ಮಾನವರ ಅಜ್ಞಾನದ ಬದುಕಿನ ಬಗ್ಗೆ ಕೈವಾರದ ತಾತಯ್ಯನವರು ಹಲವಾರು ಬೋಧನೆಗಳ ಮೂಲಕ ಎಚ್ಚರಿಸಿದ್ದಾರೆ. “ಎಂತ ಚೆಪ್ಪಿನಾನು ವಿನವು, ಎಂತ ಚೆಪ್ಪಿನಾನು ವಿನವು, ಎಂತ ಚೆಪ್ಪಿನಾನು ವಿನವು ಯೇಮಿ ಸೇತುನೂ” (ಎಷ್ಟು ಹೇಳಿದರೂ ಕೇಳುವುದಿಲ್ಲವಲ್ಲಾ ಏನು ಮಾಡಲಿ) ಎಂದು ಮೂರು ಬಾರಿ ಹೇಳಿ ಮಾನವರ ಅಜ್ಞಾನದ ಬಗ್ಗೆ ಕಳಕಳಿಯಿಂದ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ಯೋಗಿಗೆ ತನ್ನ ಸಾಧನೆಯಷ್ಟೇ ಮುಖ್ಯವಲ್ಲ. ಜ್ಞಾನದ ಅರಿವನ್ನು ಕೊಟ್ಟು ಸರ್ವರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ದಡವನ್ನು ತಲುಪಿಸಬೇಕೆಂಬ ಅಭಿಲಾಷೆ ಇರುತ್ತದೆ. ಹೀಗಾಗಿ ತಾತಯ್ಯನವರು ಸದಾ ಜೀವಪರವಾದ ಚಿಂತನೆಗಳನ್ನು ಇಟ್ಟುಕೊಂಡು ತತ್ವಸಾಹಿತ್ಯವನ್ನು ರಚಿಸಿದ್ದಾರೆ. ತಾತಯ್ಯನವರ ಬೋಧನೆಗಳು ಭಿನ್ನವಾದ ಒಳನೋಟಗಳನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಅಜ್ಞಾನದ ಬದುಕಿನಿಂದ ಕೂಡಿರುವ ಮಾನವರಿಗೆ ಬೋಧನೆಯನ್ನು ಮಾಡಿದ್ದಾರೆ.
ಮಾಯೆಯಿಂದ ಮುಕ್ತನಾಗು!
ಮಾನವರನ್ನು ಮರುಳು ಮಾಡುವ ಮಾಯೆಯ ಬಗ್ಗೆ ತಾತಯ್ಯನವರು ಈ ಪದ್ಯದಲ್ಲಿ ತಿಳಿಸುತ್ತಿದ್ದಾರೆ. ನಿತ್ಯವಸ್ತುವಾದ ಆತ್ಮಜ್ಞಾನದ ತತ್ವವನ್ನು ಅರಿಯಲಾರದೆ ಮಾಯೆಯ ಸೆಳೆತಕ್ಕೆ ಒಳಗಾಗುತ್ತಿರುವವರನ್ನು ಕಂಡು ಆಡುಭಾಷೆಯಲ್ಲಿ ಇದರ ಮನೆ ಹಾಳಾಗ ಎಂದಿದ್ದಾರೆ.
