“ಯಾರ ಮನಸ್ಸಿನ ಆಲೋಚನೆಗಳು ಚಂಚಲಗೊಳ್ಳದೆ, ಗೊಂದಲಕ್ಕೆ ಒಳಗಾಗುವುದಿಲ್ಲವೋ ಅವರು ಜಾಗರೂಕರಾಗಿರುತ್ತಾರೆ. ಜಾಗರೂಕರಾಗಿರುವ ಮಾನವರಿಗೆ ಯಾವುದೇ ಭಯವಿರುವುದಿಲ್ಲ” ಹೀಗೆಂದವರು ಗೌತಮ ಬುದ್ಧ. ಗೌತಮ ಬುದ್ಧನ ಈ ಮಾತುಗಳು ಅಕ್ಷರಶಃ ಸತ್ಯವಾದುದು. ಮಾನವರ ದುಃಖ, ಕಷ್ಟಗಳಿಗೆ ಮನಸ್ಸೇ ಕಾರಣ ಎಂದು ಕೈವಾರದ ತಾತಯ್ಯನವರು ಪ್ರತಿಪಾದಿಸಿದ್ದಾರೆ.
ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಆಗದೇ ವಿಶ್ವದಲ್ಲಿ ಜನರು ದುಃಖವನ್ನು ಅನುಭವಿಸುತ್ತಿದ್ದಾರೆ ಎಂದಿದ್ದಾರೆ ತಾತಯ್ಯನವರು. ಅಷ್ಟೇ ಅಲ್ಲ, ಮನಸ್ಸಿನಲ್ಲಿಯೇ ಮಾಯಾವಿಕಾರಗಳು ಹುಟ್ಟುತ್ತವೆ, ಮನಸ್ಸಿನಲ್ಲಿಯೇ ಮತ್ಸರ ಹುಟ್ಟುತ್ತದೆ, ಮನಸ್ಸಿನಲ್ಲಿಯೇ ಪ್ರೇಮ ಹುಟ್ಟುತ್ತದೆ, ಮದಗರ್ವವೆಂಬ ಮೃಗವು ಮನಸ್ಸಿನಲ್ಲಿ ಹುಟ್ಟುತ್ತದೆ, ಮನಸ್ಸಿನಲ್ಲೇ ಗುಣವಾಗದ ರೋಗಗಳು ಹುಟ್ಟುತ್ತದೆ, ಧನಧಾನ್ಯಗಳ ಆಸೆಯು ಮನಸ್ಸಿನಲ್ಲಿಯೇ ಹುಟ್ಟುತ್ತದೆ, ಮನಸ್ಸಿನಲ್ಲಿಯೇ ಮಾನಾಭಿಮಾನ, ದುರ್ಗುಣಗಳು ಹುಟ್ಟುತ್ತದೆ. ಹೀಗೆ ಎಲ್ಲವೂ ಮನಸ್ಸಿನಲ್ಲಿಯೇ ಹುಟ್ಟುತ್ತದೆ ಎಂದಿದ್ದಾರೆ ತಾತಯ್ಯನವರು.
ಹಾಗಾದರೆ ಇದನ್ನು ಪರಿಹರಿಸಿಕೊಳ್ಳಲು ಇರುವ ಮಾರ್ಗವೇನು? ಮಹಾತ್ಮನೆಂದರೆ ಯಾರು? ಇದಕ್ಕೂ ತಾತಯ್ಯನವರು ಉತ್ತರಿಸಿದ್ದಾರ.;
“ಮನಸುಲೋನಿ ಭ್ರಮಲು ಮನಸುನ ಖಂಡ್ರಿಂಚಿ
ಮನಸು ಜಯಿಂಚಿನ ಮಹಾತ್ಮಡೌನು”
ಮನಸ್ಸಿನ ಭ್ರಮೆಗಳನ್ನು ಮನಸ್ಸೆಂಬ ಕತ್ತಿಯಿಂದಲೇ ಕಡಿದು ಹಾಕಿ ಮನಸ್ಸನ್ನು ಜಯಿಸಿದವನು ಮಹಾತ್ಮನಾಗುತ್ತಾನೆ ಎಂದಿದ್ದಾರೆ ತಾತಯ್ಯನವರು. ಇದನ್ನೇ ಅಮೃತಬಿಂದೂ ಉಪನಿಷತ್‌ನಲ್ಲಿ ಹೀಗೆ ಹೇಳಲಾಗಿದೆ. “ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋ:” ಮಾನವರ ಬಂಧಮೋಕ್ಷಗಳಿಗೆ ಮನಸ್ಸು ಕಾರಣ. ಈ ಕಾರಣದಿಂದಲೇ ಮನಸ್ಸನ್ನು ಹೊಂದಿರುವ ಮಾನವ ಜನ್ಮ ಶ್ರೇಷ್ಠವಾದುದು. ಆದರೆ ಈ ಮನಸ್ಸು ಸ್ವಚ್ಛವಾಗಬೇಕಾದರೆ ಏನು ಮಾಡಬೇಕು? ತಾತಯ್ಯನವರು ಹೀಗೆ ಬೋಧಿಸಿದ್ದಾರೆ.
