗೆ ತರುವುದು. ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯಗಳಿಂದ ಬಂದಿರುವ ರಾಗದ್ವೇಷ ಮುಂತಾದ ಮಲಿನಗಳನ್ನು ಕಿತ್ತೊಗೆದು ಅಂದರೆ ಅವುಗಳನ್ನು ಗುಡಿಸಿಹಾಕಿ ಮನಶುದ್ಧಿಯನ್ನು ಪಡೆಯಬೇಕು.
ಅಂತರಂಗದ ಸಾಧನೆಯಿಂದ ಒಳ್ಳೆಯ ಮಾನಸ ಕಳೆಗಳನ್ನು ಬೆಳಗುತ್ತಾ, ಅಂತರ್ಮುಖಿಯಾಗಿ ಆತ್ಮನಲ್ಲಿ ವಿಲೀನವಾದಾಗ ಆ ಜೀವನು ತಾನೇ ದೇವನಾಗುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಜೀವರೂಪಿ ಪರಮಾತ್ಮನ ಚೈತನ್ಯವು ದೇಹದಲ್ಲಿ ಸರ್ವವ್ಯಾಪಿಯಾದರೂ ಅದರ ನೆಲೆ ಹೃದಯವೇ ಆಗಿದೆ. ಸುಖ, ದುಃಖಗಳ ಅನುಭವವಾಗುವುದು ಹೃದಯದಲ್ಲೇ. ಸದೃಢವಾದ ಮನಸ್ಸನ್ನು ಹೃದಯದಲ್ಲಿಯೇ ಕೇಂದ್ರಿಕರಿಸಬೇಕು. ಈ ಕಾರಣದಿಂದ ಹೃದಯವನ್ನು ಧ್ಯಾನ, ಮೌನ ಮುಂತಾದ ಯೋಗ ಸಾಧನೆಗಳಿಂದ ಜಾಗೃತಗೊಳಿಸಿ, ಪುಲಕನಗೊಳಿಸಬೇಕು. ನಂತರ ಹೃದಯದಲ್ಲಿರುವ ಮಲಿನವನ್ನು ತೆಗೆಯಬೇಕು.
ಹೃದಯಲ್ಲಿರುವ ಮಲಿನಗಳೆಂದರೆ ಲೋಭ, ಮದ, ಅಹಂಕಾರ ಮುಂತಾದ ದುರ್ಗುಣಗಳಿಂದ ಕೂಡಿರುವ ಮಲಿನಗಳನ್ನು ತೆಗೆಯಬೇಕು. ಈ ರೀತಿಯಾಗಿ ಒಂದೊಂದೇ ಅವಿದ್ಯೆಗಳನ್ನು ನಾಶಮಾಡುತ್ತಾ ಬಂದಾಗ ಮನಸ್ಸು ನಿರ್ಮಲವಾಗುತ್ತದೆ. ನಿರ್ಮಲವಾದ ಮನಸ್ಸು ಅಭ್ಯಾಸದಿಂದ ಹೆಚ್ಚು ಹೆಚ್ಚು ಅಂತರ್ಮುಖವಾದಂತೆಲ್ಲ ಕ್ರಮವಾಗಿ ಬುದ್ಧಿಯಲ್ಲೂ, ಬುದ್ಧಿಯೂ ಚಿತ್ತದಲ್ಲೂ, ಚಿತ್ತವು ಅಹಂಕಾರದಲ್ಲೂ, ಅಹಂಕಾರವೂ ಆತ್ಮನಲ್ಲೂ ವಿಲೀನವಾಗುತ್ತದೆ. ಈ ಪ್ರಕ್ರಿಯೆಯನ್ನೇ ತಾತಯ್ಯನವರು ಮಾನಸ ಕಳೆಗಳು ಎಂದಿರುವುದು.
ಒದೊಂದು ವಿಲೀನವಾದಾಗಲೂ ಮಾನವನು ಮಾನಸಕಳೆಗಳಿಂದ ಬೆಳಗುತ್ತಾನೆ. ಬಾಳೆಯ ದಿಂಡನ್ನು ಪಡೆಯಬೇಕಾದರೆ ಯಾವ ರೀತಿಯಲ್ಲಿ ಒಂದೊಂದೇ ಪದರವನ್ನು ತೆಗೆದು ಹಾಕುತ್ತೇವೆಯೋ ಅದೇ ರೀತಿಯಾಗಿ ಮನೋಮಯನಾದ ಜೀವನು ತನ್ನ ಒಂದೊಂದೇ ದುರ್ಗುಣಗಳನ್ನು ಕಳಚಿಹಾಕಿದಾಗ ಆತ್ಮನ ದರ್ಶನವಾಗುತ್ತದೆ. ಹೀಗೆ ಜೀವನು ತಾನೇ ದೇವನಾಗುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಮಾನಸಕಳೆಗಳನ್ನು ಬೆಳಗೋಣ….ಏಕಾಂತಪುರಿಯ ಸೇರೋಣ….
ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬಸವಣ್ಣನಂತೆ ತಾತಯ್ಯ ಕೂಡ ದೇಹವೇ ದೇಗುಲ ಎಂದಿದ್ದಾರೆ!