ಎರುಕ ಲೇಕಪೋತೆ ಎಡ್ಡವಾಡಾಯೆನು
ಎರುಕ ಕಲಿಗಿನವಾಡು ಯೋಗ್ಯುಡಾಯ
ತೆಲಿಯನಿಯ್ಯದು ಮಾಯ ದೀನಿಲ್ಲು ಪಾಡಾಯ
ನಾದ ಬ್ರಹ್ಮಾನಂದ ನಾರೇಯಣ ಕವಿ||
ವಿವೇಕವುಳ್ಳವನೆಂಬ ಕಾರಣದಿಂದ ಮಾನವನು ಜೀವರಾಶಿಗಳಲ್ಲಿ ಶ್ರೇಷ್ಠವಾದ ಪ್ರಾಣಿ. ಮಾನವನು ಜ್ಞಾನವನ್ನು ಪಡೆಯದಿದ್ದರೆ ಮೂರ್ಖನಾದ, ಜ್ಞಾನವನ್ನು ಪಡೆದವನು ಯೋಗ್ಯನಾದ. ಆದರೆ ನಮಗೆ ಗೊತ್ತಿಲ್ಲದೆ ಮಾಯೆಯು ನಮ್ಮ ಬೆನ್ನ ಹಿಂದಿರುತ್ತದೆ. ಈ ಮಾಯೆ ಯಾವ ರೀತಿ ನಮ್ಮನ್ನು ಮೋಡಿ ಮಾಡುತ್ತದೆ ತಿಳಿಯುವುದಿಲ್ಲ. ಇದರ ಮನೆ ಹಾಳಾಗ ಎನ್ನುತ್ತಿದ್ದಾರೆ ತಾತಯ್ಯನವರು.
ಧೂಳಿನಿಂದ ಕೂಡಿರುವ ಕನ್ನಡಿಯಲ್ಲಿ ಪ್ರತಿಬಿಂಬವು ಕಾಣುವುದಿಲ್ಲ. ಆ ರೀತಿಯಲ್ಲಿ ಅಜ್ಞಾನಿಗೆ ಮಾಯೆಯು ತುಂಬಿಕೊಂಡು, ನಿತ್ಯವಸ್ತುವಾದ ಆತ್ಮನು ಕಾಣುವುದಿಲ್ಲ. ಕನ್ನಡಿಯ ಧೂಳು ಹೋದರೆ ಯಾವರೀತಿ ಪ್ರತಿಬಿಂಬವು ಸ್ಪಷ್ಟವಾಗುತ್ತದೋ ಅದೇ ರೀತಿಯಲ್ಲಿ ಮಾಯೆಯು ಮರೆಯಾದಾಗ ಮಾತ್ರ ಆತ್ಮ ಸ್ವರೂಪವು ನಿಶ್ಚಲವಾಗಿ ಕಾಣುತ್ತದೆ. ಜ್ಞಾನವಂತನು ಕರ್ಮಗಳನ್ನು ಕಳಚಿಕೊಂಡು ಮುಕ್ತನಾಗುತ್ತಾನೆ. ಅಜ್ಞಾನಿಯು ಮಾಯೆಯಲ್ಲಿ ಸಿಕ್ಕಿಹಾಕಿಕೊಂಡು ಹುಟ್ಟು ಸಾವುಗಳನ್ನು ಅನುಭವಿಸುತ್ತಾನೆ. ಪೂರ್ವಕರ್ಮಗಳ ವಾಸನೆಯಿಂದ ಮೋಹ-ಮಮತೆಗಳ ಭ್ರಾಂತಿಗೆ ಮನೋಬುದ್ಧಿಗಳು ಸಿಕ್ಕಿಹಾಕಿಕೊಳ್ಳುತ್ತದೆ. ಮಾಯೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ವೈರಾಗ್ಯವೇ ಏಕೈಕ ಸಾಧನೆ. ಈ ಸಾಧನೆಯನ್ನು ಸಾಧಿಸಲು ಧೃಡವಾದ ವಿವೇಕವು ಬೇಕು. ಮಾಯೆಯಿಂದ ಮುಕ್ತಿಹೊಂದಬೇಕು ಎನ್ನುತ್ತಾರೆ ತಾತಯ್ಯನವರು.
ಕೋಣ ತತ್ವ ತಿಳಿಯುವುದೇ?