ಹುಚ್ಚುನಾಯಿಯಂತೆ ಮನಸ್ಸು
ಮನಸ್ಸಿಗೆ ಸಂಬಂಧಿಸಿದಂತೆ ಹಲವಾರು ಪದ್ಯಗಳಲ್ಲಿ ಎಚ್ಚರಿಕೆಯ ಬೋಧನೆಯನ್ನು ತಾತಯ್ಯನವರು ನೀಡಿದ್ದಾರೆ. ಅಂತಹ ಬೋಧನೆಗಳಲ್ಲಿ ಈ ಪದ್ಯವೂ ಒಂದು. ಮನಸ್ಸನ್ನು ಇಲ್ಲಿ ತಾತಯ್ಯನವರು ಹುಚ್ಚು ನಾಯಿಗೆ ಹೋಲಿಸಿದ್ದಾರೆ.
ಕುಕ್ಕುವಂಟಿ ಮನಸು ಕೂರ್ಚುಂಡನೀಯದು
ತಿಕ್ಕಬಟ್ಟಿನಟ್ಲು ತಿರುಗುಚುಂಡು
ಕುಕ್ಕನು ಚಂಪಿತೇ ಚಕ್ಕನಿ ಮನಸುರಾ
ನಾದ ಬ್ರಹ್ಮಾನಂದ ನಾರೇಯಣ ಕವಿ||
ನಾಯಿ ಯಾವ ರೀತಿಯಾಗಿ ಒಂದು ಕಡೆ ಕುಳಿತುಕೊಳ್ಳುವುದಿಲ್ಲವೋ, ಆ ರೀತಿಯಾಗಿ ಮನಸ್ಸು ಕೂಡ ಹುಚ್ಚು ಹಿಡಿದಂತೆ ಒಂದು ಕಡೆ ಕುಳಿತುಕೊಳ್ಳದೆ ತಿರುಗುತ್ತಿರುತ್ತದೆ. ಈ ನಾಯಿಯಂತಹ ಮನಸ್ಸನ್ನು ಕೊಂದರೆ ಮಾತ್ರ ಉತ್ತಮ ಮನಸ್ಸಾಗುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು.
ಶರೀರದಲ್ಲಿ ಮನಸ್ಸು ಎಲ್ಲಿರುತ್ತದೆ ಗುರುತಿಸಲು ಬರುವುದಿಲ್ಲ. ಆದರೆ ಮಾನವರನ್ನು ನಡೆಸುವುದು ಮನಸ್ಸೇ. ಈ ಮನಸ್ಸು ಒಂದು ಕಡೆ ಸ್ಥಿರವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. ಯಾವುದಾದರೂ ಕೆಲಸವನ್ನು ಮಾಡುತ್ತಿದ್ದಾರೆ ಮನಸ್ಸು ಎಲ್ಲೋ ಓಡುತ್ತಿರುತ್ತದೆ ಇದು ಎಲ್ಲರಿಗೂ ಅಭ್ಯಾಸವಾಗಿರುತ್ತದೆ. ನಾಯಿ ಯಾವ ರೀತಿ ಅಲೆಯುತ್ತಿರುತ್ತದೋ ಅದೇ ರೀತಿಯಲ್ಲಿ ಮನಸ್ಸು ಒಂದೆಡೆ ನಿಲ್ಲದೆ ಅಲೆಯುತ್ತಿರುತ್ತದೆ. ಈ ಅಲೆದಾಡುವ ಮನಸ್ಸೆಂಬ ನಾಯಿಯನ್ನು ಕೊಂದರೆ ಮಾತ್ರ ಸ್ವಚ್ಛವಾದ, ನಿರ್ಮಲವಾದ, ಉತ್ತಮ ಮನಸ್ಸು ನಿರ್ಮಾಣವಾಗುತ್ತದೆ.