ಜೀವನದ ವಿವೇಕವನ್ನು ಬೋಧಿಸುತ್ತಿದ್ದಷ್ಟು, ಮಾನವರಲ್ಲಿ ಜ್ಞಾನದ ಪ್ರಜ್ಞೆ ಚೇತರಿಸಿಕೊಳ್ಳದಿರುವ ಬಗ್ಗೆ ತಾತಯ್ಯನವರು ಬೇಸರಪಟ್ಟು ಈ ಪದ್ಯವನ್ನು ಹೇಳುತ್ತಿದ್ದಾರೆ. ಮಾನವರಿಗೆ ಜೀವನವನ್ನು ನಡೆಸಲು ಕೆಲವು ರೀತಿ ನೀತಿಗಳಿವೆ. ಈ ರೀತಿನೀತಿಗಳನ್ನು ಬಿಟ್ಟು ಅಜ್ಞಾನಿಯಂತೆ ವರ್ತಿಸುವವರಿಗೆ ಎಷ್ಟು ಜ್ಞಾನಬೋಧೆಯನ್ನು ಮಾಡಿದರೂ ಅವರ ಅರಿವಿಗೆ ಬರುವುದಿಲ್ಲ. ಕೋಣ ಯಮನ ವಾಹನವೇ ಸರಿ, ಆದರೆ ತತ್ವವನ್ನು ತಿಳಿಯಬಲ್ಲುದೇ? ಎಂದು ಪ್ರಶ್ನಿಸುತ್ತಿದ್ದಾರೆ ತಾತಯ್ಯನವರು.
ವನ್ನೆ ವಾಸಿಯು ಲೇಕ ವರ್ತಿಂಚುವಾರಿಕಿ
ಯೆಂತ ಬೋಧಿಂಚಿನಾ ಎರುಕರಾದು
ಯಮವಾಹನಂಬಯಿನ ಯೆನುಬೋತು ಎರುಗುನಾ?
ನಾದಬ್ರಹ್ಮಾನಂದ ನಾರೇಯಣ ಕವಿ ||
ಬೋಧಿಸಿದಷ್ಟು ಸಂಸ್ಕಾರವಿಹೀನರಂತೆ ನಡೆದುಕೊಳ್ಳುವ ಅಜ್ಞಾನಿಗಳನ್ನು ಕೋಣಕ್ಕೆ ಹೋಲಿಸಿದ್ದಾರೆ. ಯಮನು ಕೇವಲ ಮೃತ್ಯುವಿನ ಅಧಿಪತಿಯಷ್ಟೇಯಲ್ಲ, ಅವನು ತತ್ವಜ್ಞಾನಿ. ಯಮನ ವಾಹನ ಎಂಬ ಮಾತ್ರಕ್ಕೆ ಕೋಣವೂ ತತ್ವಜ್ಞಾನಿಯಾಗಬಲ್ಲದೇ, ಇಲ್ಲ. ಕೇವಲ ತತ್ವಗಳನ್ನು ಕೇಳಿದ ಮಾತ್ರಕ್ಕೆ ತತ್ವಜ್ಞಾನಿಯಾಗುವುದಿಲ್ಲ. ಲೌಕಿಕ ಸುಖಗಳನ್ನು ಶಾಶ್ವತವೆಂದುಕೊಂಡು ವರ್ತಿಸುವವನಿಗೆ ಎಷ್ಟು ಬೋಧಿಸಿದರೂ ವೈರಾಗ್ಯದ ಸ್ವರೂಪ ಅರ್ಥವಾಗುವುದಿಲ್ಲ. ಗುರುವಿನ ಮಾರ್ಗದಲ್ಲಿ ನಡೆದು ಹುಟ್ಟುಸಾವುಗಳಿಂದ ತಪ್ಪಿಸಿಕೊಳ್ಳುವವನು ಜ್ಞಾನಿ. ತತ್ವಬೋಧೆಗಳನ್ನು ಕೇಳಿಸಿಕೊಂಡು ಆಚರಿಸದೆ, ಅವಿವೇಕಿಯಾಗಿ ವರ್ತಿಸುವ ಮಾನವರೂ ಕೂಡ ಕೋಣನಂತಯೇ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ತಾತಯ್ಯನವರು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತತ್ವಜ್ಞಾನದಿಂದ ಸಿಹಿಯಾಗು!
ತಾತಯ್ಯನವರು ಹಣ್ಣಿನ ನಿದರ್ಶನವನ್ನು ನೀಡಿ ಪ್ರಕೃತಿಯೊಂದಿಗೆ ಮಾನವನನ್ನು ಹೋಲಿಸಿ ಸಿಹಿ-ಕಹಿಯ ವಿಮರ್ಶೆಯನ್ನು ಮಾಡುತ್ತಾ ಅಜ್ಞಾನಿಯಾದ ಮಾನವರನ್ನು ಎಚ್ಚರಿಸುತ್ತಿದ್ದಾರೆ. ಯಾವ ಜಾತಿಯ ಫಲವಾದರೂ ಕಾಯಾಗಿರುವಾಗ ವಗರು, ಕಹಿ, ಹುಳಿಯಾಗಿರುತ್ತದೆ. ಈ ವಗರು,ಕಹಿ,ಹುಳಿ ಕಾಲಾಂತರದಲ್ಲಿ ಮಾಗಿ ಪಕ್ವವಾದಾಗ ಸಿಹಿಯಾಗಿ ಪರಿವರ್ತಿತವಾಗುತ್ತದೆ. ಆದರೆ ಮಾನವನು ಮಾಗಿದಾಗ ಅಂದರೆ ವಯಸ್ಸಾದಂತೆ ಅಜ್ಞಾನದ ಮಂಕು ಕವಿದು ಕಹಿಯಾಗುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು.
ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ನಿಮ್ಮನ್ನು ನೀವೇ ಅರಿಯಿರಿ… ನಿಮ್ಮೊಳಗೇ ದೇವರಿದ್ದಾನೆ!
ಏ ಜಾತಿ ಫಲಮೈನ ಮುದಿರಿನಪ್ಪುಡು ತೀಪು
ಕಾಯಲಪ್ಪುಡು ವಗರು ಚೇದು ಪುಲುಸು
ಮಾನವುಡು ಮುದಿರಿತೇ ಮರಿ ಮಂಕು ಚೇದಯಾ
ನಾದ ಬ್ರಹ್ಮಾನಂದ ನಾರೇಯಣ ಕವಿ ||
ಮಾತನಾಡದ ಗುಣವನ್ನು ಹೊಂದಿರುವ ವೃಕ್ಷವು ಬೆಳೆದು ತನಗಾಗಿ ಒಂದೇ ಒಂದು ಹಣ್ಣನ್ನು ಅದು ಇಟ್ಟುಕೊಳ್ಳದೆ ಸಿಹಿಯಾದ ಹಣ್ಣುಗಳನ್ನು ಜಗತ್ತಿಗೆ ನೀಡುತ್ತಿದೆ. ಆದರೆ ಮಾತನಾಡುವ ಹಾಗೂ ವಿವೇಕದ ವ್ಯಕ್ತಿತ್ವವನ್ನು ಹೊಂದಿರುವ ಮಾನವನು ವಯಸ್ಸಾದಂತೆ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳದೆ ಸ್ವಾರ್ಥದ ಭೋಗಚಿಂತನೆಗಳಿಂದ ಕಹಿಯಾಗುತ್ತಿದ್ದಾನೆ. ಮಾನವ ಜನ್ಮ ದುರ್ಲಭ. ಈ ಮಾನವ ಜನ್ಮ ಸಿಕ್ಕಿರುವಾಗ ಮೋಕ್ಷ ಸಂಪಾದನೆಯ ಮಾರ್ಗವರಿತು, ಪರೋಪಕಾರದಿಂದ ಬಾಳಬೇಕು. ಮುದಿತನದ ಅಜ್ಞಾನದ ಮಂಕು ಕವಿಯುವ ಮುನ್ನ ಆತ್ಮಚಿಂತನೆ, ತತ್ವಜ್ಞಾನದಿಂದ ಸಿಹಿಯಾಗು ಎಂದು ತಾತಯ್ಯನವರು ಎಚ್ಚರಿಕೆಯನ್ನು ನೀಡುತ್ತಿದ್ದಾರೆ.