ಮನಸ್ಸು ಕೆಟ್ಟದಾಗುವುದಕ್ಕೆ ಅದರ ಮಾಲಿನ್ಯವೇ ಕಾರಣ. ಈ ಮಾಲಿನ್ಯವೇ ನಾಯಿಯ ಹುಚ್ಚುತನ. ಮಾನವನ ಬಯಕೆಗಳು ಅಪರಿಮಿತ. ಬೇಕು-ಬೇಕು ಎನ್ನುವ ಅನಿತ್ಯ ಭೋಗಗಳ ಬಯಕೆ, ಭೋಗಗಳಲ್ಲಿಯೇ ಸುಖವುಂಟೆಂಬ ಭ್ರಾಂತಿ. ಭೋಗಾಸಕ್ತಿಯಲ್ಲಿಯೇ ಮನಸ್ಸು ಕೇಂದ್ರಿಕರಿಸಿದೆ. ಅವುಗಳನ್ನು ಪಡೆಯಲು ಮನಸ್ಸು ಹಲವಾರು ಅಜ್ಞಾನದ ಅವಿವೇಕದ ದಾರಿಗಳನ್ನು ಕಂಡುಕೊಳ್ಳುತ್ತದೆ. ಈ ಅವಿವೇಕದ ಪರಿಣಾಮವೇ ಹುಚ್ಚು. ಸ್ವಚ್ಛವಾದ ಮನಸ್ಸಾಗಬೇಕಾದರೆ ಮನಸ್ಸಿಗೆ ಹಿಡಿದಿರುವ ಹುಚ್ಚನ್ನು ಕೊಲ್ಲಬೇಕು. ಆಗ ಮಾತ್ರ ಉತ್ತಮ ಮನಸ್ಸಾಗುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಮನಸ್ಸೇ ಮುಕ್ತಿಗೆ ಮೂಲ
ಮಾನವನ ಶ್ರೇಷ್ಠತೆಯನ್ನು ಸಾರುವಲ್ಲಿ ಮನಸ್ಸಿನ ಪಾತ್ರ ಅಪಾರವಾದುದು. ಜೀವನ್ಮುಕ್ತನಾಗಬೇಕಾದರೆ ಮನಸ್ಸೇ ಕಾರಣ. ಇದನ್ನೇ ತಾತಯ್ಯನವರು ಮನಸ್ಸೇ ಮುಕ್ತಿಗೆ ಮೂಲ ಎಂದಿದ್ದಾರೆ.
ಮನಸ್ಸುನು ಮನಸೇ ಚೆರಚುನು
ಮನಸುನು ಮರಿ ಯೆವ್ವರೈನ ಚೆರಚಿನ ಚೆಡುನಾ
ಮನಸೇ ಮುಕ್ತಿಕಿ ಮೂಲಮು
ಮನಸು ತಾನೆ ಮಹಾಮಂಚಿ ಮನಸೈ ವುಂಡನ್||
ಮನಸ್ಸನ್ನು ಮನಸ್ಸೇ ಕೆಡಿಸುತ್ತದೆ. ಮನಸ್ಸನ್ನು ಬೇರೆ ಯಾರಾದರೂ ಕೆಡಿಸಿದರೆ ಕೆಡುತ್ತದೆಯೇ? ಏಕೆಂದರೆ ಮನಸ್ಸೇ ಮುಕ್ತಿಗೆ ಮೂಲಕಾರಣವಾಗಿದೆ. ಮನಸ್ಸು ಸರಿಯಾಗಿ ವರ್ತಿಸಿದರೆ ತನಗೆ ತಾನೇ ಬಹಳ ಒಳ್ಳೆಯ ಮನಸ್ಸಾಗಿರುತ್ತದೆ. ಮನಸ್ಸಿನಲ್ಲಿಯೇ ಒಳ್ಳೆಯದು, ಕೆಟ್ಟದ್ದು ಎರಡು ಅಡಗಿದೆ. ಮನಸ್ಸನ್ನು ಬೇರೆ ಯಾರೂ ಕೆಡಿಸಲು ಸಾಧ್ಯವಿಲ್ಲ. ಮನಸ್ಸಿನ ನಿಗ್ರಹವು ಮುಕ್ತಿಗೆ ಸೋಪಾನವಾಗಿದೆ. ಪ್ರಾಪಂಚಿಕವಾದ ವಿಷಯಗಳು ಮನಸ್ಸನ್ನು ಸೆಳೆಯುತ್ತದೆ.
ಪ್ರಾಪಂಚಿಕತೆಯಲ್ಲಿ ಮುಳುಗಿದ ಮನಸ್ಸು ಕೆಡುತ್ತದೆ. ಮನಸ್ಸು ಇಲ್ಲ, ಸಲ್ಲದ ಚಿಂತೆಗಳನ್ನು ಹಚ್ಚಿಕೊಂಡು ತನಗೆ ತಾನೇ ಕೊರಗುತ್ತದೆ, ವ್ಯಥೆಪಡುತ್ತದೆ. ಪ್ರಾಪಂಚಿಕ ವಿಷಯಗಳಲ್ಲಿ ಹರಿಯದೆ ಅದು ತತ್ವಚಿಂತನೆಯ ಕಡೆಗೆ ಹರಿದಾಗ ತನಗೆ ತಾನೆ ಒಳ್ಳೆಯದಾಗುತ್ತದೆ. ಮುಕ್ತಿಚಿಂತನೆಗೂ ಮನಸ್ಸೇ ಕಾರಣ. ಯಾವ ಮನಸ್ಸು ವಿಷಯಗಳಲ್ಲಿ ಹರಿದು ದುರ್ಭಾವನೆಗಳಿಂದ ಕೆಟ್ಟಿತೋ, ಅದೇ ಮನಸ್ಸು ತತ್ವಚಿಂತನೆಯೆಡೆಗೆ ನಡೆದಾಗ ಒಳಿತೆನಿಸುತ್ತದೆ. ಮನಸ್ಸನ್ನು ಮನಸ್ಸಿನಿಂದಲೇ ಜಯಿಸಬೇಕು ಎಂಬುದೇ ತಾತಯ್ಯನವರ ಬೋಧನೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ನಿಮ್ಮನ್ನು ನೀವೇ ಅರಿಯಿರಿ… ನಿಮ್ಮೊಳಗೇ ದೇವರಿದ್ದಾನೆ!
“ಮನಸನೇ ಆಯುಧಮು ಮರಿಯೆವ್ವರಿಕಿ ಲೇದು” ಮನಸ್ಸೆಂಬ ಆಯುಧವು ಬೇರೆ ಯಾರಿಗೂ ಇಲ್ಲ ಎಂದಿರುವ ತಾತಯ್ಯನವರ ಬೋಧನೆಗಳು ಸಾರ್ವಕಾಲಿಕವಾದ ಸತ್ಯಗಳು. ಮನಸ್ಸೇ ಎಲ್ಲಾ ಕ್ರಿಯೆಗಳಿಗೂ ಮೂಲವಾಗಿದೆ. ಮನಸ್ಸನ್ನು ಹತೋಟಿಯಲ್ಲಿಡುವುದೇ ಒಂದು ದೊಡ್ಡ ಸಾಹಸ. ಮಾಯೆಯನ್ನು ಕಡಿಯುವ ಆಯುಧವೇ ಮನಸ್ಸು. ಮನಸ್ಸನ್ನು ಹತೋಟಿಗೆ ತರಲು ಗುರುಪಾದ ಸೇವನೆ, ಹರಿನಾಮ ಸಂಕೀರ್ತನೆಯೇ ದಾರಿ. ಮನಸ್ಸನ್ನು ಜಯಿಸೋಣ, ಮುಕ್ತಿ ಪಥದೆಡೆಗೆ ನಡೆಯೋಣ.
– ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